Chikkamagaluru: ಸೇತುವೆ ಬಳಿ ಎರಡು ಗೋವುಗಳ ತಲೆ, ಕಾಲು ಪತ್ತೆ
ಹೊಸ ಸೇತುವೆ ದನಗಳ್ಳರಿಗೆ ವರದಾನ..!
Team Udayavani, May 27, 2023, 11:08 PM IST
ಚಿಕ್ಕಮಗಳೂರು: ಎರಡು ಗೋವುಗಳ ತಲೆ, ಎಂಟು ಕಾಲು ಹಾಗೂ ಮೂಳೆಗಳು ನೂತನವಾಗಿ ನಿರ್ಮಿಸಿರುವ ಸೇತುವೆ ಬಳಿ ಪತ್ತೆಯಾಗಿರೋ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮಾಗುಂಡಿ ಬಳಿ ನಡೆದಿದೆ.
ಪ್ರತಿ ಮಳೆಗಾಲದಲ್ಲೂ ಮಾಗುಂಡಿ ಸಮೀಪದ ಮಹಲ್ಗೋಡು ಸೇತುವೆ ಸಂಪೂರ್ಣ ಮುಳುಗುತ್ತಿತ್ತು. ಯಾವ ಮಟ್ಟಕ್ಕೆ ಅಂದ್ರೆ ದಿನಕ್ಕೆ ಐದಾರು ಬಾರಿ ಗಂಟೆಗಟ್ಟಲೇ ಸೇತುವೆ ಮೇಲೆ ಐದಾರು ಅಡಿ ನೀರು ಹರಿಯುತ್ತಿತ್ತು. ಬಾಳೆಹೊನ್ನೂರು-ಕಳಸ ಮುಖ್ಯ ಮಾರ್ಗದ ಈ ರಸ್ತೆಯಲ್ಲಿ ಗಂಟೆಗಟ್ಟಲೇ ವಾಹನ ಸಂಚಾರ ಕೂಡ ಜಾಮ್ ಆಗುತ್ತಿತ್ತು. ಹಾಗಾಗಿ, ಸ್ಥಳಿಯರ ಹಲವು ವರ್ಷಗಳ ಬೇಡಿಕೆಯಂತೆ ಈ ಬಾರಿ ಈ ಮಹಲ್ಗೋಡು ಗ್ರಾಮಕ್ಕೆ ಹೊಸ ಸೇತುವೆ ನಿರ್ಮಾಣವಾಗಿದೆ. ಊರಿನಿಂದ ಸ್ವಲ್ಪ ದೂರದಲ್ಲಿ ಇರುವ ಈ ಸೇತುವೆ ದನಗಳ್ಳರಿಗೆ ವರದಾನವಾದಂತೆ ಕಾಣುತ್ತಿದೆ.
ಏಕೆಂದರೆ, ಜಿಲ್ಲೆಯ ಮಲೆನಾಡು ಭಾಗದಲ್ಲಿ ದನಗಳ್ಳರ ಹಾವಳಿ ಹೊಸತೇನಲ್ಲ. ದಶಕಗಳಿಂದ ನೂರಾರು ರಾಸುಗಳು ದನಗಳ್ಳರ ಪಾಲಾಗಿವೆ. ಕಾರುಗಳಲ್ಲಿ ದನಗಳನ್ನ ಸಾಗಿಸೋದು ಕಷ್ಟ. ಗೋಮಾಂಸವನ್ನ ಸಾಗಿಸೋದು ಸುಲಭ. ಹಾಗಾಗಿ, ಸ್ವಲ್ಪ ಎತ್ತರದಲ್ಲಿ ನಿರ್ಮಾಣವಾಗಿರೋ ಸೇತುವೆ ದನಗಳ್ಳರ ಪಾಲಿಗೆ ವರವಾದಂತೆ ಕಾಣುತ್ತಿದೆ. ರಾತ್ರಿ ವೇಳೆಯಲ್ಲಿ ಜನಸಾಮಾನ್ಯರ ಓಡಾಟ ಕಡಿಮೆ ಇರುವ ಈ ಸೇತುವೆ ಕೆಳಭಾಗದಲ್ಲಿ ಸಮೃದ್ಧ ಜಾಗವಿರೋದ್ರಿಂದ ದನಗಳ್ಳರು ಅದೇ ಸೇತುವೆ ಕೆಳಗೆ ದನಗಳನ್ನ ಕಡಿದು ತಲೆ-ಕಾಲುಗಳನ್ನ ಅಲ್ಲೇ ಬಿಟ್ಟು ಮಾಂಸವನ್ನ ಕೊಂಡೊಯ್ದಿದ್ದಾರೆ.
ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ, ಕಳೆದ ಎರಡು ದಿನದ ಹಿಂದೆ ಮೂಡಿಗೆರೆ ತಾಲೂಕಿನ ರಾಸುವೊಂದು ಕಳ್ಳತನವಾಗಿತ್ತು. ಈ ರಾಸು ಅದೇ ಇರಬಹುದಾ ಎಂದು ಸ್ಥಳಿಯರು ಅಂದಾಜು ಕೂಡ ಮಾಡಿದ್ದಾರೆ. ಆದರೆ, ಮಲೆನಾಡಲ್ಲಿ ಮೇಲಿಂದ ಮೇಲೆ ರಾಸುಗಳ ಮೂಲಕವೇ ಜೀವನ ಕಟ್ಟಿಕೊಂಡವರ ರಾಸುಗಳು ಕೂಡ ಕಳ್ಳತನವಾಗುತ್ತಿವೆ. ಹಾಗಾಗಿ, ಮಲೆನಾಡಿಗರು ಈ ಗೋಕಳ್ಳರ ಹಾವಳಿಗೆ ಎಂದು ಬ್ರೇಕ್ ಬೀಳುವುದೋ ಎಂದು ಗೋಕಳ್ಳರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.