ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ಗೆಲುವು
ಮೋದಿ ಅಲೆ ಬಿಜೆಪಿ ಗೆಲುವಿಗೆ ಸಹಕಾರಿ•ಕ್ಷೇತ್ರದ ಮತದಾರರು ಬಿಜೆಪಿ ಬೆಂಬಲಿಸಿರುವ ವಿಶ್ವಾಸ
Team Udayavani, May 3, 2019, 4:35 PM IST
ಚಿಕ್ಕಮಗಳೂರು: ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಮಾತನಾಡಿದರು.
ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ವ್ಯಾಪ್ತಿಯ ಎರಡೂ ಜಿಲ್ಲೆಗಳಲ್ಲೂ ಈ ಬಾರಿ ಮತದಾರರು ಬಿಜೆಪಿ ಪರವಾಗಿ ಒಲವು ತೋರಿದ್ದು, ಕಳೆದ ಬಾರಿಗಿಂತಲೂ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ಅವಲೋಕನ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕಳೆದ ಬಾರಿಗಿಂತಲೂ ಹೆಚ್ಚು ಜನ ಈ ಬಾರಿ ಪ್ರಧಾನಿ ಮೋದಿ ಪರವಾಗಿದ್ದಾರೆ. ಇದು ನಮ್ಮ ಗೆಲುವಿಗೆ ಇನ್ನಷ್ಟು ಸಹಕಾರಿ ಆಗಲಿದೆ. ದೆಹಲಿಯಿಂದ ಬಂದ ವರದಿಗಳ ಪ್ರಕಾರ ಈ ಬಾರಿ ದೇಶದ ಎಲ್ಲ ರಾಜ್ಯಕ್ಕಿಂತಲೂ ಕರ್ನಾಟಕದಲ್ಲಿ ಅತಿ ಹೆಚ್ಚು ಮೋದಿ ಅಲೆ ಕಂಡುಬಂದಿದೆ. ರಾಜ್ಯದಲ್ಲಿ ಬಿಜೆಪಿ ಕನಿಷ್ಠ 22 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದರು.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಉಡುಪಿಗಿಂತಲೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬಾರಿ ಚುನಾವಣೆ ಅತ್ಯಂತ ಕಡಿಮೆ ವೆಚ್ಚದಲ್ಲಿ ನಡೆದಿದೆ. ಪಕ್ಷದ ಎಲ್ಲ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ಈ ಬಾರಿ ಉಡುಪಿ ಜಿಲ್ಲೆಯಲ್ಲಿ ವಿರೋಧಿಗಳಿಂದ ವಿಪರೀತ ಒತ್ತಡವಿತ್ತು. ಪ್ರತಿ ಚುನಾವಣೆಯಲ್ಲಿ ಪಕ್ಷಾತೀತವಾಗಿ ಎಲ್ಲ ಅಭ್ಯರ್ಥಿಗಳಿಗೆ ದೇಣಿಗೆ ನೀಡುತ್ತಿದ್ದ ಉದ್ಯಮಿಯೊಬ್ಬರು ಈ ಬಾರಿ ಮೊದಲ ಬಾರಿಗೆ ನಮ್ಮ ವಿರುದ್ಧ ನಿಂತು ವ್ಯಕ್ತಿಗತವಾಗಿ 10 ಕೋಟಿ ರೂ. ವೆಚ್ಚ ಮಾಡಿದರು ಎಂದರು.
ಮೈತ್ರಿ ಪಕ್ಷಗಳ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರಿಗಿಂತ ಹೆಚ್ಚಿನ ಆಕ್ರಮಣಕಾರಿಯಾಗಿ ಕೆಟ್ಟ ಭಾಷೆಯಲ್ಲಿ ನಮ್ಮ ವಿರುದ್ಧ ಮಾತನಾಡುತ್ತ ರಾಜಕಾರಣ ಮಾಡಿದ ಕಾರಣ ಇಲ್ಲಿಗಿಂತ ಉಡುಪಿಯಲ್ಲಿ ಹೆಚ್ಚು ಒತ್ತಡ ಇದೆ ಎನ್ನಿಸಿತ್ತು. ಆದರೆ, ಮತದಾರರು ಮಾತ್ರ ಬಿಜೆಪಿ ಪರವಾಗಿಯೇ ನಿಂತಿದ್ದಾರೆ ಎಂದರು.
ಈ ಬಾರಿ ಮೈತ್ರಿ ಪಕ್ಷದಲ್ಲಿದ್ದ ಹಲವು ಗೊಂದಲಗಳು, ಮತಯಂತ್ರದಲ್ಲಿ ಹಸ್ತದ ಗುರುತಿಲ್ಲದಿರುವುದು ಇನ್ನೂ ಹಲವು ಕಾರಣಕ್ಕೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಮತಗಳು ನಿರೀಕ್ಷಿತ ಮಟ್ಟದಲ್ಲಿ ಚಲಾವಣೆಯಾಗಿಲ್ಲ ಎನ್ನುವ ವರದಿಗಳಿವೆ. ಒಟ್ಟಾರೆ ವಾತಾವರಣ ಬಿಜೆಪಿ ಗೆಲುವಿಗೆ ಪೂರಕವಾಗಿದೆ. ಕಳೆದ ಬಾರಿಗಿಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲುವುದು ಪಕ್ಕಾ ಎಂದು ತಿಳಿಸಿದರು.
ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಭೋಜೇಗೌಡ, ಮುಖಂಡರಾದ ತರೀಕೆರೆ ಮಂಜುನಾಥ್, ಕೋಟೆ ರಂಗನಾಥ್ ಇತರರು ವೇದಿಕೆಯಲ್ಲಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.