ಬರಡು ನೆಲದಲ್ಲೂ ವಿಶ್ವ ಸಂತನ ಹೆಜ್ಜೆ ಗುರುತು
Team Udayavani, Dec 30, 2019, 3:00 AM IST
ಚಿಕ್ಕಬಳ್ಳಾಪುರ: ನಾಡಿನ ಮಠದ ಪರಂಪರೆಯೊಳಗೆ ಅಧ್ಯಾತ್ಮಕತೆಯ ಅಸ್ಮಿತೆಯನ್ನು ಎತ್ತಿ ಹಿಡಿಯುವಲ್ಲಿ ಇಳಿ ವಯಸ್ಸಿನಲ್ಲೂ ಸದಾ ಮುಂಚೂಣಿಯಲ್ಲಿರುತ್ತಿದ್ದ ಉಡುಪಿಯ ಅಷ್ಠಮಠಗಳ ಯತಿಗಳಾಗಿ ಸೇವೆ ಸಲ್ಲಿಸಿರುವ ಹಿಂದೂ ಧರ್ಮದ ಪ್ರಖರ ಪ್ರತಿಪಾದಕರಾಗಿದ್ದರೂ ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತಿದ ಉಡುಪಿ ಶ್ರೀ ಕೃಷ್ಣಮಠದ ಶ್ರೀ ಪೇಜಾವರ ವಿಶ್ವೇಶತೀರ್ಥರ ಹೆಜ್ಜೆ ಗುರುತುಗಳು ಬರಡು ನೆಲವಾದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಇವೆ.
ನಿಕಟ ಸಂಪರ್ಕ: 70, 80 ರ ದಶಕದಲ್ಲಿಯೇ ಜಿಲ್ಲೆಯನ್ನು ಒಳಗೊಂಡಂತೆ ತನ್ನ ಸ್ವ ಕ್ಷೇತ್ರವಾಗಿ ಇರಿಸಿಕೊಂಡಿದ್ದ ಪುಟ್ಟಪರ್ತಿಯ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಹಮ್ಮಿಕೊಳ್ಳುತ್ತಿದ್ದ ಅನೇಕ ಸಮಾಜ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದ ವಿಶ್ವದ ಸಂತರಾದ ಪೇಜಾವರಶ್ರೀಗಳು, ಉಡುಪಿ ಕೃಷ್ಣಮಠದೊಂದಿಗೆ ಶ್ರದ್ದಾಭಕ್ತಿಯನ್ನು ಹೊಂದಿದ್ದ ಜಿಲ್ಲೆಯ ಭಕ್ತರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.
ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿ, ಆಗಿನ ಉಪ ವಿಭಾಗವಾಗಿದ್ದ ಚಿಕ್ಕಬಳ್ಳಾಪುರ, ಗೌರಿಬಿದನೂರು ತಾಲೂಕುಗಳಿಗೆ ಪೇಜಾವರ ಶ್ರೀಗಳು ಅನೇಕ ಬಾರಿ ವಿವಿಧ ಧಾರ್ಮಿಕ ಹಾಗೂ ಅಧ್ಯಾಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಭಕ್ತರ ಕೋರಿಕೆ ಮೇರೆಗೆ ಬಂದು ಹೋಗಿರುವ ಅನೇಕ ನಿದರ್ಶನಗಳಿವೆ.
ವಿಶೇಷವಾಗಿ ಮಠದ ಪರಂಪರೆಯಲ್ಲಿ ಹಿಂದೂ ಧರ್ಮದ ಪ್ರತಿಪಾದಕರಾಗಿದ್ದರೂ ಧರ್ಮದೊಳಗಿನ ಅಸ್ಪೃಶ್ಯತೆಯ ವಿರುದ್ಧ ಕಹಳೆ ಮೊಳಗಿಸಿದ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಜಿಲ್ಲೆಯಲ್ಲಿ ಓಡಾಟ ನಡೆಸಿ ಅನೇಕ ದಲಿತ ಕಾಲೋನಿಗಳಿಗೆ ಭೇಟಿ ನೀಡಿ ಸಾಮಾಜಿಕ ಜಾಗೃತಿ ಮೂಡಿಸಿರುವುದನ್ನು ಜಿಲ್ಲೆಯ ಹಿರಿಯರು ಸ್ಮರಿಸುತ್ತಾರೆ. ಜೊತೆಗೆ ಭಕ್ತರ ಕೋರಿಕೆ ಮೇರೆಗೆ ಆಗಮಿಸುತ್ತಿದ್ದ ಪೇಜಾವರ ಶ್ರೀಗಳನ್ನು ಪಾದಪೂಜೆ ಮಾಡಿ ಅಶೀರ್ವಾದ ಪಡೆದು ಕಳುಹಿಸಿಕೊಡುತ್ತಿದ್ದರು.
ರಾಘವೇಂದ್ರ ಮಠಕ್ಕೆ ಶಂಕುಸ್ಥಾಪನೆ: ಚಿಕ್ಕಬಳ್ಳಾಪುರ ನಗರಕ್ಕೆ 40 ವರ್ಷಗಳ ಹಿಂದೆ ಆಗಮಿಸಿ ಇಲ್ಲಿ ಶ್ರೀ ರಾಘವೇಂದ್ರ ಮಠ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರೆ, ಪಾದಪೂಜೆಗೆ ಬರುವ ಸಂದರ್ಭದಲ್ಲಿ ಭಕ್ತರ ಮನೆಗಳಲ್ಲಿ ರಾತ್ರಿ ವೇಳೆ ವಾಸ್ತವ್ಯ ಹೂಡಿ ಬೆಳಗ್ಗೆ ಎದ್ದು ಕೃಷ್ಣಪೂಜೆ ನೆರವೇರಿಸಿ ಮುಂದಿನ ಪ್ರಯಾಣ ಬೆಳೆಸುತ್ತಿದ್ದರು ಎಂದು ಪೇಜಾವರ ಶ್ರೀಗಳ ಜಿಲ್ಲೆಯ ಹೆಜ್ಜೆ ಗುರುತುಗಳ ಬಗ್ಗೆ ಬಲ್ಲವರು ವಿವರಿಸುತ್ತಾರೆ.
ಪರ್ಯಾಯ ವೇಳೆ ಪರ್ಯಟನೆ: ಶ್ರೀಕೃಷ್ಣ ಮಠದ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಉಡುಪಿಯಲ್ಲಿ ಪರ್ಯಾಯ ನಡೆಯುವ ಸಂದರ್ಭದಲ್ಲಿ ರಾಜ್ಯದ ಉದ್ದಗಲಕ್ಕೂ ಪರ್ಯಾಟನೆ ನಡೆಸುವ ವೇಳೆ ಜಿಲ್ಲೆಯಲ್ಲಿ ಸಂಚರಿಸಿದ್ದಾರೆ. ಮಠದಿಂದ ನಡೆಸುವ ಹಾಸ್ಟೆಲ್, ಗೋಶಾಲೆ, ಸಂಸ್ಕೃತಿ ಶಾಲೆ ಸೇರಿದಂತೆ ಧಾರ್ಮಿಕವಾಗಿ ನಡೆಸಲು ಮಠಗಳಿಗೆ ಆರ್ಥಿಕ ನೆರವು ಸೇರಿದಂತೆ ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಶ್ರೀಗಳು ಭಕ್ತರ ಮನೆಗೆ ಬರುತ್ತಿದ್ದರು. ಚಿಂತಾಮಣಿ, ಚಿಕ್ಕಬಳ್ಳಾಪುರಕ್ಕೆ ನಾಲ್ಕೈದು ಬಾರಿ ಬಂದಿದ್ದಾರೆ.
ಸಾರ್ವಜನಿಕ ವಲಯದಲ್ಲಿ ಸಂತಾಪ: ನಾಡಿನ ಆಧ್ಯಾತ್ಮಿಕತೆಯ ಸಾಕ್ಷಿ ಪ್ರಜ್ಞೆಯಾಗಿದ್ದ ವಿಶ್ವೇಶತೀರ್ಥ ಸ್ವಾಮೀಜಿಗಳು ಭಾನುವಾರ ಬೆಳಗ್ಗೆ ಕೃಷ್ಣ ಮಠದಲ್ಲಿ ಕೃಷ್ಣೆ„ಕ್ಯರಾದ ವಿಷಯ ತಿಳಿಯುತ್ತಿದ್ದಂತೆ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ತೀವ್ರ ಸಂತಾಪ ವ್ಯಕ್ತವಾಯಿತು. ಶ್ರೀಗಳ ಭಾವಚಿತ್ರಗಳನ್ನು ನಗರದ ಪ್ರಮುಖ ವೃತ್ತಗಳಲ್ಲಿ ಇಟ್ಟು ಸಾರ್ವಜನಿಕರು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿ ಗೌರವ ಸಲ್ಲಿಸಿದರು. ಜಿಲ್ಲೆಯ ಸಾಮಾಜಿಕ ಜಾಲತಾಣಗಳಲ್ಲಿ ಸಹ ಪೇಜಾವರ ಶ್ರೀಗಳ ನಿಧನಕ್ಕೆ ಕಂಬನಿ ವ್ಯಕ್ತವಾಯಿತು.
ಮಳೆಯಲ್ಲಿಯೇ ಅರ್ಚಕರ ಭವನಕ್ಕೆ ಶಂಕು: ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ 2011 ನ. 4 ರಂದು ರಾಘವೇಂದ್ರ ಮಠದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಅರ್ಚಕರ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಲು ಉಡುಪಿಯ ಪೇಜಾವರ ಶ್ರೀಗಳನ್ನು ಆಹ್ವಾನಿಸಲಾಗಿತ್ತು. ಆದರೆ ಶ್ರೀಗಳು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಳೆ ಶುಭಾರಂಭವಾಯಿತು. ಮಳೆಯನ್ನು ಲೆಕ್ಕಿಸದ ಶ್ರೀಗಳು ರಾಯರ ಮಠದ ಆವರಣದಲ್ಲಿ ಅರ್ಚಕರ ಭವನಕ್ಕೆ ಶ್ರೀಗಳು ಅಡಿಗಲ್ಲು ಹಾಕಿ ಶುಭ ಕೋರಿದ್ದರು. ಅಲ್ಲಿನ ಮಠದಲ್ಲಿಯೇ ಕೃಷ್ಣಪೂಜೆ ನೆರವೇರಿಸಿದ್ದರು. ನಾಲ್ಕೈದು ಬಾರಿ ಪೇಜಾವರ ಶ್ರೀಗಳು ಚಿಂತಾಮಣಿಗೆ ಬಂದು ಹೋಗಿದ್ದಾರೆ.
ಧಾರ್ಮಿಕ ಶಿಬಿರಕ್ಕೆ ಶಿಷ್ಯರನ್ನು ಕಳುಹಿಸುತ್ತಿದ್ದ ಶ್ರೀಗಳು: ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿಯ ಶ್ರೀ ರಾಘವೇಂದ್ರ ಮಠದಲ್ಲಿ ಪ್ರತಿ ವರ್ಷ ಬೇಸಿಗೆ ರಜೆಗಳಲ್ಲಿ ಶಾಲಾ ಮಕ್ಕಳಿಗೆ ನಾಡಿನ ಸಂಸ್ಕೃತಿ, ಸಂಸ್ಕಾರ, ಪರಂಪರೆ, ವೇದ, ಭಗವದ್ಗೀತೆ ಪಠಣ ಮತ್ತಿತರ ಆಧ್ಯಾತ್ಮಿಕತೆಯ ಹಿನ್ನೆಲೆಯಲ್ಲಿ ನಡೆಸಲಾಗುತ್ತಿದ್ದ ಮಕ್ಕಳ ಧಾರ್ಮಿಕ ವಸಂತ ಶಿಬಿರಕ್ಕೆ ಮಕ್ಕಳಿಗೆ ಪಾಠ, ಪ್ರವಚನಗಳನ್ನು ಹೇಳಿ ಕೊಡಲು ಪೇಜಾವರ ಶ್ರೀಗಳು ತಮ್ಮ ಶಿಷ್ಯರನ್ನು ಪ್ರತಿ ವರ್ಷ ಚಿಂತಾಮಣಿಗೆ ಕಳುಹಿಸುತ್ತಿದ್ದರು. ಸತತ 10 ವರ್ಷಗಳಿಂದ ಶಿಬಿರ ನಡೆಯುತ್ತಿದ್ದು, ಮುಂದಿನ ವರ್ಷ 11ನೇ ವರ್ಷದ ಶಿಬಿರ ನಡೆಯಲಿದೆ ಎಂದು ಪೇಜಾವರ ಶ್ರೀಗಳ ಭಕ್ತರಾಗಿರುವ ಚಿಂತಾಮಣಿ ಹೋಟೆಲ್ ಸುಖಸಾಗರ್ ಮಾಲೀಕರಾದ ಮುರಳೀಧರ್ ತಿಳಿಸಿದರು. ಶಿಬಿರಕ್ಕೆ ಬರುವ ಮಕ್ಕಳಿಗೆ ಮಠದಿಂದ ಊಟದ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು.
ಪುಟ್ಟಪರ್ತಿ ಸಾಯಿಬಾಬಾ ಜೊತೆ ಬಾಂಧವ್ಯ: ಉಡುಪಿಯ ಶ್ರೀಕೃಷ್ಣ ಮಠದ ಶ್ರೀ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಗಳಿಗೆ ನೆರೆಯ ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ನೆಲೆಸಿದ್ದ ಭಗವಾನ್ ಶ್ರೀ ಸತ್ಯಸಾಯಿ ಬಾಬಾರರವರ ಬಗ್ಗೆ ವಿಶೇಷ ಪ್ರೀತಿ, ಬಾಂಧವ್ಯ ಹೊಂದಿದ್ದರು. 2008 ರಲ್ಲಿ ಪುಟ್ಟಪರ್ತಿಯಲ್ಲಿ ಆಯೋಜಿಸಲಾಗಿದ್ದ ಸಹಸ್ರ ಚಂದ್ರ ದರ್ಶನ ಕಾರ್ಯಕ್ರಮದಲ್ಲಿ ಬಾಬಾರೊಂದಿಗೆ ಪೇಜಾವರ ಶ್ರೀಗಳು, ಸಿದ್ಧಗಂಗಾದ ಶಿವಕುಮಾರ್ ಸ್ವಾಮೀಜಿಗಳು,
ಹಾಗೂ ಆದಿಚುಂಚನಗಿರಿ ಮಠದ ಪೀಠಾಧಿಪತಿಗಳಾಗಿದ್ದ ಬಾಲಗಂಗಾಧರನಾಥಸ್ವಾಮಿ, ಕಂಚಿ ಕಾಮಕೋಟಿ ಪೀಠಾಧಿಪತಿಗಳಾಗಿದ್ದ ಜಯೇಂದ್ರ ಸರಸ್ವತಿ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರೊಂದಿಗೆ ಭಾಗವಹಿಸಿ ವೇದಿಕೆ ಹಂಚಿಕೊಂಡಿದ್ದರು. ಅದಕ್ಕೂ ಮೊದಲು 1970 ರಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರೊಂದಿಗೆ ವೇದಿಕೆ ಹಂಚಿಕೊಂಡಿರುವ ಪೇಜಾವರ ಶ್ರೀಗಳು ವಿಶೇಷ ಉಪನ್ಯಾಸ ನೀಡಿದ್ದಾರೆ.
ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮಿಗಳು ಹರಿಪಾದ ಸೇರಿರುವ ವಿಷಯ ತಿಳಿದು ಅತೀವ್ರ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಮತ್ತೂಮ್ಮೆ ಹುಟ್ಟಿ ಬಂದು ಶ್ರೀಕೃಷ್ಣನ ಸೇವೆ ಮಾಡಲಿ.
-ಬಿ.ಎನ್.ಬಚ್ಚೇಗೌಡ, ಸಂಸದ
ಸನ್ಯಾಸತ್ವ ದೀಕ್ಷೆ ಸ್ವೀಕರಿಸಿ ಅದರಂತೆ ನಡೆದ ಮಹಾನ್ ಸಂತರಲ್ಲಿ ಪೇಜಾವರ ಶ್ರೀಗಳು ಮೊದಲಿಗರು. ಬೆಳಗ್ಗೆ 4 ಗಂಟೆಗೆ ನಿದ್ದೆಯಿಂದ ಎದ್ದರೆ ರಾತ್ರಿ 11, 12 ಗಂಟೆಗೆ ಮಲಗುತ್ತಿದ್ದರು. ಅವರಲ್ಲಿ ದಣಿವು ಎನ್ನುವುದನ್ನು ನೋಡಲು ಅಸಾಧ್ಯ. ಅಷ್ಟರ ಮಟ್ಟಿಗೆ ಲವಲವಿಕೆಯಿಂದ ಕೆಲಸ ಮಾಡುತ್ತಾರೆ. ಅವರಲ್ಲಿದ್ದ ವಿಚಾರಧಾರೆ, ಸಂವಾದದ ಗುಣ ಅವಿಸ್ಮರಣೀಯವಾದದ್ದು.
-ಮುರಳೀಧರ್, ಚಿಂತಾಮಣಿ, ಮೈಸೂರಿನ ಮದ್ವ ಹಾಸ್ಟೆಲ್ ವಿದ್ಯಾರ್ಥಿ (1985)
* ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.