chikkaballapur; ರಾಜ್ಯ ಸರ್ಕಾರದಿಂದ ರೈತರಿಗೆ ದ್ರೋಹ, ಇದು ಸುಳ್ಳಿನ ಸರ್ಕಾರ: ಕೆ.ಸುಧಾಕರ್
Team Udayavani, Oct 9, 2023, 10:43 AM IST
ಚಿಕ್ಕಬಳ್ಳಾಪುರ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಒಂದು ಸುಳ್ಳಿನ ಸರ್ಕಾರ, ಭ್ರಷ್ಟ ಸರ್ಕಾರ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಟೀಕಿಸಿದರು.
ನಗರದ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಹಿಂದಿನ ಸರ್ಕಾರ ಮಂಜೂರು ಮಾಡಿದ್ದ ಪ್ರತ್ಯೇಕ ಹಾಲು ಒಕ್ಕೂಟ ರಚನೆಯನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆಯುವ ಮೂಲಕ ಜಿಲ್ಲೆಯ ರೈತರಿಗೆ ದ್ರೋಹ ಬಗೆದಿದ್ದು, ಬುಧವಾರ ರಾಜ್ಯ ಸರ್ಕಾರದ ವಿರುದ್ದ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಜಿಲ್ಲೆಯ ಉಸ್ತುವಾರಿ ಸಚಿವರಿಗೆ, ಕ್ಷೇತ್ರದ ಶಾಸಕರಿಗೆ ಸ್ವಾಭಿಮಾನ ಇದೆಯೇ? ನಾನು ಜಿಲ್ಲೆಗೆ ಮೆಡಿಕಲ್ ಕಾಲೇಜ್ ಬೇಕೆಂದು ಹಠ ಹಿಡಿದು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ. ಆದರೆ ಇವರು ಜಿಲ್ಲೆಗೆ ಇಷ್ಟೆಲ್ಲಾ ಆನ್ಯಾಯ ಆಗುತ್ತಿದ್ದರೂ ಕುರ್ಚಿಗೆ ಅಂಟಿಕೊಂಡು ಕೂತಿದ್ದಾರೆಂದು ಪಕ್ಷರೋವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಶಾಸಕ ಪ್ರದೀಪ್ ಈಶ್ವರ್ ವಿರುದ್ದ ಕಿಡಿಕಾರಿದರು.
ಅಭಿವೃದ್ದಿಗೆ ನನ್ನ ಸ್ವಾಗತ ಇದೆ. ಹೂ ಮಾರುಕಟ್ಟೆಗೆ ನಾನು ಗುರುತಿಸಿದ್ದ ಜಾಗವನ್ನು ರದ್ದು ಮಾಡಿದ್ದಾರೆ. ಆದರೆ ಇವರು 20 ಎಕೆರೆ ಜಾಗ ಬೇಕೆಂದು ಹೇಳಿದ್ದಾರೆ. 20 ಅಲ್ಲ 200 ಎಕೆರೆ ಜಾಗ ಗುರುತಿಸಲಿ. 100 ಕೋಟಿ ಬದಲು 200 ಕೋಟಿ ಅನುದಾನ ತರಲಿ ಅದಕ್ಕೆ ನನ್ನ ಸ್ವಾಗತ ಇದೆ ಎಂದರು.
ರಾಜ್ಯ ಸರ್ಕಾರ ರೈತರಿಗೆ ಕನಿಷ್ಠ 7 ಗಂಟೆ ವಿದ್ಯುತ್ ಕೊಡಬೇಕು, ಬರ ಇದೆ ಅಂತ ವಿದ್ಯುತ್ ಕೊರತೆ ಇದ್ದರೆ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಿ ರಾಜ್ಯದ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲಿಯೆಂದು ಡಾ.ಕೆ.ಸುಧಾಕರ್ ಆಗ್ರಹಿಸಿದರು.
ಜಾತಿ ಗಣತಿ ಯಾಕೆ ತರಲಿಲ್ಲ: ಹಿಂದೆಯು ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಜಾತಿ ಗಣತಿ ವರದಿಯನ್ನು ಏಕೆ ಬಿಡುಗಡೆ ಮಾಡಲಿಲ್ಲ ಎಂದು ಕೆ.ಸುಧಾಕರ್ ಪ್ರಶ್ನಿಸಿದರು.
ಜಾತಿಗಳ ಮಧ್ಯೆ ಕಲಹ ತಂದಿಡುವುದೇ ಕಾಂಗ್ರೆಸ್ ಸಂಸ್ಕೃತಿ, ಕಾಂತರಾಜ್ ಆಯೋಗದ ಹೆಸರಲ್ಲಿ ಇವರು ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಜಾತಿ ಗಣತಿ ಬಿಡುಗಡೆಯಾದರೆ ದೊಡ್ಡ ಕಲಹ ಉಂಟಾಗುತ್ತದೆಂದ ಸುಧಾಕರ್, ರಾಜಕೀಯ ದುರುದ್ದೇಶದಿಂದ ಜಾತಿ ಗಣತಿ ವಿಚಾರ ಮುನ್ನಲೆಗೆ ತರುತ್ತಿದೆ ಎಂದರು.
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಬಿಗ್‌ಬಾಸ್ ಮನೆಗೆ ಹೋಗುತ್ತಿರುವುದು ತಲೆತಗ್ಗಿಸುವ ವಿಚಾರ ಎಂದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೇ ಹೆಚ್ಚು ರಾಜ್ಯದಲ್ಲಿ ಕೋಮುಗಲಭೆಗಳಾಗುತ್ತಿವೆ. ಹಿಂದೆ ಕೋಮುಗಲಭೆ ಪ್ರಕರಣಗಳಲ್ಲಿ ಭಾಗಿಯಾದವರ ವಿರುದ್ದ ದಾಖಲಾದ ಪ್ರಕರಣಗಳನ್ನು ವಾಪಸ್ಸು ಪಡೆಯಲು ಕಾಂಗ್ರೆಸ್ ಮುಂದಾಗಿರುವುದೇ ಇದೆಕ್ಕೆಲ್ಲಾ ಕಾರಣ ಎಂದು ಸುಧಾಕರ್ ಟೀಕಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.