ಬಿಇಒ ವಿರುದ್ಧ ತಾಪಂ ಸದಸ್ಯರ ಆಕ್ರೋಶ
•ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳ ಕಿಡಿ •ಜನಪ್ರತಿನಿಧಿಗಳಿಗೆ ಅಪಮಾನ ಆರೋಪ
Team Udayavani, Jul 9, 2019, 10:24 AM IST
ಚಿಕ್ಕಮಗಳೂರು: ಶಾಸಕ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ತಾಪಂ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಚಿಕ್ಕಮಗಳೂರು: ತಾಪಂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ಸದಸ್ಯರು ಒಕ್ಕೊರಲಿನಿಂದ ಆಕ್ಷೇಪ ವ್ಯಕ್ತಪಡಿಸಿದರು.
ಶಾಸಕ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ತಾಪಂ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಜಿಪಂ ಸದಸ್ಯ ಬೆಳವಾಡಿ ರವೀಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಡಿದ ಲೋಪಗಳನ್ನು ಜಿಪಂ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ, ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲು ನಿರ್ಣಯ ಕೈಗೊಳ್ಳಲಾಗಿತ್ತು ಎಂದರು.
ಸಭೆಯಲ್ಲಿ ನಿರ್ಣಯ ಕೈಗೊಂಡ ನಂತರ ಬಿಇಒ ಕೆಲವು ಶಿಕ್ಷಕರ ಮೂಲಕ ಜಿಪಂ ಸಿಇಒ ಅವರಿಗೆ ಮನವಿ ಕೊಡಿಸಿದ್ದಾರೆ. ಆ ಮನವಿಯಲ್ಲಿ ಜಿಪಂ ಸದಸ್ಯರು ಪೂರ್ವಾಗ್ರಹಪೀಡಿತರಾಗಿ ಉದ್ದೇಶಪೂರ್ವಕವಾಗಿ ಬಿಇಒ ವಿರುದ್ಧ ಆರೋಪಿಸಿದ್ದಾರೆ ಎಂದು ಹೇಳಲಾಗಿದೆ. ಆ ಮೂಲಕ ಜನಪ್ರತಿನಿಧಿಗಳಿಗೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.
ಇದಕ್ಕೆ ಧ್ವನಿಗೂಡಿಸಿದ ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಿಂತಾ ಅನಿಲ್ಕುಮಾರ್, ಬಿಇಒ ಹಲವು ಲೋಪಗಳನ್ನು ಮಾಡಿದ್ದಾರೆ. ಯಾವುದೇ ಸಭೆಗಳಿಗೂ ಹಾಜರಾಗುವುದಿಲ್ಲ. ಸಭೆ ಇದ್ದ ದಿನಾಂಕದಂದು ಬೇಕೆಂದೇ ರಜೆ ಹಾಕಿ ಹೋಗುತ್ತಾರೆ ಎಂದು ಹೇಳಿದರು.
ತಾಪಂ ಅಧ್ಯಕ್ಷ ನೆಟ್ಟೇಕೆರೆಹಳ್ಳಿ ಜಯಣ್ಣ ಮಾತನಾಡಿ, ಈಗ ಬಿಇಒ ರಜೆ ಮೇಲೆ ಹೋಗಿದ್ದಾರೆ. ಆದರೆ, ರಜೆ ಚೀಟಿಯಲ್ಲಿ ದಿನಾಂಕ ನಮೂದಿಸಿಲ್ಲ. ಇದೇ ರೀತಿ ಎಲ್ಲ ಶಾಲೆಗಳಲ್ಲೂ ನಡೆಯುತ್ತಿದೆ. ಶಾಲಾ ಶಿಕ್ಷಕರು ರಜೆ ಚೀಟಿ ಬರೆದಿಟ್ಟಿರುತ್ತಾರೆ. ಅದರಲ್ಲಿ ದಿನಾಂಕ ಹಾಕಿರುವುದಿಲ್ಲ. ಯಾರಾದರೂ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದರೆ ರಜೆ ಹಾಕಿದ್ದಾರೆ ಎನ್ನಲಾಗುತ್ತದೆ. ಯಾರೂ ಹೋಗದಿದ್ದಲ್ಲಿ ರಜೆ ಚೀಟಿ ಹರಿದು ಹಾಕಲಾಗುತ್ತದೆ ಎಂದು ತಿಳಿಸಿದರು.
ಜಿಪಂ ಸದಸ್ಯೆ ಕವಿತಾ ಲಿಂಗರಾಜು ಮಾತನಾಡಿ, ಸಿದ್ದಾಪುರ ಶಾಲೆಯಲ್ಲಿ 27 ಜನ ವಿದ್ಯಾರ್ಥಿಗಳು ಇದ್ದಾರೆ. ಆದರೆ, ಅಲ್ಲಿ ಕೇವಲ ಒಬ್ಬರು ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದರೂ ಖಾಲಿ ಹುದ್ದೆ ತೋರಿಸಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಭಾರ ಬಿಇಒ, ಸಿದ್ದಾಪುರ ಶಾಲೆಗೆ ಓರ್ವ ಶಿಕ್ಷಕರನ್ನು ನೇಮಿಸಲಾಗಿತ್ತು. ಆದರೆ, ಅವರು ಕೆಎಟಿಯಲ್ಲಿ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತೆರವಾದ ನಂತರ ಅಲ್ಲಿಗೆ ಶಿಕ್ಷಕರನ್ನು ನೇಮಿಸಲಾಗುವುದು ಎಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಸಿ.ಟಿ.ರವಿ, ತಡೆಯಾಜ್ಞೆ ಇದ್ದರೇನಂತೆ, ಶಾಲೆಯಲ್ಲಿ ಶಿಕ್ಷಕರ ಹುದ್ದೆ ಖಾಲಿ ಇರುವುದನ್ನು ತೋರಿಸಬೇಕಿತ್ತು. ಆಗ ಯಾರಾದರೂ ಶಿಕ್ಷಕರು ಅಲ್ಲಿಗೆ ಹೋಗುತ್ತಿದ್ದರು. ಮಲೆನಾಡು ಪ್ರದೇಶದ ಮಕ್ಕಳು ಓದುವುದು ಬೇಡವೇ ಎಂದು ಪ್ರಶ್ನಿಸಿದರು.
ಬಯಲು ಪ್ರದೇಶಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ಹೆಚ್ಚಿನ ಶಿಕ್ಷಕರು ಇದ್ದಾರೆ. ಆದರೆ ಮಲೆನಾಡು ಪ್ರದೇಶಕ್ಕೆ ಶಿಕ್ಷಕರನ್ನು ನಿಯೋಜಿಸುತ್ತಿಲ್ಲ. ಈ ರೀತಿ ಆದರೆ ಹೇಗೆ ಎಂದು ಜಿಪಂ ಸದಸ್ಯರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಬಿಇಒ, ವಾರದೊಳಗಾಗಿ ಸಿದ್ದಾಪುರ ಶಾಲೆಗೆ ಶಿಕ್ಷಕರನ್ನು ಹಾಕಲಾಗುವುದು ಎಂದರು. ಆಗ, ಜಿಪಂ ಸದಸ್ಯೆ ಕವಿತಾ ಲಿಂಗರಾಜು ಮಾತನಾಡಿ, ಒಂದು ವಾರದೊಳಗೆ ಶಿಕ್ಷಕರನ್ನು ನಿಯೋಜಿಸದಿದ್ದಲ್ಲಿ ಶಾಲಾ ಮಕ್ಕಳೊಂದಿಗೆ ಬಿಇಒ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಶಾಸಕ ಸಿ.ಟಿ.ರವಿ ಮಾತನಾಡಿ, ತಾಲೂಕಿನಲ್ಲಿರುವ ಒಟ್ಟು ಶಾಲೆಗಳು, ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಕುರಿತು ಪರಿಶೀಲಿಸಿ, ಹೆಚ್ಚುವರಿ ಶಿಕ್ಷಕರನ್ನು ಅಗತ್ಯವಿರುವ ಶಾಲೆಗಳಿಗೆ ನಿಯೋಜಿಸಿ, 15 ದಿನದಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದರು.
ಪಾದಮನೆ ಹಾಗೂ ನರಸೀಪುರ ಗ್ರಾಮ ಗಳಲ್ಲಿ ನ್ಯಾಯಬೆಲೆ ಅಂಗಡಿ ತೆರೆಯುವ ಕುರಿತು ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕರು, ಅಲ್ಲಿ ನೆಟ್ವರ್ಕ್ ಇಲ್ಲದಿರುವು ದರಿಂದ ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶವಿಲ್ಲವೆಂಬ ಉತ್ತರ ನೀಡಿದರು.
ತಾಲೂಕಿನಲ್ಲಿ 33 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಆಗ ಮಾತನಾಡಿದ ಶಾಸಕ ಸಿ.ಟಿ.ರವಿ, ಟ್ಯಾಂಕರ್‌ಗಳನ್ನು ತೂಕ ಮಾಡಿ ಕಳುಹಿಸಿದ ನಂತರ ಮಾರ್ಗಮಧ್ಯೆ ಖಾಸಗಿಯವರಿಗೆ ನೀರು ಮಾರಿ, ಉಳಿದ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು. ಮೆಸ್ಕಾಂನವರು ಮಲೆನಾಡು ಪ್ರದೇಶಗಳಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ದೂರು ಸಲ್ಲಿಸಿದರೂ ಪ್ರತಿಕ್ರಿಯಿಸುವುದಿಲ್ಲ ಎಂಬ ಆರೋಪ ಸದಸ್ಯರಿಂದ ಕೇಳಿ ಬಂದಿತು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸಿ.ಟಿ.ರವಿ, ಉತ್ತಮ ಕೆಲಸ ಮಾಡಿದವರಿಗೆ ರಾಷ್ಟ್ರೀಯ ಹಬ್ಬಗಳಲ್ಲಿ ಸನ್ಮಾನಿಸಲಾಗುತ್ತದೆ. ಅದೇ ರೀತಿ ಕೆಲಸ ಮಾಡದವರನ್ನೂ ರಾಷ್ಟ್ರೀಯ ಹಬ್ಬಗಳಿಗೆ ಕರೆಸಿ ಸನ್ಮಾನ ಮಾಡಬೇಕು. ಆಗ ಅವರಿಗೆ ಬುದ್ದಿ ಬರುತ್ತದೆ ಎಂದು ಹೇಳಿದರು.
ಸ್ಮಶಾನವಿಲ್ಲದ ಗ್ರಾಮಗಳಿಗೆ ಕೂಡಲೆ ಸ್ಮಶಾನಕ್ಕೆ ಜಾಗ ಗುರುತಿಸಿ. ಒಂದು ವೇಳೆ ಸರ್ಕಾರಿ ಜಾಗವಿಲ್ಲದಿದ್ದರೆ ಖಾಸಗಿ ಜಮೀನು ಖರೀದಿಸಿ ಸ್ಮಶಾನಕ್ಕೆ ನೀಡಬೇಕೆಂದು ತಹಶೀಲ್ದಾರರಿಗೆ ಸೂಚಿಸಿದರು.
ಈ ಕುರಿತು ಡಿಸಿಗೆ ಪ್ರಸ್ತಾವನೆ ಸಲ್ಲಿಸಿದರೆ ತಾವು ಅವರೊಂದಿಗೆ ಚರ್ಚಿಸಿ ಕೆಲಸ ಮಾಡಿಸಿಕೊಡುವುದಾಗಿ ಶಾಸಕರು ಹೇಳಿದರು. ಆರೋಗ್ಯ ಇಲಾಖೆ, ಬಿಇಒ ಹಾಗೂ ತಾಪಂ ಇಒಗಳು ಜಂಟಿಯಾಗಿ ತಾಲೂಕಿನಲ್ಲಿ ಸಾಂಕ್ರಾಮಿಕ ರೋಗಗಳ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಶಾಸಕ ಸಿ.ಟಿ.ರವಿ ಸೂಚಿಸಿದರು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ದೀಪಾ ನಾಗೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಭವ್ಯಾ, ಇಒ ತಾರಾನಾಥ್, ತಹಶೀಲ್ದಾರ್ ನಂದಕುಮಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು
Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.