2 ವರ್ಷದಲ್ಲಿ ಅವಳಿ ಜಿಲ್ಲೆ ಕೆರೆಗಳಿಗೆ ಎತ್ತಿನಹೊಳೆ ನೀರು
Team Udayavani, Jun 12, 2022, 1:31 PM IST
ಚಿಕ್ಕಬಳ್ಳಾಪುರ: ಮುಂದಿನ ಚುನಾವಣೆ ವೇಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿಯವರೆಗೂ ಎತ್ತಿನಹೊಳೆ ನೀರು ಹರಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಭರವಸೆ ನೀಡಿದರು.
ಸಚಿವರ ಸರ್ಕಾರಿ ನಿವಾಸದ ಯೋಜನೆ ಫಲಾನುಭವಿಗಳಿಗೆ ಶನಿವಾರ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದ ಅವರು, ಮುಂದಿನ ಎರಡು ವರ್ಷದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ಎತ್ತಿನಹೊಳೆ ನೀರು ತುಂಬಿಸಲಾಗುವುದು. ನೀರಾವರಿ ಸಚಿವರಾಗಿ ಎತ್ತಿನಹೊಳೆ ಯೋಜನೆ ರೂಪಿಸಿದವರೇ ಇಂದು ಮುಖ್ಯಮಂತ್ರಿಯಾಗಿದ್ದಾರೆ. ಯೋಜನೆಗೆ ಚಾಲನೆ ನೀಡಿದವರೇ ಅದನ್ನು ಪೂರ್ಣಗೊಳಿಸಲಿದ್ದಾರೆ ಎಂದರು.
ಮುಂದಿನ ಚುನಾವಣೆಗೂ ಮುನ್ನವೇ ಎತ್ತಿನಹೊಳೆ ನೀರು ಚಿಕ್ಕಬಳ್ಳಾಪುರ ಗಡಿ ತಲುಪಲಿದೆ. ನಂತರದ ಒಂದು ವರ್ಷದಲ್ಲಿ ಉಭಯ ಜಿಲ್ಲೆಗಳ ಎಲ್ಲ ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಾಗುತ್ತದೆ. ಇದರಿಂದ ರೈತರ ನೀರಿನ ಸಮಸ್ಯೆ ದೂರವಾಗಿ ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
2 ವರ್ಷದಲ್ಲಿ ಎಚ್‌ಎನ್ ವ್ಯಾಲಿ ಪೂರ್ಣ: ನೀರಾವರಿ ಯೋಜನೆಗಳ ಇತಿಹಾಸ ಗಮನಿಸಿದಾಗ ಒಂದೊಂದು ಯೋಜನೆ ಅನುಷ್ಠಾನವಾಗಲು ದಶಕಗಳ ಕಾಲ ಹಿಡಿಯುತ್ತಿತ್ತು. ನಾನು ಮೊದಲ ಬಾರಿ ಶಾಸಕನಾಗಿ ಆಯ್ಕೆಯಾದಾಗಲೇ ಜಿಲ್ಲೆಯ ರೈತರ ನೀರಿನ ಬವಣೆ ತಪ್ಪಿಸುವ ಸಂಕಲ್ಪ ಮಾಡಿ ಕೇವಲ ಎರಡೇ ವರ್ಷದಲ್ಲಿ ಎಚ್‌ಎನ್ ವ್ಯಾಲಿ ಯೋಜನೆ ಅನುಷ್ಠಾನಗೊಳಿಸಿ, ಜಿಲ್ಲೆಯ ಜನತೆ ಕಷ್ಟವನ್ನು ಪರಿಹರಿಸಲಾಗಿದೆ. ಇದರ ಜೊತೆಗೆ ಎತ್ತಿನಹೊಳೆ ಯೋಜನೆಯೂ ಶೀಘ್ರವೇ ಅನುಷ್ಠಾನವಾಗಲಿದೆ ಎಂದರು.
ಅಭಿವೃದ್ಧಿಯೇ ಗುರಿ: ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣ, ಮೂಲಸೌಕರ್ಯ ಅನುಷ್ಠಾನ, ರಸ್ತೆ ಅಭಿವೃದ್ಧಿ ಸೇರಿದಂತೆ ಎಲ್ಲ ರೀತಿಯ ಅಭಿವೃದ್ಧಿಗಳನ್ನು ಗುರಿ ಯಾಗಿಸಿಕೊಂಡು ಕೆಲಸ ಮಾಡುತ್ತಿದ್ದು, ಇತ್ತೀಚಿಗೆ ಬೃಹತ್ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು ಎಂದರು.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಶೇ. 3 ರಷ್ಟಿದ್ದ ಮತಗಳನ್ನು ಶೇ.51 ಕ್ಕೆ ಏರಿಸಿದ ಕೀರ್ತಿ ಕ್ಷೇತ್ರದ ಜನತೆಗೆ ಸಲ್ಲುತ್ತದೆ. ಜನರ ಈ ವಿಶ್ವಾಸ ಪ್ರತಿ ಕ್ಷಣ ನನ್ನನ್ನು ಎಚ್ಚರಿಸುತ್ತದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸದಾ ಸಿದ್ಧನಾಗಿರುವೆ ಎಂದರು.
ಕಾರ್ಯಕ್ರಮದಲ್ಲಿ 104 ಮಂದಿ ಫಲಾನುಭವಿಗಳಿಗೆ 5 ಕೋಟಿಗೂ ಹೆಚ್ಚು ಮೊತ್ತದ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು, ತಾಪಂ ಮಾಜಿ ಅಧ್ಯಕ್ಷ ರಾಮಸ್ವಾಮಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ಬಿಜೆಪಿ ಚಿಕ್ಕಬಳ್ಳಾಪುರ ಗ್ರಾಮಾಂತರ ಮಂಡಲ ಅಧ್ಯಕ್ಷ ಕೃಷ್ಣರೆಡ್ಡಿ, ಗಂಗಾಧರ್ ,ಬೋವಿ ಸಂಘದ ಅಧ್ಯಕ್ಷ ಮೂರ್ತಿ,ತಾಪಂ ಮಾಜಿ ಅಧ್ಯಕ್ಷ ಮೋಹನ್, ಮಾಜಿ ಸದಸ್ಯ ಶಿವಕುಮಾರ್ ಇತರರಿದ್ದರು.
ಕೋಲಾರ- ಚಿಕ್ಕಬಳ್ಳಾಪುರದಲ್ಲಿ ಬ್ಯಾರೇಜ್ : ಎತ್ತಿನಹೊಳೆ ಯೋಜನೆ ಈ ಹಿಂದಿನ ವಿನ್ಯಾಸದ ಅನ್ವಯ ಕೊರಟಗೆರೆ ಮತ್ತು ದೊಡ್ಡಬಳ್ಳಾಪುರದ ನಡುವೆ ಒಂದು ಬ್ಯಾರೇಜ್ ನಿರ್ಮಿಸಲು ಯೋಚಿಸಲಾಗಿತ್ತು. ಆದರೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ತಲಾ ಒಂದೊಂದು ಬ್ಯಾರೇಜ್ ನಿರ್ಮಿಸಿದಲ್ಲಿ ಉಭಯ ಜಿಲ್ಲೆಗಳ ಅಂತರ್ಜಲ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ಅಂಶವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದು ಮನವೊಲಿಸಲಾಗಿದೆ. ಇದಕ್ಕೆ ಅವರೂ ಒಪ್ಪಿ, ಈಗಾಗಲೇ ಡಿಪಿಆರ್ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಬ್ಯಾರೇಜ್ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದರು.
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಪಾತಾಳ ಸೇರಿದ್ದರಿಂದ ಸಾವಿರಾರು ಅಡಿ ಕೊಳವೆ ಬಾವಿಗಳನ್ನು ಕೊರೆಯಲು ವೆಚ್ಚ ಭರಿಸಲಾಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಈಗ ಎಚ್ ಎನ್ ವ್ಯಾಲಿ ನೀರು ಜಿಲ್ಲೆಯ ಕೆರೆಗಳನ್ನು ತುಂಬಿದ ಕಾರಣ ಈಗ ಅಂತರ್ಜಲ ವೃದ್ಧಿಯಾಗಿದ್ದು, ಕೊಳವೆ ಬಾವಿಗಳಲ್ಲಿ ಯಥೇತ್ಛ ನೀರು ಲಭ್ಯವಾಗುತ್ತಿದೆ ಎಂದರು. ಜಿಲ್ಲೆಯಲ್ಲಿ ನದಿ ನೀರಿನ ಸೌಲಭ್ಯಗಳಿಲ್ಲ, ಹಾಗಾಗಿ ಅಂತರ್ಜಲವನ್ನೇ ನಂಬಿ ರೈತರು ಕೃಷಿ ಮಾಡಬೇಕಿದೆ. ಆರಂಭಿಕ ಹಂತವಾಗಿ ಶುದ್ಧೀಕರಿಸಿದ ನೀರನ್ನು ಕೆರೆಗಳಿಗೆ ತುಂಬಿಸಲಾಗಿದೆ. ಮುಂದಿನ 2 ವರ್ಷದಲ್ಲಿ ಜಿಲ್ಲೆಯ ಎಲ್ಲ ಕೆರೆಗಳಿಗೆ ಎತ್ತಿನಹೊಳೆ ಯೋಜನೆ ಶುದ್ಧ ನದಿ ನೀರು ತುಂಬಿಸುವ ಕೆಲಸ ನಡೆಯಲಿದೆ.
– ಡಾ. ಕೆ. ಸುಧಾಕರ್, ಆರೋಗ್ಯ ಸಚಿವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.