ಕೃಷಿ, ಕಟ್ಟಡ ನಿರ್ಮಾಣಕ್ಕೆ ಕಾರ್ಮಿಕರ ಬರ!
Team Udayavani, Apr 20, 2023, 4:11 PM IST
ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ವಿಧಾನಸಭಾ ಚುನಾವಣೆಯ ಕಾವು ತಾರಕಕ್ಕೇರಿದೆ. ಯಾವ ಕ್ಷೇತ್ರದಲ್ಲಿ ನೋಡಿದರೂ ನಾಮಪತ್ರ ಸಲ್ಲಿಕೆ ಜೊತೆಗೆ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದ ಭರಾಟೆ ಸಾಕಷ್ಟು ರಂಗೇರಿದೆ. ಇದರ ನಡುವೆ ಜಿಲ್ಲೆಯಲ್ಲಿ ಚುನಾವಣೆ ಪರಿಣಾಮ ಕೃಷಿ ಮತ್ತು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಯಗಳಿಗೆ ಕಾರ್ಮಿಕರ ಬರ ಎದುರಾಗಿದೆ.
ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ರೇಷ್ಮೆ, ತೋಟಗಾರಿಕೆ, ಹೈನೋದ್ಯಮ ಹಾಗೂ ಪುಷ್ಪೋದ್ಯಮಕ್ಕೆ ಹೆಸರಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಲಕ್ಷಾಂತರ ಕಾರ್ಮಿಕ ಕುಟುಂಬಗಳ ಬದುಕಿನ ಬಂಡಿ ನಡೆಯುವುದೇ ಕೃಷಿ ಚಟುವಟಿಕೆಗಳ ಮೇಲೆ. ಆದರೆ ಚುನಾವಣೆ ಸಮಯದಲ್ಲಿ ಕಾರ್ಮಿಕರ ಬರ ರೈತರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ.
ಪ್ರಚಾರಕ್ಕೆ ಬಳಕೆ: ಈಗಾಗಲೇ ಬೇಸಿಗೆ ಪರಿಣಾಮ ದಿನವಿಡೀ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಸವಾಲಿನ ಕೆಲಸ. ಇಂತಹ ಸಂದರ್ಭದಲ್ಲಿ ಜಿಲ್ಲೆಯ ಕೃಷಿ ಕೂಲಿ ಕಾರ್ಮಿಕರು ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ರಾಜಕೀಯ ಪಕ್ಷಗಳು ಗಾಳ ಹಾಕಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಪರಿಣಾಮ ಕೃಷಿ ಚಟುವಟಿಕೆಗಳಿಗೆ ಕಾರ್ಮಿಕರ ಕೊರತೆ ಎದುರಾಗಿ ದಿನನಿತ್ಯದ ಕೃಷಿ ಕಾರ್ಯಗಳಿಗೆ ಕಾರ್ಮಿಕರನ್ನು ಹೊಂದಿಸುವುದು ರೈತರಿಗೆ ದೊಡ್ಡ ತಲೆ ನೋವಾಗಿದೆ.
ಊಟ, ತಿಂಡಿ ಜತೆಗೆ ಹಣ: ಜಿಲ್ಲೆಯಲ್ಲಿ ರೇಷ್ಮೆ ನೂಲು ಬಿಚ್ಚಣಿಕೆಯಿಂದ ಹಿಡಿದು ಟೊಮೆಟೋ, ಹೂವಿನ ಕೊಯ್ಲು ಮಾಡುವುದು ಸೇರಿ ಕೃಷಿ ತೋಟಗಳಲ್ಲಿ ಬೆಳೆ ಇಡಲು ತಯಾರಿಯಿಂದ ಹಿಡಿದು ಔಷಧಿ ಸಿಂಪಡಣೆ, ಕಳೆ ತೆಗೆಯಲು ಕೂಲಿ ಆಳುಗಳು ಬೇಕೆ ಬೇಕು. ಅದರಲ್ಲೂ ಹುಣಸೆ ಪ್ರವೇಶ ಆಗಿರುವುದರಿಮದ ಕೂಲಿ ಕಾರ್ಮಿಕರು ಸಾಕಷ್ಟು ಪ್ರಮಾಣದಲ್ಲಿ ಅವಶ್ಯಕವಾಗಿದೆ. ಆದರೆ, ಚುನಾವಣೆ ಅಧಿಸೂಚನೆ ಹೊರ ಬಿದ್ದ ನಂತರ ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದ್ದು, ಗ್ರಾಮಾಂತರ ಪ್ರದೇಶಗಳಿಂದ ಕಾರ್ಮಿಕರನ್ನು ಪಕ್ಷಗಳು ತಮ್ಮ ಶಕ್ತಿ ಪ್ರದರ್ಶನಕ್ಕೆ ಕರೆದುಕೊಂಡು ಹೋಗಿ ಅವರಿಗೆ ಊಟ, ತಿಂಡಿ ಜೊತೆಗೆ ಆಯಾ ದಿನವೇ ಕೂಲಿ ಹಣ 500 ರಿಂದ 1000 ರೂ. ವರೆಗೂ ಬಟಾವಡೆ ಮಾಡುತ್ತಾರೆ. ಉರಿ ಬಿಸಿಲಿನಲ್ಲಿ ಮೈವೊಡ್ಡಿ ಕೆಲಸ ಮಾಡುವುದಕ್ಕಿಂತ ಕರ ಪತ್ರ ಹಂಚಿ ಪಕ್ಷಗಳ ಪರ ಪ್ರಚಾರ ಮಾಡಿಕೊಂಡು ಇರುವುದೇ ಲೇಸೆಂದು ಭಾವಿಸಿ ನಗರ, ಪಟ್ಟಣಗಳಿಗೆ ಸಹಸ್ರಾರು ಸಂಖ್ಯೆಯಲ್ಲಿ ರಾಜಕೀಯ ಮುಖಂಡರೊಂದಿಗೆ ಬರುತ್ತಿರುವುದರಿಂದ ಗ್ರಾಮಾಂತರ ಪ್ರದೇಶದ ಕೃಷಿ ಚಟುವಟಿಕೆಗಳು ನಡೆಯುವ ಪ್ರದೇಶದಲ್ಲಿ ಕಾರ್ಮಿಕರಿಲ್ಲದೇ ಕೃಷಿ ಭೂಮಿಗಳು ಭಣಗುಡುತ್ತಿವೆ.
ಪ್ರಚಾರಕ್ಕೆ ಮಕ್ಕಳ ಬಳಕೆಗಿಲ್ಲ ಬ್ರೇಕ್: ಕಾರ್ಮಿಕರನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳು ಮತ್ತೂಂದೆಡೆ ಚಿಕ್ಕ ಮಕ್ಕಳನ್ನು ಕೂಡ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬಳಸಿಕೊಳ್ಳುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಾರ್ಮಿಕ ಇಲಾಖೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಮೂಡಿಸಿದೆ. ಚುನಾವಣಾ ಆಯೋಗ ಮಕ್ಕಳ ಬಳಕೆ ಮಾಡದಂತೆ ಸ್ಪಷ್ಟವಾಗಿ ಆದೇಶಿಸಿದರೂ ಅದು ಪಾಲನೆ ಆಗುತ್ತಿಲ್ಲ ಎಂಬ ಕೊರಗು ಮಕ್ಕಳ ಹಕ್ಕುಗಳಿಗೆ ಹೋರಾಡುವ ಪ್ರಜ್ಞಾವಂತರನ್ನು ಕಾಡುತ್ತಿದೆ.
ಶಕ್ತಿ ಪ್ರದರ್ಶನಕ್ಕೆ ಕಾರ್ಮಿಕರ ಬಳಕೆ: ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮತ್ತು ಪ್ರಚಾರಕ್ಕೆಂದು ಸಾಕಷ್ಟು ಪ್ರಮಾಣದಲ್ಲಿ ಕಾರ್ಮಿಕರಿಗೆ ಹಣ ನೀಡಿ ಜನರನ್ನು ಕರೆದೊಯ್ಯುತ್ತಿದ್ದು, ಅಭ್ಯರ್ಥಿಗಳು ಮತ್ತು ಪಕ್ಷದ ಪರವಾಗಿ ಜೈಕಾರಕ್ಕೂ ಕೂಲಿ ಕಾರ್ಮಿಕರೇ ಆಧಾರ ಎನ್ನುವಂತಿದೆ.
ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಹೆಚ್ಚು ಜನರನ್ನು ಸೇರಿಸಬೇಕು, ಶಕ್ತಿ ಪ್ರದರ್ಶಿಸಬೇಕು ಎನ್ನುವ ಪೈಪೋಟಿಗೆ ಇಳಿದು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರನ್ನು ಎಲ್ಲಾ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿರುವುದು ಜಿಲ್ಲಾದ್ಯಂತ ಎದ್ದು ಕಾಣುತ್ತಿದೆ.
–ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.