ವಸತಿ ಫಲಾನುಭವಿಗಳಿಗೆ ಬಾರದ ಹಣ
Team Udayavani, Oct 4, 2018, 1:18 PM IST
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವಸತಿ ರಹಿತರಿಗೆ ಶಾಶ್ವತ ಸೂರು ಕಲ್ಪಿಸಲು ರಾಜ್ಯ ಸರ್ಕಾರ ವಿವಿಧ ವಸತಿ ಯೋಜನೆಗಳಡಿಯಲ್ಲಿ ಸಾವಿರಾರು ಮನೆಗಳನ್ನು ಮಂಜೂರು ಮಾಡಿದ್ದರೂ ವಸತಿ ನಿರ್ಮಿಸಿಕೊಳ್ಳುತ್ತಿರುವ ಫಲಾನುಭವಿಗಳಿಗೆ ಮಾತ್ರ ಕಳೆದ 3, 4 ತಿಂಗಳನಿಂದ ಹಣ ಕೊಡದೇ ರಾಜೀವ್‌ಗಾಂಧಿ ವಸತಿ ನಿಗಮ ವಿಳಂಬ ತೋರುತ್ತಿರುವುದು ಇದೀಗ ಜಿಲ್ಲೆಯ ವಸತಿ ಫಲಾನುಭವಿಗಳನ್ನು ಸಂಕಷ್ಟಕ್ಕೆ ತಳ್ಳಿದೆ.
ಜಿಲ್ಲೆಗೆ ವಿವಿಧ ವಸತಿ ಯೋಜನೆಗಳಲ್ಲಿ ಮಂಜೂರಾಗಿರುವ ಸುಮಾರು 13 ಸಾವಿರಕ್ಕೂ ಅಧಿಕ ಮನೆಗಳಿಗೆ ನಿವೇಶನದ ಸಮಸ್ಯೆ ಎದುರಾಗಿ ಜಿಲ್ಲೆಯಲ್ಲಿ ವಸತಿ ಯೋಜನೆಗಳು ಆಟಕ್ಕೂಂಟು ಲೆಕ್ಕಕ್ಕಿಲ್ಲ ಎಂಬಂತಾಗಿರುವ ಸಂದರ್ಭದಲ್ಲಿ ಈಗಾಗಲೇ ವಸತಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಮನೆ ನಿರ್ಮಿಸಿಕೊಳ್ಳುತ್ತಿರುವ ಫಲಾನುಭವಿಗಳಿಗೆ ರಾಜೀವ್ ಗಾಂಧಿ ವಸತಿ ನಿಗಮ ಸಮರ್ಪಕವಾಗಿ ಸಹಾಯಧನ ವನ್ನು ಬಿಡುಗಡೆ ಮಾಡದಿರುವುದು ಈಗ ಫಲಾನು ಭವಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹಣ ಬಿಡುಗಡೆ ವಿಳಂಬದಿಂದ ಜಿಲ್ಲೆಯಲ್ಲಿ ವಸತಿ ಯೋಜನೆಗಳ ಪ್ರಗತಿ ಕಾರ್ಯ ಪಾತಳಕ್ಕೆ ಕುಸಿಯುವಂತಾಗಿದೆ.
ಹಂತ ಹಂತವಾಗಿ ಮನೆ ನಿರ್ಮಾಣ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳುವ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆ. ಪ್ರಧಾನ ಮಂತ್ರಿ ಅವಾಜ್ ಯೋಜನೆ, ದೇವರಾಜ ಅರಸು ವಸತಿ ಯೋಜನೆ ಹಾಗೂ ಬಸವ ವಸತಿ ಯೋಜನೆಗಳಲ್ಲಿ ಮಂಜೂರಾಗಿರುವ ಸವಿರಾರು ಮನೆಗಳನ್ನು ನಿರ್ಮಿಸಿಕೊಳ್ಳಲು ಗ್ರಾಮೀಣ ರೈತಾಪಿ ಕೂಲಿ ಕಾರ್ಮಿಕರು ಆಸಕ್ತಿ ಯಿಂದ ಮುಂದಾಗಿದ್ದಾರೆ. ಬಹಳಷ್ಟು ಮಂದಿ ತಮ್ಮ ಕನಸಿನ ಮನೆಗೆ ಪಾಯ ಹಾಕಿದ್ದರೆ ಮತ್ತೆ ಕೆಲವರು ಮನೆಯ ಗೋಡೆಗಳನ್ನು ಪೂರ್ತಿಗೊಳಿಸಿದ್ದಾರೆ.
ಇನ್ನೂ ಕೆಲ ವರು ಮನೆಗೆ ಮೇಲ್ಛಾವಣಿ ಹಾಕಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ ರಾಜೀವ್‌ಗಾಂಧಿ ವಸತಿ ನಿಗಮ ಫಲಾನುಭವಿಗಳಿಗೆ ಕಾಲಕಾಲಕ್ಕೆ ಕಂತುಗಳಲ್ಲಿ ಕೊಡಬೇಕಿದ್ದ ಆರ್ಥಿಕ ನೆರವುನ್ನು ಕೊಡದೇ ವಿಧಾನ ಸಭಾ ಚುನಾವಣೆ ಮುಗಿದ ಮೂರನ್ನಾಲು ತಿಂಗಳಿಂದ ಮೀನಮೇಷ ಎಣಿಸುತ್ತಿದೆ. ನಿಗಮದ ಮಾರ್ಗಸೂಚಿ ಅನ್ವಯ ಮನೆಗಳನ್ನು ಹಂತ ಹಂತವಾಗಿ ನಿರ್ಮಿಸಿರುವ ಫಲಾನುಭವಿಗಳು ನಿಗಮ ಕೊಡಬೇಕಾದ ಬಾಕಿ ಕಂತುಗಳ ಬಿಡುಗಡೆಗೆ ಚಾತಕ ಪಕ್ಷಿಗಳಂತೆ ಎದುರು ನೋಡುವಂತಾಗಿದೆ.
ಫಲಾನುಭವಿಗಳಿಗೆ ಸಾಲಗಾರರ ಕಾಟ: ಜಿಲ್ಲೆಯಲ್ಲಿ ಸದ್ಯ ಮಳೆ, ಬೆಳೆ ಕೊರತೆಯಿಂದ ಆವರಿಸಿರುವ ಬರದ ಕಾರ್ಮೋಡಕ್ಕೆ ರೈತಾಪಿ ಜನತೆ ತತ್ತರಿಸಿದ್ದು, ಮನೆ ನಿರ್ಮಿಸಿಕೊಳ್ಳುವ ಸ್ವಂತ ಶಕ್ತಿ ಕೂಡ ಬಹಳಷ್ಟು ರೈತಾಪಿ ಜನತೆಗೆ ಇಲ್ಲವಾಗಿದೆ. ಆದರೆ ಸರ್ಕಾರ ಉಚಿತವಾಗಿ ಮನೆ ಮಂಜೂರು ಮಾಡಿ ಧನ ಸಹಾಯ ಕೊಡುತ್ತಿರುವಾಗ ಬಹಳಷ್ಟು ಫಲಾನುಭವಿಗಳು ಸರ್ಕಾರ ಹಣ ಬಿಡುಗಡೆ ಮಾಡುತ್ತದೆಂದು ನಂಬಿ ಉತ್ಸಾಹದಿಂದ ಸಾಲ, ಸೋಲ ಮಾಡಿ ತಮಗೆ ಮಂಜೂರಾಗಿರುವ ಮನೆಗಳನ್ನು ಕಟ್ಟಿಸಿಕೊಳ್ಳುತ್ತಿದ್ದಾರೆ.
ಆದರೆ 3, 4 ತಿಂಗಳಿಂದ ವಸತಿ ನಿಗಮ ಫಲಾನುಭವಿಗಳ ಖಾತೆಗೆ ಸಹಾಯ ಧನವನ್ನೆ ಮಂಜೂರು ಮಾಡದೇ ರಾಜೀವ್‌ಗಾಂಧಿ ವಸತಿ ನಿಗಮ ಇಲ್ಲಸಲ್ಲದ ಸಾಬೂಬು ಹೇಳುತ್ತಿರುವುದರಿಂದ ಸಾಲ ಮಾಡಿ ಮನೆ ನಿರ್ಮಿಸುತ್ತಿರುವ ಫಲಾನುಭವಿಗಳಿಗೆ ಈ ಖಾಸಗಿ ಸಾಲಗಾರರ ಕಾಟ ಶುರುವಾಗಿದೆ. ಪ್ರತಿ ನಿತ್ಯ ಫಲಾನುಭವಿಗಳು ತಮ್ಮ ಖಾತೆಗೆ ಹಣ ಜಮೆ ಆಗಿದೆಯೆಂದು ತಿಳಿಯಲು ಬ್ಯಾಂಕ್ ಗಳಿಗೆ ಸುತ್ತಾಡುವಂತಾಗಿದೆ.
ತಾಲೂಕುವಾರು ವಸತಿ ಪ್ರಗತಿ ಹೀಗಿದೆ: ಬಾಗೇಪಲ್ಲಿ ತಾಲೂಕಿಗೆ ಮಂಜೂರಾಗಿರುವ ವಸತಿ ಯೋಜನೆ ಯಲ್ಲಿ 2,524 ಪಾಯ ಹಂತದಲ್ಲಿದ್ದರೆ 667 ಮಾತ್ರ ಗೋಡೆ ಹಂತ ತಲುಪಿದೆ. ಇನ್ನೂ 438 ಮನೆಗಳಿಗೆ ಮಾತ್ರ ಮೇಲ್ಛಾವಣಿ ಹಾಕಿದ್ದು, ಬರೋಬ್ಬರೊ 3,764 ಮನೆಗಳ ನಿರ್ಮಾಣ ಕಾರ್ಯ ಆರಂಭಗೊಂಡಿಲ್ಲ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಒಟ್ಟು 1,632 ಮನೆಗಳು ಪಾಯ ಹಂತದಲ್ಲಿದೆ. 354 ಮನೆಗಳಿಗೆ ಮಾತ್ರ ಗೋಡೆ ಪೂರ್ಣಗೊಂಡಿದೆ. 410 ಮನೆಗಳಿಗೆ ಮೇಲ್ಛಾವಣಿ ಹಾಕಿದ್ದು, 1,772 ಮನೆಗಳ ನಿರ್ಮಾಣ ಕಾರ್ಯ ಆಗಬೇಕಿದೆ.
ಚಿಂತಾಮಣಿ ತಾಲೂಕಿಗೆ ಮಂಜೂರಾಗಿರುವ ಒಟ್ಟಾರೆ ವಸತಿ ಸೌಲಭ್ಯದಲ್ಲಿ 2,941 ಮನೆಗಳಿಗೆ ಪಾಯ ಹಾಕಿದ್ದು, ಅವುಗಳ ಪೈಕಿ 654 ಮನೆಗಳಿಗೆ ಗೋಡೆಗಳು ಪೂರ್ಣಗೊಂಡಿದೆ. 547 ಮನೆಗಳಿಗೆ ಮೇಲ್ಛಾವಣಿ ಹಾಕಿದ್ದು, 3,065 ಮನೆಗಳ ನಿರ್ಮಾಣ ಕಾರ್ಯ ನೆನಗುದಿಗೆ ಬಿದ್ದಿದೆ. ಗೌರಿಬಿದನೂರು ತಾಲೂಕಿಗೆ ಮಂಜೂರಾಗಿರುವ ಒಟ್ಟು ಮನೆಗಳ ಪೈಕಿ 2,564 ಮನೆಗಳಿಗೆ ಮಾತ್ರ ಪಾಯ ಹಾಕಿದ್ದು, ಅದರಲ್ಲಿ 837 ಮನೆಗಳು ಗೋಡೆ ಹಂತ ತಲುಪಿವೆ.
581 ಮನೆಗಳಿಗೆ ಮೇಲ್ಛಾವಣಿ ಹಾಕಿದ್ದು, ಇನ್ನೂ 1,757 ಮನೆಗಳ ನಿರ್ಮಾಣ ಕಾರ್ಯ ಆರಂಭಗೊಳ್ಳಬೇಕಿದೆ.
ಗುಡಿಬಂಡೆ ತಾಲೂಕಿನಲ್ಲಿ ಒಟ್ಟು 453 ಮನೆಗಳಿಗೆ ಪಾಯ ಹಾಕಿದ್ದು 185 ಮನೆಗಳು ಗೋಡೆ ಹಂತಕ್ಕೆ ಬಂದಿದ್ದು, 106 ಮನೆಗಳು ಮೇಲ್ಛಾವಣಿ ಹಾಕಲಾಗಿದೆ. 587 ಕ್ಕೂ ಹೆಚ್ಚು ಮನೆಗಳು ಕಾರ್ಯಾರಂಭಕ್ಕೆ ಎದುರು ನೋಡುತ್ತಿವೆ.
ಶಿಡ್ಲಘಟ್ಟ ತಾಲೂಕಿನಲ್ಲಿ 1583 ಮನೆಗಳು ಪಾಯ ಹಂತಕ್ಕೆ ಬಂದಿದ್ದು, 527 ಮನೆಗಳು ಗೋಡೆ ಮುಗಿಸಿ 472 ಮೇಲ್ಛಾವಣಿ ಮುಗಿಸಿವೆ. 1,890ಕ್ಕೂ ಹೆಚ್ಚು ಮನೆಗಳು ನಿರ್ಮಾಣ ಕಾರ್ಯದಿಂದ ದೂರ ಉಳಿದಿವೆ.
ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.