ಶೀಘ್ರವೇ ಸಮ್ಮೇಳನ ನಿಗದಿ
ತಾಲೂಕು ಸಾಹಿತ್ಯ ಸಮ್ಮೇಳನ ದಿನಾಂಕ ಘೋಷಣೆ: ಎಂ.ಎಂ.ಬಾಷ
Team Udayavani, Aug 26, 2019, 2:30 PM IST
ಚಿಕ್ಕಬಳ್ಳಾಪುರ ನಗರದಲ್ಲಿ ತಾಲೂಕು ಕಸಾಪ ವತಿಯಿಂದ ಹಮ್ಮಿಕೊಂಡಿದ್ದ ನುಡಿ ಸಿರಿ ವನಸಿರಿ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಕಸಾಪ ವತಿಯಿಂದ ಉಚಿತವಾಗಿ ಸಸಿಗಳನ್ನು ವಿತರಿಸಲಾಯಿತು.
ಚಿಕ್ಕಬಳ್ಳಾಪುರ: ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸೆಪ್ಪೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಆಯೋಜಿಸಲಾಗುವುದು. 2-3 ದಿನದಲ್ಲಿ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಿ ವೀಳ್ಯ ಕೊಡಲಾಗುವುದು ಎಂದು ತಾಲೂಕು ಕಸಾಪ ಅಧ್ಯಕ್ಷ ನಂದಿ ಎಂ.ಎಂ.ಭಾಷ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದ ವತಿಯಿಂದ ನಗರದ 18ನೇ ವಾರ್ಡ್ ನಲ್ಲಿ ಹಮ್ಮಿಕೊಂಡಿದ್ದ ವನಸಿರಿ ನುಡಿಸಿರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಗಸ್ಟ್ ತಿಂಗಳಲ್ಲಿ ಆಗಬೇಕಿದ್ದ ಕಸಾಪ ಸಮ್ಮೇಳನವನ್ನು ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಶೀಘ್ರವೇ ಸಮ್ಮೇಳನ ದಿನಾಂಕ ನಿಗದಿಪಡಿಸಲಾಗುವುದು ಎಂದರು.
ಸಮ್ಮೇಳನಾಧ್ಯಕ್ಷರ ಆಯ್ಕೆ: ಸಮ್ಮೇಳನವನ್ನು ಗಡಿ ಭಾಗದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ರಚನಾತ್ಮಕವಾಗಿ ನಾಡು, ನುಡಿ, ನೆಲ ಜಲ, ಭಾಷೆ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರೂಪಿಸಲಾಗುವುದು. ಕಸಾಪಗೆ ದಶಕಗಳ ಇತಿಹಾಸ ಇದ್ದು, ತಾಲೂಕಿನಲ್ಲಿ ಶಿಕ್ಷಣ, ಸಾಹಿತ್ಯ ಮತ್ತಿತರ ಸಮಗ್ರವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ತೋರಿದ ವ್ಯಕ್ತಿಯನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.
ನೀರಾವರಿ ಯೋಜನೆ: ಕಸಾಪ ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯು ಬರಕ್ಕೆ ತುತ್ತಾಗಿದೆ. ನಾವು ಜಿಲ್ಲೆಯಲ್ಲಿ ಮರಗಿಡಗಳನ್ನು ಬೆಳೆಸಿ ಉತ್ತಮ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ. ಈ ಬರಡು ಭೂಮಿಯನ್ನು ಸಂಪದ್ಭರಿತವಾಗಿ ಮಾಡಲು ವಿಶೇಷ ನೀರಾವರಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಮುಂದಾಗಬೇಕಿದೆ ಎಂದರು.
ವನ ಸಿರಿ ನುಡಿಸಿರಿ: ಎತ್ತಿನಹೊಳೆ ಮತ್ತು ಎಚ್.ಎನ್. ವ್ಯಾಲಿ ಯೋಜನೆಗಳು ಶೀಘ್ರವೇ ಜನರಿಗೆ ತಲುಪಿಸಲು ಕಾಳಜಿ ವಹಿಸಬೇಕಾಗಿದೆ. ಆಗ ಮಾತ್ರ ಜಿಲ್ಲೆಯು ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ. ಈ ಎಲ್ಲಾ ಅಂಶಗಳನ್ನು ಗಮನಿಸಿಯೇ ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವನ ಸಿರಿ ನುಡಿಸಿರಿ ಕಾರ್ಯಕ್ರಮವನ್ನು ರಾಜ್ಯದಲ್ಲಿ ಎಲ್ಲೂ ಮಾಡದ ಕಾರ್ಯಕ್ರಮ ನಮ್ಮ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದೇವೆ.
ವಿಶೇಷವೆಂದರೆ ಪ್ರತಿ ತಿಂಗಳು ಕೊನೆಯ ವಾರ ಈ ಕಾರ್ಯಕ್ರಮ ಎಲ್ಲಾ ತಾಲೂಕುಗಳಲ್ಲಿ ಜಾರಿಯಲ್ಲಿರುತ್ತದೆ. ಆಯಾ ತಾಲೂಕಿನ ತಾಲೂಕು ಅಧ್ಯಕ್ಷರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಕಸಾಪ ನಗರ ಘಟಕದ ಅಧ್ಯಕ್ಷ ಚಂದ್ರಶೇಖರ, ನಿವೃತ್ತ ಶಿಕ್ಷಕ ಕೆ.ಎಲ್.ಶ್ರೀನಿವಾಸ್, ಯುವ ಮುಖಂಡ ಎಸ್.ಪಿ.ಶ್ರೀನಿವಾಸ್, ಶಿಕ್ಷಕ ಅಮರ್, ಕಸಾಪ ಪದಾಧಿಕಾರಿಗಳಾದ ನಾಗೇಂದ್ರ ಸಿಂಹ, ಗಂಗಾಧರ ಮೂರ್ತಿ, ಅಶ್ವತ್ಥ್ ರಾಜು, ಲೇಖಕಿ ಇಂಧುಮತಿ, ನಾಗಾರ್ಜುನ,ಅಶ್ವತ್ಥ್, ಸುಮಿತ್ರಾ, ಉಷಾ, ನಾಗವೇಣಿ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.