ಹೆದ್ದಾರಿ ನಾಮಫಲಕಗಳಲ್ಲಿ ಕನ್ನಡ ಭಾಷೆ ಕಗ್ಗೊಲೆ
Team Udayavani, Jul 9, 2019, 3:00 AM IST
ಚಿಕ್ಕಬಳ್ಳಾಪುರ: ಅಂದಾರ‌್ಲಹಳ್ಳಿಗೆ ಅಂಧಲಹಳ್ಳಿ, ಕೋನಪಲ್ಲಿ ಬದಲು ಕೊನಪಲ್ಲಿ, ಜಾತವಾರಹೊಸಹಳ್ಳಿಗೆ ಜಾತವರಹೊಸಹಳ್ಳಿ, ಕೊತ್ತನೂರುಗೆ ಕೊತ್ತನೂರ್, ಹಂಡಿಗನಾಳ ಬದಲು ಹಂಡಿಗನಳ, ಸ್ವಾರಪಲ್ಲಿಗೆ ಸ್ವರಪಲ್ಲಿ, ಚಿಂತಾಮಣಿಗೆ ಚಿಂತಮಣಿ, ಮುರಗಮಲ್ಲಗೆ ಮರಗಮಲ್ಲ, ತಿಮ್ಮಸಂದ್ರಕ್ಕೆ ತಿಮಸಂದ್ರ..
ಹೌದು, ಜಿಲ್ಲೆಯ ಮೂಲಕ ತಮಿಳುನಾಡಿನಿಂದ ಮಂಗಳೂರಿಗೆ ಹಾದು ಹೋಗಿರುವ ಹೆದ್ದಾರಿ 234ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಿಲ್ಲೆಯ ಗ್ರಾಮಗಳ ಹೆಸರು ಬರೆದು ಅಳವಡಿಸಿರುವ ನಾಮಫಲಕಗಳಲ್ಲಿ ಆಗಿರುವ ಕನ್ನಡ ಭಾಷೆಯ ಕಗ್ಗೊಲೆ ಪರಿ ಇದು.
ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಊರುಗಳ ಸಮೀಪ ಪ್ರಯಾಣಿಕರಿಗೆ, ದೂರದ ಊರುಗಳಿಂದ ಬರುವವರಿಗೆ, ಸ್ನೇಹಿತರಿಗೆ ಗ್ರಾಮಗಳ ಹೆಸರು ಸುಲಭವಾಗಿ ಗುರುತು ಸಿಗುವಂತೆ ಮಾಡುವ ಉದ್ದೇಶದಿಂದ ಸಹಜವಾಗಿ ಗ್ರಾಮಗಳ ಬಸ್ ನಿಲ್ದಾಣಗಳ ಹಾಗೂ ತಂಗುದಾಣಗಳ ಬಳಿ ಊರುಗಳ ಹೆಸರು ಬರೆದು ನಾಮಫಲಕ ಹಾಕುವುದು ಸಾಮಾನ್ಯ.
ಕನ್ನಡಪ್ರೇಮಿಗಳ ಆಕ್ರೋಶ: ಆದರೆ, ಆದೇ ಊರುಗಳ ಹೆಸರುಗಳು ಈಗ ಹೆದ್ದಾರಿ ಪ್ರಾಧಿಕಾರ ಮಾಡಿರುವ ಎಡವಟ್ಟನಿಂದ ಪ್ರಯಾಣಿಕರ ಹಾಗೂ ಪ್ರವಾಸಿಗರಿಂದ ನಿತ್ಯ ಅಪಹಾಸ್ಯಕ್ಕೀಡಾಗುತ್ತಿರುವುದು ಒಂದಡೆಯಾದರೆ, ಮತ್ತೂಂದೆಡೆ ಕನ್ನಡ ಭಾಷೆ ಕಗ್ಗೊಲೆಯಾಗಿ ಕನ್ನಡ ಪ್ರೇಮಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಊರುಗಳ ಹೆಸರು ತಪ್ಪು: ಮೊದಲೇ ಹೆದ್ದಾರಿ ಕಾಮಗಾರಿ ವಿಳಂಬದಿಂದ ಪ್ರಯಾಣಿಕರ ಹಾಗೂ ವಾಹನ ಸವಾರರ ಆಕ್ರೋಶಕ್ಕೆ ಗುರಿಯಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ಮೂಲಕ ತುಮಕೂರಿಗೆ ಸಂಪರ್ಕ ಕಲ್ಪಿಸುವ 234ರ ರಾ.ಹೆ.ಕಾಮಗಾರಿ ಪೂರ್ಣಗೊಂಡ ಬಳಿಕ ಗ್ರಾಮಗಳ ಸಮೀಪ ಹಾಕಿರುವ ನಾಮಫಲಕಗಳಲ್ಲಿ ಮಾತ್ರ ಊರುಗಳ ಹೆಸರು ತಪ್ಪಾಗಿ ಬರೆಯಲಾಗಿದೆ.
ಗೊಂದಲ: ಊರುಗಳ ಹೆಸರು ಈಗ ಅರ್ಥ ಕಳೆದುಕೊಂಡು ಸಾರ್ವಜನಿಕರ ಹಾಗೂ ಪ್ರಯಾಣಿಕರ ನಡುವೆ ಹೆದ್ದಾರಿ ಪ್ರಾಧಿಕಾರ ತೀವ್ರ ಟೀಕೆಗೆ ಗುರಿಯಾಗಿದೆ. ಬಹಳಷ್ಟು ಗ್ರಾಮಗಳ ಹೆಸರು ನಾಮಫಲಕಗಳಲ್ಲಿ ಕಾಗುಣಿತ ದೋಷದಿಂದ ಗ್ರಾಮಗಳಿಗೆ ಬರುವ ಪ್ರಯಾಣಿಕರಿಗೆ, ವಾಹನ ಸವಾರರಿಗೆ ಗೊಂದಲ ಉಂಟಾಗುತ್ತಿದೆ.
ಬಹಳಷ್ಟು ಕಡೆ ಕಾಗುಣಿತ ತಪ್ಪಿನಿಂದ ಈ ರೀತಿಯ ಅವಾಂತರ ನಾಮಫಲಕಗಳಲ್ಲಾಗಿದ್ದು, ಸರಿಪಡಿಸುವ ಗೋಜಿಗೆ ಯಾರು ಮುಂದಾಗಿಲ್ಲ. ಚಿಂತಾಮಣಿಯಿಂದ ಗೌರಿಬಿದನೂರು ಮಾರ್ಗದ ಉದ್ದಕ್ಕೂ ಬಹಳಷ್ಟು ಗ್ರಾಮಗಳ ಹೆಸರು ತಪ್ಪಾಗಿ ನಾಮಫಲಕಗಳಲ್ಲಿ ಅಳವಡಿಸಲಾಗಿದೆ. ಆದರೆ ಯಾರು ಕೂಡ ಈ ಬಗ್ಗೆ ಧ್ವನಿ ಎತ್ತದ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಕೆಲಸಕ್ಕೆ ಮುಂದಾಗಿಲ್ಲ.
ಇನ್ನೂ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಹಿಡಿದು ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ನಿತ್ಯ ಈ ರಸ್ತೆಯಲ್ಲಿ ಬರುತ್ತಾರೆ, ಹೋಗುತ್ತಾರೆ. ಆದರೆ ಕನ್ನಡ ಕಾಗುಣಿತದಿಂದ ಸಾರ್ವಜನಿಕರಲ್ಲಿ ಗೊಂದಲದ ಜೊತೆಗೆ ಅಪಹಾಸ್ಯಕ್ಕೀಡಾಗುತ್ತಿರುವ ಗ್ರಾಮಗಳ ಊರಿನ ನಾಮಫಲಕಗಳನ್ನು ಸರಿಪಡಿಸುವ ಬದ್ಧತೆಯನ್ನು ಯಾರು ಪ್ರದರ್ಶಿಸದಿರುವುದು ವಿಪರ್ಯಾಸವೇ ಸರಿ.
ಶಾಸಕರ ಸ್ವಗ್ರಾಮದ ಹೆಸರೇ ತಪ್ಪು: ಜಿಲ್ಲೆಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ವಿ.ಮುನಿಯಪ್ಪರವರ ಸ್ವಗ್ರಾಮದ ಹೆಸರೇ ಹೆದ್ದಾರಿ ಪ್ರಾಧಿಕಾರ ಅಳವಡಿಸಿರುವ ನಾಮಫಲಕದಲ್ಲಿ ತಪ್ಪಾಗಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ. ವಿ.ಮುನಿಯಪ್ಪನವರು ಹಂಡಿಗನಾಳ ಗ್ರಾಮದವರಾಗಿದ್ದು, ಅವರ ಊರು ಹೆಸರೇ ಹೆದ್ದಾರಿ ನಾಮಫಲಕದಲ್ಲಿ ಹಂಡಿಗನಳ ಎಂದು ಬರೆಯಲಾಗಿದೆ. ಹೆದ್ದಾರಿಗೆ ಅಂಟಿಕೊಂಡೇ ಈ ಈ ನಾಮಫಲಕ ಇದ್ದರೂ ಅದನ್ನು ಸರಿಪಡಿಸುವ ಕಾರ್ಯಕ್ಕೆ ಯಾರು ಮುಂದಾಗಿಲ್ಲ.
ಕನ್ನಡಪರ ಸಂಘಟನೆಗಳು ಎಲ್ಲಿ ಹೋದವು?: ಚಿಕ್ಕಬಳ್ಳಾಪುರ ಜಿಲ್ಲೆ ಆಂಧ್ರದ ಗಡಿ ಭಾಗದಲ್ಲಿದೆ. ಗೌರಿಬಿದನೂರು, ಬಾಗೇಪಲ್ಲಿ ಕಡೆ ಹೋದರೆ ಕುಗ್ರಾಮಗಳಲ್ಲಿ ಊರುಗಳ ಹೆಸರನ್ನು ತೆಲುಗಿನಲ್ಲಿ ಬರೆದಿರುವ ನಾಮಫಲಕಗಳು ಕಣ್ಣಿಗೆ ರಾಚುತ್ತವೆ.
ಇನ್ನೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಳವಡಿಸಿರುವ ಗ್ರಾಮಗಳ ನಾಮಫಲಕಗಳಲ್ಲಿ ಊರಿನ ಹೆಸರುಗಳು ಕನ್ನಡ ಕಾಗುಣಿತ ತಪ್ಪಿನಿಂದ ಮುದ್ರಿತವಾಗಿದ್ದರೂ ಅದನ್ನು ಪ್ರಶ್ನಿಸುವ ಅಥವಾ ಸರಿಪಡಿಸಬೇಕಿದ್ದ ಜಿಲ್ಲೆಯ ಕನ್ನಡ ಪರ ಸಂಘಟನೆಗಳು ತುಟಿಬಿಚ್ಚದೇ ಮೌನಕ್ಕೆ ಶರಣಾಗಿವೆ. ಜಿಲ್ಲೆಯಲ್ಲಿ ಹಾದಿಗೊಂದು ಬೀದಿಗೊಂದು ಕನ್ನಡಪರ ಸಂಘಟನೆಗಳಿಗೆ ಲೆಕ್ಕವಿಲ್ಲ. ಆದರೆ ಕನ್ನಡ ಭಾಷೆಯ ಕಗ್ಗೊಲೆ ನಡೆದರೂ ಅದರ ವಿರುದ್ಧ ಧ್ವನಿ ಎತ್ತಬೇಕಿದ್ದ ಸಂಘಟನೆಗಳು ತಮ್ಮ ಬದ್ಧತೆ ಮರೆತಿರುವುದು ಬೇಸರದ ಸಂಗತಿ.
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಳವಡಿಸಿರುವ ನಾಮಫಲಕಗಳಲ್ಲಿ ಗ್ರಾಮಗಳ ಹೆಸರು ಕಾಗುಣಿತ ತಪ್ಪಿನಿಂದ ಕೂಡಿದ್ದು, ಸಾರ್ವಜನಿಕರಲ್ಲಿ ವಿಶೇಷವಾಗಿ ಪ್ರಯಾಣಿಕರಲ್ಲಿ ಸಾಕಷ್ಟು ಗೊಂದಲ ಮೂಡಿಸುತ್ತಿದೆ. ಹೊಸದಾಗಿ ಊರುಗಳಿಗೆ ಬರುವ ಪ್ರಯಾಣಿಕರಿಗೆ ಗ್ರಾಮಗಳ ಹೆಸರು ಸ್ಪಷ್ಟವಾಗಿ ತಿಳಿಯದೇ ಪರದಾಡಬೇಕಿದೆ. ಈ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಹೆದ್ದಾರಿ ಪ್ರಾಧಿಕಾರಕ್ಕೆ ಬುದ್ಧಿ ಹೇಳಿ ಆಗಿರುವ ತಪ್ಪನ್ನು ಸರಿಪಡಿಸಬೇಕಿದೆ.
-ಪಿ.ಆರ್.ಶ್ರೀನಿವಾಸ್, ಚಿಂತಾಮಣಿ ನಿವಾಸಿ
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೂಕ್ತ ನಿರ್ವಹಣೆ ಮಾಡದೇ ಈ ರೀತಿ ಆಗಿರಬಹುದು. ಇಂಗ್ಲಿಷ್‌ನಲ್ಲಿ ನೋಡಿ ಕನ್ನಡದಲ್ಲಿ ಹೆಸರು ಬರೆಯುವುದರಿಂದ ಈ ರೀತಿ ಸಮಸ್ಯೆ ಆಗಿರಬಹುದು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ಕರೆದು ಕಾಗುಣಿತ ದೋಷದರಿಂದ ಆಗಿರುವ ಗ್ರಾಮಗಳ ಹೆಸರನ್ನು ಸರಿಪಡಿಸಲು ಕ್ರಮ ವಹಿಸುತ್ತೇನೆ.
-ಅನಿರುದ್ಧ್ ಶ್ರವಣ್, ಜಿಲ್ಲಾಧಿಕಾರಿ
* ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.