ಅನುದಾನ ವಾಪಸ್ ಹೋಗದಂತೆ ಬಳಸಿ
Team Udayavani, Nov 7, 2019, 3:00 AM IST
ಚಿಕ್ಕಬಳ್ಳಾಪುರ: ಜಿಲ್ಲೆಯ ಅಭಿವೃದ್ಧಿಗೆ ಬರುವ ಅನುದಾನವನ್ನು ಸಮರ್ಪಕವಾಗಿ ಎಲ್ಲಾ ಇಲಾಖೆಗಳು ಬಳಸಿಕೊಳ್ಳಬೇಕು. ಕಾಲಕಾಲಕ್ಕೆ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುವ ಮೂಲಕ ಸರ್ಕಾರದ ಅನುದಾನವನ್ನು ಜಿಲ್ಲೆಯ ಅಭಿವೃದ್ಧಿಗೆ ಸದ್ಬಳಕೆ ಮಾಡಬೇಕೆಂದು ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ಮೂರು ತಿಂಗಳಿಗೊಮ್ಮೆ ಕೊಡುವ ಅನುದಾನವನ್ನು ಹಾಗೆ ಇಟ್ಟುಕೊಂಡು ವರ್ಷದ ಕೊನೆಯಲ್ಲಿ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಖರ್ಚು ಮಾಡಲು ಹೊರಟರೆ ಅಧಿಕಾರಿಗಳ ನಡೆ ಬಗ್ಗೆ ಅನುಮಾನ ಮೂಡುತ್ತದೆ ಎಂದು ಎಚ್ಚರಿಸಿದರು.
ಸಭೆಗೆ ಗೈರಾದರೆ ಸಹಿಸುವುದಿಲ್ಲ: ಅಧಿಕಾರಿಗಳು ಮದುವೆ ಇದೆ, ಬೇರೆ ಸಭೆಗಳಿಗೆ ಇವೆ ಎಂದು ಕೆಡಿಪಿ ಸಭೆಗಳಿಗೆ ಗೈರಾಗುವ ಪ್ರವೃತ್ತಿ ಬೆಳೆಸಿಕೊಂಡರೆ ಸಹಿಸಲ್ಲ. ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಇಲಾಖೆಗಳ ಅಧಿಕಾರಿಗಳು ಮುಕ್ತವಾಗಿ ಚರ್ಚೆ ಮಾಡಬೇಕು ಎಂದು ತಾಕೀತು ಮಾಡಿದರು.
ಸಮಸ್ಯೆಗಳ ಬಗ್ಗೆ ಗಮನಕ್ಕೆ ತನ್ನಿ: ನೀವು ಬರೀ ಪ್ರಗತಿ ವರದಿ ಕೊಟ್ಟರೆ ಏನು ಪ್ರಯೋಜನೆ, ಇಲಾಖೆಯಲ್ಲಿನ ಸಮಸ್ಯೆಗಳು ಗಮನಕ್ಕೆ ತನ್ನಿ, ಯಾವ ಅಧಿಕಾರಿ ನೋಡಿದರೂ ಸಚಿವರ ಸಭೆಯಲ್ಲಿ ತಲೆ ತಗ್ಗಿಸಿಕೊಂಡು ಇರುತ್ತೀರಿ, ನಿಮ್ಮ ಸಮಸ್ಯೆಗಳ ಬಗ್ಗೆ ಹೇಳುವುದಿಲ್ಲ ಅಂದರೆ ಸಚಿವರಿಗೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಅರಿವು ಉಂಟಾಗುವುದೇ ಹೇಗೆ ಎಂದು ಪ್ರಶ್ನಿಸಿದರು.
ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಜಿಲ್ಲೆಯ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಜಿಲ್ಲೆಯಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನಕ್ಕೆ ತಂದರೆ ಸ್ಪಂದಿಸುತ್ತಾರೆ. ಅಧಿಕಾರಿಗಳು ಪಾರದರ್ಶಕವಾಗಿ ಮುಕ್ತವಾಗಿ ಚರ್ಚೆ ಮಾಡಬೇಕು ಎಂದರು.
ನಾವು ಯಾವುದೇ ಅಧಿಕಾರಿಗಳಿಗೆ ತೊಂದರೆ ಕೊಡಲ್ಲ. ಆದರೆ ನನ್ನ ಹಾಗೂ ಸಿಇಒ ವೇಗಕ್ಕೆ ನೀವು ಬರಬೇಕು. ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ಹೊಂದಬೇಡಿ. ನಮಗೆ ಸಹಕಾರ ಕೊಟ್ಟರೆ ನಾವು ನಿಮಗೆ ಸಹಕಾರ ಕೊಡುತ್ತೇವೆ ಎಂದು ತಮ್ಮ ಮೊದಲ ಕೆಡಿಪಿ ಸಭೆಯಲ್ಲಿ ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ಅಂಗನವಾಡಿ ಕಟ್ಟಡ ವಿಳಂಬಕ್ಕೆ ಕಿಡಿ: ಜಿಲ್ಲೆಯಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾರ್ಯದಲ್ಲಿ ವಿಳಂಬ ಆಗುತ್ತಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅಧ್ಯಕ್ಷರು, ಕಾಲಮಿತಿಯೊಳಗೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೇಕೆಂದರು. ಕೃಷಿ ಇಲಾಖೆ ಸೌಲಭ್ಯಗಳ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ಆದರೆ ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಅರಿವು ರೈತರಲ್ಲಿ ಇಲ್ಲ. ಈ ಬಗ್ಗೆ ವ್ಯಾಪಕವಾಗಿ ಅರಿವು ಮೂಡಿಸಬೇಕು ಎಂದರು.
ಗ್ರಾಪಂ ಮಟ್ಟದಲ್ಲಿ ಕೆರೆಗಳಲ್ಲಿ ಮೀನುಗಳ ಹರಾಜು ಪ್ರಕ್ರಿಯೆ ಪಾರದರ್ಶಕವಾಗಿ ನಡೆಸಬೇಕು, ವಸತಿ ಯೋಜನೆಗಳಡಿ ನಿವೇಶನ ಅರ್ಹರಿಗೆ ತಲುಪಿಸಬೇಕು. ಗ್ರಾಮ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಳ್ಳಬೇಕಾದರೆ ಗ್ರಾಪಂ ಚುನಾಯಿತ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದರು.
500 ಸಸಿ ನೆಡಿ: ತಾಪಂ ಇಒಗಳು, ನೋಡಲ್ ಅಧಿಕಾರಿಗಳು ಕಡ್ಡಾಯವಾಗಿ ಗ್ರಾಪಂಗಳಿಗೆ ತೆರಳಿ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಬೇಕು. ಪ್ರತಿ ಜಿಪಂ ಸದಸ್ಯರ ಕ್ಷೇತ್ರದಲ್ಲಿ ಅರಣ್ಯ ಇಲಾಖೆಯಿಂದ 500 ಸಸಿಗಳನ್ನು ರಸ್ತೆ ಬದಿ ನಡೆಬೇಕು. ಇದಕ್ಕೆ ಜಿಪಂ ಸದಸ್ಯರನ್ನು ಆಹ್ವಾನಿಸಬೇಕೆಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು. 14ನೇ ಹಣಕಾಸು ಯೋಜನೆಯಡಿ ಬಿಡುಗಡೆಗೊಂಡಿರುವ ಅನುದಾನವನ್ನು ಅನ್ಯ ಕಾರ್ಯಗಳಿಗೆ ಬಳಸದೇ ಉದ್ದೇಶಿತ ಕಾರ್ಯಗಳಿಗೆ ಮಾತ್ರ ಬಳಸಬೇಕೆಂದು ತಾಪಂ ಇಒಗಳಿಗೆ ಸೂಚಿಸಿದರು.
5 ಕೋಟಿ ರೂ.ಗೆ ಪ್ರಸ್ತಾವನೆ: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಆದ್ಯತೆ ಕೊಡಬೇಕಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ 85 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಎಲ್ಲಾ ಗ್ರಾಮಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಕಲ್ಪಿಸಲು ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು. ಕಳೆದ ಎರಡು ದಿನಗಳ ಹಿಂದೆ ಜಿಲ್ಲೆಯ ಕುಡಿಯುವ ನೀರಿನ ಅಭಿವೃದ್ಧಿ ಕಾರ್ಯಗಳ ಪರಿಹಾರಕ್ಕೆ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸಭೆಯಲ್ಲಿ ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ತಿಳಿಸಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಟ್ಯಾಂಕರ್ ನೀರು ಪೂರೈಕೆ ಕಡಿಮೆ ಮಾಡಿ ಶಾಶ್ವತ ಪರಿಹಾರ ಕಲ್ಪಿಸಬೇಕು. ಅಕ್ಕಪಕ್ಕದ ರೈತರ ಮನವೊಲಿಸಿ ಖಾಸಗಿ ಕೊಳವೆ ಬಾವಿಗಳಿಂದ ಗ್ರಾಮಕ್ಕೆ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನಸೌಧ, ವಿಕಾಸಸೌಧಕ್ಕೆ ತೆರಳುವೆ: ಅಧಿಕಾರಿಗಳು ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಏನೇ ಸಮಸ್ಯೆ ಇರಲಿ. ತಕ್ಷಣ ನನ್ನ ಗಮನಕ್ಕೆ ತನ್ನಿ. ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಗಳ ಬಗ್ಗೆ ನನ್ನ ಗಮನಕ್ಕೆ ತಂದರೆ ವಿಧಾನಸೌಧ, ವಿಕಾಸಸೌಧಕ್ಕೆ ತೆರಳಿ ಸಂಬಂಧಪಟ್ಟವರ ಗಮನಕ್ಕೆ ತಂದು ಜಿಲ್ಲೆಗೆ ಆಗಬೇಕಾದರೆ ಅಭಿವೃದ್ಧಿ ಕೆಲಸಗಳಿಗೆ ಅನುದಾನ ತರುವೆ ಎಂದು ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಭರವಸೆ ನೀಡಿದರು.
ಜಿಲ್ಲೆಯ ಶಿಡ್ಲಘಟ್ಟ, ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ ತಾಲೂಕುಗಳನ್ನು ಬರದ ಪಟ್ಟಿಯಿಂದ ಕೈಬಿಟ್ಟಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿ ಜಿಪಂ ಅಧ್ಯಕ್ಷರು, ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಮೂರು ತಾಲೂಕುಗಳನ್ನು ಬರದ ಪಟ್ಟಿಗೆ ಸೇರಿಸುವಂತೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.
ಸರ್ಕಾರಿ ವಾಹನಗಳ ದುರ್ಬಳಕೆಗೆ ಆಕ್ರೋಶ: ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ವಾಹನಗಳನ್ನು ಕೆಲವರು ತಮ್ಮ ಸ್ವಂತ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಾನೇ ಕಂಡಂತೆ ಬಹಳಷ್ಟು ಇಲಾಖೆ ವಾಹನಗಳಲ್ಲಿ ನೆಂಟರು, ಸಂಬಂಧಿಕರು, ಖಾಸಗಿ ವ್ಯಕ್ತಿಗಳು ತಿರುಗಾಡುವುದನ್ನು ಕಂಡಿದ್ದೇನೆ. ಮುಂದೆ ಈ ರೀತಿ ಕಂಡು ಬಂದರೆ ಅಲ್ಲಿಯೇ ವಾಹನಗಳನ್ನು ಸೀಸ್ ಮಾಡಲಾಗುವುದು ಎಂದು ಜಿಪಂ ಅಧ್ಯಕ್ಷರು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಸ್ವಂತ ವಾಹನಗಳನ್ನು ಬಳಿಸುತ್ತಿವೆ. ಗುತ್ತಿಗೆ ವಾಹನಗಳನ್ನು ಎಷ್ಟು ಇಲಾಖೆಗಳು ಪಡೆದುಕೊಂಡಿವೆ ಎಂಬುದರ ಬಗ್ಗೆ ಮುಂದಿನ ಸೋಮವಾದರೊಳಗೆ ಸಮಗ್ರ ವರದಿ ಕೊಡಬೇಕೆಂದು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.