ಹಿರೇಗೌಜ ಗ್ರಾಮದಲ್ಲಿ 2 ಶಿಲಾಕೋಣೆ ಪತ್ತೆ
ಇತಿಹಾಸ-ಪುರಾತತ್ವ ಸಂಶೋಧಕ ಎಚ್.ಆರ್. ಪಾಂಡುರಂಗ ಅವರಿಂದ ಸಂಶೋಧನೆ
Team Udayavani, Apr 26, 2022, 4:51 PM IST
ಚಿಕ್ಕಮಗಳೂರು: ತಾಲೂಕಿನ ಹಿರೇಗೌಜ ಗ್ರಾಮದ ದೇವರಾಜ್ ಜಮೀನಿನಲ್ಲಿ ಮಾಸ್ತಿಗುಡಿಗಳು ಎಂದು ಗೌರಿಹಬ್ಬದಲ್ಲಿ ಸ್ಥಳೀಯರಿಂದ ಆರಾಧಿಸಲ್ಪಡುವ ಶಿಲಾಯುಗದ ಎರಡು ಕಲ್ಮನೆ (ಶಿಲಾಕೋಣೆ) ಕಲ್ಮನೆ ಸಮಾಧಿಯೊಳಗಡೆ ಚಾರಿತ್ರಿಕ ಕಾಲದ ಮೂರು ಮಹಾಸತಿ ಸ್ಮಾರಕಗಳನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧಕ ಎಚ್.ಆರ್. ಪಾಂಡುರಂಗ ಸಂಶೋಧಿಸಿ ಹಿರೇಗೌಜ ಗ್ರಾಮದ ಪ್ರಾಗೈತಿಹಾಸಿಕ ಹಾಗೂ ಮಧ್ಯಕಾಲೀನ ಇತಿಹಾಸದ ಮೇಲೆ ಬೆಳಕು ಚೆಲ್ಲಿದ್ದಾರೆ.
ದೊಡ್ಡ ಕಲ್ಮನೆ ಎಡ, ಬಲ ಹಿಂದೆ ಒಟ್ಟು ಮೂರು ಕಡೆ ಲಂಬವಾಗಿ ನಿಲ್ಲಿಸಿದ ಎಂಟು ಗ್ರಾನೈಟ್ ಕಲ್ಲು ಚಪ್ಪಡಿಗಳ ಮೇಲೆ 7.58 ಅಡಿ ಉದ್ದ, 2.33 ಅಡಿ ಅಗಲ, 0.05 ಅಡಿ ದಪ್ಪದ ಆಯತಾಕಾರದ ಎರಡು ಹಾಸುಗಲ್ಲು ಚಪ್ಪಡಿಗಳನ್ನು ಮುಚ್ಚಿದ್ದು, ಪೂರ್ವ ದಿಕ್ಕಿಗೆ ತೆರೆದಂತಿರುವ ಕಲ್ಮನೆ ಒಳಗೆ ಎರಡು ಮಹಾಸತಿಗಲ್ಲು ನಿಲ್ಲಿಸಲಾಗಿದೆ.
ಎಡಭಾಗದ ಮಹಾಸತಿಗಲ್ಲು 2.6 ಅಡಿ ಎತ್ತರ, ಬಲಭಾಗದ ಮಹಾಸತಿಗಲ್ಲು 2.83 ಅಡಿ ಎತ್ತರವಿದೆ. ಎರಡು ಸ್ಮಾರಕಗಳ ಮಹಾಸತಿಯರು ಸರ್ವಾಲಂಕಾರ ಭೂಷಿತರಾಗಿದ್ದು, ಮಹಾಸತಿ ಸ್ಮಾರಕದ ಮೇಲ್ಭಾಗದಲ್ಲಿ ಸೂರ್ಯ, ಚಂದ್ರರ ಚಿತ್ರಣವಿದೆ. ಕಲ್ಮನೆ ಮುಚ್ಚಳದ ಕಲ್ಲಿನಲ್ಲಿ 34 ಕಲ್ಗಳಿಗಳು ಕಂಡು ಬಂದಿದ್ದು ಶಿಲ್ಪಕಲೆ ಹಾಗೂ ವೇಷಭೂಷಣದ ಆಧಾರದ ಮೇಲೆ ಹೊಯ್ಸಳರ ಕಾಲದ 13-14 ನೇ ಶತಮಾನದಲ್ಲಿ ಯುದ್ಧದಲ್ಲಿ ಮಡಿದ ವೀರಯೋಧ ಪತಿಯೊಡನೆ ಸಹಗಮನ ಮಾಡಿದ ಸ್ಮಾರಕಗಳೆಂದು ಊಹಿಸಲಾಗಿದೆ.
ಚಿಕ್ಕಕಲ್ಮನೆ ಹಿಂದೆ ಹಾಗೂ ಮುಂದೆ ಲಂಬವಾಗಿ ನಿಂತ ತಲಾ ಎರಡು ಗ್ರಾನೈಟ್ ಕಲ್ಲು ಚಪ್ಪಡಿಗಳ ಮೇಲೆ 6.41ಅಡಿ ಉದ್ದ 3.66 ಅಡಿ ಅಗಲ ಹಾಗೂ 0.5 ಅಡಿ ದಪ್ಪವಾದ ಆಯತಾಕಾರದ ಒಂದು ಹಾಸುಗಲ್ಲು ಚಪ್ಪಡಿ (ಕ್ಯಾಪ್ ಸ್ಟೋನ್) ಮುಚ್ಚಿದ್ದು ಪೂರ್ವ ದಿಕ್ಕಿನಲ್ಲಿ ತೆರೆದುಕೊಂಡ ಈ ಕಲ್ಮನೆಯೊಳಗೆ ಎರಡು ಸ್ಥಂಭಗಳ ಸಹಿತ ದೇವಕೋಷ್ಟಕದಂತಹ ಬಳಪದ ಕಲ್ಲಿನ ರಚನೆಯೊಳಗೆ 3 ಅಡಿ ಎತ್ತರ, 2.66 ಅಡಿ ಅಗಲದ ವೀರ ಮಹಾಸತಿ ಸ್ಮಾರಕವನ್ನು ನಿಲ್ಲಿಸಲಾಗಿದೆ.
ಬಲಗಡೆ ಉತ್ತಮ ವೇಷಭೂಷಣ ಹಾಗೂ ಶಿರೋಭೂಷಣ ಧರಿಸಿ ಕರ ಮುಗಿದು ನಿಂತ ಪತಿಯ ಶಿಲ್ಪ, ಅವನ ಎಡಗಡೆ ಸರ್ವಾಲಂಕೃತಳಾಗಿ ಇಳಿಸಿದ ಎಡಗೈಯಲ್ಲಿ ಕನ್ನಡಿ ಹಾಗೂ ಮೇಲೆತ್ತಿದ ಆಶೀರ್ವಾದ ಭಂಗಿಯ ತೆರೆದ ಬಲಗೈನಲ್ಲಿ ನಿಂಬೆ ಹಣ್ಣು ಹಿಡಿದು ನಿಂತ ಮಹಾಸತಿಯ ಶಿಲ್ಪವಿದೆ.
ಶಿರದ ಮೇಲೆ ಹದಿಮೂರು ಎಸಳಿನ ಅರಳಿದ ಕೇದಿಗೆ ಹೂವಿನ ಚಿತ್ರಣವಿದೆ. ಇವರಿಬ್ಬರ ಮಧ್ಯೆ ಪೀಠದ ಮೇಲೆ ಕಮಂಡಲ ಶಿಲ್ಪವಿದೆ. ಈ ಕಲ್ಮನೆಯ ಛಾವಣಿಯ ಮೇಲಿರುವ ಮುಚ್ಚಳದ ಹಾಸುಗಲ್ಲಿನ ಮೇಲೆ 23 ಕಲ್ಗುಳಿಗಳು ಕಂಡುಬಂದಿವೆ.
ಶಿಲ್ಪ ಲಕ್ಷಣದ ಆಧಾರದ ಮೇಲೆ ಈ ವೀರಮಹಾಸತಿ ಸ್ಮಾರಕವು ವಿಜಯನಗರ ಸಾಮ್ರಾಜ್ಯದ ಆಡಳಿತ ಕಾಲದ ಯುದ್ಧದಲ್ಲಿ ಮಡಿದ ಸ್ಥಳೀಯ ವೀರನೊಬ್ಬನ ಸತಿ ಪತಿಯ ಚಿತೆಯೇರಿ ಸಹಗಮನ ಮಾಡಿದ ನಿಮಿತ್ತ ಸ್ಥಾಪಿಸಿದ ವೀರಮಹಾಸತಿ ಸ್ಮಾರಕವೆಂದು ಊಹಿಸಲಾಗಿದೆ.
ಹಿರೇಗೌಜದ ಎರಡೂ ಮಾಸ್ತಿಗುಡಿಗಳ ಸಂರಚನೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನೋಡಿದಾಗ ಇವುಗಳ ಮೇಲ್ಛಾವಣಿಯ ಆಯತಾಕಾರದ ಬೃಹತ್ ಶಿಲಾಚಪ್ಪಡಿಗಳು ಹಾಗೂ ಅವುಗಳ ಮೇಲಿರುವ ಬಟ್ಟಲಾಕಾರದ ವಿವಿಧ ಅಳತೆಯ ಕಲ್ಗುಳಿಗಳು ಹಾಗೂ ಲಂಬವಾಗಿ ನಿಲ್ಲಿಸಿದ ಕಲ್ಲುಚಪ್ಪಡಿ ಒಳಗೊಂಡಿರುವುದರಿಂದ ಬೃಹತ್ ಶಿಲಾಯುಗ ಸಂಸ್ಕೃತಿಯ ಸಮಾಧಿಗಳಲ್ಲಿ ಒಂದು ಮಾದರಿಯಾದ ಶಿಲಾಕೋಣೆ ಸಮಾಧಿಗಳಾಗಿವೆ.
ಹಿರೇಗೌಜದ ಜನರು ಪ್ರಾಗೈತಿಹಾಸಿಕ ಶಿಲಾಕೋಣೆ ಸಮಾಧಿಗಳ ಒಳಗೆ ಚಾರಿತ್ರಿಕ ಕಾಲದ ಈ ಮಹಾಸತಿ ಸ್ಮಾರಕಗಳನ್ನು ಪ್ರತಿಷ್ಠಾಪಿಸಿ ಇಂದಿಗೂ ಆರಾಧಿಸುತ್ತಿರುವ ನಿಮಿತ್ತ ಇಂದಿನ ಈ ಮಾಸ್ತಿಗುಡಿಗಳು ಅಂದಿನ ಪ್ರಾಗೈತಿಹಾಸಿಕ ಕಾಲದ ಬೃಹತ್ ಶಿಲಾಸಮಾಧಿಗಳೇ ಆಗಿದ್ದು ಈ ಹಿನ್ನೆಲೆಯಲ್ಲಿ ಹಿರೇಗೌಜ ಪ್ರದೇಶ ಸುಮಾರು ಮೂರುಸಾವಿರ ವರ್ಷಗಳ ಹಿಂದೆ ಬೃಹತ್ ಶಿಲಾಯುಗ ಸಂಸ್ಕೃತಿಯ ಜನರ ವಾಸದ ನೆಲೆಯಾಗಿತ್ತು ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.