ಚಿಕ್ಕಜಾಜೂರಲ್ಲಿ ಬಳಕೆಗೆ ಸಿಗ್ತಿಲ್ಲ ಸ್ಮಶಾನ ಜಾಗ!
ರುದ್ರಭೂಮಿಗಾಗಿ 10 ಹೆಕ್ಟೇರ್ ಜಾಗ ಮೀಸಲಿಟ್ಟಿದ್ದರೂ ಎಲ್ಲೆಂದರಲ್ಲಿ ಶವಸಂಸ್ಕಾರ ಮಾಡುವ ದುಸ್ಥಿತಿ ನಿರ್ಮಾಣ
Team Udayavani, Dec 19, 2019, 1:13 PM IST
ಮಂಜುನಾಥ್ ಹಗೇದ್
ಚಿಕ್ಕಜಾಜೂರು: ಅಂತ್ಯಸಂಸ್ಕಾರ ಮಾಡಲು ವಿವಿಧ ಸಮುದಾಯದವರಿಗೆ ಸ್ಮಶಾನಕ್ಕಾಗಿ ಜಾಗವನ್ನೂ ಮೀಸಲಿಡಲಾಗಿದೆ. ಆದರೆ ಆ ಜಾಗ ಎಲ್ಲಿದೆ ಎಂಬುದು ಗ್ರಾಮಸ್ಥರಿಗೂ ಸರಿಯಾಗಿ ಗೊತ್ತಿಲ್ಲ. ಹಾಗಾಗಿ ಸೂಕ್ತ ಸ್ಮಶಾನವಿಲ್ಲದ ಕಾರಣ ಮೃತದೇಹಗಳನ್ನು ಎಲ್ಲೆಂದರಲ್ಲಿ ಹೂಳುವ, ಸುಡುವ ಮೂಲಕ ಅಂತ್ಯಸಂಸ್ಕಾರ ಮಾಡಬೇಕಾದ ಸ್ಥಿತಿ ಗ್ರಾಮದಲ್ಲಿ ಎದುರಾಗಿದೆ!
ಹೊರವಲಯದ ಮಾರುತಿನಗರ (ಬಸವನಪಾದ) ಸಮೀಪ ಸುಮಾರು 10 ಹೆಕ್ಟೇರ್ ಮೀಸಲು ಸ್ಮಶಾನ ಜಾಗ ಇದ್ದರೂ ಬಳಕೆಗೆ ಸಿಗದೆ ಜನರು ಪರದಾಡುವಂತಾಗಿದೆ. ಚಿಕ್ಕಜಾಜೂರಿನ ಸರ್ವೆ ನಂ.
27ರಲ್ಲಿರುವ 33.05 ಹೆಕ್ಟೇರ್ ಜಮೀನಿನಲ್ಲಿ 2.18 ಹೆಕ್ಟೇರ್ ಹೊರತುಪಡಿಸಿ ಉಳಿದ 30.27 ಹೆಕ್ಟೇರ್ ಸರ್ಕಾರಿ ಗೋಮಾಳವಾಗಿದೆ. ಇದರಲ್ಲಿ ಹಿಂದೂ, ಜೈನ, ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದವರಿಗಾಗಿ ಸ್ಮಶಾನ ಜಾಗ ಮೀಸಲಿಡಲಾಗಿದೆ. ಆದರೆ ಇದ್ಯಾವುದೂ ಬಳಕೆಗೆ ಮಾತ್ರ ಸಿಗುತ್ತಿಲ್ಲ ಎಂಬುದು ಜನರ ಆರೋಪ.
ಗ್ರಾಮದಲ್ಲಿ ಸುಮಾರು 7 ಸಾವಿರ ಜನಸಂಖ್ಯೆ ಇದ್ದು, ಹಿಂದೂ, ಕ್ರೈಸ್ತ , ಮುಸ್ಲಿಂ ಎಲ್ಲ ಸಮುದಾಯದವರಿದ್ದಾರೆ. 1500 ರಿಂದ 1600 ಜನಸಂಖ್ಯೆ ಹೊಂದಿರುವ ಮುಸ್ಲಿಮರಿಗೆ ಹಿಂದಿನಿಂದಲೂ ಹನುಮನಹಳ್ಳಿ ರಸ್ತೆಯಲ್ಲಿ ಒಂದು ಹೆಕ್ಟೇರ್ ಸ್ಮಶಾನ ಜಾಗವಿತ್ತು. ಆದರೆ ಅಲ್ಲಿ ಹಳ್ಳ ಹರಿದ ಪರಿಣಾಮ ಮೃತದೇಹ ಹೂಳಲು ಜಾಗವೇ ಇಲ್ಲದಂತಾಗಿದೆ. ಹೀಗಾಗಿ ಪ್ರಾರ್ಥನಾ ಮಂದಿರ (ದರ್ಗಾ) ಹತ್ತಿರವೇ ಶವಸಂಸ್ಕಾರ ಮಾಡುವ ಪರಿಸ್ಥಿತಿ ಇದೆ ಎನ್ನುತ್ತಾರೆ ಮುಸ್ಲಿಂ ಸಮುದಾಯದ ಮುಖಂಡರು.
ಕೆರೆ ಅಂಗಳವೇ ಗತಿ: ಇನ್ನು ಜೈನ ಹಾಗೂ ಬ್ರಾಹ್ಮಣ ಸಮುದಾಯದವರಿಗೆ ಅಂತ್ಯಸಂಸ್ಕಾರಕ್ಕೆ ಕೆರೆ ಅಂಗಳವೇ ಗತಿಯಾಗಿದೆ. ಸ್ವಂತ ಜಮೀನು, ತೋಟ ಇದ್ದವರು ಅಲ್ಲಿಯೇ ಮೃತರ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ. ಆದರೆ ಯಾವುದೇ ಜಮೀನು ಹೊಂದಿಲ್ಲದ ಜೈನ, ಮರಾಠಿ ಹಾಗೂ ಬ್ರಾಹ್ಮಣ ಸಮುದಾಯದವರು ಸೀಮೆಜಾಲಿ ಗಿಡಗಳಿಂದ ಕೂಡಿದ ಪ್ರದೇಶ ಇಲ್ಲವೇ ಗ್ರಾಮದ ಕೆರೆ ಬಳಿ ಅಂತ್ಯಸಂಸ್ಕಾರ ಮಾಡುವುದು ಅನಿವಾರ್ಯವಾಗಿದೆ.
ಅದರಲ್ಲೂ ಮಳೆಗಾಲದಲ್ಲಿ ಶವಸಂಸ್ಕಾರ ನೆರವೇರಿಸುವುದು ಮತ್ತಷ್ಟು ಕಷ್ಟವಾಗಿದೆ. ಸರ್ಕಾರ ಸ್ಮಶಾನಕ್ಕಾಗಿ ಎರಡು ಹೆಕ್ಟೇರ್ ಜಮೀನು ಮಂಜೂರು ಮಾಡಿದೆ. ಆದರೆ ಅದು ಎಲ್ಲಿದೆ ಎಂಬುದೇ ತಿಳಿದಿಲ್ಲ. ಹತ್ತು ವರ್ಷಗಳ ಹಿಂದಿನಿಂದಲೂ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರೂ ಯಾರೊಬ್ಬರೂ ಈ ಕಡೆ ತಲೆ ಹಾಕಿಲ್ಲ ಎಂದು ಜನ ಆರೋಪಿಸುತ್ತಾರೆ. ಇದಲ್ಲದೆ ಮಳೆಗಾಲದಲ್ಲಿ ಹೊಳಲ್ಕೆರೆಯ ಶವಾಗಾರ ಆವರಣದಲ್ಲೇ ಸುಮಾರು 10-12 ಸಾವಿರ ರೂ. ಖರ್ಚು ಮಾಡಿ ಶವಸಂಸ್ಕಾರ ಮಾಡುವ ಪರಿಸ್ಥಿತಿಯಿದೆ.
ಹಿಂದೂ ಸ್ಮಶಾನ ಜಾಗವೇ ಇಲ್ಲ: ಸುಮಾರು 5 ರಿಂದ 6 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದ ಹಿಂದೂಗಳು ಮೊದಲಿನಿಂದಲೂ ಸ್ಮಶಾನ ಜಾಗದ ಕೊರತೆ ಎದುರಿಸುತ್ತಿದ್ದಾರೆ. ಲಿಂಗಾಯತ, ವೀರಶೈವ, ದೇವಾಂಗ, ಮಾದಿಗ, ನಾಯಕ, ಕೊರಚ, ಕೊರಮ, ವಿಶ್ವಕರ್ಮ, ಛಲವಾದಿ, ಲಂಬಾಣಿ, ಭೋವಿ ಸೇರಿದಂತೆ ಹತ್ತು ಹಲವಾರು ವಿಭಿನ್ನ ಸಮುದಾಯದವರಿರುವ ಈ ಗ್ರಾಮದಲ್ಲಿ ಯಾರೇ ಮೃತಪಟ್ಟರೂ ಆ ಮನೆಯವರು ಅಂತ್ಯಸಂಸ್ಕಾರ ಮಾಡಲು ತೊಂದರೆ ಅನುಭವಿಸುವಂತಾಗಿದೆ. ಕೆಲವು ಸಮುದಾಯದವರಿಗೆ ಹೊಳಲ್ಕೆರೆ ಮುಖ್ಯರಸ್ತೆಯ ಬದಿಯಲ್ಲಿ ಒಂದಿಷ್ಟು ಜಾಗದಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಅಲ್ಲಿ ಮೃತದೇಹಗಳನ್ನು ಹೂತ ಪರಿಣಾಮ ಈಗ ಜಾಗವೇ ಇಲ್ಲದಂತಾಗಿದೆ.
ಸುಮಾರು 75 ವರ್ಷಗಳಿಂದಲೂ ಒಂದೇ ರುದ್ರಭೂಮಿಯಲ್ಲಿ ಹೆಣಗಳನ್ನು ಹೂಳಲಾಗುತ್ತಿದೆ. ಈಗ ಶವಸಂಸ್ಕಾರ ಮಾಡಲು ಸ್ಥಳವಿಲ್ಲದೆ ಹಳೆ ಶವದ ಗುಂಡಿಯಲ್ಲೇ ಇನ್ನೊಂದು ಶವ ಹೂಳುವ ಪರಿಸ್ಥಿತಿ ತಲೆದೋರಿದೆ. ಆದರೆ ಈಗ ಅದೂ ಸಾಧ್ಯವಾಗುತ್ತಿಲ್ಲ. ಮುಂದೆ ಏನು ಮಾಡಬೇಕು ಎಂಬುದೇ ತೋಚುತ್ತಿಲ್ಲ ಎಂಬುದು ಕೆಲವು ಹಿರಿಯ ಮುಖಂಡರ ಮಾತು. ಸರ್ಕಾರ ಹಿಂದೂಗಳ ಸ್ಮಶಾನಕ್ಕಾಗಿ ಐದು ಹೆಕ್ಟೇರ್ ಗೋಮಾಳ ಜಮೀನು ಮೀಸಲಿಟ್ಟು 20 ವರ್ಷಗಳೇ ಕಳೆದಿವೆ. ಆದರೆ ಆ ಮೀಸಲು ಜಾಗ ಎಲ್ಲಿದೆ ಎಂಬುದೇ ಯಾರಿಗೂ ತಿಳಿದಿಲ್ಲ. ಅಲ್ಲದೆ ಸ್ಮಶಾನ ಭೂಮಿಯೂ ಒತ್ತುವರಿ ಆಗಿದೆ ಎಂಬುದು ಗ್ರಾಮಸ್ಥರ ಆರೋಪ.
ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಮೃತದೇಹಗಳನ್ನು ಸರ್ಕಾರಿ ಇಲಾಖೆಗಳ ಕಚೇರಿಗಳ ಮುಂದಿಟ್ಟು ಪ್ರತಿಭಟನೆ ಮಾಡಿದರೂ ಅಚ್ಚರಿ ಇಲ್ಲ. ಇನ್ನಾದರೂ ಸಂಬಂಧಪಟ್ಟವರು ಮೀಸಲಿರಿಸಿದ ಸ್ಮಶಾನ ಜಾಗ ಗುರುತಿಸಿ ಅಳತೆ ಮಾಡಬೇಕು. ಒತ್ತುವರಿ ತೆರವುಗೊಳಿಸಿ ಹದ್ದುಬಸ್ತು ಮಾಡಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಹಿಂದಿನ ತಹಶೀಲ್ದಾರ್ ಸೋಮಶೇಖರ್ ಹಾಗೂ ಗ್ರಾಮ ಪಂಚಾಯತದವರು ಸ್ಮಶಾನಕ್ಕಾಗಿ ಮೀಸಲಿಟ್ಟಿರುವ ಜಾಗದ ಅಳತೆ ಮಾಡಿದ್ದೆವು. ಹಲವು ಕಾರಣಗಳಿಂದ ಹದ್ದುಬಸ್ತು ಮಾಡುವುದು ಸ್ಥಗಿತವಾಗಿದೆ. ಕ್ರೈಸ್ತ ಸಮುದಾಯಕ್ಕೆ ಸ್ಮಶಾನ ಜಾಗ ಗುರುತಿಸಿ ಶವಸಂಸ್ಕಾರಕ್ಕೆ ಅವಕಾಶ ನೀಡಿದ್ದೇವೆ. ಆದಷ್ಟು ಬೇಗ ಇನ್ನುಳಿದ ಮೀಸಲು ಸ್ಮಶಾನ ಜಾಗವನ್ನೂ ಗುರುತಿಸಿ ಸೌಲಭ್ಯ ಕಲ್ಪಿಸಿಕೊಡಲಾಗುವುದು.
ಡಿ.ಸಿ. ಮೋಹನ್,
ಚಿಕ್ಕಜಾಜೂರು ಗ್ರಾಪಂ ಅಧ್ಯಕ್ಷರು
ಈ ಮೊದಲು ಚಿಕ್ಕಜಾಜೂರು ಗ್ರಾಮದ ಮೀಸಲು ಸ್ಮಶಾನ ಜಾಗಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಳತೆ ಮಾಡಿದ್ದೆವು. ಆದರೆ ಹದ್ದುಬಸ್ತು ಮಾಡಿರಲಿಲ್ಲ. ಮತ್ತೂಮ್ಮೆ ಗ್ರಾಮಸ್ಥರ ಮನವಿ ಬಂದಲ್ಲಿ ಸ್ಮಶಾನ ಜಾಗವನ್ನು ಗುರುತಿಸಿಕೊಡಲಾಗುವುದು. ಎನ್.ಆರ್. ಸಿದ್ದಪ್ಪ,
ರೆವಿನ್ಯೂ ಇನ್ಸ್‌ಪೆಕ್ಟರ್, ಬಿ.ದುರ್ಗ ಹೋಬಳಿ
ಸ್ಮಶಾನ ಜಾಗವನ್ನು ಯಾರೇ ಒತ್ತುವರಿ ಮಾಡಿಕೊಂಡಿದ್ದರೂ ತೆರವುಗೊಳಿಸುತ್ತೇವೆ. ಈ ಬಗ್ಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದು, ಆದಷ್ಟು ಬೇಗ ಕಾಯ್ದಿರಿಸಿದ ಸ್ಮಶಾನ ಜಾಗವನ್ನು ಅಳತೆ ಮಾಡಿ ಹದ್ದುಬಸ್ತು ಮಾಡಿಕೊಡುವಂತೆ ಅಧಿಕಾರಿ ವರ್ಗದವರಿಗೆ ಸೂಚಿಸಿದ್ದೇನೆ. ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಸಮಸ್ಯೆ ಬಗೆಹರಿಸುತ್ತೇನೆ.
.ನಾಗರಾಜು,
ಹೊಳಲ್ಕೆರೆ ತಹಶೀಲ್ದಾರರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.