ಬ್ಯಾಂಕ್ ಲಾಭಾಂಶದಲ್ಲಿ ಶಾಲೆಗಳಿಗೆ ಸೌಲಭ್ಯ ವಿತರಣೆ
Team Udayavani, Jul 22, 2019, 1:08 PM IST
ಚಿಕ್ಕಮಗಳೂರು: ಬ್ಯಾಂಕ್ ಆಫ್ ಬರೋಡ 112ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಶಾಲೆಗಳಿಗೆ ವಿವಿಧ ಸಲಕರಣೆಗಳನ್ನು ವಿತರಿಸಲಾಯಿತು.
ಚಿಕ್ಕಮಗಳೂರು: ಬ್ಯಾಂಕಿನ ಲಾಭಾಂಶದ ಅಲ್ಪ ಹಣದಲ್ಲಿ ಶಾಲೆಗಳಿಗೆ ಕೊಡುಗೆ ನೀಡುವ ಮೂಲಕ ಸಮಾಜಮುಖೀ ಕಾರ್ಯದಲ್ಲಿ ಬ್ಯಾಂಕುಗಳು ತೊಡಗಿರುವುದು ಶ್ಲಾಘನೀಯ ಕಾರ್ಯ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಬಿ.ಜೆ.ಸೋಮಶೇಖರ್ ಹೇಳಿದರು.
ಬ್ಯಾಂಕ್ ಆಫ್ ಬರೋಡಾದ 112ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕೊಡುಗೆಯಾಗಿ ನೀಡಿದ 1.50ಲಕ್ಷ ರೂ. ವೆಚ್ಚದ ವಿವಿಧ ಸಲಕರಣೆಗಳನ್ನು ಶಾಲೆಗಳಿಗೆ ವಿತರಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಬಹುತೇಕರು ಬ್ಯಾಂಕ್‌ನಲ್ಲಿಯೇ ವ್ಯವಹರಿಸುತ್ತಾರೆ. ಹಾಗಾಗಿ, ಬ್ಯಾಂಕ್‌ಗೆ ಬಂದ ಲಾಭದಲ್ಲಿ ಅಲ್ಲಂಪುರ, ಬೀಕನಹಳ್ಳಿ, ಹಂಪಾಪುರ ಶಾಲೆಗಳಿಗೆ ಕುಡಿಯುವ ನೀರಿನ ಘಟಕಗಳು, ಎಲ್ಇಡಿ ಟಿ.ವಿ. ಹಾಗೂ ಆಟೋಪಕರಣಗಳನ್ನು ನೀಡುವ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಯಾವುದೇ ಸಂಸ್ಥೆಗಳಾಗಲಿ ವ್ಯವಹಾರದಲ್ಲಿ ಬಂದ ಲಾಭದಲ್ಲಿ ಅಲ್ಪ ಮಟ್ಟಿಗಾದರೂ ಸಮಾಜಮುಖೀ ಕಾರ್ಯಕ್ಕೆ ವಿನಿಯೋಗಿಸಬೇಕು. ಆಗ ನಮ್ಮ ವ್ಯವಹಾರದಲ್ಲೂ ಏಳಿಗೆ ಉಂಟಾಗಿ ಮನಸ್ಸಿಗೂ ತೃಪ್ತಿ ಸಿಗುತ್ತದೆ. ಶಾಲೆಗಳಲ್ಲಿ ಎಷ್ಟೋ ಮಕ್ಕಳು ಆರ್ಥಿಕವಾಗಿ ಹಿಂದುಳಿದಿರುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಸರ್ಕಾರಿ ಸೌಲಭ್ಯದ ಜೊತೆಗೆ ಈ ರೀತಿ ದಾನ-ಧರ್ಮಗಳನ್ನು ಮಾಡಿದಾಗ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಬಸವರಾಜು ಮಾತನಾಡಿ, ಗ್ರಾಹಕರಿಂದ ಬಂದ ಲಾಭದಲ್ಲಿ ಅಲ್ಪ ಪ್ರಮಾಣವನ್ನು ಸಮಾಜ ಸೇವೆಗೆ ಸಮರ್ಪಣೆ ಮಾಡಿದಾಗ ಮನಸ್ಸು ಹಗುರವಾಗುತ್ತದೆ. ಬ್ಯಾಂಕ್‌ನಿಂದ ಹತ್ತು ಹಲವು ಸಾಮಾಜಿಕ ಕೆಲಸ ಮಾಡುತ್ತಿದ್ದು, ಗ್ರಾಹಕರ ಸಹಕಾರದಿಂದ ಬಂದ ಲಾಭದಲ್ಲಿ ಸ್ವಲ್ಪ ಹಣವನ್ನು ಶಿಕ್ಷಣಕ್ಕೆ ಒತ್ತುಕೊಟ್ಟು ನೀಡಲಾಗುತ್ತಿದೆ ಎಂದು ಹೇಳಿದರು.
ಕುಡಿಯುವ ನೀರಿನ ಘಟಕ, ಎಲ್ಇಡಿ ಟಿ.ವಿ., ಸ್ಮಾರ್ಟ್, ಆಶಾಕಿರಣ ಅಂಧ ಮಕ್ಕಳ ಶಾಲೆ ಆಟೋಪಕರಣಗಳು ಸೇರಿ 1.50 ಲಕ್ಷ ರೂ. ವೆಚ್ಚದ ಸಲಕರಣೆಗಳನ್ನು ನೀಡಲಾಗಿದೆ. ಮಕ್ಕಳು ಸೌಲಭ್ಯಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಶುದ್ಧ ಕುಡಿಯುವ ನೀರು ಕುಡಿಯುವ ಮೂಲಕ ಆರೋಗ್ಯವಂತರಾಗಬೇಕು. ಉತ್ತಮ ಫಲಿತಾಂಶ ತಂದು ಶಾಲೆಗೆ, ಪೋಷಕರಿಗೆ ಹಾಗೂ ಜಿಲ್ಲೆಗೆ ಹೆಸರು ತರುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ತಾಪಂ ಸದಸ್ಯೆ ದಾಕ್ಷಾಯಿಣಿ ಪೂರ್ಣೇಶ್, ಎಸ್‌ಡಿಎಂಸಿ ಅಧ್ಯಕ್ಷೆ ಶೋಭಾ, ಮುಖ್ಯ ಶಿಕ್ಷಕ ಜೋಗಪ್ಪ, ಶಿಕ್ಷಕ ಪರಮೇಶ್, ಹಿರಿಯ ವ್ಯವಸ್ಥಾಪಕ ಸಂತೋಷ್, ಬ್ರಹ್ಮಾಂಜನೇಯಲು, ಶ್ರವಣ್‌ಕುಮಾರ್, ರಾಜೇಶ್ ಇತರರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.