![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Aug 30, 2020, 5:12 PM IST
ಚಿಕ್ಕಮಗಳೂರು: 2021ರ ಮಾರ್ಚ್ ಅಂತ್ಯದೊಳಗೆ ಯುಜಿಡಿ ಕಾಮಗಾರಿ ಪೂರ್ಣಗೊಳ್ಳಬೇಕು. ತಪ್ಪಿದಲ್ಲಿ ಅಧಿಕಾರಿಗಳು, ಇಂಜಿನಿಯರ್‌ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ತಿಳಿಸಿದರು.
ಶನಿವಾರ ನಗರದ ನಗರಸಭೆ ಕಚೇರಿ ಸಂಭಾಗಣದಲ್ಲಿ ಅಭಿವೃದ್ಧಿ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಯುಜಿಡಿ ಮತ್ತು ಅಮೃತ ಯೋಜನೆ ಪ್ರಗತಿಯ ಮಾಹಿತಿ ಪಡೆದು ಅವರು ಮಾತನಾಡಿದರು. ಈ ಹಿಂದೆ ಯುಜಿಡಿ ಕಾಮಗಾರಿ ನಿರ್ವಹಿಸಿದ ಆಂದ್ರ ಪ್ರದೇಶದ ಗುತ್ತಿಗೆದಾರ ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳಿಸಿಲ್ಲ. ಈ ಗುತ್ತಿಗೆದಾರ 12 ಜಿಲ್ಲೆಗಳಲ್ಲಿ ಯುಜಿಡಿ ಕಾಮಗಾರಿ ಸಮರ್ಪಕವಾಗಿ ನಡೆಸಿಲ್ಲವೆಂದು ವಿಧಾನಸಭೆಯಲ್ಲೂ ಚರ್ಚೆಯಾಗಿದೆ. ಸಿಬಿಐ ತನಿಖೆಯಾಗಬೇಕೆಂದು ಆಗ್ರಹಿಸಿದ್ದೇನೆ. ನಗರಸಭೆ ಪ್ರಕರಣ ದಾಖಲಿಸುವುದರೊಂದಿಗೆ ಸೂಕ್ತ ವಕೀಲರನ್ನು ನೇಮಿಸಿ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಆಗುವಂತೆ ನೋಡಿಕೊಳ್ಳಬೇಕು ಎಂದರು.
ಇಂಜಿನಿಯರ್ ನಾಯಕ್ ಯುಜಿಡಿ ಪ್ರಗತಿ ಮಾಹಿತಿ ನೀಡಿ, ಪ್ಯಾಕೇಜ್-1ರಲ್ಲಿ 152 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. 19.8 ಕಿ.ಮೀ. ಕಾಮಗಾರಿ ಬಾಕಿ ಇದೆ. ಟೆಂಡರ್ ಕರೆಯಲಾಗಿದೆ. ಡಿಸೆಂಬರ್ ಅಂತ್ಯಕ್ಕೆ ಪ್ಯಾಕೇಜ್ -1ರ ಕಾಮಗಾರಿ ಪೂರ್ಣಗೊಳ್ಳಲಿದೆ. ದಂಟರಮಕ್ಕಿ ಬಡಾವಣೆ ವ್ಯಾಪ್ತಿಯ 3 ಕಿ.ಮೀ. ಯುಜಿಡಿ ಕಾಮಗಾರಿ ಕೈಗೊಳ್ಳಬೇಕಿದೆ. ಕಾಮಗಾರಿ ನಡೆಯುವ ಸ್ಥಳಗಳಲ್ಲಿ ರೈತರು ಬೆಳೆ ಬೆಳೆದಿದ್ದು ಕಟಾವು ನಂತರ ಕಾಮಗಾರಿ ಕೈಗೊಳ್ಳಬೇಕಿದೆ ಎಂದರು. ಸಚಿವ ಸಿ.ಟಿ.ರವಿ ಮಾತನಾಡಿ, ಯುಜಿಡಿ ಕಾಮಗಾರಿ ಈಗಾಗಲೇ ವಿಳಂಬವಾಗಿದೆ. ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬವಾಗಬಾರದು. ದಂಟರಮಕ್ಕಿ ಬಡಾವಣೆಯಲ್ಲಿ ರೈತರ ಮನವೊಲಿಸಿ ಬೆಳೆ ನಷ್ಟ ಪರಿಹಾರ ನೀಡಿ ಕಾಮಗಾರಿ ಶೀಘ್ರ ಆರಂಭಿಸಬೇಕು. 2021ರ ಮಾರ್ಚ್ ಅಂತ್ಯದೊಳಗೆ 3 ಪ್ಯಾಕೇಜ್ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ತಿಳಿಸಿದರು.
ಅಮೃತ್ ಯೋಜನೆ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ನಗರದಲ್ಲಿ 26 ಸಾವಿರ ಮನೆಗಳಿದ್ದು, 23 ಸಾವಿರ ಮನೆಗಳಿಗೆ ನೀರು ಪೂರೈಕೆ ಸಂಪರ್ಕ ಕಲ್ಪಿಸಲಾಗಿದೆ. 23 ಝೋನ್‌ಗಳಲ್ಲಿ ಈಗಾಗಲೇ 13 ಝೋನ್‌ಗಳಲ್ಲಿ ನೀರು ಪೂರೈಕೆ ಸಂಪರ್ಕ ಕಲ್ಪಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಐದು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಸೆಪ್ಪೆಂಬರ್ ತಿಂಗಳಲ್ಲಿ 13 ಝೋನ್‌ಗಳಲ್ಲೂ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ಜನವರಿ ತಿಂಗಳಲ್ಲಿ ಎಲ್ಲಾ ಝೋನ್ ಗಳಲ್ಲೂ ನೀರು ಪೂರೈಕೆ ಮಾಡಲಾಗುವುದು ಎಂದರು. ಸಚಿವ ಸಿ.ಟಿ. ರವಿ ಮಾತನಾಡಿ, ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣ ಗೊಳ್ಳಬೇಕು. ನೀರು ಬಳಕೆ ಶುಲ್ಕ ನಿಗದಿಗೆ ಸಿಎಂಸಿ ಸಭೆ ನಡೆಸಬೇಕು. ಬೇಸಿಗೆ ದಿನದ ನಾಲ್ಕು ತಿಂಗಳ ಕಾಲ ಹಿರೇಕೊಳಲೆ ಕೆರೆಯಲ್ಲಿ ನೀರಿರುವುದಿಲ್ಲ, ಈ ಅವಧಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ನಗರಸಭೆ ಆಯುಕ್ತ ಬಸವರಾಜ್ ಮಾತನಾಡಿ, ಸರ್ಕಾರದ ಆದೇಶದಂತೆ 2020 ಜುಲೈ ಅಂತ್ಯದೊಳಗೆ ಮನೆ, ನಿವೇಶನ, ಕೈಗಾರಿಕೆ, ವಾಣಿಜ್ಯ ಮಳಿಗೆ ತೆರಿಗೆ ಪಾವತಿಸಿದರೆ ಶೇ.5 ತೆರಿಗೆ ರಿಯಾಯಿಸಿ ಪ್ರಚಾರ ನಡೆಸಿದ್ದರಿಂದ 2020-21ನೇ ಸಾಲಿನಲ್ಲಿ 785.82 ಲಕ್ಷ ತೆರಿಗೆ ಪೈಕಿ 504.236 ಲಕ್ಷ ಬೇಡಿಕೆ ಇತ್ತು. ಆದರೆ 88 ಲಕ್ಷ ತೆರಿಗೆ ಸಂಗ್ರಹವಾಗಿದ್ದು. ಶೇ.64 ಪ್ರಗತಿಯಲ್ಲಿದೆ. ಶೇ.18.07 ನೀರಿನ ಶುಲ್ಕ ವಸೂಲಾತಿ ಮಾಡಲಾಗಿದ್ದು, 236 ಲಕ್ಷ ರೂ. ವಾಣಿಜ್ಯ ಮಳಿಗೆ ಬಾಡಿಗೆ ವಸೂಲಿ ಪೈಕಿ 30 ಲಕ್ಷ ರೂ. ಬಾಡಿಗೆ ವಸೂಲಿ ಮಾಡಲಾಗಿದ್ದು, ಶೇ.12.73 ಪ್ರಗತಿಯಲ್ಲಿದೆ ಎಂದರು.
ಸಚಿವ ಸಿ.ಟಿ. ರವಿ ಮಾತನಾಡಿ, ನೀರಿನ ಶುಲ್ಕ ಸಮರ್ಪಕವಾಗಿ ನಡೆಯುತ್ತಿಲ್ಲ. ಬಿಲ್ ಕಲೆಕ್ಟರ್ ಸಂಬಳ ತಡೆ ಹಿಡಿದಲ್ಲಿ ವಸೂಲಾತಿ ಸರಿಯಾಗುತ್ತದೆ. ವಾಣಿಜ್ಯ ಮಳಿಗೆ ಬಾಡಿಗೆ ಪಾವತಿ ಮಾಡದವರ ಪೈಕಿ ಕಳೆದ 6 ತಿಂಗಳಿಗೂ ಹೆಚ್ಚು ಕಾಲ ಬಾಡಿಗೆ ಉಳಿಸಿಕೊಂಡವರ ಮಳಿಗೆಗಳಿಗೆ ಬೀಗ ಹಾಕಿ, ಠೇವಣಿ ಹಣದಲ್ಲಿ ಬಾಡಿಗೆ ಮುಟ್ಟುಗೋಲು ಹಾಕಿಕೊಳ್ಳಿ ಎಂದರು. ಖಾಸಗಿ ಶಾಲಾ ಕಾಲೇಜುಗಳು ಸೇವಾ ಶುಲ್ಕ ಪಾವತಿ ಸಂಬಂಧ 2020-21ನೇ ಸಾಲಿನಲ್ಲಿ ಶ್ರೀನಿಧಿ ವಿದ್ಯಾಸಂಸ್ಥೆ ಹೊರತು ಪಡಿಸಿ ಉಳಿದ ಸಂಸ್ಥೆಗಳು ಸೇವಾಶುಲ್ಕ ಪಾವತಿಸಿಲ್ಲ. ಇವುಗಳಿಗೆ ನೋಟಿಸ್ ನೀಡಲಾಗಿದೆ ಎಂದು ಆಯುಕ್ತ ಬಸವರಾಜ್ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ| ಕುಮಾರ್, ನಗರಸಭೆ ಮುಖ್ಯ ಇಂಜಿನಿಯರ್ ಸಿದ್ದನಾಯಕ, ನಗರ ಯೋಜನಾ ನಿರ್ದೇಶಕ ಚಂದ್ರಶೇಖರ್ ಸೇರಿದಂತೆ ನಗರಸಭೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.
You seem to have an Ad Blocker on.
To continue reading, please turn it off or whitelist Udayavani.