ತರಬೇತಿ: ಸದಸ್ಯರಿಗೆ ಊಟದ ಕೊರತೆ
Team Udayavani, Feb 23, 2021, 3:13 PM IST
ಚಿಂತಾಮಣಿ: ನೂತನವಾಗಿ ಗ್ರಾಪಂಗಳಿಗೆ ಆಯ್ಕೆಯಾದ ಸದಸ್ಯರಿಗೆ ಸರ್ಕಾರದಿಂದ ನೀಡುತ್ತಿರುವ ಸಾಮರ್ಥ್ಯ ಅಭಿವೃದ್ಧಿ ತರಬೇತಿಯಲ್ಲಿ ಗುಣಮಟ್ಟದ ಊಟ ನೀಡುತ್ತಿಲ್ಲವೆಂದು ಹಾಗೂಊಟದ ಕೊರತೆ ಇದೆ ಎಂದು ಆರೋಪಿಸಿ ತರಬೇತಿಗೆ ಹಾಜರಾಗಿದ್ದ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ತಾಪಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಾಮರ್ಥ್ಯ ಅಭಿವೃದ್ಧಿ ತರಬೇತಿಗೆ ಹಾಜರಾಗುವಸದಸ್ಯರಿಗೆ ದಿನಕ್ಕೆ ಎರಡು ಹೊತ್ತು ಕಾಫಿ, ಟೀ ಮತ್ತುಬಿಸ್ಕೆಟ್ ಹಾಗೂ ಮಧ್ಯಾಹ್ನ ಊಟ ನೀಡುತ್ತಾರೆ. ಊಟ ಗುಣಮಟ್ಟವಿಲ್ಲ ಎಂದು ಸದಸ್ಯರು ಆರೋಪಿಸಿದರು.
ನಮ್ಮಿಂದಲೇ ಊಟದ ವ್ಯವಸ್ಥೆ: ತರಬೇತಿಯಲ್ಲಿ ಹಾಜರಾಗುವ ಸದಸ್ಯರೊಬ್ಬರಿಗೆ ದಿನಕ್ಕೆ ಕಾಫಿ, ಟೀ ಮತ್ತು ಬಿಸ್ಕೆಟ್ ಮತ್ತು ಮಧ್ಯಾಹ್ನ ಊಟ ನೀಡಲು ಸರ್ಕಾರ ಇಂತಿಷ್ಟು ಅನುದಾನ ನೀಡಿದರೂ ಗುಣಮಟ್ಟದ ಆಹಾರ ನೀಡುತ್ತಿಲ್ಲ ಎಂದು ದೂರಿದರು. ನಮ್ಮ ಗ್ರಾಪಂಗಳಲ್ಲೇ ತರಬೇತಿ ಪಡೆಯುತ್ತೇವೆ. ಊಟದ ವ್ಯವಸ್ಥೆ ನಾವೇ ಮಾಡಿ ಕೊಳ್ಳುತ್ತೇವೆ ಎಂದು ಹೇಳಿದರು.
ಸೋಮವಾರದ ತರಬೇತಿಯಲ್ಲಿ ಉಪ್ಪರಪೇಟೆ, ದೊಡ್ಡಗಂಜೂರು ಮತ್ತು ಪೆರಮಾಚನಹಳ್ಳಿ ಗ್ರಾಪಂಗಳ ಸದಸ್ಯರು ಸೇರಿ 80 ಕ್ಕೂ ಹೆಚ್ಚು ಸದಸ್ಯರುತರಬೇತಿಯಲ್ಲಿದ್ದು, ಮಧ್ಯಾಹ್ನ 20 ರಿಂದ 25 ಸದಸ್ಯರಿಗೆ ಊಟದ ಕೊರತೆ ಕಂಡು ಬಂದಿತ್ತು ಎನ್ನಲಾಗಿದೆ.
ಹೊರಗಿನವರು ಭಾಗಿ: ತರಬೇತಿಗೆ ಬಂದ ಮಹಿಳಾ ಸದಸ್ಯರ ಪತಿಯಂದಿರು ಊಟಕ್ಕೆ ಆಗಮಿಸುವುದರಿಂದ ಹಾಗೂ ಕೇರಿ ಬಳಿ ಇರುವ ಕೆಲ ಸಾರ್ವ ಜನಿಕರು ಹೊರಗಿನವರು ಊಟದಲ್ಲಿ ಭಾಗವಹಿಸುವುದರಿಂದ ಸದಸ್ಯರಿಗೆ ಊಟದ ಕೊರತೆ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ತಾಪಂ ಇಒ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಸದಸ್ಯರನ್ನು ಮನವೊಲಿಸಿ ಇನ್ಮುಂದೆ ಇಂತಹ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಲಾಗುವುದು ಎಂದು ಸಮಾಧಾನಪಡಿಸಿ ತರಬೇತಿಗೆಕಳುಹಿಸಿದರು.
ಪ್ರತಿದಿನ ತರಬೇತಿಗೆ ಹಾಜರಾಗುವ ಸದಸ್ಯರ ಸಂಖ್ಯೆಗಿಂತ 20 ರಿಂದ 30 ಜನರಿಗೆ ಹೆಚ್ಚಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆದರೂ ಊಟದ ಕೊರತೆ ಆಗುವುದರಿಂದ ಬೇಸರವಾಗಿದೆ. –ಮಂಜುನಾಥ್, ತಾಪಂ ಇಒ