![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, May 16, 2022, 2:34 PM IST
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಗ್ರಾಹಕರ ಮನ ಸೆಳೆಯುತ್ತಿದೆ.
ಮಲ್ಲಿಕಾ, ಬೈಗನ್‌ಪಲ್ಲಿ, ರಸಪೂರಿ, ಇಮಾಮ್ ಪಸಂದ್, ಶುಗರ್ ಬೇಬಿ, ಸರಪೂರಿ, ಆಲ್‌ಫಾನ್ಸ್, ಬಾದಾಮಿ, ಮಲಗೊಬ, ಕೇಸರ್ ದಸೇರಿ, ಚೂಸಿ ಸೆಂಧೂರ, ರೊಮಾನಿಯಾ ಮಾವಿನ ಹಣ್ಣುಗಳು ಮಾವು ಪ್ರಿಯರ ಬಾಯಲ್ಲಿ ನೀರು ಸುರಿಸುವಂತೆ ಮಾಡುತ್ತಿವೆ.
ಆಂಧ್ರ ಪ್ರದೇಶದಿಂದ ಬೈಗನ್‌ಪಲ್ಲಿ, ಮಲ್ಲಿಕಾ, ತುಮಕೂರು ಮತ್ತು ಬೆಂಗಳೂರಿನಿಂದ ಜಿಲ್ಲೆಯ ಮಾರುಕಟ್ಟೆಗೆ ಮಾವಿನ ಹಣ್ಣು ಬಂದಿಳಿಯುತ್ತಿವೆ. ಜಿಲ್ಲೆಯ ಬೆಳವಾಡಿ, ಕಳಸಾಪುರ, ಸಿರಬಡಿಗೆ, ತರೀಕೆರೆ, ಬೀರೂರು ಮತ್ತು ಅಜ್ಜಂಪುರ, ಜಾವಗಲ್ ಅರಸೀಕೆರೆ, ಉಳ್ಳೇನಹಳ್ಳಿಯಲ್ಲಿ ಮಾವು ಕೊಯ್ಲಿಗೆ ಸಿದ್ಧಗೊಳ್ಳುತ್ತಿದ್ದು ಮುಂದಿನ ವಾರ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.
ಜಿಲ್ಲೆಯಿಂದ ತರೀಕೆರೆ, ಅಜ್ಜಂಪುರ, ಕಡೂರು, ಚಿಕ್ಕಮಗಳೂರು, ಮೂಡಿಗೆರೆ, ನರಸಿಂಹರಾಜಪುರ, ಹಾಸನ, ಬೇಲೂರು, ಸಕಲೇಶಪುರಕ್ಕೆ ಮಾವಿನ ಹಣ್ಣು ರವಾನಿಸಲಾಗುತ್ತದೆ. ರಸಪೂರಿ (ಕಸಿ) ಕೆ.ಜಿ.ಗೆ 40-50 ರೂ., ಬಾದಾಮಿ 50, 60, 70 ರೂ. ಮೀಡಿಯಂ ಗಾತ್ರದ್ದು 30ರಿಂದ 40 ರೂ. ಸೆಂಧೂರ 30-35 ರೂ. ದರದಲ್ಲಿ ಮಾರಾಟವಾಗುತ್ತಿವೆ. ರಸಪೂರಿ, ಬಾದಾಮಿ, ಬೈಗಲ್‌ಪಲ್ಲಿ, ಮಲಗೂಬ ಮತ್ತು ರಸಭರಿತ ಗಂಧರ್ವಕನ್ಯೆ ಎಂದು ಪ್ರಸಿದ್ಧಿ ಪಡೆದಿರುವ ಮಲ್ಲಿಕಾ ಮಾವಿನ ಹಣ್ಣುಗಳಿಗೆ ಬೇಡಿಕೆ ಉಂಟಾಗಿದೆ.
ಮಾಘ ಮಾಸದಲ್ಲಿ ಮಾವಿನ ಮರದ ತುಂಬೆಲ್ಲ ಉತ್ತಮ ಹೂವು ಬಿಟ್ಟಿತ್ತು. ಆದರೆ, ಸಕಾಲಕ್ಕೆ ಮಳೆಯಾಗದಿದ್ದರಿಂದ ಮಾವಿನ ಹೂವು ಉದುರಿಹೋದ ಪರಿಣಾಮ ಮಾವಿನ ಫಸಲು ಪ್ರಮಾಣ ಕಡಿಮೆಯಾಗಿದೆ. ಮಾವಿನ ಕಾಯಿ ಕೊಯ್ಲಿಗೆ ಬರುವ ಸಂದರ್ಭದಲ್ಲಿ ಬಾರೀ ಗಾಳಿಯೊಂದಿಗೆ ಮಳೆಯಾಗಿದ್ದು, ಫಸಲು ಕಡಿಮೆಯಾಗಲು ಕಾರಣವಾಗಿದೆ.
ಈ ವರ್ಷ ಮಾವಿನ ಹಣ್ಣಿಗೆ ಬೇಡಿಕೆ ಇದೆ. ಆದರೆ ಮಾವಿನ ಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆ ಪ್ರವೇಶಿಸದೆ ತೋಟಗಳಲ್ಲಿ ನಾಶವಾಗಿದೆ. ಇದರಿಂದ ಬೆಳೆಗಾರರಿಗೆ ನಷ್ಟ ಉಂಟಾಗಿದೆ.
ಮಾವಿನ ಹಣ್ಣಿಗೆ ಬೇಡಿಕೆ ಇದೆ. ಬೇಡಿಕೆಗೆ ತಕ್ಕಂತೆ ಹಣ್ಣುಗಳು ಬರುತ್ತಿಲ್ಲ. ಹಾಗಾಗಿ ಮಂಗಳೂರು ಸೇರಿದಂತೆ ಬೇರೆಡೆಗೆ ಮಾವಿನ ಹಣ್ಣು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ಮಾವು ಮುಂದಿನ ವಾರ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ದರದಲ್ಲಿ 10 ರಿಂದ 20 ರೂ. ಕಡಿಮೆಯಾಗುವ ಸಾಧ್ಯತೆ ಇದೆ. ಮಾವು ಪ್ರಿಯರಿಗೆ ಕಡಿಮೆ ದರದಲ್ಲಿ ಹಣ್ಣುಗಳು ದೊರೆಯಲಿವೆ. -ಏಜಾಜ್ ಅಹ್ಮದ್, ಎ.ಎಸ್.ಫ್ರೂಟ್ಸ್ ಮಾಲೀಕ
You seem to have an Ad Blocker on.
To continue reading, please turn it off or whitelist Udayavani.