ನದಿ ಜೋಡಣೆ ನಿರೀಕ್ಷೆ ಹುಸಿ: ಬರದ ನಾಡಿಗೆ ಬರೆ
Team Udayavani, Jul 6, 2019, 3:00 AM IST
ಲೋಕಸಭೆಯಲ್ಲಿ ಶುಕ್ರವಾರ ಎನ್‌ಡಿಎ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಚೊಚ್ಚಲ ಬಜೆಟ್ ಬಯಲು ಸೀಮೆಯ ಬರಪೀಡಿತ ಚಿಕ್ಕಬಳ್ಳಾಪುರ ಜಿಲ್ಲೆಗೆ ತೀವ್ರ ನಿರಾಶೆ ಮೂಡಿಸಿದೆ. ಆದರೆ ಕೇಂದ್ರದ ಹಲವು ಮಹತ್ವದ ಯೋಜನೆಗಳ ಬಗ್ಗೆ ಜನ ಸಂತಸಗೊಂಡಿದ್ದರೆ, ಮತ್ತೆ ಕೆಲವರು ತಮ್ಮ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ದೇಶದ ಹಿತ ಕಾಯುವ ಬಜೆಟ್ ಎಂದು ಬಣ್ಣಿಸಿದರೆ, ಸಿಪಿಎಂ ಜನ ವಿರೋಧಿ ಬಜೆಟ್ ಎಂದು ಕಿಡಿಕಾರಿದೆ. ಕಾಂಗ್ರೆಸ್ ಶಾಸಕ ಸುಧಾಕರ್ ಪರವಾಗಿಲ್ಲ ಎನ್ನುವ ಮೂಲಕ ಆಶ್ವರ್ಯಕರ ಹೇಳಿಕೆ ನೀಡಿದ್ದಾರೆ. ಒಟ್ಟಾರೆ ಕೇಂದ್ರ ಬಜೆಟ್‌ಗೆ ಜಿಲ್ಲೆಯಲ್ಲಿ ಮಿಶ್ರ ಪತ್ರಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆ ಜನ ನಾಯಕರು, ಜನ ಸಾಮಾನ್ಯರು ಏನೆಲ್ಲಾ ಮಾತನಾಡಿದ್ದಾರೆಂಬುದರ ಸಂಕ್ಷಿಪ್ತ ವರದಿ ಇಲ್ಲಿದೆ.
ಚಿಕ್ಕಬಳ್ಳಾಪುರ: ಬರದ ನಾಡಿಗೆ ಕೇಂದ್ರ ಬಜೆಟ್‌ನಲ್ಲೂ ಬರ. ಜಿಲ್ಲೆಯ ಅನ್ನದಾತರ ನದಿ ಜೋಡಣೆ ನಿರೀಕ್ಷೆ ಹುಸಿ. ನೀರಾವರಿಗಾಗಿ ಮಂತ್ರಾಲಯ ಸ್ಥಾಪನೆಗೆ ಜಿಲ್ಲೆಯ ನೀರಾವರಿ ಹೋರಾಟ ಸಮಿತಿ ಖುಷಿ. ಕೇಂದ್ರ ಬಜೆಟ್ ಪರವಾಗಿಲ್ಲ ಎಂದ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಶಾಸಕ ಡಾ.ಕೆ.ಸುಧಾಕರ್.
5 ಲಕ್ಷ ರೂ. ವರೆಗಿನ ತೆರಿಗೆ ಮಿತಿ ಹೆಚ್ಚಳ, ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಒತ್ತು, ಕೃಷಿ ಸನ್ಮಾನ್ ಯೋಜನೆಗೆ ಬಿಜೆಪಿ ಸ್ವಾಗತ, ಉದ್ಯೋಗ ಖಾತ್ರಿ ಹಣ ಕತ್ತರಿಗೆ ಕಾರ್ಮಿಕ ಮುಖಂಡರ ಆಕ್ರೋಶ. ಕ್ಷೇತ್ರದ ನೂತನ ಬಿಜೆಪಿ ಸಂಸದರ ವಿರುದ್ಧ ಕೈ ಮುಖಂಡರ ವಾಗ್ಧಾಳಿ. ಎಲ್ಲವನ್ನು ನಾಳೆ ಮಾತನಾಡುವೆ ಎಂದ ಮಾಜಿ ಸಂಸದ ಮೊಯ್ಲಿ.
ಅಭಿಪ್ರಾಯ: ರಾಜ್ಯದಿಂದ ರಾಜ್ಯಸಭೆ ಸದಸ್ಯೆಯಾಗಿ ಕೇಂದ್ರದಲ್ಲಿ ಮಹತ್ವದ ವಿತ್ತ ಖಾತೆ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್, ಇದೇ ಮೊದಲ ಬಾರಿಗೆ ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಿದ ಎನ್‌ಡಿಎ ಸರ್ಕಾರದ ಚೊಚ್ಚಲ ಬಜೆಟ್ ಬಗ್ಗೆ ಜಿಲ್ಲಾದ್ಯಂತ ರಾಜಕೀಯ ಪಕ್ಷಗಳ ಮುಖಂಡರು, ಹಾಲಿ, ಮಾಜಿ ಶಾಸಕರು, ರೈತಪರ ಸಂಘಟನೆಗಳ ಮುಖಂಡರು, ಶಾಶ್ವತ ನೀರಾವರಿ ಹೋರಾಟಗಾರರು ವ್ಯಕ್ತಪಡಿಸಿದ ಅಭಿಪ್ರಾಯಗಳು ಇವು.
ಶ್ರೀಮಂತರ ಬಜೆಟ್ ಎಂದು ಕಿಡಿ: ಕೇಂದ್ರ ಬಜೆಟ್‌ನ್ನು ಬಿಜೆಪಿ ಸಂಪೂರ್ಣವಾಗಿ ಸ್ವಾಗತಿಸಿದರೆ, ಸಿಪಿಎಂ, ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ. ಮೋದಿ ಸರ್ಕಾರ ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿ ಇಟ್ಟುಕೊಂಡು ಬಜೆಟ್ ಮಂಡಿಸಿದ್ದಾರೆ ಎಂದು ಬಿಜೆಪಿ ನಾಯಕರು ತಮ್ಮ ವಾದ ಮಂಡಿಸಿದರೆ, ಸಿಪಿಎಂ ಸೇರಿದಂತೆ ಕಾಂಗ್ರೆಸ್ ನಾಯಕರು ಇದೊಂದು ಜನ ವಿರೋಧಿ ಬಜೆಟ್, ಶ್ರೀಮಂತರ ಬಜೆಟ್ ಎಂದು ಕಿಡಿಕಾರಿದ್ದಾರೆ.
ಪರವಾಗಿಲ್ಲ ಎಂದ ಸುಧಾಕರ್: ಮೋದಿ ಸರ್ಕಾರದಲ್ಲಿ ನದಿ ಜೋಡಣೆ ಹುಸಿಯಾಗಿದೆ. ಬರದ ಜಿಲ್ಲೆಗೆ ಏನು ಕೊಡುಗೆ ಇಲ್ಲ. ಇದೊಂದು ಬಯಲು ಸೀಮೆ ಪಾಲಿಗೆ ನಿರಾಶೆ ಮೂಡಿಸಿದೆ ಎಂದು ಸಾಮಾನ್ಯ ಜನ ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಆದರೆ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್, ಕೇಂದ್ರ ಮಂಡಿಸಿದ ಬಜೆಟ್ ಪರವಾಗಿಲ್ಲ ಎಂದಿದ್ದಾರೆ. ಕೇಂದ್ರ ಸರ್ಕಾರ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ವಿಶೇಷ ಒತ್ತು ಕೊಟ್ಟಿದೆ. ಆರ್ಥಿಕ ಅಭಿವೃದ್ಧಿಗೂ ಒತ್ತು ಕೊಟ್ಟಿದೆ. ನದಿಗಳ ಪುನಶ್ಚೇತನಕ್ಕೆ ಯೋಜನೆ ರೂಪಿಸಿದೆಯೆಂದು ಹೇಳಿದ್ದಾರೆ.
ಜಿಲ್ಲೆಗೆ ಬಜೆಟ್‌ನಲ್ಲಿ ಬರೀ ಬರೆ: ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಸಹಜವಾಗಿಯೇ ಜಿಲ್ಲೆಯ ಜನರಿಗೆ ತೀವ್ರ ನಿರಾಶೆ ಮೂಡಿಸಿದೆ. ಬರದಿಂದ ಸಂಕಷ್ಟದಲ್ಲಿರುವ ಜಿಲ್ಲೆಯ ರೈತರಿಗೆ ಸಾಲ ಮನ್ನಾ ಸೇರಿದಂತೆ ಶಾಶ್ವತ ನೀರಾವರಿ ಯೋಜನೆಗಳನ್ನು ಕಲ್ಪಿಸುವ ಬಗ್ಗೆ ಯಾವುದೇ ರೀತಿ ಕಾರ್ಯಕ್ರಮ ರೂಪಿಸಿಲ್ಲ.
ಕನಿಷ್ಠ ಕೈಗಾರಿಕೆಗಳ ಸ್ಥಾಪನೆಗೂ ಒತ್ತು ಕೊಟ್ಟಿಲ್ಲ. ಉದ್ಯೋಗ ಖಾತ್ರಿ ಯೋಜನೆಗೆ ಅನುದಾನ ಕಡಿತಗೊಳಿಸಿರುವುದರಿಂದ ಜಿಲ್ಲೆಯ ಕೃಷಿ ಕೂಲಿ ಕಾರ್ಮಿಕರಿಗೆ ಸಾಕಷ್ಟು ಬರೆ ಬೀಳಲಿದೆಯೆಂಬ ಮಾತು ಜಿಲ್ಲೆಯ ಕೃಷಿ ಕೂಲಿಕಾರ್ಮಿಕರು ಆತಂಕ ವ್ಯಕ್ತಪಡಿಸಿದ್ದಾರೆ. ದಶಕಗಳಿಂದ ನೀರಾವರಿ ಇಲ್ಲದೇ ಸಂಕಷ್ಟದಲ್ಲಿರುವ ಜಿಲ್ಲೆಗೆ ಕೇಂದ್ರ ಘೋಷಣೆ ಮಾಡಿರುವ ಮನೆ ಮನೆಗೆ ನೀರನ್ನು ಎಲ್ಲಿಂದ ತರುತ್ತಾರೆಂದು ನೀರಾವರಿ ಹೋರಾಟಗಾರರು ಪ್ರಶ್ನಿಸಿದ್ದಾರೆ.
ಆದರೆ ನೀರಾವರಿ ಸದ್ಬಳಕೆಗೆ ಮಂತ್ರಾಲಯ ಸ್ಥಾಪನೆ ಮಾಡಿರುವುದಕ್ಕೆ ಹೋರಾಟ ಸಮಿತಿ ಸಂತಸ ವ್ಯಕ್ತಪಡಿಸಿದೆ. ಇನ್ನೂ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕ್ಷೇತ್ರದ ಮಾಜಿ ಸಂಸದ ಎಂ.ವೀರಪ್ಪ ಮೊಯ್ಲಿ ಅವರನ್ನು ಉದಯವಾಣಿ ಸಂಪರ್ಕಿಸಿದರೆ ನಾಳೆ ಎಲ್ಲವನ್ನು ಹೇಳುತ್ತೇನೆ ಎಂದರು.
ರೈಲು ಸೌಲಭ್ಯ ಮರೀಚಿಕೆ: ಜಿಲ್ಲೆಯ ಬಹುದಿನಗಳ ಕನಸಾಗಿರುವ ಕೋಲಾರ, ಚಿಕ್ಕಬಳ್ಳಾಪುರ ನಡುವಿನ ಹೆಚ್ಚು ರೈಲು ಸಂಚಾರ, ಗೌರಿಬಿದನೂರು, ಪುಟ್ಟಪರ್ತಿ ನಡುವೆ ಹೊಸ ಸಂಪರ್ಕ ಯೋಜನೆಗಳ ಬಗ್ಗೆ ಯಾವುದೇ ಘೋಷಣೆ ಹೊರ ಬಿದ್ದಿಲ್ಲ.
ಹೀಗಾಗಿ ಬರದ ಜಿಲ್ಲೆಗೆ ಕೇಂದ್ರದ ಬಜೆಟ್ ಒಂದು ರೀತಿ ತೀವ್ರ ನಿರಾಶೆ ಮೂಡಿಸಿದರೂ ಕೃಷಿ ಸಮ್ಮಾನ್, ಗ್ರಾಮೀಣ ವಸತಿ ಸೌಕರ್ಯ, ರಸ್ತೆಗಳ ಅಭಿವೃದ್ಧಿ, ಮುದ್ರಾ ಯೋಜನೆ ಮತ್ತಿತರ ಹಲವು ಕಾರ್ಯಕ್ರಮಗಳಿಗೆ ಸಾಕಷ್ಟು ಆರ್ಥಿಕ ನೆರವು ಘೋಷಣೆ ಮಾಡಿರುವುದು ಜಿಲ್ಲೆಗೆ ಲಾಭವಾಗಲಿದೆ. ಜೊತೆಗೆ ನೀರಾವರಿಗಾಗಿ ಮಂತ್ರಾಲಯ ಸ್ಥಾಪನೆ ಮಾಡಿರುವುದರಿಂದ ಅತಿ ಹೆಚ್ಚು ಅಂತರ್ಜಲ ಬಳಕೆಯಿಂದ ಸಂಕಷ್ಟದಲ್ಲಿರುವ ಬಯಲು ಸೀಮೆ ಜಿಲ್ಲೆಗಳಿಗೆ ಮಂತ್ರಾಲಯದ ನೆರವು ಸಿಗುವ ಸಾಧ್ಯತೆ ಇದೆ.
ಸ್ವಾಮಿನಾಥನ್ ವರದಿ ನಿರ್ಲಕ್ಷ್ಯ: ಕೇಂದ್ರ ಬಜೆಟ್ ರೈತರಿಗೆ ತೀವ್ರ ನಿರಾಶೆ ತಂದಿದೆ. ಸ್ವಾಮಿನಾಥ್ ಆಯೋಗದ ವರದಿ ಹಾಗೂ ನದಿ ಜೋಡಣೆ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದವು. ಆದರೆ ಕೇಂದ್ರ ಸರ್ಕಾರ ನೀರಾವರಿ ಯೋಜನೆಗಳನ್ನು ಕಡೆಗಣಿಸಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ದೂರಿದ್ದಾರೆ.
ಬೆಲೆ ಕುಸಿತದಿಂದ ಕಂಗಾಲಾಗಿರುವ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವಂತೆ ರೇಷ್ಮೆ ಅಮದು ಸುಂಕ ಹೆಚ್ಚಿಸಿಲ್ಲ. ಬಿಜೆಪಿ 25 ಮಂದಿ ಸಂಸದರು ಇದ್ದರೂ ರಾಜ್ಯಕ್ಕೆ ವಿಶೇಷವಾದ ಕೊಡುಗೆ ಇಲ್ಲ. ಮೋದಿ ಬರೀ ಮಾತುಗಾರ ಎಂಬುದನ್ನು ಈ ಬಜೆಟ್ ಮತ್ತೂಮ್ಮೆ ಸಾಭೀತುಪಡಿಸಿದೆ. ಬರಗಾಲ ಪೀಡಿತ ಬಯಲು ಸೀಮೆ ಜಿಲ್ಲೆಗಳಿಗೆ ನದಿ ಜೋಡಣೆ ಮೂಲಕ ಆಂಧ್ರಕ್ಕೆ ಹರಿದಿರುವ ಕೃಷ್ಣ ನದಿ ನೀರನ್ನು ಈ ಭಾಗಕ್ಕೆ ತರಬಹದಿತ್ತು.
ದೂರದೃಷ್ಟಿ ಬಜೆಟ್: ಹಿಂದಿನ ಬಿಜೆಪಿ ಸರ್ಕಾರ ಮಂಡಿಸಿದ ಬಜೆಟ್‌ಗಳಿಗೆ ಹೋಲಿಸಿದರೆ ಇದು ಸ್ವಲ್ಪ ಮಟ್ಟಿಗೆ ದೂರದೃಷ್ಟಿಯಿಂದ ಕೂಡಿದೆ. ಹಿಂದಿನ ರೀತಿ ಮೂಗಿಗೆ ತುಪ್ಪ ಸವರುವ ರೀತಿಯಲ್ಲಿ ಬಜೆಟ್ ಇಲ್ಲ. ರೈತರ ಉತ್ಪನ್ನಗಳಿಗೆ ವ್ಯವಸ್ಥಿತ ಮಾರುಕಟ್ಟೆ ಸೇರಿದಂತೆ ಹತ್ತು ಸಾವಿರ ಕೃಷಿ ಸಂಘಗಳ ರಚನೆಗೆ ಮುಂದಾಗಿರುವುದು ಕೃಷಿ ವಲಯದಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ. ಸದ್ಯಕ್ಕೆ ಇದರಿಂದ ಅನುಕೂಲ ಆಗದಿದ್ದರೂ ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗಲಿದೆ. ಒಟ್ಟಾರೆ ರೈತರ ಪರವಾಗಿದೆ ಎಂದು ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಸಂಚಾಲಕ ಯಲುವಹಳ್ಳಿ ಸೊಣ್ಣೇಗೌಡ ಅಭಿಪ್ರಾಯಪಟ್ಟಿದ್ದಾರೆ.
ಮಳೆ ನೀರಿನ ಸದ್ಬಳಕೆ, ನದಿಗಳ ಪುನಶ್ಚೇತನ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಿರುವುದು ಒಳ್ಳೆಯದು. ವಿಶೇಷವಾಗಿ ಪರಿಸರ ಮಾಲಿನ್ಯ ತಡೆಗೆ ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಆದರೆ ಪೂರ್ಣ ಪ್ರಮಾಣದ ಬಜೆಟ್ ನಾನು ನೋಡಿಲ್ಲ. ಆದರೂ ಹಲವು ಉತ್ತಮ ಯೋಜನೆಗಳು ಘೋಷಣೆಯಾಗಿವೆ.
-ಡಾ.ಕೆ.ಸುಧಾಕರ್, ಅಧ್ಯಕ್ಷ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ
ಕೇಂದ್ರ ಬಜೆಟ್ ಜನಪರವಾಗಿಲ್ಲ. ಕಾರ್ಪೋರೆಟ್ ಕಂಪನಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಬಜೆಟ್ ಮಂಡನೆ ಆಗಿದೆ. ದೇಶದ ಕೃಷಿ, ಕೈಗಾರಿಕೆಗಳಿಗೆ ಪ್ರೋತ್ಸಾಹ ಇಲ್ಲ. ಉದ್ಯೋಗ ಸೃಷ್ಟಿಗೆ ನಿರ್ದಿಷ್ಟ ಕಾರ್ಯಕ್ರಮ ರೂಪಿಸಿಲ್ಲ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಣೆ ಮಾಡುವ ಸ್ವಾಮಿನಾಥನ್ ವರದಿಯನ್ನು ನಿರ್ಲಕ್ಷಿಸಲಾಗಿದೆ.
-ಜಿ.ವಿ.ಶ್ರೀರಾಮರೆಡ್ಡಿ, ಮಾಜಿ ಶಾಸಕರು, ಸಿಪಿಎಂ
ಕುಡಿಯುವ ನೀರು, ಜಲವರ್ಧನೆ ಹಾಗೂ ನೀರಾವರಿಗಾಗಿ ಹೊಸ ಮಂತ್ರಾಲಯವನ್ನು ಸ್ಥಾಪಿಸಿರುವುದು ಆಶಾದಾಯಕ, ಆದರೆ ದಕ್ಷಿಣ ಕರ್ನಾಟಕದ ಬರಪೀಡಿತ ಜಿಲ್ಲೆಗಳಿಗೆ ಪಶ್ಚಿಮ ವಾಹಿನಿಯ ನದಿಗಳಾದ, ಕೃಷ್ಣ, ಮೇಕೆದಾಟು, ಕಾವೇರಿ ಸೇರಿದಂತೆ ಮಳೆಗಾಲದ ಪ್ರವಾಹ ನೀರನ್ನು ಬರದ ಜಿಲ್ಲೆಗಳಿಗ ಹರಿಸಿ ಕೆರೆ ತುಂಬಿಸಿ ಅಂತರ್ಜಲ ಹೆಚ್ಚಿಸುವ ನಿರೀಕ್ಷೆ ಹುಸಿಯಾಗಿದೆ.
-ಆರ್.ಆಂಜನೇಯರೆಡ್ಡಿ, ಜಿಲ್ಲಾಧ್ಯಕ್ಷರು, ಶಾಶ್ವತ ನೀರಾವರಿ ಹೋರಾಟ ಸಮಿತಿ
ಕೇಂದ್ರ ಬಜೆಟ್ ಏಕಮುಖವಾಗಿದೆ. ಇಲಾಖೆಗಳ ಕಾರ್ಯಕ್ರಮಗಳ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಕಳೆದ ಬಾರಿಗಿಂತ ಈ ವರ್ಷ ಉದ್ಯೋಗ ಖಾತ್ರಿ ಯೋಜನೆಗೆ ಸಾವಿರ ಕೋಟಿ ಕಡಿಮೆ ಮಾಡಿದ್ದಾರೆ. ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಒತ್ತೆ ಇಡುವ ಕೆಲಸಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.
-ಎಂ.ಪಿ.ಮುನಿವೆಂಕಟಪ್ಪ, ಕೃಷಿ ಕೂಲಿಕಾರರ ಸಂಘ, ಬಾಗೇಪಲ್ಲಿ
ಕೇಂದ್ರದ ಬಜೆಟ್ ದೇಶದ ಆರ್ಥಿಕ ಪ್ರಗತಿಗೆ ಪೂರಕವಾಗಿದ್ದರೂ ಬರಪೀಡಿತ ಬಯಲು ಸೀಮೆಗೆ ಸಾಕಷ್ಟು ನಿರಾಶೆ ತಂದಿದೆ. ಈ ಭಾಗದ ನೀರಾವರಿ ಸೇರಿದಂತೆ ಕೃಷಿ, ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟಿಲ್ಲ. ದೇಶದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಪೂರಕವಾಗಿ ವಿಶ್ವ ವಿದ್ಯಾಲಯಗಳಿಗೆ ಹೆಚ್ಚಿನ ಅನುದಾನ ಕೊಟ್ಟಿಲ್ಲ. ಸಂಶೋಧನೆಗಳಿಗೆ ಪ್ರೋತ್ಸಾಹ ಮಾಡುವ ಕಾರ್ಯಕ್ರಮಗಳನ್ನು ಘೋಷಿಸಬೇಕಿತ್ತು.
-ಎನ್.ಮಂಜುನಾಥರೆಡ್ಡಿ, ಎಬಿವಿಪಿ ಜಿಲ್ಲಾ ಸಂಚಾಲಕರು
ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ದೇಶದ ಒಟ್ಟಾರೆ ಹಿತವನ್ನು ಕಾಯುವ ಬಜೆಟ್ ಮಂಡನೆ ಮಾಡಿದೆ. 5 ಲಕ್ಷ ರೂ. ವರೆಗೂ ತೆರಿಗೆ ವಿನಾಯಿತಿ ಘೋಷಣೆ ಮಾಡಿರುವುದು ಬಡವರಿಗೆ, ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ. ಮುದ್ರಾ ಯೋಜನೆ, ಕೌಶಲ್ಯ ಭಾರತ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಒತ್ತು ಕೊಟ್ಟಿದೆ.
-ಡಾ.ಜಿ.ವಿ.ಮಂಜುನಾಥ, ಬಿಜೆಪಿ ಜಿಲ್ಲಾಧ್ಯಕ್ಷರು
ಚುನಾವಣೆಗೂ ಮೊದಲು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರದಿಂದ ಕೈಗಾರಿಕೆ ತರುತ್ತೇವೆ. ನೀರಾವರಿ ಯೋಜನೆಗಳಿಗೆ ಹಣಕಾಸು ನೆರವು ಕೊಡುತ್ತೇವೆಂದು ಹೇಳಿ ಸಂಸದ ಬಿ.ಎನ್.ಬಚ್ಚೇಗೌಡರು ಕೇಂದ್ರ ಬಜೆಟ್‌ನಲ್ಲಿ ಜಿಲ್ಲೆಗೆ ಸಿಕ್ಕಿರುವುದರ ಬಗ್ಗೆ ಕ್ಷೇತ್ರದ ಮತದಾರರಿಗೆ ಹೇಳಬೇಕಿದೆ. ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯೋಜನೆ ಜಾರಿಗೊಳಿಸುವಲ್ಲಿ ಸಂಸದರು ವಿಫಲರಾಗಿದ್ದಾರೆ.
-ಎಸ್.ಪಿ.ಶ್ರೀನಿವಾಸ್, ಕೆಪಿಸಿಸಿ ಸದಸ್ಯ. ಚಿಕ್ಕಬಳ್ಳಾಪುರ
ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಬರೀ ಸುಳ್ಳಿನ ಸರಮಾಲೆಗಳಿಂದ ಕೂಡಿದೆ. ದೇಶದ ರೈತಾಪಿ ಜನರಿಗೆ ಅನುಕೂಲವಾಗುವ ಯಾವುದೇ ಕಾರ್ಯಕ್ರಮಗಳು ಇಲ್ಲ. ಸಾಮಾಜಿಕ ಭದ್ರತಾ ಯೋಜನೆಗಳಿಗೆ ಹಾಗೂ ಕಾರ್ಯಕ್ರಮಗಳಿಗೆ ಹಣ ಕಡಿತ ಮುಂದುವರಿದಿದೆ. ಶ್ರೀಮಂತರಿಗೆ ಅನುಕೂಲವಾಗುವ ಈ ಬಜೆಟ್ ಜನ ವಿರೋಧಿಯಿಂದ ಕೂಡಿದೆ.
-ಕೋನಪಲ್ಲಿ ಕೋದಂಡ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ
ಕೇಂದ್ರದ ಬಿಜೆಪಿ ಸರ್ಕಾರ ಮಂಡಿಸಿರುವ ಬಜೆಟ್, ಶಿಕ್ಷಣ ಕ್ಷೇತ್ರಕ್ಕೆ ತೀವ್ರ ನಿರಾಶೆ ಮೂಡಿಸಿದೆ. ಏಕರೂಪವಾದ ಸಾರ್ವತ್ರಿಕ ಶಿಕ್ಷಣ ಜಾರಿಗೊಳಿಸಲು ಬದ್ಧತೆ ತೋರಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಮುಕ್ತ ಅವಕಾಶ ನೀಡುವ ಮೂಲಕ ದೇಶದಲ್ಲಿ ಎಂದಿನಂತೆ ಮತ್ತೆ ಶಿಕ್ಷಣದ ವ್ಯಾಪಾರೀಕರಣಕ್ಕೆ ಮುಂದಾಗಿದೆ.
-ಕುಂದುಲಗುರ್ಕಿ ಕೆ.ಎನ್.ಮುನೀಂದ್ರ, ಎನ್‌ಎಸ್‌ಯುಐ, ರಾಜ್ಯ ಸಂಚಾಲಕರು
ಕೇಂದ್ರ ಬಜೆಟ್ ಬಂಡವಾಳಶಾಹಿ ಕಾರ್ಪೋರೆಟ್ ಕಂಪನಿಗಳ ಹಿತಾಸಕ್ತಿ ಕಾಯುವಂತಿದೆ. ದೇಶದ ಕೃಷಿ, ಕೈಗಾರಿಕೆ ಉದ್ಯೋಗ ಸೃಷ್ಟಿಸುವ ಕ್ಷೇತ್ರಗಳನ್ನು ಕಡೆಗಣಿಸಲಾಗಿದೆ. ಈಗಾಗಲೇ ದೇಶದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪೂರ್ವದಲ್ಲಿ ದೇಶದ ಜನತೆಗೆ ನೀಡಿದ ಭರವಸೆಗಳು ಬಜೆಟ್‌ನಲ್ಲಿ ಕಾಣಿಸುತ್ತಿಲ್ಲ.
-ಆರ್.ಮಟಮಪ್ಪ, ವಕೀಲರು
* ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.