ದತ್ತ ಜಯಂತಿ ಅಭಿಯಾನ: ಜಿಲ್ಲಾಡಳಿತದಿಂದ ಷರತ್ತುಬದ್ಧ ನಿಬಂಧನೆ
Team Udayavani, Nov 28, 2019, 4:33 PM IST
ಚಿಕ್ಕಮಗಳೂರು: ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಡಿ.10ರಿಂದ 12ರವರೆಗೆ ದತ್ತ ಜಯಂತಿ ಅಭಿಯಾನ ನಡೆಯುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಶಾಂತಿ, ಸುವ್ಯವಸ್ಥೆ ಹಾಗೂ ಶಿಸ್ತು ಪಾಲನಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಷರತ್ತುಬದ್ಧ ನಿಬಂಧನೆಗಳನ್ನು ವಿಧಿಸಿ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ಅಧಿಸೂಚನೆ ಹೊರಡಿಸಿದ್ದಾರೆ.
ದತ್ತಮಾಲಾಧಾರಣೆ, ಮೆರವಣಿಗೆ, ಶೋಭಾಯಾತ್ರೆ ಹಾಗೂ ಧಾರ್ಮಿಕ ಸಭೆಗಳ ಸಮಯ, ಸ್ಥಳ, ಮಾರ್ಗ ಇತ್ಯಾದಿ ವಿವರಗಳನ್ನು ಮತ್ತು ನೇತೃತ್ವ ವಹಿಸುವ ಸಂಘಟಕರು, ಸಂಯೋಜಕರ ವಿವರಗಳನ್ನು ಮುಂಚಿತವಾಗಿ ಆಯಾ ತಹಶೀಲ್ದಾರರಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ತಿಳಿಸಬೇಕು. ಸದರಿ ಅಧಿಕಾರಿಗಳು ನಿಗದಿಪಡಿಸುವ ಮಾರ್ಗ, ಸ್ಥಳ, ಸಮಯದ ಬಗ್ಗೆ ಸೂಕ್ತ ಅನುಮತಿ ಪಡೆದು ಅದರಂತೆ ಕ್ರಮ ವಹಿಸತಕ್ಕದ್ದು. ಅನುಮತಿ ಇಲ್ಲದೇ ಕಾರ್ಯಕ್ರಮ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಬಳಸುವ ಧಾರ್ಮಿಕ ಸಂಸ್ಥೆ ಅಥವಾ ಸ್ಥಳ, ಸಂಸ್ಥೆ ಯಾರಿಗೆ ಸೇರಿದ್ದು, ಯಾರ ಅಧೀನದಲ್ಲಿದೆ ಎಂಬುದನ್ನು ತಿಳಿದು ಅವರಿಗೆ ಕಾರ್ಯಕ್ರಮದ ಮಾಹಿತಿಯನ್ನು ಪೂರ್ವಯೋಜಿತವಾಗಿ ನೀಡಿ, ಸೂಕ್ತ ಅನುಮತಿ ಪಡೆದುಕೊಳ್ಳಬೇಕು. ಅಲ್ಲದೇ, ಅವುಗಳ ಕಟ್ಟುಪಾಡು, ಪದ್ಧತಿ, ನೀತಿ ನಿಯಮ, ಷರತ್ತುಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ.
ಯಾವುದೇ ರೀತಿಯ ಮಾರಕಾಸ್ತ್ರ, ಶಸ್ತ್ರಾಸ್ತ್ರ, ಆಯುಧಗಳನ್ನು ಹಾಗೂ ದೈಹಿಕವಾಗಿ ಹಿಂಸೆಯನ್ನುಂಟು ಮಾಡುವ ಯಾವುದೇ ಸಲಕರಣೆಗಳನ್ನು ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸ್ಫೋಟಕ, ಸಿಡಿಮದ್ದುಗಳ ಸಾಗಾಣಿಕೆ-ದಾಸ್ತಾನು ಹಾಗೂ ಬಳಕೆ, ಖಾಸಗಿ ಅಥವಾ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾನಿಗೊಳಿಸುವುದು, ಬಂದ್, ಪ್ರತಿಭಟನೆ, ಮುಷ್ಕರ, ಪ್ರತಿಕೃತಿ ದಹನ, ಪ್ರದರ್ಶನ ಹಾಗೂ ಪೂರಕ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾರ್ಯಕ್ರಮದ ಅವಧಿಯಲ್ಲಿ ಇತರೆ ಸಾರ್ವಜನಿಕರಿಗೆ, ಜನಸಾಮಾನ್ಯರಿಗೆ ಅವರ ದೈನಂದಿನ ಚಟುವಟಿಕೆ ಹಾಗೂ ವ್ಯವಹಾರಗಳಿಗೆ, ಸಂಚಾರ ಮತ್ತು ಸಂಪರ್ಕಗಳಿಗೆ ಧಕ್ಕೆಯಾಗದಂತೆ ಕ್ರಮ ವಹಿಸುವುದು ಆಯಾ ಸಂಘಟಕರ ಜವಾಬ್ದಾರಿಯಾಗಿರುತ್ತದೆ ಎಂದಿದ್ದಾರೆ.
ಕಾರ್ಯಕ್ರಮದ ಯಾವುದೇ ಸಂದರ್ಭದಲ್ಲಿ ಯಾವುದೇ ವ್ಯಕ್ತಿಯ ಧರ್ಮ, ಕೋಮು, ಜಾತಿ, ಪಂಥ ಮತ್ತಿತರ ಸಂಘಟನೆಗಳ ವಿರುದ್ಧ ಅಥವಾ ನಿಂದಿಸುವಂತಹ ಘೋಷಣೆ, ಅವಾಚ್ಯ ಶಬ್ಧಗಳ ಬಳಕೆ, ನಿಂದನೆ, ವೇದಿಕೆ ನಿರ್ಮಾಣ, ಭಾಷಣ, ಮದ್ಯಪಾನ ಬಳಕೆ, ಬ್ಯಾನರ್-ಭಿತ್ತಿಪತ್ರಗಳ ಪ್ರದರ್ಶನ ವಿರೂಪಗೊಳಿಸುವ ಮತ್ತು ನಿಂದನಾರ್ಹ ಚಟುವಟಿಕೆಗಳನ್ನು ನಿಷೇಧಿಸಿದೆ. ಕಾರ್ಯಕ್ರಮದ ಬಗ್ಗೆ ಪ್ರಚಾರ ಮಾಡುವ ಹಾಗೂ ಬಿತ್ತರಗೊಳಿಸುವ ಬ್ಯಾನರ್, ಬಂಟಿಂಗ್ಸ್, ಧ್ವಜ, ಭಿತ್ತಿಪತ್ರ ಬರಹಗಳು ಹಾಗೂ ಆಕೃತಿಗಳನ್ನು ಸರ್ಕಾರಿ, ಅರೆ ಸರ್ಕಾರಿ ಸ್ವಾಮ್ಯದ ಕಟ್ಟಡಗಳು ಮತ್ತು ಆಸ್ತಿಗಳ ಮೇಲೆ ಪ್ರಚಾರಪಡಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
ಪಾದುಕೆ ದರ್ಶನಕ್ಕಾಗಿ ನಿಗದಿಗೊಳಿಸಿರುವ ಮಾರ್ಗ ಹಾಗೂ ಸ್ಥಳಗಳಲ್ಲಿಯೇ ಪ್ರತಿಯೊಬ್ಬರೂ ಶಿಸ್ತು, ಸಂಯಮ ಹಾಗೂ ಭಕ್ತಿಭಾವದಿಂದ ದರ್ಶನ ಮಾಡಿ ಹೊರಬರುವುದು ಕಡ್ಡಾಯ. ಅಲ್ಲದೇ, ವಾಹನಳನ್ನು ನಿಗದಿಗೊಳಿಸಿರುವ ಸ್ಥಳದಲ್ಲಿಯೇ ನಿಲುಗಡೆ ಮಾಡಬೇಕು ಎಂದು ಸೂಚಿಸಿದ್ದಾರೆ. ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಐ.ಡಿ.ಪೀಠದ ಆವರಣದಲ್ಲಿ ಮತ್ತು ಪಾದುಕೆಗೆ ಇರಿಸಿರುವ ಸ್ಥಳದಲ್ಲಿ ಇರಬಹುದಾದ ಧಾರ್ಮಿಕ ಸ್ಥಾಪನೆಗಳು, ಕುರುಹುಗಳು, ನಿರ್ಮಾಣಗಳಿಗೆ ಯಾವುದೇ ರೀತಿಯ ಧಕ್ಕೆ ಹಾಗೂ ಹಾನಿಯಾಗದಂತೆ ಭಕ್ತಾದಿಗಳಿಗೆ ಮನವರಿಕೆ ಮಾಡುವುದು ಮತ್ತು ಅದರಂತೆ ಅನುಸರಿಸುವುದು ಸಂಘಟಕರ ಜವಾಬ್ದಾರಿಯಾಗಿದೆ ಎಂದಿದ್ದಾರೆ.
ಐ.ಡಿ.ಪೀಠದ ಆವರಣದಲ್ಲಿ ಮತ್ತು ಪಾದುಕೆ ಇರುವ ಗುಹೆ ಪ್ರವೇಶದಿಂದ ನಿರ್ಗಮನದ ವರೆಗಿನ ಸ್ಥಳದಲ್ಲಿ ಭಜನೆ, ಕರ್ಪೂರ ಬಳಕೆ, ಪ್ರಸಾದ ವಿನಿಯೋಗ, ಧ್ಯಾನ, ಪ್ರತಿಮೆಗಳ ಬಳಕೆ ಇತ್ಯಾದಿ ಪೂಜಾ ವಿಧಾನಗಳನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪಾದುಕೆ ದರ್ಶನ ಹೊರತುಪಡಿಸಿ ಪಾದುಕೆ ಸ್ಪರ್ಶಿಸುವ ಅಥವಾ ಮುಟ್ಟುವ ಇತರೆ ಯಾವುದೇ ಕ್ರಮಗಳಿಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.