ರಾಜ್ಯದಲ್ಲಿ ಕಾಂಗ್ರೆಸ್ ಮತ್ತೂಮ್ಮೆ ಅಧಿಕಾರಕ್ಕೆ ಬರುತ್ತೆ: ಶಾಸಕ ವಿ.ಮುನಿಯಪ್ಪ
Team Udayavani, Jul 4, 2022, 3:01 PM IST
ಶಿಡ್ಲಘಟ್ಟ: ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಸಹಿತ ರಾಜ್ಯದಲ್ಲಿ ಕಾಂಗ್ರೆಸ್ ಬಲಿಷ್ಠಗೊಳಿಸಿ, ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ, ಅಧಿಕಾರದ ಚುಕ್ಕಾಣಿ ಹಿಡಿಯಬೇಕಿದೆ ಎಂದು ಹಿರಿಯ ಶಾಸಕ ವಿ.ಮುನಿಯಪ್ಪ ಹೇಳಿದರು.
ತಾಲೂಕಿನ ತಲಕಾಯಲಬೆಟ್ಟದ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿ ಕಾರಕ್ಕೆ ಬಂದ ನಂತರ ಜನಸಾಮಾನ್ಯರು, ರೈತರು ಅನೇಕ ರೀತಿಯ ಸಂಕಷ್ಟಗಳನ್ನು ಎದುರಿಸಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸಿ ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ಆಡಳಿತವನ್ನು ನೀಡುವ ಸಲುವಾಗಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಆರ್ಥಿಕವಾಗಿ ಅಭಿವೃದ್ಧಿ: ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸಿದ್ದ ಮಾಜಿ ಪ್ರಧಾನಿ ಡಾ. ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಅನೇಕ ಕ್ರಾಂತಿಕಾರಿ ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತಂದಿತ್ತು. ಇದರ ಫಲದಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ನರೇಗಾ ಎಂಬಂ ತಹ ಯೋಜನೆಯಿಂದ ಮೂಲ ಸೌಲಭ್ಯಗಳು ಮೇಲ್ದರ್ಜೆಗೆ ಏರಿಸಲು ಸಹಕಾರಿಯಾಗಿದೆ. ಈ ಯೋಜನೆಯಿಂದ ಗ್ರಾಮೀಣ ಪ್ರದೇಶದ ಸ್ವರೂಪವೇ ಬದಲಾಗಿದೆ. ಜೊತೆಗೆ ರೈತರ ಸಾಲವನ್ನು ಮನ್ನಾ ಮಾಡಿದ್ದರಿಂದ ರೋಗಗ್ರಸ್ಥವಾಗಿದ್ದ ಡಿಸಿಸಿ ಬ್ಯಾಂಕ್, ಪುನಶ್ಚೇತನಗೊಂಡು ಬಡವರು, ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿ ಆಗಿದೆ ಎಂದು ವಿವರಿಸಿದರು.
ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ: ಚಿಕ್ಕಬಳ್ಳಾಪುರ ಜಿಲ್ಲೆಯ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಶ್ರೀಕ್ಷೇತ್ರ ತಲಕಾಯಲಬೆಟ್ಟದ ಅಭಿವೃದ್ಧಿಗಾಗಿ ಅನೇಕ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಶ್ರೀವೆಂಕಟರಮಣ ಸ್ವಾಮಿಯ ಆಶೀರ್ವಾದದಿಂದ ಇಡೀ ಜಿಲ್ಲೆಯಲ್ಲಿ ಮಾದರಿಯಾಗಿ ಪವಿತ್ರಯಾತ್ರಾ ಸ್ಥಳವಾಗಿ ಅಭಿವೃದ್ಧಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಅನುದಾನಕ್ಕಾಗಿ ಮನವಿ: ಪ್ರಸ್ತುತ ದೇವಾಲಯದಲ್ಲಿ ತುರ್ತಾಗಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಸರ್ಕಾರದ ಗಮನ ಸೆಳೆಯುವಂತಹ ಕೆಲಸ ಮಾಡಿ, ಈ ಭಾಗಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಲು, ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಶಾಸಕರು ತಿಳಿಸಿದರು.
ಕೋಲಾರ ಜಿಪಂ ಮಾಜಿ ಅಧ್ಯಕ್ಷ ವಿ.ಸುಬ್ರಮಣಿ, ಚಿಕ್ಕಬಳ್ಳಾಪುರ ಜಿಪಂ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎನ್.ಮುನಿಯಪ್ಪ, ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಆನಂದ್, ಭೂಅಭಿವೃದ್ಧಿ ಬ್ಯಾಂಕ್‌ನ ನಿರ್ದೇಶಕ ರವಿ, ತಲಕಾಯಲಬೆಟ್ಟ ಗ್ರಾಪಂ ಅಧ್ಯಕ್ಷೆ ಶುಭಾವತಮ್ಮ, ವೈ.ಹುಣಸೇನಹಳ್ಳಿ ಕಾಂಗ್ರೆಸ್ ಮುಖಂಡ ಸಂತೋಷ, ಮುರಳಿ, ಜೆಇ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.