ಸರ್ಕಾರಿ ಶಾಲೆಗಳ ಅಂದ ಹೆಚ್ಚಿಸುವ ಹಸಿರು ತಂಡ
Team Udayavani, Jun 19, 2023, 2:58 PM IST
ಚಿಕ್ಕಬಳ್ಳಾಪುರ: ಸರ್ಕಾರಿ ನೌಕರರು ಅಥವಾ ಖಾಸಗಿ ವಲಯದ ನೌಕರರು ವಾರದ ರಜೆ ಸಿಕ್ಕರೆ ಸಾಕು ಶನಿವಾರ, ಭಾನುವಾರ ಊರು ಸುತ್ತಿ ಬರೋಣ ಅಥವಾ ಮನೆ ಕೆಲಸ ಏನಾದರೂ ಇದ್ದರೆ ಮುಗಿಸಿಕೊಳ್ಳೋಣ ಎನ್ನುವ ಧಾವಂತದಲ್ಲಿ ಇರುತ್ತಾರೆ. ಇಲ್ಲ ಎಲ್ಲಾದರೂ ದೂರದ ಪ್ರವಾಸಿ ತಾಣ, ದೇಗುಲ ಸುತ್ತಿ ಬರೋಣ ಎನ್ನುವರೇ ಜಾಸ್ತಿ.
ಆದರೆ, ಇದಕ್ಕೆ ಅಪವಾದ ಎನ್ನುವಂತೆ ವಾರಕ್ಕೊಮ್ಮೆ ಸಿಗುವ ರಜೆ ಬಳಸಿಕೊಂಡು ಸರ್ಕಾರಿ ಶಾಲೆಗಳ ಅಂದ ಹೆಚ್ಚಿಸುವುದರ ಜೊತೆಗೆ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಚಿಕ್ಕಬಳ್ಳಾಪುರದ ಹಸಿರು ಸ್ವಯಂ ಸೇವಾ ಸಂಸ್ಥೆ ಸದಸ್ಯರು ವಿನೂತನ ಕಾರ್ಯಶೈಲಿ ಮೂಲಕ ಸದ್ದಿಲ್ಲದೇ ಸಮಾಜಮುಖೀ ಕಾರ್ಯದಲ್ಲಿ ತೊಡಗಿಸಿಕೊಂಡು ಗಮನ ಸೆಳೆಯುತ್ತಿದ್ದಾರೆ.
ಹಸಿರು ತಂಡದಲ್ಲಿ 40 ಜನರ ತಂಡ: ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಂದ ಹಿಡಿದು ಡೀಸಿ, ತಹಶೀಲ್ದಾರ್, ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಉನ್ನತ ಮಟ್ಟದ ಅಧಿಕಾರಿಗಳು, ಡಿ ಗ್ರೂಪ್ ನೌಕರರು, ಬ್ಯಾಂಕ್‌ಗಳಲ್ಲಿ ಕೆಲಸ ಮಾಡುವ ಮ್ಯಾನೇಜರ್ ಹುದ್ದೆಯಿಂದ ಹಿಡಿದು ಕ್ಯಾಷಿಯರ್‌ಗಳು, ಕಾಲೇಜು ಉಪನ್ಯಾಸಕರು, ಖಾಸಗಿ ವಲಯದಲ್ಲಿ ಕೆಲಸ ಮಾಡುವ ಸಾಫ್ಟ್ವೇರ್ ಇಂಜಿಯರ್‌ಗಳು ಇರುವ ಹಸಿರು ಸ್ವಯಂ ಸೇವಾ ತಂಡದಲ್ಲಿ ಬರೋಬ್ಬರಿ 40 ಮಂದಿ ಇದ್ದು, ವಾರಕ್ಕೊಮ್ಮೆ ಸ್ವಯಂ ಪ್ರೇರಣೆಯಿಂದ ಪರಿಸರ, ಶಿಕ್ಷಣ ಹಾಗೂ ಆರೋಗ್ಯ ಸೇವಾ ಕ್ಷೇತ್ರಗಳಿಗೆ ಸಂಬಂಧಿಸಿದ ಸೇವಾ ಕಾರ್ಯಕ್ರಮಗಳನ್ನು ಆಯೋಜನೆ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಶಿಕ್ಷಣ, ಆರೋಗ್ಯ ಹಾಗೂ ಪರಿಸರಕ್ಕೆ ಆದ್ಯತೆ: ಹಸಿರು ತಂಡ ಪ್ರಮುಖವಾಗಿ ಶಿಕ್ಷಣ, ಆರೋಗ್ಯ ಹಾಗೂ ಪರಿಸರ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ರಕ್ತ ಅಗತ್ಯ ಇದ್ದವರಿಗೆ ಇದೇ ತಂಡ ಧೈರ್ಯ ತೋರಿ ನೂರಾರು ಮಂದಿಗೆ ರಕ್ತದಾನ ಮಾಡಿ ಸಂಕಷ್ಟದಲ್ಲಿದ್ದವರಿಗೆ ಜೀವದಾನ ಮಾಡಿದೆ.
ತೋರಿಕೆಗೆ ರಕ್ತದಾನ ಶಿಬಿರಗಳನ್ನು ಆಯೋಜಿಸದೆ ಬೇಕಾದವರಿಗೆ ತಮ್ಮನ್ನು ಸಂಪರ್ಕಿಸಿದವರಿಗೆ ಸದಾ ತಂಡದ ಸದಸ್ಯರು ರಕ್ತದಾನ ಮಾಡುವುದ್ದನ್ನು ಕಾಯಕ ಮಾಡಿಕೊಂಡಿದ್ದಾರೆ. ಸದ್ಯ ಮಳೆ ಆಗದ ಕಾರಣ ಶನಿವಾರ, ಭಾನುವಾರ ತಾಲೂಕಿನ ಸರ್ಕಾರಿ ಶಾಲೆಗಳನ್ನು ಪಟ್ಟಿ ಮಾಡಿಕೊಂಡು ಶಾಲೆಗಳ ಗೋಡೆ, ಕಾಂಪೌಂಡ್ ಗಳಿಗೆ ನಾವೀನ್ಯ ಪೂರ್ಣವಾಗಿ ಬಣ್ಣ ಹಚ್ಚುವುದರ ಜತೆಗೆ ವರ್ಲಿಕಲೆಯ ಮೂಲಕ ದೇಶಿ ಸೊಗಡನ್ನು ಮಕ್ಕಳಲ್ಲಿ ಬಿತ್ತುವ ಕಾಯಕವನ್ನು ಚಿಕ್ಕಬಳ್ಳಾಪುರದ ಹಸಿರು ಸ್ವಯಂ ಸೇವಾ ತಂಡ ಸದ್ದಿಲ್ಲದೇ ಮಾಡುತ್ತಿದೆ.
ಬಣ್ಣ ಹಚ್ಚಿ ಶಾಲೆಗಳ ಸೌಂದರ್ಯಕ್ಕೆ ಒತ್ತು : ಮೊದಲೇ ಅಗತ್ಯ ಮೂಲ ಸೌಕರ್ಯಗಳ ಕೊರತೆಯಿಂದ ಸರ್ಕಾರಿ ಶಾಲೆಗಳು ಸೊರುಗುತ್ತಿವೆ. ಇದರ ಮಧ್ಯೆ ಸರ್ಕಾರಿ ಶಾಲೆಗಳನ್ನು ವಿದ್ಯಾರ್ಥಿ, ಪೋಷಕರನ್ನು ಇನ್ನಷ್ಟು ಆಕರ್ಷಿಸುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರದ ಹಸಿರು ಸ್ವಯಂ ಸೇವಾ ತಂಡ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಿ ಅಭಿಯಾನದಡಿ ತಾಲೂಕಿನ ಸರ್ಕಾರಿ ಶಾಲೆಗಳನ್ನು ಪಟ್ಟಿ ಮಾಡಿಕೊಂಡು ವಾರಕ್ಕೊಮ್ಮೆ ಆ ಶಾಲೆಗೆ ಭೇಟಿ ನೀಡಿ ತಮ್ಮ ಸ್ವಂತ ಖರ್ಚಿನಲ್ಲಿಯೇ ಶಾಲೆಯ ಕಾಂಪೌಂಡ್‌ಗಳನ್ನು ವಿವಿಧ ಬಣ್ಣಗಳ ಮೂಲಕ ಶಾಲೆಯ ಸೌಂದರ್ಯ ಹೆಚ್ಚಿಸುವ ಕಾಯಕದಲ್ಲಿ ತೊಡಗಿದೆ.
ಇದುವರೆಗೂ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 8 ಕ್ಕೂ ಶಾಲೆಗಳ ಕಾಂಪೌಂಡ್‌ಗಳನ್ನು ಅಂದಗೊಳಿಸಿರುವ ಹಸಿರು ಸ್ವಯಂ ಸೇವಾ ತಂಡ ದಾನಿಗಳ ನೆರವು ಪಡೆದು ಇಡೀ ಶಾಲೆಯ ಗೋಡೆಗಳನ್ನು ಅಂದಗೊಳಿಸುವ ನಿಟ್ಟಿನಲ್ಲಿ ಬಣ್ಣ ಹಚ್ಚುವ ಕಾರ್ಯವನ್ನು ಕೈಗೆತ್ತಿಕೊಳ್ಳುವ ಮೂಲಕ
ಗಮನ ಸೆಳೆಯುತ್ತಿದೆ ಪ್ಲಾಸ್ಟಿಕ್ ತ್ಯಜಿಸಿ ಅಭಿಯಾನ: ಹಸಿರು ಸ್ವಯಂ ಸೇವಾ ತಂಡದ ಸದಸ್ಯರು ವಾರದ ಶನಿವಾರ, ಭಾನುವಾರದ ದಿನ ತಾಲೂಕಿನ ವಿವಿಧ ಬೆಟ್ಟಗುಡ್ಡಗಳಿಗೆ ಚಾರಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಲ್ಲಿ ಪ್ರವಾಸಿಗರು ಬಳಸಿ ಬಿಸಾಡಿದ ಪ್ಲಾಸ್ಟಿಕ್ ಕೈ ಚೀಲ, ನೀರಿನ ಬಾಟಲು ಮತ್ತಿತರ ಪ್ಲಾಸ್ಟಿಕ್ ವಸ್ತುಗಳನ್ನು ಆರಿಸಿ ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ಪ್ರವಾಸಿಗರಲ್ಲಿ ಹಾಗೂ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ತ್ಯಜಿಸಿ ಅಭಿಯಾನ ಕೂಡ ನಡೆಸುತ್ತಿದ್ದಾರೆ.
ಇದುವರೆಗೂ ನಗರದ ನಗರಸಭೆಯ ಉದ್ಯಾನವನಗಳಲ್ಲಿ ನೂರಾರು ಸಸಿಗಳನ್ನು ನಾಟಿ ಮಾಡಿ ಹಸಿರು ತಂಡದ ಸದಸ್ಯರು ಪೋಷಣೆ ಮಾಡುತ್ತಿದ್ದಾರೆ. ಜಪಾನ್ ಮಾದರಿಯಲ್ಲಿ ಕಡಿಮೆ ಜಾಗದಲ್ಲಿ ಅತಿ ಹೆಚ್ಚು ಮರ, ಗಿಡ ಬೆಳೆಸುವ ನಿಟ್ಟಿನಲ್ಲಿ ಹಸಿರು ಸ್ವಯಂ ಸೇವಾ ತಂಡ ತನ್ನದೇ ಆದ ಪರಿಸರ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಚಿಕ್ಕಬಳ್ಳಾಪುರ ಹಸಿರು ಸ್ವಯಂ ಸೇವಾ ಸಂಸ್ಥೆ ಸದಸ್ಯರು ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿ ಯಾನದಡಿ ತಾಲೂಕಿನ ಸರ್ಕಾರಿ ಶಾಲೆಗಳನ್ನು ಜನಾಕರ್ಷಣೆಗೊಳಿಸುವ ಮಹತ್ವಕಾಂಕ್ಷೆ ಹೊತ್ತು ಶಾಲೆಗಳ ಗೋಡೆಗಳು, ಕಾಂಪೌಂಡ್‌ಗಳನ್ನು ಸ್ವತ್ಛಗೊಳಿಸಿ ಅವುಗಳ ಅಂದ ಚೆಂದ ಹೆಚ್ಚಿಸುವ ನಿಟ್ಟಿನಲ್ಲಿ ಬಣ್ಣ ಹಚ್ಚುವ ಕೆಲಸವನ್ನು ವಾರದ ರಜೆ ದಿನಗಳಲ್ಲಿ ಮಾಡುತ್ತಾ ಬರುತ್ತಿದ್ದೇವೆ. ಪರಿಸರ ರಕ್ಷಣೆ ದೃಷ್ಟಿಯಿಂದ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ತ್ಯಜಿಸಿ ಅಭಿಯಾನ ನಡೆಸುತ್ತಿದ್ದೇವೆ. ●ಮಹಾಂತೇಶ್, ಹಸಿರು ಸ್ವಯಂ ಸೇವಾ ಸಂಸ್ಥೆ
-ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.