![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Feb 15, 2019, 8:57 AM IST
ಚಿಕ್ಕಮಗಳೂರು: ಜೀತ ಪದ್ಧತಿ ಕಾಯ್ದೆ ಬಗ್ಗೆ ಅಧಿಕಾರಿಗಳು ಸರಿಯಾಗಿ ತಿಳಿಯದಿರುವುದು ಅತ್ಯಂತ ಬೇಸರದ ಸಂಗತಿ ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ್ ತಿಳಿಸಿದರು.
ಜಿಲ್ಲಾಡಳಿತ, ಇಂಟರ್ ನ್ಯಾಷನಲ್ ಜಸ್ಟಿಸ್ ಮಿಷನ್ ಸಹಯೋಗದೊಂದಿಗೆ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಜೀತ ಪದ್ಧತಿ ನಿರ್ಮೂಲನೆ ಕಾಯ್ದೆ 1976ರ ಕಾನೂನನ್ನು ರಾಜ್ಯಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಒಂದು ವರ್ಷದ ಹಿಂದೆ ಜೀತ ಪದ್ಧತಿ ಜಾರಿಯಲ್ಲಿರುವ ಕುರಿತು ಸರ್ವೆ ವರದಿ ಸಲ್ಲಿಸುವಂತೆ ಆದೇಶಿಸಲಾಗಿತ್ತು. ಆದರೆ ಈವರೆಗೂ ಎಲ್ಲರೂ ಸರ್ವೆ ನಡೆಸಿ ವರದಿ ಸಲ್ಲಿಸಿಲ್ಲ. ಕೇವಲ 1-2 ತಾಲೂಕುಗಳಿಂದ ಮಾತ್ರ ವರದಿ ಬಂದಿದೆ. ಜೀತ ಪದ್ಧತಿ ನಿರ್ಮೂಲನೆ ಕಾಯ್ದೆಯು ಗ್ರಾಮೀಣಾಭಿವೃದ್ಧಿ
ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಗೆ ಬರುತ್ತದೆಯಾದರೂ ಅದನ್ನು ಕಂದಾಯ ಇಲಾಖೆಯೊಂದಿಗೆ ಸೇರಿ ಜಾರಿಗೆ ತರಬೇಕು. ಆದರೆ ಎರಡೂ ಇಲಾಖೆಯವರು ಕಾಯ್ದೆ ಜಾರಿಗೆ ತರಲು ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.
ತಹಶೀಲ್ದಾರ್ ಮತ್ತು ತಾಪಂ ಇ.ಒ.ಗಳು, ಕಂದಾಯ ನಿರೀಕ್ಷಕರು, ಪಿ.ಡಿ.ಒ.ಗಳು ಮತ್ತು ಗ್ರಾಮ ಲೆಕ್ಕಿಗರು ಕಾಯ್ದೆ ಜಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಆದರೆ ಅವರಿಗೇ ಕಾಯ್ದೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.ಆದ್ದರಿಂದ ಕಾಯ್ದೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬರುತ್ತಿಲ್ಲ. ಪ್ರಮುಖವಾಗಿ ತಾ.ಪಂ. ಇ.ಒ.ಗಳು ಕಾಯ್ದೆ ಅನುಷ್ಠಾನದ ಬಗ್ಗೆ ನಿರಾಸಕ್ತಿ ತೋರುತ್ತಿರುವಂತೆ ಕಂಡು ಬರುತ್ತಿದೆ ಎಂದರು.
ಇಂಟರ್‌ನ್ಯಾಷನಲ್ ಜಸ್ಟಿಸ್ ಮೆಷಿನ್‌ನ ಸಹ ನಿರ್ದೇಶಕ ಡೈರೆಕ್ಟರ್ ವಿಲಿಯಂ ಕ್ರಿಸ್ಟೋಫರ್ ಮಾತನಾಡಿ, ತಮ್ಮ ಸಂಸ್ಥೆಯು ಕಳೆದ 18 ವರ್ಷಗಳಿಂದ ವಿಶ್ವದೆಲ್ಲೆಡೆ ಶೋಷಣೆಗೊಳಗಾದ ವ್ಯಕ್ತಿಗಳನ್ನು ರಕ್ಷಿಸುವ ಕೆಲಸವನ್ನು ಸರ್ಕಾರಗಳೊಡನೆ ಸೇರಿ ಮಾಡುತ್ತಿದೆ. ವಿವಿಧ ಇಲಾಖೆಗಳಿಗೆ ಸರ್ಕಾರಿ ಕಾಯ್ದೆಗಳ ಕುರಿತು ತರಬೇತಿ ನೀಡುತ್ತಿದೆ ಎಂದರು.
2008ರಲ್ಲಿ ಸರ್ಕಾರ ಜೀತ ಪದ್ಧತಿ ಕುರಿತು ನೀಡಿದ ವರದಿಯಂತೆ ರಾಜ್ಯದಲ್ಲಿ 68 ಸಾವಿರ ಜೀತದಾಳುಗಳು ಇದ್ದಾರೆ ಎಂದು ತಿಳಿಸಿತ್ತು. ಆದರೆ ನಂತರದ ದಿನಗಳಲ್ಲಿ ಜೀತದಾಳುಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ತಮ್ಮ ಸಂಸ್ಥೆಯು ಇತ್ತೀಚೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದಾಗ ಈ ಮೂರು ಜಿಲ್ಲೆಗಳಲ್ಲಿಯೇ 5 ಲಕ್ಷ ಜನ ಜೀತದಾಳುಗಳನ್ನು ನೇರವಾಗಿ ಭೇಟಿ ಮಾಡಿದ್ದಾಗಿ ತಿಳಿಸಿದರು.
ಕಾರ್ಮಿಕ ಇಲಾಖೆ ಉಪ ಆಯುಕ್ತ ಕೆ.ಜಿ.ಜಾನ್ಸನ್, ಇಂಟರ್ ನ್ಯಾಷನಲ್ ಜಸ್ಟಿಸ್ ಮಿಷನ್‌ನ ನಿರ್ದೇಶಕ ಇಂದ್ರಜಿತ್ ಕುಮಾರ್, ಜಿಪಂ ಉಪ ಕಾರ್ಯದರ್ಶಿ ರಾಜಗೋಪಾಲ್ ಉಪಸ್ಥಿತರಿದ್ದರು. ಕೂಡಲೆ ಎಲ್ಲರೂ ಪ್ರತಿಯೊಂದು ಗ್ರಾಮಕ್ಕೆ ತೆರಳಿ ಜೀತ ಪದ್ಧತಿ ಜಾರಿಯಲ್ಲಿದೆಯೋ ಇಲ್ಲವೋ ಎಂಬುದನ್ನು ತಿಳಿದು ಸೂಕ್ತ ವರದಿ ಸಲ್ಲಿಸಬೇಕು. ಕಾಯ್ದೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕೆಂಬ ನಿಟ್ಟಿನಲ್ಲಿ ಈ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ತಿಳಿಸುವ ವಿಚಾರಗಳನ್ನು ಸರಿಯಾಗಿ ತಿಳಿದುಕೊಂಡು ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಶಿವಕುಮಾರ, ಅಪರ ಜಿಲ್ಲಾಧಿಕಾರಿ
You seem to have an Ad Blocker on.
To continue reading, please turn it off or whitelist Udayavani.