ಕೆಂಪೇಗೌಡ ಆದರ್ಶ ಪುರುಷ
ಜಯಂತ್ಯುತ್ಸವದಲ್ಲಿ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅಭಿಮತ
Team Udayavani, Jun 28, 2019, 3:49 PM IST
ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಉದ್ಘಾಟಿಸಿದರು.
ಚಿಕ್ಕಮಗಳೂರು: ಕೆರೆ, ಕಟ್ಟೆ ನಿರ್ಮಿಸಿ ಕೃಷಿ ಮತ್ತು ಅಂತರ್ಜಲ ಅಭಿವೃದ್ಧಿಗೆ ಅಂದಿನ ಕಾಲದಲ್ಲಿಯೇ ದೂರದೃಷ್ಟಿ ಹೊಂದಿದ್ದ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು, ರೈತ ಸಮುದಾಯಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಬೆಂಗಳೂರು ವಿಶಾಲವಾಗಿ ಬೆಳೆಯಲು ತಳಹದಿ ಹಾಕಿದವರೇ ಕೆಂಪೇಗೌಡರು. ಅವರ ಆಡಳಿತದ ಅವಧಿಯಲ್ಲಿ ನೂರಾರು ಕೆರೆ, ಕಟ್ಟೆಗಳನ್ನು ಕಟ್ಟಿಸಿದ್ದಾರೆ. ದೇವಾಲಯ ನಿರ್ಮಿಸಿದ್ದಾರೆ. ವ್ಯವಸ್ಥಿತವಾದ ಮಾರುಕಟ್ಟೆ ನಿರ್ಮಾಣಗೊಂಡಿವೆ. ದುರಾದೃಷ್ಟ ಇಂದು ಬಹುತೇಕ ಮಾರುಕಟ್ಟೆಗಳು ಮಾಲ್ಗಳಾಗಿ, ಕೆರೆಗಳು ವಸತಿ ಬಡಾವಣೆಗಳಾಗಿವೆ ಎಂದು ವಿಷಾದಿಸಿದರು. ಕೆಂಪೇಗೌಡರಂತಹ ಧೀಮಂತ ವ್ಯಕ್ತಿ ಮತ್ತೂಮ್ಮೆ ಹುಟ್ಟಿ ಬರಲಿ. ಅವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳೋಣ ಎಂದು ಹೇಳಿದರು.
ನಾಡಪ್ರಭು ಕೆಂಪೇಗೌಡರ ಬಗ್ಗೆ ಉಪನ್ಯಾಸ ನೀಡಿದ ಬೆಂಗಳೂರು ಕೆಂಪೇಗೌಡ ಸಮಿತಿ ಕಾರ್ಯದರ್ಶಿ ಮರಿಮಲ್ಲಯ್ಯ, 1537ರ ಹಿಂದೆ ಕೆಂಪೇಗೌಡರು ಸ್ಥಾಪಿಸಿದ ಬೆಂಗಳೂರು ಇಂದಿಗೂ ತನ್ನ ಜೀವಂತಿಕೆ ಉಳಿಸಿಕೊಂಡಿದೆ. ಜಾಗತಿಕ ಮಟ್ಟದಲ್ಲಿ ವೈವಿಧ್ಯಮಯ ನಗರ ಎಂಬ ಹಿರಿಮೆ ಹೊಂದಿದೆ. ವಿಜಯ ನಗರದ ವೈಭವವನ್ನು ಕಣ್ತುಂಬಿಕೊಂಡು ಬಂದ ಕೆಂಪೇಗೌಡರು ಇಂತಹ ನಗರವೊಂದನ್ನು ನಾನೂ ನಿರ್ಮಿಸಬೇಕು ಎಂಬ ಕನಸು ಕಾಣುತ್ತಾರೆ. ರಾಜಬೀದಿ, ಅರಮನೆ, ದ್ವಾರಗಳು, ಗುಡಿಗೋಪುರ, ಪೇಟೆ ಬೀದಿಗಳು ಎಲ್ಲೆಲ್ಲಿ ಎಷ್ಟು ವಿಸ್ತಾರ ಇರಬೇಕು ಎಂಬುದನ್ನು ನಿರ್ಧರಿಸಿ ಕ್ರಿ.ಶ.1537ರಲ್ಲಿ ಬೆಂಗಳೂರು ನಗರ ನಿರ್ಮಾಣಕ್ಕೆ ಅಡಿಗಲ್ಲು ಹಾಕುತ್ತಾರೆ ಎಂದು ಮಾಹಿತಿ ನೀಡಿದರು.
ಅಂದಿನ ಕಾಲದಲ್ಲಿಯೇ ಕೆಂಪೇಗೌಡರು ಜಾತ್ಯತೀತ ಮನೋಭಾವ ಹೊಂದಿದ್ದರು. ಸರ್ವ ಜನಾಂಗದ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ವ್ಯವಸಾಯದಲ್ಲಿ ಮುಂದಿದ್ದ ತಿಗಳರಿಗೆ ಪ್ರತ್ಯೇಕ ಭೂಮಿ ನೀಡಿದ್ದರು. ಅದು ಇಂದು ತಿಗಳರ ಪೇಟೆಯಾಗಿದೆ ಎಂದರು.
ವೈಜ್ಞಾನಿಕ ನೀರಾವರಿ: ಕೃಷಿ ಮಹತ್ವ ಅರಿತಿದ್ದ ಕೆಂಪೇಗೌಡರು ನೀರಾವರಿಗಾಗಿ ವೈಜ್ಞಾನಿಕ ಪದ್ಧತಿ ಅಳವಡಿಸಿದ್ದರು. ಒಂದು ಕೆರೆ ತುಂಬಿದ ನಂತರ ಆ ನೀರು ಇನ್ನೊಂದು ಕೆರೆಗೆ ಹರಿಯುವಂತೆ ಕಾಲುವೆ ನಿರ್ಮಿಸಿದ್ದರು. ಬೆಂಗಳೂರಿಂದ ಹರಿದು ಹೋಗುವ ನೀರು ಕೋರಮಂಗಲ ಆಡುಗೋಡಿಯ ಮೂಲಕ ಚಳ್ಳಘಟ್ಟದ ಕೆರೆಗೆ ಹೋಗಿ ಅಲ್ಲಿಂದ ಯಮಲೂರು ಮತ್ತು ಬೆಳ್ಳಂದೂರು ಕೆರೆ ಸೇರುವ ವ್ಯವಸ್ಥೆ ಮಾಡಿದ್ದರು ಎಂದು ಹೇಳಿದರು.
ಕೆಂಪೇಗೌಡರ ಕುರಿತಂತೆ ನಾಡಪ್ರಭುವಿಗೆ ನಾಡಿನ ನಮನ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು. ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್, ಎಡಿಸಿ ಡಾ.ಕುಮಾರ್, ಎಸಿ ಶಿವಕುಮಾರ್, ತಾಲೂಕು ಪಂಚಾಯತ್ ಅಧ್ಯಕ್ಷ ಜಯಣ್ಣ, ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಿಂತಾ ಅನಿಲ್ಕುಮಾರ್, ಭವ್ಯಾ, ಸಮುದಾಯದ ಮುಖಂಡ ಟಿ.ರಾಜಶೇಖರ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಪ್ರಥಮ ಜಯಂತಿ: ರಾಜ್ಯ ಸರ್ಕಾರ ಕೆಂಪೇಗೌಡ ಜಯಂತಿ ಆಚರಣೆಗೆ ತಂದು ಇಲ್ಲಿಗೆ 3 ವರ್ಷ ಕಳೆದರೂ ಚಿಕ್ಕಮಗಳೂರಿನಲ್ಲಿ ಇದೇ ಪ್ರಥಮ ಬಾರಿಗೆ ಜಿಲ್ಲಾಡಳಿತದಿಂದ ಜಯಂತಿ ಆಚರಿಸಲಾಯಿತು. ಪ್ರಥಮ ವರ್ಷದಲ್ಲಿ ರಾಜಕೀಯ ಗಣ್ಯರೊಬ್ಬರು ನಿಧನರಾಗಿದ್ದರಿಂದ ಶೋಕಾಚರಣೆ ಹಿನ್ನೆಲೆಯಲ್ಲಿ ಜಯಂತಿ ನಡೆದಿರಲಿಲ್ಲ. ಕಳೆದ ವರ್ಷ ನಗರದಲ್ಲಿ ಪ್ರಕರಣ ಸಂಬಂಧ 144 ನಿಷೇದಾಜ್ಞೆ ಜಾರಿ ಇದ್ದ ಕಾರಣದಿಂದ ಕೆಂಪೇಗೌಡ ಜಯಂತಿ ಆಚರಿಸಲು ಸಾಧ್ಯವಾಗಿರಲಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.