ಕಾಫಿನಾಡಲ್ಲಿ ಮಳೆ ಆರ್ಭಟ ; ಇಡೀ ದಿನ ಮೋಡ ಮುಸುಕಿದ ವಾತಾವರಣ
ವಾಹನ ಸವಾರರು- ವ್ಯಾಪಾರಸ್ಥರ ಪರದಾಟ
Team Udayavani, Jun 2, 2020, 6:49 AM IST
ಚಿಕ್ಕಮಗಳೂರು: ನಗರದಲ್ಲಿ ಸೋಮವಾರ ಸುರಿದ ಮಳೆಯ ದೃಶ್ಯ.
ಚಿಕ್ಕಮಗಳೂರು: ಜೂನ್ ತಿಂಗಳ ಮೊದಲ ದಿನ ಜಿಲ್ಲಾದ್ಯಂತ ಉತ್ತಮ ಮಳೆಯಾಗಿದೆ. ಕಳೆದ ಅನೇಕ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ಸೋಮವಾರವೂ ಮಳೆಯ ಆರ್ಭಟ ಮುಂದುವರಿದಿದೆ. ಸೋಮವಾರ ಮಧ್ಯಾಹ್ನದ ವೇಳೆಗೆ ಚಿಕ್ಕಮಗಳೂರು ನಗರದಲ್ಲಿ ದಿಢೀರ್ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಬೆಳಗ್ಗೆಯಿಂದಲೂ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದ್ದು ಮಧ್ಯಾಹ್ನದ ವೇಳೆಗೆ ಬಾರೀ ಮಳೆಯಾಗಿದೆ.
ಅರ್ಧ ಗಂಟೆಗೂ ಹೆಚ್ಚು ಕಾಲ ದಿಢೀರ್ ಸುರಿದ ಮಳೆಯಿಂದ ಚರಂಡಿಗಳು ತುಂಬಿ ರಸ್ತೆಯ ಮೇಲೆ ನೀರು ಹರಿದಿದ್ದು ವಾಹನ ಸವಾರರು ಹಾಗೂ ರಸ್ತೆ ಬದಿ ವ್ಯಾಪಾರಸ್ಥರು ಮಳೆಯಿಂದ ರಕ್ಷಿಸಿಕೊಳ್ಳಲು ಪರದಾಡುತ್ತಿದ್ದ ದೃಶ್ಯ ಕಂಡು ಬಂದಿತು. ಚಿಕ್ಕಮಗಳೂರು ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಲಖ್ಯಾ, ಅಂಬಳೆ, ಮಲ್ಲಂದೂರು, ಆಲ್ದೂರು, ಆಣೂರು, ವಸ್ತಾರೆ ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಜಿಲ್ಲೆಯ ಮೂಡಿಗೆರೆ ತಾಲೂಕು ಕಳಸ, ಕುದರೆಮುಖ, ಬಣಕಲ್, ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದೆ. ಶೃಂಗೇರಿ ತಾಲೂಕಿನ ನೆಮ್ಮಾರ್, ಕಿಗ್ಗಾ, ಕೆರೆಕಟ್ಟೆ, ಕೊಪ್ಪ
ತಾಲೂಕಿನ ಸುತ್ತಮುತ್ತ ಮಳೆಯಾಗಿದೆ.
ಬಯಲುಸೀಮೆ ತಾಲೂಕುಗಳಾದ ಕಡೂರು, ತರೀಕೆರೆ ಭಾಗದಲ್ಲೂ ಉತ್ತಮ ಮಳೆಯಾಗಿದೆ. ಭಾನುವಾರ ರಾತ್ರಿಯೂ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ
ಮಳೆಯಾಗಿದೆ. ಜುಲೈತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗುವುದು ವಾಡಿಕೆ. ಆದರೆ, ಜೂನ್ ತಿಂಗಳ ಆರಂಭದಲ್ಲೇ ಉತ್ತಮ ಮಳೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ.
ಹಿಂದಿನ ವರ್ಷ ಭಾರೀ ಅನಾಹುತ: ಹಿಂದಿನ ವರ್ಷದ ಜುಲೈ, ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಾರೀ ಅವಾಂತರ ಸೃಷ್ಟಿಸಿತ್ತು. ತುಂಗಾ, ಭದ್ರಾ, ಹೇಮಾವತಿ, ನೇತ್ರಾವತಿ, ಯಗಚಿ ತುಂಬಿ ಹರಿದು ಪ್ರವಾಹವನ್ನೇ ಸೃಷ್ಟಿಸಿದ್ದವು. ನದಿಗಳ ಆರ್ಭಟಕ್ಕೆ ಆಸ್ತಿಪಾಸ್ತಿ, ಮನೆಮಠ ಕಳೆದುಕೊಂಡು ನಿರಾಶ್ರಿತರ ಕೇಂದ್ರಗಳಲ್ಲಿ ವಾಸಿಸುವ ಪರಿಸ್ಥಿತಿ ಎದುರಾಗಿತ್ತು. ಅನೇಕ ಸಾವು- ನೋವು ಸಂಭವಿಸಿದ್ದವು. ಚಾರ್ಮಾಡಿ ಘಾಟಿ ಕುಸಿತದಿಂದ ಚಿಕ್ಕಮಗಳೂರು- ಮಂಗಳೂರು ಸಂಪರ್ಕ ಕಡಿತಗೊಂಡಿತ್ತು.
ಮುಂಜಾಗ್ರತೆ ಕ್ರಮ: ಜೂನ್ ತಿಂಗಳಲ್ಲೇ ಮಳೆ ಪ್ರಾರಂಭವಾಗಿದ್ದು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಹಿಂದಿನ ವರ್ಷದಂತೆ ಅತಿವೃಷ್ಟಿ ಎದುರಾದರೆ ಅದನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆಯಾ ತಹಶೀಲ್ದಾರ್ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಲಾಗಿದೆ. ಸಭೆಗಳನ್ನು ನಡೆಸಲಾಗಿದೆ. ನಿರಾಶ್ರಿತರಿಗೆ ದಿನದ 24 ಗಂಟೆ ಸೇವೆ ಸಲ್ಲಿಸುವ ವ್ಯವಸ್ಥೆಗೆ ತಯಾರಿ ನಡೆಸಿಕೊಳ್ಳಲಾಗಿದೆ.
ನಿರಾಶ್ರಿತ ಕೇಂದ್ರಗಳನ್ನು ತೆರೆಯಲು ಜಿಲ್ಲೆಯಲ್ಲಿರುವ 182 ವಸತಿ ನಿಲಯಗಳನ್ನು ಸುಸಜ್ಜಿತವಾಗಿಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಲೆನಾಡು ಭಾಗವಾದ ಮೂಡಿಗೆರೆ, ಕಳಸ ಭಾಗದಲ್ಲಿ ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಸುಸಜ್ಜಿತವಾಗಿಡುವಂತೆ ಸೂಚಿಸಲಾಗಿದೆ. ಕಚ್ಚಾ ರಸ್ತೆಗಳನ್ನು ಸಾರಿಗೆ ಓಡಾಟಕ್ಕೆ ಅನುವಾಗುವಂತೆ ನೋಡಿಕೊಳ್ಳುವಂತೆ ತಿಳಿಸಲಾಗಿದೆ.
ಕೊಟ್ಟಿಗೆಹಾರ ಸುತ್ತಮುತ್ತ ಧಾರಾಕಾರ ಮಳೆ
ಕೊಟ್ಟಿಗೆಹಾರ: ಕೊಟ್ಟಿಗೆಹಾರ ಮತ್ತು ಬಣಕಲ್ ಸುತ್ತಮುತ್ತ ಸೋಮವಾರ ಧಾರಾಕಾರ ಮಳೆ ಸುರಿಯಿತು. ಕೊಟ್ಟಿಗೆಹಾರ, ಬಣಕಲ್, ಬಾಳೂರು, ತರುವೆ, ಬಿನ್ನಡಿ ಸುತ್ತಮುತ್ತ ಧಾರಾಕಾರ ಮಳೆಯಾಯಿತು. ಸೋಮವಾರ ಬೆಳಗ್ಗೆಯಿಂದ ಮಳೆ ಬಿಡುವಿಲ್ಲದಂತೆ ಸುರಿದಿದ್ದು ಬಣಕಲ್ ಸುತ್ತಮುತ್ತ ವಾರದ ರಜೆಯ ದಿನವಾದ ಸೋಮವಾರ ಸಾರ್ವಜನಿಕರು ಅಂಗಡಿ ಮುಂಗಟ್ಟುಗಳಲ್ಲಿ ದಿನನಿತ್ಯದ ವಸ್ತುಗಳನ್ನು ಖರೀದಿಸಲು ಬಂದಿದ್ದು ಮಳೆಯಿಂದಾಗಿ ತೊಂದರೆ ಅನುಭವಿಸುವಂತಾಯಿತು. ಕಾಫಿ ಬೆಳೆಗೆ ಗೊಬ್ಬರ ಹಾಕುವ ಸಮಯವಾದ್ದರಿಂದ ಉತ್ತಮ ಮಳೆಯಾಗಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕಳುಮೆಣಸು ಚಿಗುರಿ ಗರಿ ಬಿಡಲು ಪ್ರಾರಂಭವಾಗಿದ್ದು ಮಳೆಯಿಂದಾಗಿ ಹುಲುಸಾಗಿ ಬೆಳೆಸಲು ಸಹಾಯವಾಗಲಿದೆ.
ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಭಾರೀ ಪ್ರಮಾಣದ ಮಳೆಯಿಂದ ಅತಿವೃಷ್ಟಿ ಸಂಭವಿಸಿದರೆ ಪರಿಸ್ಥಿತಿ ಬಿಭಾಯಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಸಿ.ಟಿ. ರವಿ. ಜಿಲ್ಲಾ ಉಸ್ತುವಾರಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Baba Budan Dargah: ಗೋರಿಗಳ ಮೇಲೆ ಕುಂಕುಮ ಹಚ್ಚಿರುವ ಆರೋಪ
Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು
Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್ ಪತ್ನಿ ಆಕ್ರೋಶ
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.