ಕಾಫಿಯ ಘಮವೂ ಇಲ್ಲ ..ಹಾಲಿನ ರುಚಿಯೂ ಇಲ್ಲ…
ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಗಗನಕುಸುಮ,ಹುಸಿಯಾದ ಜನರ ನೀರೀಕ್ಷೆ
Team Udayavani, Mar 9, 2021, 1:01 PM IST
ಚಿಕ್ಕಮಗಳೂರು: ರಾಜ್ಯ ಮುಂಗಡ ಪತ್ರದಲ್ಲಿ ಕಾಫಿನಾಡಿಗೆ ಅಂತಹ ವಿಶೇಷ ಕೊಡುಗೆ ದಕ್ಕಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ 8 ನೇ ಬಜೆಟ್‌ನಲ್ಲೂ ಜಿಲ್ಲೆಯ ಜನರ ನಿರೀಕ್ಷೆ ಹುಸಿಗೊಳಿಸಿದ್ದಾರೆ.
ಜಿಲ್ಲೆ ಅಡಕೆ, ಕಾಫಿ, ಕಾಳುಮೆಣಸು ಸೇರಿದಂತೆ ಇತರೆ ಬೆಳೆಗೆ ಪ್ರಸಿದ್ಧಿ ಹೊಂದಿದ್ದು ನಿರಂತರವಾಗಿ ಕಾಡುತ್ತಿರುವ ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಈ ಬಜೆಟ್‌ನಲ್ಲಿ ಜಿಲ್ಲೆಗೆ ವಿಶೇಷ ಅನುದಾನ ನೀಡುವ ನಿರೀಕ್ಷೆ ಜನರದ್ದಾಗಿತ್ತು. ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕಾಫಿ ಬೆಳೆಗಾರರಿಗೆ ವಿಶೇಷ ಅನುದಾನ ನೀಡುವ ನಿರೀಕ್ಷೆ ಇತ್ತು. ಕೇಂದ್ರ ಸರ್ಕಾರ ಬೆಳೆಗಾರರನ್ನು ನಿರ್ಲಕ್ಷಿಸಿದೆ. ಈಗ ರಾಜ್ಯ ಸರ್ಕಾರವೂ ಯಾವುದೇ ಅನುದಾನ ನೀಡದೆ ಬೆಳೆಗಾರರ ನಿರೀಕ್ಷೆ ಹುಸಿಗೊಳಿಸಿದೆ.
ನೀಗದ ಬರದ ತಾಲೂಕುಗಳ ದಾಹ: ಜಿಲ್ಲೆಯ ಬಯಲು ಸೀಮೆ ಭಾಗದ ತಾಲೂಕುಗಳು ನಿರಂತರ ಬರಕ್ಕೆ ತುತ್ತಾಗಿ ನಲುಗಿವೆ. ಈ ಭಾಗದಲ್ಲಿ ಶಾಶ್ವತ ನೀರಾವರಿ ಯೋಜನೆಗಳಿಲ್ಲದೆ ಜನ ಕಂಗೆಟ್ಟಿದ್ದಾರೆ. ಬಯಲುಸೀಮೆ ಭಾಗದ ಕೆರೆಗಳಿಗೆ ನೀರು ತುಂಬಿಸುವ ಗೋಂದಿ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿದ್ದು ಬಜೆಟ್‌ನಲ್ಲಿ ಅನುದಾನ ನೀಡುವ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ. ಈ ಭಾಗದಲ್ಲಿ ಕುಡಿಯುವ ನೀರು ಸಮಸ್ಯೆ ನೀಗಿಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ನೀರಾವರಿ ಯೋಜನೆಗೆ ಆದ್ಯತೆ ನೀಡುವ ನಿರೀಕ್ಷೆ ಸುಳ್ಳಾಗಿದೆ.
ಪ್ರತ್ಯೇಕ ಹಾಲು ಒಕ್ಕೂಟ ಪ್ರಸ್ತಾಪವಿಲ್ಲ: ಜಿಲ್ಲೆಯಲ್ಲಿ ಕೃಷಿಯೊಂದಿಗೆ ಹೈನುಗಾರಿಕೆ ಪ್ರಮುಖ ಉದ್ಯೋಗಗಳಲ್ಲಿ ಒಂದಾಗಿದೆ. ಹೀಗಾಗಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಮಾಡಬೇಕೆಂಬುದು ಜನರ ಬಹುದಿನಗಳ ಬೇಡಿಕೆಯಾಗಿತ್ತು. ಸಂಸದೆ ಶೋಭಾ ಕರಂದ್ಲಾಜೆ ಅವರು ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿದ್ದಾಗ ಪ್ರತ್ಯೇಕ ಹಾಲು ಒಕ್ಕೂಟ ನೀಡುವಂತೆ ಆಗ್ರಹಿಸಿದ್ದರು. ಈ ಬಾರಿ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆಯಾಗುವ ನಿರೀಕ್ಷೆ ಇತ್ತು. ಆದರೆ ಪ್ರತ್ಯೇಕ ಹಾಲು ಒಕ್ಕೂಟದ ಬಗ್ಗೆ ಪ್ರಸ್ತಾಪ ಮಾಡಿಲ್ಲದಿರುವುದು ಜನರಲ್ಲಿ ಬೇಸರ ಮೂಡಿಸಿದೆ.
ಜಿಲ್ಲೆಯಲ್ಲಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣ ಕಳಸ ತಾಲೂಕು ಕೇಂದ್ರವಾಗಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಘೋಷಣೆ ಮಾಡಿದ್ದು, ಅನುಷ್ಠಾನಕ್ಕೆ ಕ್ರಮ ಕೈಗೊಂಡಿಲ್ಲ, ಈ ಹಿನ್ನೆಲೆಯಲ್ಲಿ ಕಳಸ ತಾಲೂಕು ಕೇಂದ್ರ ಅನುಷ್ಠಾನದ ಬಗ್ಗೆ ಬಜೆಟ್‌ನಲ್ಲಿಪ್ರಸ್ತಾಪಿಸುವ ಭರವಸೆ ಈ ಭಾಗದ ಜನರು ಹೊಂದಿದ್ದರು. ಬಜೆಟ್‌ನಲ್ಲಿಈ ವಿಚಾರವನ್ನು ಪ್ರಸ್ತಾಪಿಸದಿರುವುದು ಈ ಭಾಗದ ಜನರಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಒಟ್ಟಾರೆಯಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಕಾಫಿ ನಾಡನ್ನು ಕಡೆಗಣಿಸಿದ್ದು, ಜಿಲ್ಲೆಯ ಜನರ ಬಹು ನೀರಿಕ್ಷೆಗಳು ಹುಸಿಯಾಗಿವೆ.
ಬಜೆಟ್‌ನಲ್ಲಿ ಜಿಲ್ಲೆಗೆ ದಕ್ಕಿದ್ದು: ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ 500 ಕೋಟಿ ರೂ. ಮೀಸಲಿಡಲಾಗಿದೆ. ಜಿಲ್ಲೆಯಲ್ಲಿ ಹಲವು ಪ್ರವಾಸೋದ್ಯಮ ತಾಣಗಳಿದ್ದು, ಈ ಅನುದಾನದಲ್ಲಿ ಒಂದಿಷ್ಟು ಪಾಲು ದೊರಕುವ ನೀರಿಕ್ಷೆ ಇದೆ.
ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಅಡಕೆ ಬೆಳೆಗೆ ಹಳದಿ ಎಲೆರೋಗ ಕಂಡು ಬಂದಿದ್ದು ಇದರ ಸಂಶೋಧನೆಗೆ ಮತ್ತು ಪರ್ಯಾಯ ಬೆಳೆ ಪ್ರೋತ್ಸಾಹಿಸಲು 25 ಕೋಟಿ ರೂ. ನೀಡಲಾಗಿದೆ. ಕೆಮ್ಮಣ್ಣುಗುಂಡಿಯ ಕೃಷ್ಣರಾಜೇಂದ್ರ ಗಿರಿಧಾಮವನ್ನು ಈ ಹಿಂದೆ ತೋಟಗಾರಿಕೆ ಇಲಾಖೆ ನಿರ್ವಹಣೆ ಮಾಡುತ್ತಿತ್ತು. ಅದರ ಬದಲು ಈಗ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಮಳೆಗಾಲದಲ್ಲಿ ಮಲೆನಾಡು ಭಾಗದಲ್ಲಿ ಕೆಲವು ಗ್ರಾಮಗಳಲ್ಲಿ ಹಳ್ಳ, ಕೊಳ್ಳಗಳು, ನದಿ ತೊರೆಗಳು ಮೈದುಂಬಿ ಹರಿಯುವುದರಿಂದ ಪಟ್ಟಣದ ಸಂಪರ್ಕವನ್ನೇ ಕಳೆದುಕೊಳ್ಳುತ್ತಿದ್ದವು. ಮರದ ಕಾಲು ಸಂಕದಲ್ಲೇ ಜೀವವನ್ನು ಬಿಗಿಹಿಡಿದು ವಿದ್ಯಾರ್ಥಿಗಳುಮತ್ತು ಸಾರ್ವಜನಿಕರು ಹಳ್ಳಗಳನ್ನು ದಾಟಬೇಕಾಗಿತ್ತು. ಬಜೆಟ್‌ನಲ್ಲಿಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಗ್ರಾಮಬಂಧು ಸೇತು ನಿರ್ಮಾಣಕ್ಕೆ 9 ಕೋಟಿ ರೂ. ಮೀಸಲಿಡಲಾಗಿದೆ. ಡೀಮ್ಡ್ ಅರಣ್ಯ ಸಮಸ್ಯೆಯಿಂದ ಬಹುತೇಕ ಕುಟುಂಬಗಳಿಗೆ ನಿವೇಶನವಿಲ್ಲದೆ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ, ಬಜೆಟ್‌ನಲ್ಲಿ ಡೀಮ್ಡ್ ಅರಣ್ಯ ಸಮಸ್ಯೆ ಅಧ್ಯಯನಕ್ಕೆ ಪ್ರತ್ಯೇಕ ಸಮಿತಿ ರಚಿಸಿರುವುದು ಮಲೆನಾಡಿನ ಜನರಲ್ಲಿ ತುಸು ನೆಮ್ಮದಿ ತಂದಿದೆ.
ಜಿಲ್ಲೆಯಲ್ಲಿ ವನ್ಯಜೀವಿ ಹಾವಳಿಯಿಂದ ರೈತರು ಮತ್ತು ಬೆಳೆಗಾರರು ಆಪಾರ ನಷ್ಟ ಅನುಭವಿಸಿದ್ದಾರೆ. ಈ ನಿಟ್ಟಿನಲ್ಲಿ ವನ್ಯಜೀವಿ ಹಾವಳಿಯಿಂದ ಉಂಟಾಗುವ ಹಾನಿ ಪ್ರಕರಣವನ್ನು ತ್ವರಿತವಾಗಿ ಪರಿಹರಿಸಲು= ಇ- ಅರಣ್ಯ ಪರಿಹಾರ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದರಿಂದ ಬೆಳೆಕಳೆದುಕೊಂಡಿರುವ ರೈತರಿಗೆ ಆದಷ್ಟು ಬೇಗ ಪರಿಹಾರ ದೊರಕುವ ಸಾಧ್ಯತೆಗಳಿವೆ.
ಶಾಶ್ವತ ನೀರಾವರಿಯ ಕನಸು ಗಗನ ಕುಸುಮ: ದತ್ತ :
ಕಡೂರು: ರಾಜ್ಯ ಬಜೆಟ್ ಜಿಲ್ಲೆ ಮತ್ತು ಕಡೂರಿನ ಪಾಲಿಗೆ ಅತ್ಯಂತ ನಿರಾಶಾದಾಯಕವಾಗಿದೆ ಎಂದು ಮಾಜಿ ಶಾಸಕ ವೈ. ಎಸ್.ವಿ. ದತ್ತ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯ ಅದರಲ್ಲೂ ಕಡೂರಿನ ರೈತಾಪಿ ವರ್ಗಕ್ಕೆ ತೀವ್ರ ಆಘಾತವಾಗಿದೆ. ಶಾಶ್ವತ ನೀರಾವರಿ ಯೋಜನೆಗಳ ಕನಸು ಗಗನಕುಸುಮವಾಗಿಯೇ ಉಳಿದಿದೆ. ಬಹು ನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಅನುಮೋದನೆಗೊಂಡರೆ ನಮ್ಮ ಜಿಲ್ಲೆಯೂ ಸೇರಿದಂತೆ ಕೆಲ ಜಿಲ್ಲೆಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.
ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸುವಂತೆ ಕೇಳುತ್ತಿರುವುದು ಇದೇ ಮೊದಲಲ್ಲ. ಸಿದ್ದರಾಮಯ್ಯನವರ ಕಾಲದಿಂದಲೂ ಈ ಪ್ರಸ್ತಾವನೆಯಿದೆ. ಅದರರ್ಥ ಕಡೂರು ಭಾಗದ ಕೆರೆಗಳಿಗೆ ನೀರುಣಿಸುವ ಭದ್ರಾ ಯೋಜನೆಗೆ ಹಣ ಸಿಗುವುದು ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬಿಟ್ಟದ್ದು ಎಂಬುದಾಗಿದೆ ಎಂದು ಸ್ಪಷ್ಟವಾಗುತ್ತದೆ ಎಂದರು. ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನುಕೇಂದ್ರಕ್ಕೆ ವರ್ಗಾಯಿಸಿ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಒಂದು ವೇಳೆ ಕೇಂದ್ರ ರಾಷ್ಟ್ರೀಯ ಯೋಜನೆ ಎಂಬುದಾಗಿ ಘೋಷಿಸದಿದ್ದರೆ ಆಗ ರಾಜ್ಯ ಸರ್ಕಾರ ಹಣ ನೀಡುತ್ತದೆಯೇ ಎಂಬುದರ ಬಗ್ಗೆ ಸ್ಪಷ್ಟತೆ ನೀಡಿಲ್ಲ. ಹೀಗಾಗಿ ಜಿಲ್ಲೆಯ, ಕಡೂರಿನರೈತರ ಪಾಲಿಗೆ ಶಾಶ್ವತ ನೀರಾವರಿಯ ಕನಸು ಕನ್ನಡಿಯೊಳಗಿನಗಂಟಾಗಿಯೇ ಉಳಿದಿದೆ ಎಂದರು. ಇಡೀ ಬಜೆಟ್‌ನಲ್ಲಿ ಜಿಲ್ಲೆಯ ಹೆಸರು ಎರಡು ಕಡೆ ಮಾತ್ರ ಪ್ರಸ್ತಾಪಗೊಂಡಿದೆ. ಅಡಕೆ ಬೆಳೆಯ ಹಳದಿ ರೋಗಕ್ಕೆ ಚಿಕ್ಕಮಗಳೂರು ಸೇರಿದಂತೆ ನಾಲ್ಕು ಜಿಲ್ಲೆಗಳಿಂದ 25 ಕೋಟಿ ರೂ. ನೀಡಲಾಗಿದೆ. ಕೆಮ್ಮಣ್ಣುಗುಂಡಿಯ ನಿರ್ವಹಣೆಯನ್ನು ಪ್ರವಾಸೋದ್ಯಮ ಇಲಾಖೆಗೆ ನೀಡಬೇಕಿತ್ತು ಎಂದಿದ್ದಾರೆ.
ಆಶಾದಾಯಕ-ಸಮತೋಲನದ ಬಜೆಟ್ ;
ಕಡೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್ ಆಶಾದಾಯಕ ಮತ್ತು ಸಮತೋಲನದಿಂದ ಕೂಡಿದೆ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಬೆಳ್ಳಿಪ್ರಕಾಶ್ ಪ್ರತಿಕ್ರಿಯಿಸಿದ್ದಾರೆ.
ದೂರವಾಣಿ ಮೂಲಕ ಮಾತನಾಡಿದ ಅವರು ಬಜೆಟ್ ನಲ್ಲಿ ಪ್ರಸ್ತಾಪಿಸಿರುವ ಅಂಶಗಳಲ್ಲಿ ಪ್ರತಿ ಜಿಲ್ಲೆಗೂ ಸಿಗುವ ಪಾಲು ನಮ್ಮ ಜಿಲ್ಲೆಗೂ ದೊರೆಯುತ್ತದೆ. ಅದರ ಬಗ್ಗೆ ವಿಶ್ಲೇಷಣೆ ಅಗತ್ಯವಿಲ್ಲ. ಏತ ನೀರಾವರಿಗೆ ಹಣ ಮೀಸಲಿಟ್ಟಿರುವುದು, ಜೊತೆಗೆ ಜಲಧಾರೆ ಯೋಜನೆಗೂ ಸಹ ಹಣ ಮೀಸಲಿಟ್ಟಿರುವುದು ಸ್ವಾಗತಾರ್ಹ. ಹಾಗೆಯೇ ಡಾ| ಡಿ.ಎಂ. ನಂಜುಂಡಪ್ಪ ವರದಿಯನ್ವಯ ಹಿಂದುಳಿದ ತಾಲೂಕುಗಳಿಗೆ ಮೂರು ಸಾವಿರ ಕೋಟಿ ರೂ. ಅನುದಾನ ನೀಡಿರುವುದರಿಂದ ನಮ್ಮ ತಾಲೂಕಿಗೂ ಹೆಚ್ಚಿನ ಅನುದಾನ ಬರುವ ನಿರೀಕ್ಷೆ ಇದೆ ಎಂದರು.
ನಮ್ಮ ಕಡೂರು ಭಾಗದ ರೈತರಿಗೆ ಅನುಕೂಲ ಮಾಡಿಕೊಡುವ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸುವಂತೆ ಕೋರಿ ಸಲ್ಲಿಸಿರುವ ಪ್ರಸ್ತಾವನೆ ಇನ್ವೆಸ್ಟ್‌ಮೆಂಟ್ ಅಪ್ರೂವಲ್ ಪಡೆಯುವ ಹಂತದಲ್ಲಿರುವುದನ್ನು ಬಜೆಟ್‌ನಲ್ಲಿ ತಿಳಿಸಿದ್ದಾರೆ. ಇದು ತಾಲೂಕಿನ ರೈತರಿಗೆ ಅತ್ಯಂತ ಅಗತ್ಯವಾದ ಕೆರೆಗಳನ್ನು ತುಂಬಿಸುವ ಯೋಜನೆಗೆ ವೇಗ ಸಿಗುವಸೂಚನೆಯಾಗಿದೆ. ತಾಲೂಕಿಗೆ ಶಾಶ್ವತ ನೀರಾವರಿ ಸೌಲಭ್ಯದ ದೃಷ್ಟಿಯಿಂದ ಇದು ಅತ್ಯಂತ ಮಹತ್ವಪೂರ್ಣ ಬೆಳವಣಿಗೆಯಾಗಿದೆ. ತಾಲೂಕಿನ ಜನತೆಯ ಪರವಾಗಿ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್ ಆಶಾದಾಯಕವಾಗಿದೆ. ರೈತರು, ಶ್ರಮಿಕರು, ಬಡವರ ಮತ್ತು ಹಿಂದುಳಿದ ವರ್ಗದ ಏಳಿಗೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡುಬಜೆಟ್ ಮಂಡಿಸಿದ್ದಾರೆ. ಕೃಷಿ, ನೀರಾವರಿ, ತೋಟಗಾರಿಕೆ ಸೇರಿದಂತೆ ಹಲವು ಕ್ರಿಯಾಯೋಜನೆಗಳನ್ನು ಯಶಸ್ವಿಯಾಗಿ ರೂಪಿಸಲಾಗಿದೆ. ಹಿಂದುಳಿದ ವರ್ಗದ ಸಮುದಾಯದ ಅಭಿವೃದ್ಧಿ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದು ಆರೋಗ್ಯ ಮತ್ತು ಜೀವರಕ್ಷಣೆಗೆ ಒತ್ತುನೀಡಿ ದೇಶದ ನಾಗರಿಕರಆರೋಗ್ಯದ ಹಿತ ಕಾಪಾಡುವ ಪೂರಕ ಬಜೆಟ್ ಆಗಿದೆ. ಮಕ್ಕಳು ಮತ್ತು ಮಹಿಳೆಯರ ರಕ್ಷಣೆಗೆ ಈ ಬಜೆಟ್‌ನಲ್ಲಿ ಸಾಕಷ್ಟು ಒತ್ತು ನೀಡಿರುವುದು ಸಾಗತಾರ್ಹ.ವೈದ್ಯಕೀಯ ಕ್ಷೇತ್ರದಲ್ಲಿ ಪ್ರಯೋಗಾಲಯಗಳಮತ್ತು ಆರೋಗ್ಯದ ರಕ್ಷಣೆಗಾಗಿ ಹಲವು ಕ್ರಿಯಾತ್ಮಾಕಅಂಶಗಳನ್ನು ಬಜೆಟ್‌ನಲ್ಲಿ ಸೇರಿಸಲಾಗಿದೆ. ಕೆರೆಗಳಅಭಿವೃದ್ದಿ ಮತ್ತು ಪುನಶ್ಚೇತನಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಒಂದು ಒಳ್ಳೆ ಉತ್ತಮ ದೂರದೃಷ್ಟಿ ಇಟ್ಟುಕೊಂಡು ಬಜೆಟ್ ರೂಪಿಸಲಾಗಿದೆ. -ಜಿ. ವೀರೇಶ್, ಗೌರವ ವನ್ಯಜೀವಿ ಪರಿಪಾಲಕ
ಕೋವಿಡ್ ಸಂಕಷ್ಟದ ನಡುವೆಯೂ ಯಾವುದೇ ಹೊಸ ತೆರಿಗೆ ಜನರ ಮೇಲೆ ಹೇರದೆ ಉತ್ತಮವಾದ ಬಜೆಟ್ ಅನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ್ದಾರೆ. ಮಹಿಳೆಯರಿಗೆ ವಿಶೇಷ ಯೋಜನೆ ಪ್ರಕಟಿಸಿದ್ದಾರೆ. ರೈತರಿಗೆ ವಿಶೇಷ ಯೋಜನೆ ಪ್ರಕಟಿಸಿರುವುದು, ಕೃಷಿ ವಲಯಕ್ಕೆ ಆದ್ಯತೆ ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಎಲ್ಲಾ ವರ್ಗವನ್ನು ಸಮಾನವಾಗಿ ಕಂಡು ಎಲ್ಲರ ಬೆಳವಣಿಗೆಗೆ ಬಜೆಟ್ ಪೂರಕವಾಗಿದೆ. –ಶೃಂಗೇರಿ ಸುಬ್ಬಣ್ಣ ,ಪಪಂ ಸದಸ್ಯ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್‌ನಿಂದ ಜಿಲ್ಲೆಗೆ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲೆಯ ಜನತೆಯ ನಿರೀಕ್ಷೆ ಹುಸಿಯಾಗಿದೆ. ಕಾಫಿ ಬೆಳೆಗಾರರ ಸಮಸ್ಯೆಗೆ ಸರ್ಕಾರ ಸ್ಪಂದಿಸಿಲ್ಲ. ನೀರಾವರಿ ಯೋಜನೆಗೆ ಆದ್ಯತೆನೀಡಲ್ಲ. ಅತಿವೃಷ್ಟಿ ಅನಾವೃಷ್ಟಿ, ಅಕಾಲಿಕ ಮಳೆಯಿಂದ ಉಂಟಾದ ಹಾನಿಗೆಪರಿಹಾರವಿಲ್ಲ, 10ಎಚ್.ಪಿ. ಪಂಪ್‌ಸೆಟ್ ಹೊಂದಿದ್ದ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಿಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿಸಿಲ್ಲ. ಒಟ್ಟಿನಲ್ಲಿ ಇದೊಂದು ನಿರಾಶದಾಯಕ ಬಜೆಟ್. – ರಂಜನ್ ಅಜಿತ್‌ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ
ಜಿಲ್ಲೆಯ ಜನತೆಯ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ. ಅಕಾಲಿಕ ಮಳೆ, ಅತಿವೃಷ್ಟಿ, ಅನಾವೃಷ್ಟಿ ಹಾನಿಗೆ ಪರಿಹಾರ ಸಿಕ್ಕಿಲ್ಲ, ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಅಸಂಘಟಿತ ಕಾರ್ಮಿಕರಿಗೆ ನೆರವು ಸಿಕ್ಕಿಲ್ಲ. ಹಳೆಯ ಯೋಜನೆಗಳನ್ನೇಮುಂದುವರಿಸಲಾಗಿದೆ. ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ. –ಡಾ| ಅಂಶುಮಂತ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Elephant: ಕಾಫಿನಾಡಿನಲ್ಲಿ ಕಾಡಾನೆ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.