ಪ್ರಾದೇಶಿಕ ಪಕ್ಷದತ್ತ ಜನರ ವಿಶ್ವಾಸ
Team Udayavani, Apr 6, 2018, 12:09 PM IST
ಶಿಕಾರಿಪುರ: ರಾಷ್ಟ್ರೀಯ ಪಕ್ಷಗಳಿಂದ ಬಡವರಿಗೆ, ರೈತರಿಗೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂಬ ಅಸಮಾಧಾನದಿಂದ ರಾಜ್ಯದ ಜನತೆ ಬದಲಾವಣೆಯನ್ನು ಅಪೇಕ್ಷೆ ಪಡುತ್ತಿದ್ದು ಪ್ರಾದೇಶಿಕ ಪಕ್ಷದ ಬಗ್ಗೆ ಹೆಚ್ಚಿನ ವಿಶ್ವಾಸವನ್ನು ಹೊಂದಿದ್ದಾರೆ ಎಂದು ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ತಿಳಿಸಿದರು.
ಗುರುವಾರ ಪಟ್ಟಣದ ಸಂತೆ ಮೈದಾನದಲ್ಲಿ ನಡೆದ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಾದ್ಯಂತ ರೈತರು, ಕೂಲಿ ಕಾರ್ಮಿಕರು, ಬಡಜನತೆ ಬರಗಾಲದಿಂದ ತತ್ತರಿಸಿದಾಗ ಬಂಗಾರಪ್ಪನವರು ಮನೆಮನೆಗೆ ಭತ್ತ, ಅಕ್ಕಿ ಉಚಿತವಾಗಿ ತಲುಪಿಸಿದ್ದಾರೆ. ಇದೀಗ ಬಂಗಾರಪ್ಪನವರ ಋಣ ತೀರಿಸಲು ಈ ಬಾರಿ ಜನತಾದಳದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಬರಗಾಲದಿಂದ ಕಂಗೆಟ್ಟಿದ್ದ ತಾಲೂಕಿಗೆ ಶಾಶ್ವತ ನೀರಾವರಿಗೆ ಆಗ್ರಹಿಸಿ ಹಮ್ಮಿಕೊಳ್ಳಲಾದ ಪಾದಯಾತ್ರೆ ಬಸ್ ನಿಲ್ದಾಣಕ್ಕೆ ಧಾವಿಸಿದಾಗ ನೀರು ನೀಡಿ ಪ್ರೋತ್ಸಾಹಿಸುವುದನ್ನು ಬಿಟ್ಟು ಬಿಜೆಪಿಯ ಕೆಲವರು ಹೆದರಿಸುವ ಪ್ರಯತ್ನ ಮಾಡಿದ್ದು ಹೆದರಿಕೆಗೆ ಬೆದರುವ ಪ್ರಶ್ನೆ ಇಲ್ಲ ಎಂದ ಅವರು ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾದ ಅವಧಿಯಲ್ಲಿ ಶಾಶ್ವತ ನೀರಾವರಿ ಬಗ್ಗೆ ಯೋಚಿಸದೆ ಇದೀಗ ಕೇಂದ್ರ ಸಚಿವರ ಮುಂದೆ ಅರ್ಜಿ ಹಿಡಿದು ನಿಲ್ಲುವ ಸ್ಥಿತಿ ಬಿಎಸ್‌ವೈಗೆ ಬಂದಿದೆ ಎಂದು ವ್ಯಂಗ್ಯವಾಡಿದರು. ರಾಜ್ಯದಲ್ಲಿಯೇ ಸೊರಬ ತಾಲೂಕಿನ ಸಾಗುವಳಿ ಜಮೀನಿಗೆ ಅತೀ ಹೆಚ್ಚು ಹಕ್ಕುಪತ್ರ ನೀಡಿದ ಹಿರಿಮೆಯನ್ನು ಹೊಂದಿದ್ದು ಶಿಕಾರಿಪುರದಲ್ಲಿನ ಸಾಗುವಳಿದಾರರಿಗೆ ದೊರೆಯಲಿಲ್ಲ ಎಂದರೆ ಶಿಕಾರಿಪುರ ಕ್ಷೇತ್ರದ ಶಾಸಕರ ಬದಲಾವಣೆ ಅನಿವಾರ್ಯ ಎಂಬುದು ಸಾಬೀತುಪಡಿಸುತ್ತದೆ ಎಂದರು.
ಜೆಡಿಎಸ್ ಅಧಿಕಾರಗಳಿಸಿದಲ್ಲಿ ಶಿಕಾರಿಪುರ ಸಹಿತ ಸೊರಬ, ತೀರ್ಥಹಳ್ಳಿ, ಶಿವಮೊಗ್ಗ ಗ್ರಾಮಾಂತರ ಸಹಿತ ಜಿಲ್ಲೆಯ ವಿವಿಧ ತಾಲೂಕುಗಳ ನೀರಾವರಿ ಯೋಜನೆ ಜಾರಿಗೊಳಿಸಿ 24 ದಿನದಲ್ಲಿ ಮಂಜೂರಾತಿಗೊಳಿಸಿ ಕಾಮಗಾರಿ ಆರಂಭಕ್ಕೆ 2 ಸಾವಿರ ಕೋಟಿ ಅನುದಾನ ನೀಡಲು ಕುಮಾರಸ್ವಾಮಿ ಸಮ್ಮತಿ ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ ಬಾರಿ 3 ಕ್ಷೇತ್ರಗಳನ್ನು ಜಯಿಸಿದ್ದು ಈ ಬಾರಿ ಕನಿಷ್ಠ 6 ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ ಎಂದರು.
ವಿಶ್ವ, ಆರಾಧನಾ, ಉಚಿತ ವಿದ್ಯುತ್ ಮತ್ತಿತರ ಹಲವು ಶಾಶ್ವತ ಕಾರ್ಯಕ್ರಮಗಳನ್ನು ನೀಡಿದ ಬಂಗಾರಪ್ಪ ಕಡೆಯ ಚುನಾವಣೆಯಲ್ಲಿ ಶಿಕಾರಿಪುರದಿಂದ ಪರಾಜಿತರಾಗಿದ್ದು ಇದೀಗ ಜೆಡಿಎಸ್ ಅಭ್ಯರ್ಥಿ ಬಳಿಗಾರರನ್ನು ಗೆಲ್ಲಿಸಿದಲ್ಲಿ ಅದರ ಲೆಕ್ಕ ಚುಕ್ತಾ ಆಗುತ್ತದೆ ಎಂದರು.
ಶಾಸಕಿ ಶಾರದಾ ಪೂರ್ಯನಾಯ್ಕ ಮಾತನಾಡಿ, ರಾಜ್ಯ ಹಾಗೂ ಕೇಂದ್ರದ ವಿವಿಧ ಭಾಗ್ಯದ ಬಗ್ಗೆ ಜನತೆ ನಿರಾಸಕ್ತರಾಗಿದ್ದು ರೈತರ ಬದುಕು ಪುನಶ್ಚೇತನವಾಗಬೇಕಾಗಿದೆ. ಈ ದಿಸೆಯಲ್ಲಿ ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಅಗತ್ಯವಿದ್ದು ಕುಮಾರಸ್ವಾಮಿ ಅವರಿಂದ ಮಾತ್ರ ನ್ಯಾಯ ದೊರಕಿಸಲು ಸಾದ್ಯ ಎಂದು ತಿಳಿಸಿದರು.
ಜೆಡಿಎಸ್ ಅಭ್ಯರ್ಥಿ ಎಚ್.ಟಿ. ಬಳಿಗಾರ್ ಮಾತನಾಡಿ, 40 ವರ್ಷದಿಂದ ತಾಲೂಕನ್ನು ಆಳುತ್ತಿರುವ ಯಡಿಯೂರಪ್ಪನವರು ಅಭಿವೃದ್ಧಿಯ ಹರಿಕಾರ ಎಂದು ಸ್ವಯಂಘೋಷಿಸಿಕೊಂಡು ರಸ್ತೆ, ಚರಂಡಿ, ಕಟ್ಟಡ ಮಾತ್ರ ಅಭಿವೃದ್ಧಿ ಎಂಬ ಭ್ರಮೆಯಲ್ಲಿದ್ದಾರೆ. ಜನಸಾಮಾನ್ಯರಿಗೆ ಉದ್ಯೋಗ, ರೈತರಿಗೆ ನೀರಾವರಿ ಮತ್ತಿತರ ಶಾಶ್ವತ ಕಾರ್ಯವನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದಿದ್ದಾರೆ ಎಂದು ಆರೋಪಿಸಿದರು.
ಚುನಾವಣೆಯಲ್ಲಿ ತಾಳಗುಂದ, ಉಡುಗಣಿ ಹೋಬಳಿಯನ್ನು ಎರಡು ಕಣ್ಣು ಎಂದು ನಂಬಿಸಿ ಮತ ಪಡೆದು ನಂತರದಲ್ಲಿ ಚೊಂಬು ನೀಡದ ಯಡಿಯೂರಪ್ಪನವರು ಗೌಡನಕೆರೆ ಮೂಲಕ ತುಂಗಭದ್ರಾ ನೀರನ್ನು 5 ವರ್ಷದಲ್ಲಿ ತಂದ ಶಾಸಕಿ ಶಾರದಾ ಅವರಿಂದ ಸಾಧ್ಯವಾದ ಯೋಜನೆ 40 ವರ್ಷದಿಂದ ಯಡಿಯೂರಪ್ಪನವರಿಗೇಕೆ ಸಾದ್ಯವಾಗಿಲ್ಲ ಎಂದು ಪ್ರಶ್ನಿಸಿ ಈ ಬಾರಿಯ ಬರಗಾಲದ ಭೀಕರತೆಗೆ ಮಾರವಳ್ಳಿ, ಸಂಕ್ಲಾಪುರ ಮತ್ತಿತರ ಗ್ರಾಮದ ನೂರಾರು ಎಕರೆ ಅಡಿಕೆ ತೋಟವನ್ನು ರೈತರು ಕತ್ತರಿಸಿ ಹಾಕಿದ್ದಾರೆ ಎಂದರು.
ನೀರಿಗಾಗಿ ಹಮ್ಮಿಕೊಂಡಿದ್ದ ಪಾದಯಾತ್ರೆ ಯಶಸ್ಸನ್ನು ಸಹಿಸದೆ ಗೂಂಡಾಗಳನ್ನು ಕಳುಹಿಸಿ ಹಲ್ಲೆಗೆ ಯತ್ನಿಸಲಾಯಿತು ಎಂದ ಅವರು ಮುಖ್ಯಮಂತ್ರಿಯಾಗಿ ಲಕ್ಷ ಕೋಟಿ ಬಜೆಟ್ ಮಂಡಿಸಿದಾಗ ನೀರಾವರಿ ಯೋಜನೆ ಬಗ್ಗೆ ಚಿಂತಿಸದೆ ಇದೀಗ ಕಾಳಜಿ ಬಂದಿದೆ ಎಂದು ಟೀಕಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ನಿರಂಜನ್, ತಾಲೂಕು ಅಧ್ಯಕ್ಷ ನಾಗರಾಜಗೌಡ ಬಿಳಕಿ, ಮುಖಂಡ ಶ್ರೀಕಾಂತ್, ನಾಗರಾಜ ಕಂಕಾರಿ, ಮಲ್ಲೇಶಪ್ಪ, ಪ್ರಭಾವತಿ, ಮಕೂಲ್ ಸಾಬ್, ರಾಘವೇಂದ್ರ, ಬಸವರಾಜ್ ಇ. ಎಚ್.ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.