Weighing Machine; ವಸತಿ ಇಲಾಖೆ ಕಚೇರಿಗಳಲ್ಲಿ ತೂಕದ ಯಂತ್ರ ಕಡ್ಡಾಯ!
ಉದ್ಯೋಗಿಗಳು ವಾರಕ್ಕೊಮ್ಮೆ ದೇಹ ತೂಕ ಪರೀಕ್ಷಿಸಿಕೊಳ್ಳಬೇಕು: ಸುತ್ತೋಲೆ
Team Udayavani, Sep 2, 2023, 7:00 AM IST
ಚಿಕ್ಕಬಳ್ಳಾಪುರ: ರಾಜ್ಯದ ವಸತಿ ಇಲಾಖೆ ಹಾಗೂ ಇಲಾಖೆಯ ಅಧೀನದ ನಿಗಮ, ಮಂಡಳಿ ಹಾಗೂ ಪ್ರಾಧಿಕಾರದ ಉದ್ಯೋಗಿಗಳು ಇನ್ನು ಮೇಲೆ ವಾರಕ್ಕೊಮ್ಮೆ ದೇಹದ ತೂಕ ಪರೀಕ್ಷಿಸಿಕೊಳ್ಳಬೇಕು, ಇದಕ್ಕಾಗಿ ಪ್ರತಿ
ಕಚೇರಿಯಲ್ಲಿ ಕಡ್ಡಾಯವಾಗಿ ಡಿಜಿಟಲ್ ತೂಕದ ಯಂತ್ರವನ್ನು ಇರಿಸ ಬೇಕು!
ಹೌದು, ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕವಲ್ಲದ ಹೃದಯ ಸಂಬಂಧಿ, ಪಾರ್ಶ್ವವಾಯು, ಬೊಜ್ಜು, ಮಧುಮೇಹದಂತಹ ರೋಗಗಳು ಜನರ ಸಾವಿಗೆ ಕಾರಣವಾಗುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಎಚ್ಚರಿಕೆ ಹಿನ್ನೆಲೆಯಲ್ಲಿ ವಸತಿ ಇಲಾಖೆ ತಮ್ಮ ಇಲಾಖೆಯ ಅಧಿಕಾರಿ, ಸಿಬಂದಿಯ ಆರೋಗ್ಯದ ದೃಷ್ಟಿಯಿಂದ ನಿಯಮಿತವಾಗಿ ದೇಹದ ತೂಕದ ಬಗ್ಗೆ ನಿಗಾ ವಹಿಸುವಂತೆ ಸುತ್ತೋಲೆ ಹೊರಡಿಸಿ ಎಚ್ಚರಿಸಿದೆ.
ಹೆಚ್ಚುತ್ತಿರುವ ಅಕಾಲಿಕ ಮರಣ
ವಿಶ್ವ ಆರೋಗ್ಯ ಸಂಸ್ಥೆ ಇತ್ತೀ ಚೆಗೆ ಬಿಡುಗಡೆಗೊಳಿಸಿರುವ ವರದಿಯಲ್ಲಿ ಶೇ.74ರಷ್ಟು ಸಾವಿಗೆ ಸಾಂಕ್ರಾಮಿಕವಲ್ಲದ ಕ್ಯಾನ್ಸರ್, ಹೃದಯ ರಕ್ತನಾಳ ಕಾಯಿಲೆಗಳು ಅದರಲ್ಲೂ ಹೃದಯಾಘಾತ, ಪಾರ್ಶ್ವವಾಯು, ದೀರ್ಘಕಾಲದ ಉಸಿರಾಟದ ಕಾಯಿಲೆಗಳಾದ ಅಸ್ತಮಾ, ಶ್ವಾಸಕೋಶದ ಕಾಯಿಲೆಗಳ ಜತೆಗೆ ಬೊಜ್ಜು, ಮಧುಮೇಹ ಕಾರಣವಾಗುತ್ತಿದೆಯೆಂದು ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ಅಕಾಲಿಕ ಮರಣವನ್ನು ಮೂರನೇ ಒಂದು ಭಾಗದಷ್ಟು ನಿಯಂತ್ರಿಸಲು ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿರುವುದನ್ನು ಉಲ್ಲೇಖೀಸಿ ರಾಜ್ಯದ ವಸತಿ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್ ಸಿಂಗ್, ವಸತಿ ಇಲಾಖೆ ವ್ಯಾಪ್ತಿಗೆ ಬರುವ ರಾಜೀವ್‌ಗಾಂಧಿ ವಸತಿ ನಿಗಮ, ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ, ಕರ್ನಾಟಕ ಗೃಹ ಮಂಡಳಿ, ಕರ್ನಾಟಕ ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಪ್ರಾಧಿಕಾರದ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿ ವಸತಿ ಇಲಾಖೆ ಹಾಗೂ ಇಲಾಖೆಯಡಿ ಬರುವ ನಿಗಮ, ಮಂಡಳಿ ಹಾಗೂ ಪ್ರಾಧಿಕಾರದಲ್ಲಿನ ಅಧಿಕಾರಿ, ಸಿಬಂದಿ ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗುವಂತೆ ಸೂಚಿಸಿದ್ದಾರೆ.
ವಾರಕೊಮ್ಮೆ ದೇಹದ ತೂಕ ಪರೀಕ್ಷಿಸಿಕೊಳ್ಳಬೇಕು
ದೇಹದ ತೂಕ ನಿಯಂತ್ರಿಸುವುದು ಅತ್ಯಂತ ಅವಶ್ಯಕ ಎಂದು ಹೇಳಿ ಎಲ್ಲ ಸಂಸ್ಥೆಗಳು ಪ್ರಮುಖವಾಗಿ ಕಾರ್ಯ ನಿರ್ವಹಿಸುವ ಕಚೇರಿಗಳಲ್ಲಿ ಎಲ್ಲರಿಗೂ ಅನುಕೂಲವಾಗುವಂತ ಸ್ಥಳದಲ್ಲಿ ಒಂದು ಡಿಜಿಟಲ್ ತೂಕದ ಯಂತ್ರವನ್ನು ಇರಿಸಲು ಸೂಚಿಸಲಾಗಿದೆ. ಪ್ರತಿಯೊಬ್ಬ ಉದ್ಯೋಗಿಯೂ ವಾರಕ್ಕೊಮ್ಮೆ ತಮ್ಮ ದೇಹದ ತೂಕವನ್ನು ಪರೀಕ್ಷಿಸಿಕೊಳ್ಳುವಂತೆ ಹಾಗೂ ಅವರ ಮೊಬೈಲ್‌ನಲ್ಲಿ ತೂಕದ ಲಾಗ್ ಅನ್ನು ಇರಿಸಿಕೊಳ್ಳುವಂತೆ ಸೂಚಿಸಲಾಗಿದೆ.
– ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.