ಅವ್ಯಾಹತವಾಗಿ ಬೆಳೆದ ಬೊಂಬುಗಳ ಕಡಿತ
•500 ಸಣ್ಣ ಬಿದಿರು, 44,500 ದೊಡ್ಡ ಬಿದಿರನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿ
Team Udayavani, Apr 24, 2019, 12:45 PM IST
ಚಿಕ್ಕಮಗಳೂರು: ಅರಣ್ಯದಲ್ಲಿ ಕಡಿದಿರುವ ದೊಡ್ಡ ಬೊಂಬುಗಳನ್ನು ಲಾರಿಯಲ್ಲಿ ಸಾಗಿಸುತ್ತಿರುವುದು.
ಚಿಕ್ಕಮಗಳೂರು: ಕೊಪ್ಪ ಅರಣ್ಯ ವಿಭಾಗದ ರಕ್ಷಿತ ಅರಣ್ಯಗಳಲ್ಲಿ ದೊಡ್ಡ ಹಾಗೂ ಚಿಕ್ಕ ಬೊಂಬುಗಳನ್ನು ಕಡಿದು ಸಾಗಿಸಲು ಅರಣ್ಯ ಇಲಾಖೆ ಅನುಮತಿ ನೀಡಿದ್ದು, ಬೆಳೆದು ನಿಂತ ಬೊಂಬುಗಳನ್ನು ಅವ್ಯಾಹತವಾಗಿ ಕಡಿಯಲಾಗುತ್ತಿದೆ ಎಂದು ಪರಿಸರಪ್ರೇಮಿಗಳು ದೂರಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಭದ್ರಾ ವೈಲ್ಡ್ಲೈಫ್ ಕನ್ಸ್‌ರವೇಶನ್ ಟ್ರಸ್ಟ್‌ನ ಡಿ.ವಿ. ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ. ಗಿರಿಜಾಶಂಕರ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ. ವೀರೇಶ್, ಕೊಪ್ಪ ವಿಭಾಗದ ಕೂಸುಗಲ್, ಮೇಗರಮಕ್ಕಿ, ಬಸವನಕೋಟೆ ಅರಣ್ಯಗಳಲ್ಲಿ ಸಣ್ಣ ಹಾಗೂ ದೊಡ್ಡ ಬಿದಿರುಗಳನ್ನು ತೆಗೆಯುತ್ತಿದ್ದು, ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ನಾಯಕನ ಹಟ್ಟಿಯ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಸೇರಿದಂತೆ ಮೇದರರಿಗೆ ಅವರ ಕಸುಬಿಗಾಗಿ ನೀಡಲೆಂದು ಈ ಬಿದಿರನ್ನು ಕಡಿಯಲು ಇಲಾಖೆ ಸಮ್ಮತಿಸಿದೆ ಎಂದಿದ್ದಾರೆ.
ಇಲಾಖೆ ಆದೇಶದಂತೆ 8500 ಸಣ್ಣ ಬಿದಿರು ಮತ್ತು 44,500 ದೊಡ್ಡ ಬಿದಿರನ್ನು ಕಡಿಯಲು ಅನುಮತಿ ನೀಡಿದ್ದು, ಈಗಾಗಲೇ ಬೆಳೆದು ನಿಂತ ಬಿದಿರು ಬೊಂಬನ್ನು ಕತ್ತರಿಸಿ ಸಾಗಿಸುವ ಕೆಲಸ ಆರಂಭವಾಗಿದೆ. ಈ ಬಿದಿರು ಮೇದಾರರಿಗೆ ಹೋಗುತ್ತಿದೆಯಾ ಎಂಬ ಬಗ್ಗೆ ಇಲಾಖೆ ಪೂರ್ಣವಾಗಿ ಖಚಿತ ಪಡಿಸಿಕೊಂಡಂತೆ ಕಾಣುತ್ತಿಲ್ಲ. ಚಿತ್ರದುರ್ಗಕ್ಕೆಂದು ಬಿದಿರನ್ನು ತುಂಬಿಕೊಂಡಿದ್ದ ಲಾರಿಯಲ್ಲಿದ್ದ ವ್ಯಕ್ತಿಯನ್ನು ಪರಿಸರಾಸಕ್ತರೋರ್ವರು ಪ್ರಶ್ನಿಸಿದಾಗ ಲಾರಿಯನ್ನು ಮೈಸೂರಿಗೆ ಕೊಂಡೊಯ್ಯುತ್ತಿರುವುದಾಗಿ ತಿಳಿಸಿದ್ದು, ಚಿತ್ರದುರ್ಗ ತಾಲೂಕಿನ ಚಳ್ಳಕೆರೆಗೆ ಹೋಗಬೇಕಾದ ಬೊಂಬು ಮೈಸೂರಿಗೆ ಹೊರಟಿದ್ದು ಹೇಗೆಂಬ ಪ್ರಶ್ನೆಗೆ ಆತನಲ್ಲಿ ಸರಿಯಾದ ಉತ್ತರವಿರಲ್ಲಿಲ್ಲ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 25 ವರ್ಷಗಳ ಹಿಂದೆ ಇದೇ ರೀತಿ ಲಾರಿಗಟ್ಟಲೆ ಬೊಂಬುಗಳನ್ನು ಮೇದಾರರ ಹೆಸರಿನಲ್ಲಿ ಸಾಗಿಸಲಾಗುತಿತ್ತು. ಆಗ ಪರಿಸರವಾದಿಗಳು ಅರಣ್ಯ ಇಲಾಖೆಗೆ ಈ ಸಂಬಂಧ ಆಕ್ಷೇಪ ವ್ಯಕ್ತಪಡಿಸಿದಾಗ ಈ ಬೊಂಬುಗಳನ್ನು ಮೇದಾರರ ಹೆಸರಿನಲ್ಲಿ ಪಡೆದು ನಂತರ ಮಾರುಕಟ್ಟೆಯಲ್ಲಿ ಅಧಿಕ ಬೆಲೆಗೆ ಮಾರುತ್ತಿರುವುದು ಬೆಳಕಿಗೆ ಬಂದಿತ್ತಲ್ಲದೆ ಆಗ 1996ರಲ್ಲಿ ಸರ್ವೋಚ್ಛ ನ್ಯಾಯಲಯ ಅರಣ್ಯದಿಂದ ಬೊಂಬು ತೆಗೆಯುವುದನ್ನು ನಿಷೇಧಿಸಿತ್ತು. ಆ ನಂತರ ಅರಣ್ಯ ಇಲಾಖೆ ವರ್ಕಿಂಗ್ ಪ್ಲಾನ್ ಪ್ರಕಾರ ಬೊಂಬು ತೆಗೆಯಲು ಅವಕಾಶವಿದೆ ಎಂಬುದನ್ನು ಬಳಸಿಕೊಂಡು ಈಗ ಮತ್ತೆ ಅರಣ್ಯದಲ್ಲಿರುವ ಬೊಂಬನ್ನು ಕತ್ತರಿಸಲು ಗುತ್ತಿಗೆದಾರರಿಗೆ ಅನುಮತಿ ನೀಡುತ್ತಿದೆ ಎಂದು ಹೇಳಿದ್ದಾರೆ.
ಕೊಪ್ಪ ವಿಭಾಗದ ಅರಣ್ಯಗಳಲ್ಲಿ ಬಿದಿರು ಹೂ ಬಿಟ್ಟು ಕೆಲವೇ ವರ್ಷಗಳಾಗಿವೆ. ಹೂ ಬಿಟ್ಟ ನಂತರ ಬಿದಿರು ಮೆಳೆ ಸಾವು ಆರಂಭವಾಗುತ್ತದೆ. ಆ ನಂತರ ಬಿದಿರು ಬೆಳೆಯಲು ಕನಿಷ್ಠ 10 ರಿಂದ 15 ವರ್ಷಗಳಾಗಬೇಕು. ಈ ಸಂಗತಿಯನ್ನು ಗಮನಿಸದೆ ಅರಣ್ಯ ಇಲಾಖೆ ಯಾವುದೋ ಒತ್ತಡಕ್ಕೆ ಒಳಗಾಗಿ ಮೇದಾರರ ಹೆಸರಿನಲ್ಲಿ ಬಿದಿರು ಕತ್ತರಿಸಲು ಅನುಮತಿ ನೀಡಿರುವುದನ್ನು ನೋಡಿದಾಗ ಮೇದಾರರ ಹೆಸರು ಬಳಸಿಕೊಂಡು ವಾಣಿಜ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ಪಡೆಯುವ ತಂತ್ರಗಾರಿಕೆ ಅಡಗಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ದೂರಿದ್ದಾರೆ.
ಬಿದಿರನ್ನು ನೀಡುವಾಗ ಮೇದಾರ ಸಂಘಗಳ ಪೂರ್ಣ ವಿವರವನ್ನಾಗಲೀ, ಅವುಗಳು ಕಾರ್ಯ ನಿರ್ವಹಿಸುತ್ತಿರುವ ಸ್ಥಳ ಮತ್ತು ಅಲ್ಲಿಯ ಅವಶ್ಯಕತೆಯಿರುವ ಬಿದಿರಿನ ಪ್ರಮಾಣ ಸೇರಿದಂತೆ ಯಾವುದೇ ವಿವರಗಳನ್ನು ಅರಣ್ಯ ಇಲಾಖೆ ಸಂಗ್ರಹಿಸಿದಂತೆ ಕಂಡುಬರುತ್ತಿಲ್ಲ. ಪ್ರಾದೇಶಿಕ ಅಧಿಕಾರಸ್ಥ ಸಮಿತಿ ಮಾರ್ಚ್ 7 ರಂದು ನಡೆದ ಸಭೆಯಲ್ಲಿ ಬಿದಿರು ಕಟಾವಣೆಗೆ ಅನುಮತಿ ನೀಡಿದೆ. ಒಟ್ಟು 53,000 ಬಿದಿರು ಕತ್ತರಿಸಲು ನಿರ್ಧರಿಸಲಾಗಿದ್ದು, ಇದರಲ್ಲಿ 1000 ಬಿದಿರನ್ನು ಕೊಪ್ಪ ವಿಭಾಗದ, ಚಿಕ್ಕಗ್ರಹಾರ ವಲಯದಲ್ಲಿ ಇಲಾಖೆ ಮುಖಾಂತರ ಕಡಿದು ನಂತರ ಅದನ್ನು ನ.ರ.ಪುರದ ನಾಟ ಸಂಗ್ರಾಹಲಯಕ್ಕೆ ಸಾಗಿಸಿ ಅಲ್ಲಿಂದ ಅರ್ಜಿದಾರರಿಗೆ ವಿತರಣೆ ಮಾಡಬೇಕು. ಆದರೆ ಆ ರೀತಿ ಮಾಡದೇ ಗುತ್ತಿಗೆದಾರರೆ ಕಡಿದು ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ.
ಮೇದಾರು ಜನಾಂಗಕ್ಕೆ ಬಿದಿರನ್ನು ಅವರ ಕುಲ ಕಸುಬಿಗಾಗಿ ಅವಶ್ಯಕತೆಗೆ ತಕ್ಕಂತೆ ನೀಡಲು ನಮ್ಮ ವಿರೋಧವಿಲ್ಲ. ಆದರೆ, ಅವರ ಹೆಸರಿನಲ್ಲಿ ವಾಣಿಜ್ಯ ಮಾರುಕಟ್ಟೆಗೆ ಅಧಿಕ ಲಾಭಕ್ಕಾಗಿ ನೈಸರ್ಗಿಕ ಅರಣ್ಯ ಸಂಪತ್ತನ್ನು ನಾಶ ಮಾಡಲು ಇಲಾಖೆಯೇ ಯಾವುದೇ ರೀತಿಯ ಮುಂಜಾಗರೂಕ ಕ್ರಮಗಳನ್ನು ಕೈಗೊಳ್ಳದೇ ಅನುಮತಿ ನೀಡಿರುವುದು ಎಷ್ಟು ಸರಿ ಎಂದು ಕೇಳಬೇಕಾಗಿದೆ ಎಂದಿದ್ದಾರೆ.
ಈಗಾಗಲೇ ಮಲೆನಾಡಿನಲ್ಲಿ ಬಿದಿರು ಚಿಗುರನ್ನು ಸಾಕಷ್ಟು ಇಷ್ಟಪಟ್ಟು ತಿನ್ನುವ ಆನೆಗಳು ಹಾಗೂ ಇತರೆ ಸಸ್ಯಹಾರಿ ಪ್ರಾಣಿಗಳಿಗೆ ಅರಣ್ಯ ಪ್ರದೇಶದಲ್ಲಿ ಸೂಕ್ತ ಪ್ರಮಾಣದಲ್ಲಿ ಆಹಾರ ಸಿಗದೇ ಮನುಷ್ಯ ಮತ್ತು ಪ್ರಾಣಿ ಸಂಘರ್ಷಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಅರಣ್ಯದೊಳಗೆ ಬೆಳೆದಿರುವ ಬಿದಿರು ಕಡಿಯಲು ಅವಕಾಶ ನೀಡುವುದು ಈ ಸಂಘರ್ಷಕ್ಕೆ ಇಲಾಖೆಯೇ ಇನ್ನಷ್ಟು ಅವಕಾಶ ಮಾಡಿಕೊಟ್ಟಂತಾಗುವುದಿಲ್ಲವೇ ಎಂಬ ಪ್ರಶ್ನೆಯು ಉದ್ಭವಿಸಿದ್ದು, ಈ ಪ್ರಶ್ನೆಗೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಉತ್ತರಿಸಬೇಕಾಗಿದೆ ಎಂದಿದ್ದಾರೆ.
ರಕ್ಷಿತ ಮತ್ತು ರಾಜ್ಯ ಅರಣ್ಯಗಳಲ್ಲಿ ಬಿದಿರು ತೆಗೆಯುವ ಪದ್ಧತಿಯನ್ನು ಇಲಾಖೆ ತಕ್ಷಣ ನಿಲ್ಲಿಸಬೇಕಾಗಿದೆ. ಮೇದಾರರಿಗೆ ಅರಣ್ಯ ಇಲಾಖೆಯ ಅಂಗಗಳಾದ ಕೆ.ಎಫ್.ಡಿ.ಸಿ., ಕೆ.ಎಫ್.ಐ.ಡಿ.ಸಿ. ಹಾಗೂ ಸಾಮಾಜಿಕ ಅರಣ್ಯ ವಿಭಾಗಗಳು ಬಿದಿರನ್ನು ಬೆಳೆದು ನೀಡುವ ಆಲೋಚನೆ ಮಾಡುವ ಅನಿವಾರ್ಯತೆ ಇದೆ. ತಕ್ಷಣ ಕೊಪ್ಪ ವಿಭಾಗದಲ್ಲಿ ಬಿದಿರು ಕತ್ತರಿಸುವ ಆದೇಶವನ್ನು ಅರಣ್ಯ ಇಲಾಖೆ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.