ಅತ್ತ ನೆರೆಗೆ ತತ್ತರ, ಇತ್ತ ಬರಗಾಲಕ್ಕೆ ಬದುಕು ಬರ್ಬರ
Team Udayavani, Aug 12, 2019, 3:00 AM IST
ಚಿಕ್ಕಬಳ್ಳಾಪುರ: ಎಂದೂ ಕಂಡು ಕೇಳರಿಯದ ಮಹಾ ಪ್ರವಾಹಕ್ಕೆ ಸಿಲುಕಿ ಇಡೀ ಉತ್ತರ ಕರ್ನಾಟಕದ ಜಿಲ್ಲೆಗಳು ನೆರೆ ಹಾವಳಿಯಿಂದ ಬದುಕು ಕಳೆದುಕೊಂಡು ಅತಂತ್ರರಾಗಿ ಜನ ಜೀವನ ತತ್ತರಗೊಳ್ಳುತ್ತಿದ್ದರೆ, ಇತ್ತ ಬಯಲು ಸೀಮೆಯ ಬರದ ನಾಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆ ಇಲ್ಲದೇ ರೈತಾಪಿ ಜನರ ಬದುಕು ಬರ್ಬರವಾಗಿದೆ.
ಮುಂಗಾರು ಹಂಗಾಮಿನಲ್ಲಿ ಮಳೆ ಇಲ್ಲದೇ ಬರಕ್ಕೆ ಸಿಲುಕಿರುವ ಜಿಲ್ಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಜಿಲ್ಲಾ ಕೇಂದ್ರದಲ್ಲಿ ಭಾನುವಾರ ಓಂಶಕ್ತಿ ಅಮ್ಮನವರ ನೂರಾರು ಮಹಿಳಾ ಭಕ್ತರು ವಿಶಿಷ್ಟ ರೀತಿಯಲ್ಲಿ ಗಂಜಿ ಉತ್ಸವದ ಮೂಲಕ ಮಳೆಗಾಗಿ ಕಿ.ಮೀ ಗಟ್ಟಲೇ ತಲೆಯ ಮೇಲೆ ಮಡಿಕೆ ಇಟ್ಟುಕೊಂಡು ಕಾಲ್ನಡಿಗೆಯಲ್ಲಿ ಸಾಗಿ ವರುಣನ ಕೃಪೆಗೆ ಮೊರೆಯಿಟ್ಟರು.
ಹನಿ ಹನಿ ನೀರಿಗೂ ಪರದಾಟ: ಸೃಷ್ಟಿಯ ವಿಪರ್ಯಾಸ ಅಂದರೆ ಇದೇ ಇರಬೇಕು. ಕಳೆದ ಹತ್ತು ದಿನಗಳಿಂದ ಉತ್ತರ ಕರ್ನಾಟಕದಲ್ಲಿ ಮಳೆಯ ಮಹಾ ರುದ್ರನರ್ತನದಿಂದ ಮನೆಗಳು ಉರುಳಿ ಬಿದ್ದು ಜನ, ಜಾನುವಾರುಗಳು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯಗಳನ್ನು ಕಣ್ಣೆದುರು ನೋಡಿ ಮಮ್ಮಲ ಮರುಗುತ್ತಿರುವುದು ಒಂದೆಡೆಯಾದರೆ, ಇತ್ತ ಬರಗಾಲಕ್ಕೆ ತುತ್ತಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹನಿ ಹನಿ ನೀರಿಗೂ ಪರದಾಡುವಂತಾಗಿದೆ.
ಬರದ ಕಾರ್ಮೋಡದಿಂದ ಕಂಗೆಟ್ಟಿರುವ ಜಿಲ್ಲೆಯಲ್ಲಿ ಉತ್ತಮ ಮಳೆ, ಬೆಳೆಯಾಗಲಿ ಎಂದು ಪ್ರಾರ್ಥಿಸಿ ಓಂಶಕ್ತಿ ಅಮ್ಮನವರ ನೂರಾರು ಮಹಿಳಾ “ಭಕ್ತರಿಂದ ವಿಶಿಷ್ಟ ರೀತಿಯಲ್ಲಿ ಗಂಜಿ, ಬೆಂಕಿ ಮಡಿಕೆಯ ಕಳಸ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿ ಗಮನ ಸೆಳೆದರು.
ರಾಜಬೀದಿಗಳಲ್ಲಿ ಮೆರವಣಿಗೆ: ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಓಂಶಕ್ತಿ ಅಮ್ಮನವರ ಭಕ್ತರು ತಲೆ ಮೇಲೆ ನೀರು ತುಂಬಿದ್ದ ಮಣ್ಣಿನ ಮಡಿಕೆಗಳನ್ನು ಹೊತ್ತು ಮಳೆಗಾಗಿ ಪ್ರಾರ್ಥಿಸಿ ನಗರದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಗಮನ ಸೆಳೆದರು. ಕೆಲವರು ಮಡಿಕೆಗಳಲ್ಲಿ ನೀರು ತುಂಬಿಸಿದ್ದರೆ ಮತ್ತೆ ಕೆಲವರು ಬೆಂಕಿ ತುಂಬಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ನಗರದ ಜಿಲ್ಲಾಸ್ಪತ್ರೆ ಸಮೀಪದ ಕೈವಾರ ಯೋಗಿ ನಾರೇಯಣ ತಾತಯ್ಯನವರಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಗರದ ವಾಪಸಂದ್ರ, ಚಾಮರಾಜಪೇಟೆ, ಅಂಬೇಡ್ಕರ್ ಕಾಲೋನಿ, ಬಿಬಿ ರಸ್ತೆ, ಮಹಾಕಾಳಿ ರಸ್ತೆ, ಕಂದವಾರ ಬಾಗಿಲು, ನಗರ್ತಪೇಟೆ ಮುಖಾಂತರ ನಗರದ ಟೌನ್‌ಹಾಲ್ ವೃತ್ತಕ್ಕೆ ಗಂಜಿ, ಬೆಂಕಿ ಮಡಿಕೆಯ ಉತ್ಸವದ ಮೆರವಣಿಗೆ ಆಗಮಿಸಿದರು.
ಗಂಜಿ ಉತ್ಸವವನ್ನು ಸಂಪನ್ನ: ಮೆರವಣಿಗೆ ಮಾರ್ಗ ನಗರದ ಪ್ರಮುಖ ಗ್ರಾಮ ದೇವರುಗಳಾದ ಶ್ರೀ ರಂಗನಾಥಸ್ವಾಮಿ, ಮಹಾಕಾಳಿ ಅಮ್ಮನವರಿಗೆ ಹಾಗೂ ಕಂದವಾರದ ವೆಂಕಟರಣಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಸಾಧು ಮಠದ ರಸ್ತೆಯಿಂದ ಪುನಃ ಕೈವಾರ ತಾತಯ್ಯನ ದೇವಸ್ಥಾನಕ್ಕೆ ತೆರಳಿದ ಭಕ್ತರು ಗಂಜಿ ಉತ್ಸವವನ್ನು ಸಂಪನ್ನಗೊಳಿಸಿದರು. ಗಂಜಿ ಉತ್ಸವದಲ್ಲಿ ಪಾಲ್ಗೊಂಡಿದ್ದವರಿಗೆಲ್ಲಾ ಓಂಶಕ್ತಿ ಸೇವಾ ಮಂಡಳಿ ವತಿಯಿಂದ ಅನ್ನದಾಸೋಹ ಏರ್ಪಡಿಸಲಾಗಿತ್ತು.
ತಮಟೆ ಸದ್ದಿಗೆ ಕುಣಿದ ಮಹಿಳೆಯರು: ಗಂಜಿ ಉತ್ಸವದ ವೇಳೆ ಓಂಶಕ್ತಿ ಮಹಿಳೆಯರು ತಮಟೆಯ ಸದ್ದಿನ ನಿನಾದಕ್ಕೆ ಕುಣಿದು ಕುಪ್ಪಳಿಸಿದರು. ಮಹಿಳೆಯರು ತಲೆ ಮೇಲೆ ಗಂಜಿ, ಬೆಂಕಿ ಮಡಿಕೆ ಹೊತ್ತು ಸಾಗಿ ಬಂದರೆ ಮೆರವಣಿಗೆ ಮುಂಭಾಗದಲ್ಲಿ ಕೆಲ ಮಹಿಳೆಯರು ಕುಣಿದು ಓಂಶಕ್ತಿ ಅಮ್ಮನವರಿಗೆ ಹರಕೆ ತೀರಿಸಿ ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಂಡರು. ಪ್ರತಿ ವರ್ಷ ನಾವು ಮಳೆಗಾಗಿ ಪ್ರಾರ್ಥಿಸಿ ನಗರದ ಮುಖ್ಯ ರಸ್ತೆಗಳಲ್ಲಿ ಗಂಜಿ, ಬೆಂಕಿ ಮಡಿಕೆ ಉತ್ಸವ ನಡೆಸಿಕೊಂಡು ಬರುತ್ತಿದ್ದೇವೆ. ಇದು ಮೂರನೇ ವರ್ಷದ ಕಾರ್ಯಕ್ರಮ ಎಂದು ಚಿಕ್ಕಬಳ್ಳಾಪುರದ ಓಂಶಕ್ತಿ ಸಂಘಟನೆಯ ಮಹಿಳಾ ಸಂಘದ ಅಧ್ಯಕ್ಷ ಕನಕಾಂಭ ತಿಳಿಸಿದರು.
ಬೆಳ್ಳಿರಥದಲ್ಲಿ ಓಂಶಕ್ತಿ ಅಮ್ಮನವರ ಉತ್ಸವ: ಜಿಲ್ಲಾ ಕೇಂದ್ರದಲ್ಲಿ ಮಳೆಗಾಗಿ ಪ್ರಾರ್ಥಿಸಿ ಓಂಶಕ್ತಿ ಮಹಿಳಾ ಸಂಘದ ಸದಸ್ಯರು ನಡೆಸಿದ ಗಂಜಿ, ಬೆಂಕಿ ಮಡಿಕೆಯ ಉತ್ಸವದ ಆಚರಣೆ ವೇಳೆ ಓಂಶಕ್ತಿ ಆಧಿಪರಾಶಕ್ತಿ ಅಮ್ಮನವರ ಉತ್ಸವ ಮೂರ್ತಿಯನ್ನು ಅಲಂಕೃತ ಬೆಳ್ಳಿ ರಥದ ಮೂಲಕ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಓಂಶಕ್ತಿ ಅಮ್ಮನವರಿಗೆ ಏರ್ಪಡಿಸಿದ್ದ ಆಕರ್ಷಕ ಪುಷ್ಪಾಲಂಕಾರ ಭಕ್ತರ ಗಮನ ಸೆಳೆಯಿತು. ಮೆರವಣಿಗೆ ಸಾಗಿದ ರಸ್ತೆಗಳಲ್ಲಿ ಮಹಿಳೆಯರು ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು.
ಜಿಲ್ಲೆಯಲ್ಲಿ ಸತತ ಆರೇಳು ವರ್ಷಗಳಿಂದ ಮಳೆ ಬೆಳೆ ಇಲ್ಲದೇ ತೀವ್ರ ಬರಗಾಲ ಆವರಿಸಿದೆ. ರೈತಾಪಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಗಂಜಿ ಉತ್ಸವ ಆಚರಿಸುತ್ತಿದ್ದೇವೆ. ನಗರಕ್ಕಿರುವ ಗಂಡಾಂತರಗಳು ತೊಲಗಲಿ, ಉತ್ತಮ ಮಳೆ ಬೆಳೆಯಾಗಿ ಜನ ಜೀವನ ಸಮೃದ್ಧಿಯಿಂದ ಇರಲಿ ಎಂಬ ಭಾವನೆಯಿಂದ ಓಂಶಕ್ತಿ ಅಮ್ಮನವರಿಗೆ ಗಂಜಿ ಉತ್ಸವ ಆಚರಿಸಿದ್ದೇವೆ.
-ಕನಕಾಂಭ, ಉತ್ಸವ ಸಮಿತಿ ಅಧ್ಯಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.