ಸೌಕರ್ಯಗಳಿಲ್ಲದೆ ಸೊರಗುತ್ತಿವೆ ಹೊಸ ತಾಲೂಕುಗಳು
ಅಜ್ಜಂಪುರ, ಕಳಸ ತಾಲೂಕು ಕೇಂದ್ರವಾಗಿ ಘೋಷಿಸಿ 4 ವರ್ಷ
Team Udayavani, May 19, 2022, 2:35 PM IST
ಚಿಕ್ಕಮಗಳೂರು: ಕಾಫಿನಾಡಿನ ಅಜ್ಜಂಪುರ ಮತ್ತು ಕಳಸ ಪಟ್ಟಣವನ್ನು ರಾಜ್ಯ ಸರ್ಕಾರ ನೂತನ ತಾಲೂಕು ಕೇಂದ್ರವಾಗಿ ಘೋಷಿಸಿ ಮೂರ್ನಾಲ್ಕು ವರ್ಷ ಕಳೆದರೂ ಮೂಲ ಸೌಲಭ್ಯಗಳಿಲ್ಲದೆ ಸೊರಗುತ್ತಿವೆ.
ಅಜ್ಜಂಪುರ ಮತ್ತು ಕಳಸ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಮಾಡುವಂತೆ ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಇದನ್ನು ಪರಿಗಣಿಸಿದ ಸರ್ಕಾರ ಅಜ್ಜಂಪುರ ಮತ್ತು ಕಳಸ ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿ ಆದೇಶ ಹೊರಡಿಸಿತು. ಆದರೆ ಇಂದಿಗೂ ತಾಲೂಕು ಕೇಂದ್ರಕ್ಕೆ ಬೇಕಾಗುವ ಮೂಲ ಸೌಲಭ್ಯಗಳು ಇಲ್ಲದೇ ಜನರ ಪರದಾಟ ಮಾತ್ರ ತಪ್ಪಿಲ್ಲ.
2018-19ನೇ ಸಾಲಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವ ಧಿಯಲ್ಲಿ ಅಜ್ಜಂಪುರವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಲಾಯಿತು. ಈ ಹಿಂದೆ ಅಜ್ಜಂಪುರ ತರೀಕೆರೆ ತಾಲೂಕು ಕೇಂದ್ರದ ವ್ಯಾಪ್ತಿಗೆ ಒಳಪಟ್ಟಿದ್ದು, ಅಜ್ಜಂಪುರ ಸುತ್ತಮುತ್ತ ಮತ್ತು ಶಿವನಿ ಸೇರಿದಂತೆ ಇತರೆ ಗ್ರಾಮೀಣ ಪ್ರದೇಶ ತಾಲೂಕು ಕೇಂದ್ರಕ್ಕೆ ದೂರವಿದ್ದ ಹಿನ್ನೆಲೆಯಲ್ಲಿ ಅಜ್ಜಂಪುರವನ್ನು ತಾಲೂಕು ಕೇಂದ್ರ ಮಾಡಬೇಕು ಎಂಬ ಒತ್ತಾಯ ಅನೇಕ ವರ್ಷಗಳಿಂದ ಕೇಳಿ ಬಂದಿತ್ತು.
ಜನರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿ ಆದೇಶ ಹೊರಡಿಸಿತು. 2018-19ನೇ ಸಾಲಿನಲ್ಲಿ ರಚನೆಯಾದ ತಾಲೂಕು ಕೇಂದ್ರ ಇಂದಿಗೂ ಮೂಲ ಸೌಲಭ್ಯಗಳಿಲ್ಲದೆ ಸೊರಗುತ್ತಿದ್ದು ಸರ್ಕಾರಿ ದಾಖಲೆಯಲ್ಲಿ ಮಾತ್ರ ತಾಲೂಕು ಕೇಂದ್ರವಾಗಿ ಮಾರ್ಪಟ್ಟಿದೆ. ತಾಲೂಕು ಕೇಂದ್ರ ರಚನೆಯಾದ ಬಳಿಕ ತಾಲೂಕು ದಂಡಾಧಿ ಕಾರಿಯನ್ನು ನೇಮಕ ಮಾಡಲಾಗಿದೆ. ತಾಲೂಕು ಕಚೇರಿಯನ್ನು ತರೆಯಲಾಗಿದೆ. ಪಟ್ಟಣ ಪಂಚಾಯತ್ ರಚನೆಯಾಗಿದೆ. ಆದರೆ, ಸಿಬ್ಬಂದಿಗಳ ಕೊರತೆ ಎದುರಿಸುತ್ತಿದೆ. ಬಹುತೇಕ ಕಚೇರಿಗಳು ಇನ್ನೂ ತರೀಕೆರೆ ತಾಲೂಕು ಕೇಂದ್ರದಿಂದಲೇ ನಿರ್ವಹಣೆಯಾಗುತ್ತಿದೆ.
ಕಂದಾಯ, ನ್ಯಾಯಾಲಯ, ಪಿಡಬ್ಲ್ಯೂಡಿ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳಿಗೆ ಇನ್ನೂ ಸ್ವಂತ ಕಟ್ಟಡ ವಿಲ್ಲದಂತಾಗಿದೆ. ಈ ಇಲಾಖೆಗಳ ಕಾರ್ಯಚಟುವಟಿಕೆಗೆ ಸ್ವಂತ ಕಟ್ಟಡದ ಅಗತ್ಯವಿದೆ. ಸಿಬ್ಬಂದಿಗಳ ಕೊರತೆಯಿಂದ ಸಮಯಕ್ಕೆ ಸರಿಯಾಗಿ ಸಾರ್ವಜನಿಕರ ಸೇವೆಗೆ ಲಭ್ಯವಾಗುತ್ತಿಲ್ಲ. ನೂತನ ತಾಲೂಕು ಕೇಂದ್ರವಾಗಿ ರಚನೆಯಾದರೂ ಜನರ ಬವಣೆ ಮಾತ್ರ ತಪ್ಪದಂತಾಗಿದೆ. ತಾಲೂಕು ಸೌಧ ಕಟ್ಟಡ ನಿರ್ಮಿಸಿ ಅಲ್ಲಿ ಎಲ್ಲಾ ಇಲಾಖೆಗಳನ್ನು ಒಂದು ಸೂರಿನಡಿಯಲ್ಲಿ ತರುವುದರಿಂದ ಜನತೆಗೆ ಅನುಕೂಲವಾಗುತ್ತದೆ ಎನ್ನುವುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.
ಅಪ್ಪಟ ಮಲೆನಾಡು ಕಳಸ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ರಚಿಸಬೇಕೆನ್ನುವುದು ಇಲ್ಲಿನ ಜನತೆಯ ಹಲವು ವರ್ಷಗಳ ಬೇಡಿಕೆಯಾಗಿತ್ತು. ಕಳಸ ಪಟ್ಟಣ ಈ ಹಿಂದೆ ಮೂಡಿಗೆರೆ ತಾಲೂಕು ವ್ಯಾಪ್ತಿಗೆ ಒಳಪಟ್ಟಿತ್ತು. ಹೋಬಳಿ ಕೇಂದ್ರವಾಗಿದ್ದ ಕಳಸ ಪಟ್ಟಣದ ಜನತೆ ಸರ್ಕಾರಿ ಕೆಲಸ ಕಾರ್ಯಗಳಿಗೆ ಮೂಡಿಗೆರೆ ಪಟ್ಟಣವನ್ನು ಆಶ್ರಯಿಸಬೇಕಿತ್ತು. ಕಳಸ ಪಟ್ಟಣ ಮತ್ತು ಮೂಡಿಗೆರೆ ತಾಲ್ಲೂಕು ಕೇಂದ್ರಕ್ಕೆ 80 ಕಿ.ಮೀ. ಅಂತರವಿದ್ದು, ಜನರು ತಮ್ಮ ಕೆಲಸ ಕಾರ್ಯಗಳಿಗೆ ಕೂಲಿ ಕೆಲಸ ಬಿಟ್ಟು ಮೂಡಿಗೆರೆ ಪಟ್ಟಣಕ್ಕೆ ಬರಬೇಕಿತ್ತು. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕಳಸವನ್ನು ತಾಲೂಕು ಕೇಂದ್ರವಾಗಿ ರಚಿಸುವಂತೆ ಅನೇಕ ಹೋರಾಟಗಳನ್ನು ನಡೆಸಿದ್ದರು. ಅನೇಕ ಬಾರಿ ಸರ್ಕಾರದ ಗಮನ ಸೆಳೆದಿದ್ದರು.
ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರ ಅವ ಧಿಯಲ್ಲಿ ಇಲ್ಲಿನ ಜನರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಕಳಸ ಪಟ್ಟಣವನ್ನು 2019-20ನೇ ಸಾಲಿನಲ್ಲಿ ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡಲಾಯಿತು. ನಂತರ ರಾಜಕೀಯ ಬೆಳವಣಿಗೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ಕಳಸವನ್ನು ಅಧಿಕೃತವಾಗಿ ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿದರು. ಕಳಸ ಪಟ್ಟಣ ಸರ್ಕಾರಿ ದಾಖಲೆಯಲ್ಲಿ ತಾಲೂಕು ಕೇಂದ್ರವಾಗಿದ್ದರೂ ತಾಲೂಕು ಕೇಂದ್ರಕ್ಕೆ ಬೇಕಾಗುವ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ.
ಕಳಸ ತಾಲೂಕು ಕೇಂದ್ರವಾಗಿ ರಚನೆಯಾದ ಬಳಿಕ ನಾಡ ಕಚೇರಿಯನ್ನು ತಾಲೂಕು ಕಚೇರಿಯಾಗಿ ಪರಿವರ್ತಿಸಿ ತಹಶೀಲ್ದಾರ್ ಅವರನ್ನು ನೇಮಕ ಮಾಡಲಾಗಿದೆ. ಬಹುತೇಕ ಸರ್ಕಾರಿ ಕಚೇರಿಗಳು ಸ್ವಂತ ಕಟ್ಟಡವಿಲ್ಲದೆ ಇಂದಿಗೂ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ತಾಲೂಕು ಕಚೇರಿ ನಿರ್ಮಾಣಕ್ಕೆ ಕಳಸ ಪಟ್ಟಣ ಮಾವಿನಕರೆಯಲ್ಲಿ ಜಮೀನು ಗುರುತಿಸಲಾಗಿದೆ. ಆದರೆ, ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡಿಲ್ಲ, ತಾಲೂಕು ಕೇಂದ್ರದಲ್ಲಿ ಕಾರ್ಯ ನಿರ್ವಹಿಸಲು ಅಗತ್ಯ ಸಿಬ್ಬಂದಿ ಕೊರತೆ ಇದ್ದು, ಸಿಬ್ಬಂದಿಗಳ ನಿಯೋಜನೆಯಾಗಿಲ್ಲ. ಸದ್ಯ ಮೂಡಿಗೆರೆ ತಾಲೂಕು ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಹೆಚ್ಚುವರಿ ಹೊಣೆ ಹೊರಿಸಲಾಗಿದೆ.
ನ್ಯಾಯಾಲಯ ಸೇರಿದಂತೆ ಇತರೆ ಇಲಾಖೆಗಳು ತಮ್ಮ ಕಾರ್ಯಚಟುವಟಿಕೆಯನ್ನು ಇನ್ನೂ ಆರಂಭಿಸದಿರುವುದರಿಂದ ಕಳಸ ಸುತ್ತಮುತ್ತ ಕುಗ್ರಾಮಗಳ ಜನರು ಇಂದಿಗೂ ಮೂಡಿಗೆರೆ ತಾಲೂಕು ಕೇಂದ್ರವನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ಇದೆ. ತಾಲೂಕು ಕೇಂದ್ರಕ್ಕೆ ಬೇಕಾಗುವ ಮೂಲ ಸೌಲಭ್ಯಗಳನ್ನು ಒದಗಿಸಬೇಕೆನ್ನುವುದು ಇಲ್ಲಿನ ಜನರ ಆಗ್ರಹವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಜ್ಜಂಪುರ ಮತ್ತು ಕಳಸ ಪಟ್ಟಣ ನೂತನ ತಾಲೂಕು ಕೇಂದ್ರಗಳಾಗಿ ನಿರ್ಮಾಣವಾದರೂ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಇಲ್ಲಿನ ಜನರ ಗೋಳು ಮಾತ್ರ ಇನ್ನೂ ತಪ್ಪದಂತಾಗಿದೆ. ರಾಜ್ಯ ಸರ್ಕಾರ ನೂತನ ತಾಲೂಕು ಕೇಂದ್ರಕ್ಕೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸುವ ಕಾರ್ಯಕ್ಕೆ ಮುಂದಾಗಬೇಕೆನ್ನುವುದು ಜನರ ಒತ್ತಾಯವಾಗಿದೆ.
–ಸಂದೀಪ್ ಶೇಡ್ಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.