ಭೂ ಹಕ್ಕಿಗಾಗಿ ಕಾದಿವೆ 36,940 ಅರ್ಜಿ!
Team Udayavani, Jun 14, 2023, 3:51 PM IST
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ದಶಕಗಳಿಂದ ಭೂ ರಹಿತರಾಗಿ ಅನಧಿಕೃತವಾಗಿ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ಸಣ್ಣಪುಟ್ಟ ರೈತರು ತಮ್ಮ ಭೂ ಹಕ್ಕಿಗಾಗಿ ಬರೋಬ್ಬರಿ 36,940 ಮಂದಿ ನಮೂನೆ 57ರ ಅಡಿ ಅರ್ಜಿ ಸಲ್ಲಿಸಿ ಭೂ ಸಕ್ರಮೀಕರಣಕ್ಕಾಗಿ ಚಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾದರೂ ಭೂ ರಹಿತರ ಸಂಖ್ಯೆ ಹೆಚ್ಚಾಗಿದೆ. ಆದರೆ ದಶಕಗಳಿಂದ ಭೂ ಒಡೆಯರಾಗಬೇಕೆಂಬ ಕನಸು ಈಡೇರದೇ ಅಕ್ರಮ ಸಾಗುವಳಿಯನ್ನು ಸಕ್ರಮಗೊಳಿಸಿಕೊಳ್ಳಲು ಭೂ ಸಕ್ರಮೀಕರಣಕ್ಕೆ ಅರ್ಜಿ ಸಲ್ಲಿಸಿರುವ ರೈತರು ಹೊಸ ಸರ್ಕಾರ ರಚಿಸಲಿರುವ ಭೂ ಸಕ್ರಮೀಕರಣ ಸಮಿತಿಗಳತ್ತ ಕಾದು ಕುಳಿತಿದ್ದಾರೆ.
ತಾಲೂಕುವಾರು ಮಾಹಿತಿ: ಜಿಲ್ಲೆಯಲ್ಲಿ ಅನಧಿಕೃತ ಸಾಗುವಳಿ ಸಕ್ರಮಕ್ಕಾಗಿ ನಮೂನೆ 57 ರ ಅಡಿಯಲ್ಲಿ ಒಟ್ಟು 39, 397 ಅರ್ಜಿಗಳು ಸಲ್ಲಿಕೆ ಆಗಿದ್ದು ಆ ಪೈಕಿ ಚಿಕ್ಕಬಳ್ಳಾಪುರ ತಾಲೂಕು ಒಂದರಲ್ಲಿಯೇ 7,964 ಅರ್ಜಿ ಸಲ್ಲಿಕೆ ಆಗಿವೆ. ಆ ಪೈಕಿ 555 ಅರ್ಜಿ ಮಾತ್ರ ವಿಲೇವಾರಿ ಆಗಿ ಇನ್ನೂ 7,409 ಅರ್ಜಿ ಬಾಕಿ ಇವೆ. ಶಿಡ್ಲಘಟ್ಟ ತಾ.7,253 ಅರ್ಜಿ ಸಲ್ಲಿಕೆ ಆಗಿದ್ದು, ಕೇವಲ 377 ಅರ್ಜಿ ಮಾತ್ರ ವಿಲೇವಾರಿ ಆಗಿ ಇನ್ನೂ 6,876 ಅರ್ಜಿ ಬಾಕಿ ಇದ್ದರೆ, ಚಿಂತಾಮಣಿ ತಾಲೂಕಿನಲ್ಲಿ 3,492 ಅರ್ಜಿ ಸಲ್ಲಿಕೆ ಆಗಿ ಕೇವಲ 70 ಮಾತ್ರ ವಿಲೇವಾರಿ ಇನ್ನೂ 3,422 ಬಾಕಿ ಇವೆ. ಗೌರಿಬಿದನೂರು ತಾ. 8,857 ಅರ್ಜಿಗಳು ಸಲ್ಲಿಕೆ, 983 ವಿಲೇವಾರಿ, 7,874 ಅರ್ಜಿಗಳು ವಿಲೇವಾರಿಗೆ ಎದುರು ನೋಡುತ್ತಿವೆ. ಬಾಗೇಪಲ್ಲಿ ತಾ.9,760 ಅರ್ಜಿ ಸಲ್ಲಿಕೆ, 222 ವಿಲೇವಾರಿ, 9,538 ಬಾಕಿ. ಗುಡಿಬಂಡೆ ತಾ. 2,071 ಅರ್ಜಿ ಸಲ್ಲಿಕೆ ಆಗಿದ್ದು, 250 ವಿಲೇವಾರಿ, 1821 ವಿಲೇವಾರಿ ಆಗಬೇಕಿದೆ ಎಂದು ಹೆಸರು ಹೇಳಲು ಇಚ್ಛಿಸದ ಕಂದಾಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬಡವರಿಗೆ ಭೂಮಿ ನೀಡಲು ನಿರಾಸಕ್ತಿ: ಜಿಲ್ಲೆಯಲ್ಲಿ ಪ್ರತಿ ವರ್ಷ ಕೂಡ ಶಾಸಕರ ಅಧ್ಯಕ್ಷತೆಯಲ್ಲಿ ಸಮರ್ಪಕವಾಗಿ ಭೂ ಸಕ್ರಮೀಕರಣ ಸಮಿತಿಗಳು ಕಾಲಕಾಲಕ್ಕೆ ಸಕ್ರಿಯವಾಗಿ ನಡೆಯದ ಕಾರಣ ದಶಕಗಳಿಂದ ಭೂ ಹಕ್ಕಿಗಾಗಿ ಅರ್ಜಿ ಸಲ್ಲಿಸಿರುವ ಬಡ ರೈತರು ಸಾಗುವಳಿ ಚೀಟಿಗಾಗಿ ಎದುರು ನೋಡುತ್ತಿದ್ದಾರೆ. ಸರ್ಕಾರ ಶೀಘ್ರವೇ ಭೂ ಸಕ್ರಮೀಕರಣ ಸಮಿತಿಗಳನ್ನು ರಚಿಸಿ ವಿಳಂಬ ಮಾಡದೇ ಭೂ ರಹಿತರಿಗೆ ಭೂಮಿ ಮಂಜೂರು ಮಾಡಬೇಕೆಂಬ ಆಗ್ರಹ ಜಿಲ್ಲೆಯ ಭೂ ರಹಿತ ಕೃಷಿ ಕೂಲಿ ಕಾರ್ಮಿಕರ ಆಗ್ರಹವಾಗಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಭೂ ರಹಿತರ ಬಡಪಾಯಿಗಳ ಬೇಡಿಕೆಗೆ ಶೀಘ್ರವೇ ಸ್ಪಂದಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.
39,397 ಪೈಕಿ ವಿಲೇವಾರಿ ಆಗಿದ್ದು 2,457 ಅರ್ಜಿ: ಜಿಲ್ಲೆಯ ಕಂದಾಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಜಿಲ್ಲಾದ್ಯಂತ 2023 ಮೇ 31ರ ಅಂತ್ಯಕ್ಕೆ ಒಟ್ಟು 39,397 ಅರ್ಜಿ ನಮೂನೆ 57ರ ಅಡಿ ಸ್ವೀಕರಿಸಿದೆ. ಆದರೆ ಇಲ್ಲಿವರೆಗೂ ವಿಲೇವಾರಿ ಮಾಡಿದ್ದು ಮಾತ್ರ ಬರೀ 2,457 ಅರ್ಜಿಗಳು ಮಾತ್ರ. ಇನ್ನೂ ವಿಲೇವಾರಿಗಾಗಿ ಒಟ್ಟು 36,940 ಅರ್ಜಿಗಳು ಎದುರು ನೋಡುತ್ತಿವೆ. ಹೊಸ ಸರ್ಕಾರ ಶಾಸಕರ ಅಧ್ಯಕ್ಷತೆಯಲ್ಲಿ ಭೂ ಸಕ್ರಮೀಕರಣ ಸಮಿತಿಗಳ ರಚನೆ ಆಗುವವರೆಗೂ ಅರ್ಜಿಗಳು ತಾಲೂಕು ಕಚೇರಿಗಳಲ್ಲಿ ಧೂಳು ಹಿಡಿಯಬೇಕಿದೆ.
-ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.