ಸಂಸ್ಕಾರ ದೊರೆತರೆ ಎಲ್ಲರೂ ಯೋಗ್ಯರೇ
ಭಗವಂತನ ಚಿಂತನೆಯಲ್ಲಿ ನಡೆದಾಗ ಬದುಕಿನಲ್ಲಿ ಶ್ರೇಯಸ್ಸು ಕಾಣಲು ಸಾಧ್ಯ: ರಂಭಾಪುರಿ ಶ್ರೀ
Team Udayavani, Jul 15, 2019, 1:35 PM IST
ಚಿಕ್ಕಮಗಳೂರು: ಸಮುದಾಯ ಭವನದಲ್ಲಿ ನಡೆದ ಶ್ರೀದೇವಿ ಗುರುಕುಲದ ದ್ವಿತೀಯ ವಾರ್ಷಿಕೋತ್ಸವ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.
ಚಿಕ್ಕಮಗಳೂರು: ಉನ್ನತ ಗುರಿ ಮತ್ತು ಧ್ಯೇಯ ವ್ಯಕ್ತಿತ್ವ ವಿಕಾಸಕ್ಕೆ ದಾರಿ ದೀಪ. ಹುಟ್ಟಿನಿಂದ ಯಾರೂ ಅಯೋಗ್ಯರಲ್ಲ. ಸೂಕ್ತ ಸಂಸ್ಕಾರ ದೊರೆತರೆ ಎಲ್ಲರೂ ಯೋಗ್ಯರಾಗಬಲ್ಲರು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಜರುಗಿದ ಶ್ರೀ ದೇವಿ ಗುರುಕುಲದ ದ್ವಿತೀಯ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಮನುಷ್ಯ ಜೀವನದಲ್ಲಿ ಕಲಿಕೆ, ಗಳಿಕೆ ಮತ್ತು ಭಗವಂತನ ಚಿಂತನೆಯಲ್ಲಿ ನಡೆದಾಗ ಬದುಕಿನಲ್ಲಿ ಶ್ರೇಯಸ್ಸನ್ನು ಕಾಣಲು ಸಾಧ್ಯ. ಜಗದ ಒಳಿತಿಗೆ ಹಿಂದಿನ ಇತಿಹಾಸದ ಅರಿವು ಮುಖ್ಯ. ಬೆಳೆಯುತ್ತಿರುವ ಯುವ ಜನಾಂಗದಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯ ಅರಿವು ಮೂಡಿಸುವ ಅವಶ್ಯಕತೆಯಿದೆ. ಧರ್ಮಾಚರಣೆ ಮರೆತರೆ ಅಪಾಯ ತಪ್ಪಿದ್ದಲ್ಲ. ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಮನುಷ್ಯನಲ್ಲಿ ಸದ್ಭಾವನೆಗಳು ಬೆಳೆದು ಬರಬೇಕಾಗಿದೆ. ಈ ದಿಶೆಯಲ್ಲಿ ಶ್ರೀ ದೇವಿ ಗುರುಕುಲ ಅತ್ಯುತ್ತಮ ಕಾರ್ಯ ಕೈಗೊಂಡು ಜನ ಸಮುದಾಯದಲ್ಲಿ ಧಾರ್ಮಿಕ ಪ್ರಜ್ಞೆ ಮತ್ತು ಅಧ್ಯಾತ್ಮದ ಮೌಲ್ಯಗಳನ್ನು ಸಂರಕ್ಷಿಸಿಕೊಂಡು ಬರುತ್ತಿದೆ. ವಿದ್ವಾನ್ ಡಾ.ಜಿ.ದಯಾನಂದ ಮೂರ್ತಿ ಅವರು ಗುರುಕುಲ ಸಂಸ್ಥಾಪಕರಾಗಿ ಉತ್ತಮ ಕಾರ್ಯ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಗೌರಮ್ಮ ಬಸವೇಗೌಡ ಮಾತನಾಡಿ, ಅರಿವಿನ ಆಚಾರ ಬದುಕಿನ ಉನ್ನತಿಗೆ ಸೋಪಾನ. ಶುದ್ಧ ಬುದ್ಧಿ ಸಂಪತ್ತಿನ ಆಗರ. ಸ್ವಾರ್ಥ ರಹಿತ ಬದುಕಿಗೆ ಬೆಲೆ ಬಲವಿದೆ. ಶ್ರೀ ದೇವಿ ಗುರುಕುಲ ಭಾರತೀಯರ ಉತ್ಕೃಷ್ಟ ಸಂಸ್ಕೃತಿಯನ್ನು ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಹುಲಿಕೆರೆ ದೊಡ್ಡಮಠದ ವಿರೂಪಾಕ್ಷ ಶಿವಾಚಾರ್ಯರು, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯರು, ಶಂಕರ ದೇವರ ಮಠದ ಚಂದ್ರಶೇಖರ ಶಿವಾಚಾರ್ಯರು, ನುಗ್ಗೇಹಳ್ಳಿ ಡಾ. ಮಹೇಶ್ವರ ಶಿವಾಚಾರ್ಯರು, ಬೇರುಗಂಡಿ ರೇಣುಕ ಮಹಾಂತ ಶಿವಾಚಾರ್ಯರು ಪಾಲ್ಗೊಂಡಿದ್ದರು. ತಾವರೆಕೆರೆ ಶಿಲಾಮಠದ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯರು ವೇದ ಮಂತ್ರಗಳ ವೈಶಿಷ್ಠ ್ಯತೆ ಬಗ್ಗೆ ಉಪನ್ಯಾಸ ನೀಡಿದರು.
ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಮಹೇಶ್ವರಗೌಡ, ತಾ.ವೀರಶೈವ ಸಮಾಜದ ಅಧ್ಯಕ್ಷ ದಿವಾಕರ, ಪಂಚಾಕ್ಷರಯ್ಯ, ಕಲ್ಲೇಗೌಡ, ಕ.ರಾ.ಅರ್ಚಕರ ಸಂಘದ ಅಧ್ಯಕ್ಷ ಎಚ್.ವಿ. ನಾಗರಾಜ ಶಾಸ್ತ್ರಿ, ಕೆ.ಆರ್.ಷಡಕ್ಷರಿ ಶಾಸ್ತ್ರಿ, ಹೊನ್ನಪ್ಪ ಶಾಸ್ತ್ರಿ ಇದ್ದರು. ವೇದ ಮತ್ತು ಜ್ಯೋತಿಷ್ಯದಲ್ಲಿ ಉತ್ತಮ ಸಾಧನೆಗೈದ ಸುಮಾರು 19 ಜನ ಪಂಡಿತರಿಗೆ ‘ಪುರೋಹಿತ ಕೇಸರಿ’ ಮತ್ತು ‘ಜ್ಯೋತಿಷ್ಯ ಕೇಸರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಲವಾರು ಗಣ್ಯರು ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರು ರಕ್ಷೆ ನೀಡಿ ಆಶೀರ್ವದಿಸಿದರು. ಪ್ರಾಸ್ತಾವಿಕ ನುಡಿ ಸೇವೆಯನ್ನು ಡಾ. ಜಿ. ದಯಾನಂದ ಮೂರ್ತಿ ಶಾಸ್ತ್ರಿಗಳು ಸಲ್ಲಿಸಿದರು. ದೇವಿ ಗುರುಕುಲ ಮಹಾಪೋಷಕ ಪ್ರಭುಲಿಂಗ ಶಾಸ್ತ್ರಿಗಳು ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಶಿವಶಂಕರ ಶಾಸ್ತ್ರಿಯವರಿಂದ ಸಂಗೀತ ಸೇವೆ ನಡೆಯಿತು. ನಂದಿನಿ ಸ್ವಾಗತಿಸಿದರು. ಭಾಗ್ಯಮ್ಮ ನಿರೂಪಿಸಿದರು. ಸುಧಾ ವರದಿ ವಾಚಿಸಿದರು. ಸುಮಿತ್ರಾ ಶಾಸ್ತ್ರಿ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.