ಜಾಲತಾಣಗಳಲ್ಲಿ ನಕಲಿ ಸಮೀಕ್ಷೆಗಳ ಹಾವಳಿ
Team Udayavani, Apr 2, 2019, 5:00 AM IST
ಚಿಕ್ಕಬಳ್ಳಾಪುರ: ಜಿಲ್ಲೆಯ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆ ಮತದಾನಕ್ಕೆ ಕೇವಲ 16 ದಿನ ಮಾತ್ರ ಬಾಕಿ ಇದೆ. ಚುನಾವಣೆಯ ಬಳಿಕ ಮಹಾ ಸಮರದ ಫಲಿತಾಂಶಕ್ಕೆ ಇನ್ನೂ ಬರೋಬ್ಬರಿ ಒಂದೂವರೆ ತಿಂಗಳ ಮೇಲೆಯೇ ಕಾಯಬೇಕಿದೆ.
ಆದರೆ ಕ್ಷೇತ್ರದಲ್ಲಿ ಚುನಾವಣಾ ಅಖಾಡದಲ್ಲಿರುವ ಅಭ್ಯರ್ಥಿಗಳ ಹಾಗೂ ಪಕ್ಷಗಳ ಪರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಲವು ನಕಲಿ ಸಮೀಕ್ಷೆಗಳು ರಾಜಕೀಯ ಪಕ್ಷಗಳ ನಿದ್ದೆಗೆಡಿಸುತ್ತಿವೆ. ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಸಿಪಿಎಂ ಹಾಗೂ ಬಿಎಸ್ಪಿ ಪಕ್ಷಗಳ ಅಭ್ಯರ್ಥಿಗಳ ಜೊತೆಗೆ 11 ಕ್ಕೂ ಹೆಚ್ಚು ಮಂದಿ ಪಕ್ಷೇತರರು ಸೇರಿ ಬರೋಬ್ಬರಿ 15 ಮಂದಿ ಅಭ್ಯರ್ಥಿಗಳು ಈ ಬಾರಿ ಲೋಕಸಭಾ ಚುನಾವಣಾ ಅಖಾಡದಲ್ಲಿದ್ದಾರೆ.
ಮತದಾನ ದಿನಾಂಕ ಸಮೀಪಿಸುತ್ತಿದ್ದಂತೆ ಕ್ಷೇತ್ರದಲ್ಲಿ ಚುನಾವಣಾ ಅಖಾಡ ದಿನ ದಿನೇ ರಂಗೇರುತ್ತಿದ್ದು ಪಕ್ಷಗಳ ಮತಬೇಟೆ ಕಾರ್ಯ ಚುರುಕುಗೊಂಡಿದೆ. ಇದರ ನಡುವೆ ಚುನಾವಣಾ ಪ್ರಚಾರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಿಸುತ್ತಿರುವ ರಾಜಕೀಯ ಪಕ್ಷಗಳು ಮತ್ತೂಂದೆಡೆ ಪಕ್ಷಗಳ ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳ ಪರವಾಗಿ ನಕಲಿ ಸಮೀಕ್ಷೆಗಳನ್ನು ಜಾಲತಾಣಗಳಲ್ಲಿ ಹರಿದು ಬಿಡುವ ಮೂಲಕ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಮುಂದಿದ್ದಾರೆ ಎಂದು ಹೇಳುವ ಮೂಲಕ ಮತದಾರರ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.
ಫೇಸ್‌ಬುಕ್‌ನಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜೆಡಿಎಸ್ ಕಾರ್ಯಕರ್ತರು ಮತ ಹಾಕುವಂತೆ ವೋಟಿಂಗ್ ನಡೆಸಿ ಅದರ ಫಲಿತಾಂಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದು ಒಂದೆಡೆಯಾದರೆ ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಜನರ ಅಭಿಪ್ರಾಯ ಕಾಂಗ್ರೆಸ್ ಪರವಾಗಿದೆ. ಬಹುಜನ ಸಮಾಜ ಪಕ್ಷ ಈ ಬಾರಿ ಕ್ಷೇತ್ರದಲ್ಲಿ ಖಾತೆ ತೆರೆಯುತ್ತದೆ.
ಪ್ರಧಾನಿ ನರೇಂದ್ರ ಮೋದಿ ಪರ ಕ್ಷೇತ್ರದ ಮತದಾರರ ಒಲವು ಹೊಂದಿದ್ದಾರೆ ಎನ್ನುವ ಕುರಿತು ಆಯಾ ಪಕ್ಷಗಳ ಬೆಂಬಲಿಗರು, ಕಾರ್ಯಕರ್ತರು ಜಾಲತಾಣಗಳಲ್ಲಿ ಗ್ರಾಫಿಕ್ಸ್ ಮುಖಾಂತರ ಅಂಕಿ, ಅಂಶಗಳನ್ನು ವಿವರಿಸಿ ಅಪ್‌ಲೋಡುತ್ತಿದ್ದಾರೆ. ಇನ್ನೂ ಕೆಲವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವ ಯಾವ ಪಕ್ಷಕ್ಕೆ ಎಷ್ಟು ಮತ ಬೀಳುತ್ತದೆ.
ಯಾವ ವಿಧಾನಸಭಾ ಕ್ಷೇತ್ರ ಯಾರ ಕೈ ಹಿಡಿಯುತ್ತದೆ. ಈ ಭಾರಿಯ ಲೋಕ ಸಮರದ ಚುನಾವಣೆಯಲ್ಲಿ ಗೆಲ್ಲುವರ್ಯಾರು? ಸೋಲುವರ್ಯಾರು? ಎಂಬುದರ ಕುರಿತು ನಕಲಿ ಅಂಕಿ, ಅಂಶಗಳ ಸಮೇತ ಅಂತೆ ಕಂತೆಗಳ ಸಮೀಕ್ಷೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಡುತ್ತಿದ್ದು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷಗಳ ಬೆಂಬಲಿಗರು, ಕಾರ್ಯಕರ್ತರು ಫೇಸ್‌ಬುಕ್, ವಾಟ್ಸಪ್ ಗ್ರೂಪ್‌ಗ್ಳಲ್ಲಿ ಶೇರ್ ಮಾಡಿ ವೈರಲ್ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಲೋಕಸಭಾ ಕ್ಷೇತ್ರದ ಚುನಾವಣೆ ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಮೂರನೇ ಬಾರಿಗೆ ಹ್ಯಾಟ್ರಿಕ್ ಗೆಲುವು ನಿರೀಕ್ಷೆಯೊಂದಿಗೆ ತನ್ನ ಭದ್ರಕೋಟೆಯನ್ನು ಭದ್ರಪಡಿಸಿಕೊಳ್ಳಲು ಕಾಂಗ್ರೆಸ್‌ಗೆ ಪ್ರತಿಷ್ಠೆಯಾದರೆ ಕಳೆದ ಬಾರಿ ಅಲ್ಪ ಮತಗಳ ಅಂತರದಿಂದ ಸೋತ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಎರಡನೇ ಬಾರಿ ಚುನಾವಣಾ ಅಖಾಡಕ್ಕೆ ಇಳಿದು ತಮ್ಮ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ.
ಇವರ ಮಧ್ಯೆ ಬಿಎಸ್ಪಿಯಿಂದ ಡಾ.ಸಿ.ಎಸ್.ದ್ವಾರಕನಾಥ್, ಸಿಪಿಎಂನ ಎಸ್.ವರಲಕ್ಷ್ಮೀ ಮತದಾರರ ಮನವೊಲಿಸುತ್ತಿದ್ದಾರೆ. ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರದ ಅಬ್ಬರ ಮುಗಿಲು ಮುಟ್ಟಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚುನಾವಣೆ ಕುರಿತಾದ ನಕಲಿ ಸಮೀಕ್ಷೆಗಳು ರಾಜಕೀಯ ಪಕ್ಷಗಳ ನಿದ್ದೆಗೆಡಿಸುತ್ತಿರುವುದು ಅಂತೂ ಸತ್ಯ.
ಜಾಲತಾಣ ಬಳಕೆಯಲ್ಲಿ ತೀವ್ರ ಪೈಪೋಟಿ..: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಕೂಡ ಸಾಮಾಜಿಕ ಜಾಲತಾಣಗಳನ್ನು ಬಳಸುವಲ್ಲಿ ತೀವ್ರ ಪೈಪೋಟಿಗೆ ಇಳಿದಿವೆ. ಅದರಲ್ಲೂ ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ ಹಾಗೂ ಸಿಪಿಎಂ ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಸರಿ ಸಮಾನವಾಗಿವೆ.
ಸಂಸದ ಎಂ.ವೀರಪ್ಪ ಮೊಯ್ಲಿ, ಸಿಪಿಎಂನ ಎಸ್.ವರಲಕ್ಷ್ಮೀ ಹಾಗೂ ಬಿಎಸ್ಪಿಯ ಡಾ.ಸಿ.ಎಸ್.ದ್ವಾರಕನಾಥ್ ಚುನಾವಣೆಗಾಗಿಯೇ ಪ್ರತ್ಯೇಕವಾಗಿ ಫೇಸ್‌ಬುಕ್ ಖಾತೆಯನ್ನು ಸೃಷ್ಠಿಸಿಕೊಂಡು ಪ್ರತಿ ದಿನ ತಾವು ಎಲ್ಲೆಲ್ಲಿ ಚುನಾವಣಾ ಪ್ರಚಾರ ನಡೆಸಿದರು, ನಾಳೆ ಪ್ರಚಾರ ಕಾರ್ಯಕ್ರಮ ಎಲ್ಲಿದೆ ಎಂಬುದರ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪ್ರತಿದಿನ ಅಪ್‌ಡೇಟ್ ಮಾಡುತ್ತಿದ್ದಾರೆ.
ನಕಲಿ ಸಮೀಕ್ಷೆಗಳಿಗೆ ಕಡಿವಾಣ ಇಲ್ಲವೇ?: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷಗಳ ಹಾಗೂ ಅಭ್ಯರ್ಥಿಗಳ ಪರವಾದ ಹಲವು ನಕಲಿ ಸಮೀಕ್ಷೆಗಳು ಹರಿದಾಡುತ್ತಿದ್ದರೂ ಜಿಲ್ಲಾ ಚುನಾವಣಾ ನೀತಿ ಸಂಹಿತೆ ಅನುಷ್ಠಾನದ ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಚುನಾವಣೆಗೂ ಮೊದಲೇ ಕ್ಷೇತ್ರದ ಮತದಾರರ ಅಭಿಪ್ರಾಯವನ್ನು ಹಾಗೂ ಈ ಬಾರಿ ಚುನಾವಣೆಯಲ್ಲಿ ಜನಾಭಿಪ್ರಾಯ ನಮ್ಮ ಪಕ್ಷಗಳ ಪರವಾಗಿದೆ ಎಂಬುದನ್ನು ಬಿಂಬಿಸಿಕೊಳ್ಳಲು ಎಲ್ಲಾ ರಾಜಕೀಯ ಪಕ್ಷಗಳು ತಂತ್ರಗಾರಿಕೆ ರೂಪಿಸಿ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ಜಿಲ್ಲಾ ಚುನಾವಣಾ ಅಧಿಕಾರಿಗಳು ಕ್ರಮ ವಹಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.