ಕೆ.ಸುಧಾಕರ ಅಕ್ರಮ ಆಸ್ತಿಗಳ ಸರದಾರ: ಶಿವಶಂಕರ ರೆಡ್ಡಿ ಆರೋಪ
Team Udayavani, Oct 15, 2019, 2:12 PM IST
ಚಿಕ್ಕಬಳ್ಳಾಪುರ: ಒಬ್ಬ ನಿವೃತ್ತ ಶಿಕ್ಷಕನ ಮಗ ಕೆಲವೇ ವರ್ಷಗಳಲ್ಲಿ ನೂರಾರು ಕೋಟಿ ಒಡೆಯ ಹೇಗಾದ ಎಂದು ಸುಧಾಕರ್ ಮತ ಕೇಳಲು ಬಂದಾಗ ಮತದಾರರು ಅವರನ್ನು ಪ್ರಶ್ನೆ ಮಾಡಿ ಆತನ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡಬೇಕೆಂದು ಮಾಜಿ ಕೃಷಿ ಸಚಿವ ಎನ್.ಹೆಚ್.ಶಿವಶಂಕರ ರೆಡ್ಡಿ, ಅನರ್ಹ ಶಾಸಕ ಡಾ.ಕೆ.ಸುಧಾಕರ್ ವಿರುದ್ದ ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಜಿ.ಪಂ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮಂಗಳವಾರ ಉಪ ಚುನಾವಣೆ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಪೆರೇಸಂದ್ರದಲ್ಲಿ ಕೇವಲ ಹತ್ತು ಹನ್ನೆರಡು ಎಕರೆ ಜಮೀನು ಹೊಂದಿದ್ದ ಇವರು ಚಿಕ್ಕಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ತಾಲ್ಲೂಕು ಸೇರಿದಂತೆ ಹಲವು ಕಡೆ ನೂರಾರು ಎಕರೆ ಭೂಮಿ ಖರೀದಿ ಮಾಡಿದ್ದಾರೆ. ಬೋಗಸ್ ಕಂಪನಿಗಳ ಮುಖಾಂತರ ನೂರಾರು ಕೋಟಿ ವಹಿವಾಟು ನಡೆಸಿ ಸುಮಾರು ಜನಕ್ಕೆ ವಂಚಿಸಿದ್ದು ಕೆಲವೇ ದಿನಗಳಲ್ಲಿ ಈತನ ಬಂಡವಾಳ ಬಯಲಿಗೆ ಬೀಳಲಿದೆ. ಕೊಟ್ಯಾಂತರ ರೂಪಾಯಿಗಳಷ್ಟು ಹಣ ತೆರಿಗೆ ಕಟ್ಟದೆ ಐ.ಟಿ. ಇಲಾಖೆಗೆ ವಂಚಿಸಿದ್ದು ಅದನ್ನು ಮರೆಮಾಚಲು ಈಗ ಬಿಜೆಪಿ ಪಕ್ಷವನ್ನು ಅಪ್ಪಿಕೊಂಡಿದ್ದಾರೆ.ಈ ಕೂಡಲೇ ಐ.ಟಿ ಇಲಾಖೆ ಅಧಿಕಾರಿಗಳು ಸುಧಾಕರ್ ರವರ ಆಸ್ತಿ ವಿವರಗಳನ್ನು ಸಂಗ್ರಹಿಸಿ ಆತನ ಭ್ರಷ್ಟಾಚಾರದ ಬಗ್ಗೆ ಇಲಾಖೆಗೆ ವಂಚಿಸಿರುವುದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇಂತಹ ಭ್ರಷ್ಟ ರಾಜಕಾರಣಿಗೆ ಈ ಬಾರಿ ಚುನಾವಣೆಯಲ್ಲಿ ಬುದ್ದಿ ಕಲಿಸಬೇಕು. ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದು ಈಗ ಮತ್ತೆ ಜನಕ್ಕೆ ಟೋಪಿ ಹಾಕಿ ಮತ ಪಡೆಯಲು ಮುಂದಾಗಿರುವುದು ಸುಧಾಕರ್ ಗೆ ಶೋಭೆ ತರುವ ಕೆಲಸವಲ್ಲ. ಸಿದ್ದರಾಮಯ್ಯನವರ ಅಧಿಕಾರದ ಅವಧಿಯಲ್ಲಿ ಸಾವಿರಾರು ಕೋಟಿ ಅನುದಾನ ಚಿಕ್ಕಬಳ್ಳಾಪುರಕ್ಕೆ ನೀಡಿದ್ದರು. ಆದರೆ ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಅಧಿಕಾರದ ಆಸೆ ಆಮಿಷಗಳಿಗೆ ಒಳಗಾಗಿ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆಯೇ ಹೊರತು ಜನರ ಹಿತಾಸಕ್ತಿಗಲ್ಲ ಎಂದು ವಾಗ್ದಾಳಿ ಮಾಡಿದರು ಎಂದರು.
ಈ ಸಂದರ್ಭದಲ್ಲಿ ಶಾಸಕ ವಿ.ಮುನಿಯಪ್ಪ, ಕಾಂಗ್ರೆಸ್ ನಾಯಕರಾದ ನಂದಿ ಅಂಜಿನಪ್ಪ, ಕೆ.ವಿ .ನವೀನ್ ಕಿರಣ್, ಯಲುವಹಳ್ಳಿ ರಮೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಎನ್ ಕೇಶವ ರೆಡ್ಡಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮುನೇಗೌಡ,ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸುಬ್ಬರಾಯಪ್ಪ,ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್, ಎಪಿಎಂಸಿ ನಿರ್ದೇಶಕ ಮಿಲ್ಟನ್ ವೆಂಕಟೇಶ್, ಮುಖಂಡರಾದ ಪುರದಗಡ್ಡೆ ಕೃಷ್ಣಪ್ಪ,ಅಡ್ಡಗಲ್ ಶ್ರೀಧರ್ ಇಸ್ಮಾಯಿಲ್ , ವರದರಾಜು,ದೇವರಾಜ್, ಅರುಣ್, ಗುಂತಪ್ಪನಹಳ್ಳಿ ವೆಂಕಟೇಶ್, ಮಂಚನಬಲೆ ವೆಂಕಟೇಶ್ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.