ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಬಿಸಿಲ ಬೇಗೆಗೆ ತಂಪೆರೆದ ವರುಣ
Team Udayavani, May 8, 2024, 1:25 PM IST
ಉದಯವಾಣಿ ಸಮಾಚಾರ
ಚಿಕ್ಕಮಗಳೂರು: ಬಿಸಿಲ ಝಳದಿಂದ ರೋಸಿ ಹೋಗಿದ್ದ ಕಾಫಿನಾಡಿನ ಜನರಿಗೆ ಮಳೆ ತಂಪೆರೆದಿದೆ. ಕಾಫಿನಾಡಿನ ಅಲ್ಲಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದ್ದು, ಗುಡುಗು, ಸಿಡಿಲು, ಗಾಳಿ ಹಾಗೂ ಆಲಿಕಲ್ಲು ಸಹಿತ ಭಾರೀ ಮಳೆಯಿಂದಾಗಿ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಹಸಿರು ಹಾಸಿಗೆ ಹೊಂದಿರುವ ಕಾಫಿನಾಡು ಬೇಸಿಗೆಯಲ್ಲಿ ಎಷ್ಟೇ ಬಿಸಿಲಿದ್ದರೂ ಜಿಲ್ಲಾದ್ಯಂತ ಉಷ್ಣಾಂಶದ ಪ್ರಮಾಣ 30 ಡಿಗ್ರಿಗಿಂತ ಹೆಚ್ಚು ಇರುತ್ತಿರಲಿಲ್ಲ. ಆದರೆ ಈ ಬಾರಿ ಏಪ್ರಿಲ್ ತಿಂಗಳಲ್ಲಿ ತಾಪಮಾನದ ಪ್ರಮಾಣ 40 ಡಿಗ್ರಿ ಮೀರಿತ್ತು. ಪರಿಣಾಮ ಬಿಸಿಲ ಧಗೆಯಿಂದ ಜನರು ನಲುಗಿ ಹೋಗಿದ್ದರು. ಬಿಸಿಲ ತಾಪದಿಂದಾಗಿ ಶಾಲಾ ಮಕ್ಕಳು ಕೂಡ ರಜೆಯ ಸವಿ ಅನುಭವಿಸಲೂ ಸಾಧ್ಯವಾಗಿರಲಿಲ್ಲ.
ಬಿರು ಬಿಸಿಲ ಕಾರಣಕ್ಕೆ ಮಕ್ಕಳು ಜ್ವರ, ಆಯಾಸದಂತಹ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರುವಂತಾಗಿತ್ತು. ಬಯಲು ಭಾಗ ಹಾಗೂ ಮಲೆನಾಡು ಭಾಗದ ಕೃಷಿಕರು ತಮ್ಮ ಹೊಲಗದ್ದೆಗಳಲ್ಲಿ ಬೆಳೆದ ಬೆಳೆ ಸಂರಕ್ಷಣೆಗೆ ಹರಸಾಹಸಪಡುವಂತಾಗಿತ್ತು. ಮಲೆನಾಡು ಭಾಗದಲ್ಲಿ ಕಾಫಿ, ಅಡಕೆ ತೋಟಗಳಿಗೆ ನೀರು ಹಾಯಿಸಲೂ ಪರದಾಡುವ ಪರಿಸ್ಥಿತಿ ಉಂಟಾಗಿದ್ದು, ಜಿಲ್ಲಾದ್ಯಂತ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿತ್ತು.
ಕಳೆದ ಮೂರು ದಿನಗಳಿಂದ ಜಿಲ್ಲಾದ್ಯಂತ ಸಂಜೆ ವೇಳೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತಾದರೂ ಮಳೆಯ ಸಿಂಚನವಾಗದ ಪರಿಣಾಮ ಸಾರ್ವಜನಿಕರು, ರೈತರಲ್ಲಿ ನಿರಾಶೆ ಮನೆ ಮಾಡಿತ್ತು. ಆದರೆ ಮಂಗಳವಾರ ಮಧ್ಯಾಹ್ನ ಜಿಲ್ಲೆಯ
ಅಲ್ಲಲ್ಲಿ ಮಳೆಯ ಹನಿಗಳು ಉದುರಲಾರಂಭಿಸಿದ್ದು, ನೋಡ ನೋಡುತ್ತಿದ್ದಂತೆ ಗುಡುಗು, ಸಿಡಿಲು, ಗಾಳಿಯೊಂದಿಗೆ ಸುಮಾರು 2 ಗಂಟೆಗಳ ಮಳೆ ಭೋರ್ಗರೆಯಿತು.
ಮಂಗಳವಾರ ಮಧ್ಯಾಹ್ನ 2ಕ್ಕೆ ಚಿಕ್ಕಮಗಳೂರು ನಗರ ಹಾಗೂ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಆಲಿಕಲ್ಲುಗಳೊಂದಿಗೆ ಭೋರ್ಗರೆದ ಮಳೆಯಿಂದಾಗಿ ಸುಮಾರು 2 ಗಂಟೆಗಳ ಕಾಲ ಜನಜೀವನ ಅಸ್ತವ್ಯಸ್ತಗೊಳಿಸಿತು. ರಸ್ತೆಗಳಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ವಾಹನಗಳ ಸಂಚಾರವೂ ಸ್ತಬ್ಧಗೊಂಡಿತ್ತು. ಮಳೆಯ ಆರ್ಭಟದೊಂದಿಗೆ ಭಾರೀ ಗಾಳಿ ಹಾಗೂ
ಸಿಡಿಲಿನ ಹೊಡೆತಕ್ಕೆ ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಸಾರ್ವಜನಿಕರು, ಜಾನುವಾರುಗಳ ಪ್ರಾಣಕ್ಕೆ ಹಾನಿಯಾಗಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದರೆ, ಬಯಲು ಭಾಗದ ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯ ಅಲ್ಲಲ್ಲಿ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿದೆ. ಮಂಗಳವಾರ ಸುರಿದ ಮಳೆಯಿಂದಾಗಿ ಸದ್ಯ ಕಾಫಿನಾಡಿನಾದ್ಯಂತ ವಾತಾವರಣವೇ ಬದಲಾಗಿದ್ದು, ಎಲ್ಲೆಡೆ ತಂಪಿನ ವಾತಾವರಣ ನಿರ್ಮಾಣವಾಗಿದೆ. ಮುಂದಿನ ಕೆಲ ದಿನಗಳವರೆಗೆ ಮತ್ತೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ರೈತರು, ಕಾಫಿ, ಅಡಕೆ ಬೆಳೆಗಾರರು ಕೃಷಿ ಚಟುವಟಿಕೆಗೆ ಸಿದ್ಧತೆಗೆ ಮುಂದಾಗಿದ್ದಾರೆ. ಒಟ್ಟಾರೆ ಬಿಸಿಲಿನಿಂದ ರೋಸಿ ಹೋಗಿದ್ದ ಕಾಫಿನಾಡಿನ ಜನ ಸದ್ಯ ಸುರಿದ ಮಳೆಯಿಂದಾಗಿ ನಿಟ್ಟುಸಿರು ಬಿಡುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ
Kadur; ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.