15 ದಿನದಲ್ಲಿ ಭೂಕುಸಿತ ವರದಿ ಸಲ್ಲಿಕೆ
ವಿಜ್ಞಾನಿಗಳಿಂದ ಭೂ ಕುಸಿತದ 42 ಸ್ಥಳ ಪರಿಶೀಲನೆ•ಅನೇಕ ಹಳ್ಳಿಗಳಲ್ಲಿ ಜನವಸತಿ ಅಸಾಧ್ಯ
Team Udayavani, Aug 31, 2019, 11:46 AM IST
ಚಿಕ್ಕಮಗಳೂರು: ಭೂ ವಿಜ್ಞಾನಿಗಳು ಜಿಲ್ಲೆಯಲ್ಲಿ ಗುಡ್ಡ ಕುಸಿತ ಉಂಟಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಹಾಮಳೆಯಿಂದ ಭೂ ಕುಸಿತ ಉಂಟಾದ 42 ಸ್ಥಳಗಳಲ್ಲಿ ಭೂ ವಿಜ್ಞಾನಿಗಳು ಪರಿಶೀಲನೆ ನಡೆಸಿದ್ದು, ಕುಸಿತಕ್ಕೆ ಕಾರಣವಾದ ಅಂಶಗಳನ್ನೊಳಗೊಂಡ ಸಂಪೂರ್ಣ ವರದಿಯನ್ನು 15 ದಿನದಲ್ಲಿ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ.
ಭೂ ವಿಜ್ಞಾನಿಗಳಾದ ಕಪಿಲ್ಸಿಂಗ್ ಮತ್ತು ಕಮಲ್ಕುಮಾರ್ ಅವರ ಪರಿಶೀಲನೆಯಂತೆ, ಗುಡ್ಡ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಭೂಮಿ ಅಗೆದಿರುವ ಕಡೆ ಹಾಗೂ ಕಟ್ಟಡಗಳನ್ನು ನಿರ್ಮಿಸಿರುವ ಸ್ಥಳಗಳಲ್ಲಿ ಮಾತ್ರ ಶೇ.90ರಷ್ಟು ಭೂಕುಸಿತ ಉಂಟಾಗಿದೆ. ಶೇ.10ರಷ್ಟು ಕುಸಿತ ಸಹಜವಾಗಿ ಬೆಟ್ಟದ ತುದಿ ಹಾಗೂ ಹಸಿರು ಒತ್ತಾಗಿರುವ ಪ್ರದೇಶಗಳಲ್ಲಿ ಉಂಟಾಗಿದೆ ಎನ್ನಲಾಗಿದೆ.
ಮೂಡಿಗೆರೆ ತಾಲೂಕಿನಲ್ಲಿ ಅತೀ ಹೆಚ್ಚು ಭೂ ಕುಸಿತವುಂಟಾಗಿದೆ. ಕುಸಿತವಾಗಿರುವ ಕಡೆ ಜೇಡಿ ಮಣ್ಣಿನಿಂದ ಕೂಡಿದ ಭೂ ರಚನೆ ಇದ್ದು, ಒಂದೇ ದಿನದಲ್ಲಿ 18 ರಿಂದ 20 ಇಂಚು ಮಳೆ ಸತತವಾಗಿ ಸುರಿದ ಕಾರಣ ಹಾಗೂ ನೀರಿನ ಹರಿವಿಗೆ ಪ್ರಕೃತಿಯೇ ನಿರ್ಮಿಸಿದ್ದ ಕಾಲುವೆಗಳ ಮಾರ್ಗ ಮನುಷ್ಯ ಪ್ರವೇಶದಿಂದ ಬದಲಾವಣೆಯಾದ ಹಿನ್ನೆಲೆಯಲ್ಲಿ, ನೀರು ತನ್ನ ಹಿಂದಿನ ಸಹಜ ಮಾರ್ಗದಲ್ಲಿ ಹರಿಯಲು ಆರಂಭಿಸಿದೆ. ಆಗ ಅಲ್ಲಿದ್ದ ಎಲ್ಲಾ ರೀತಿಯ ಅಡೆತಡೆಗಳನ್ನು ಕಿತ್ತು ಹಾಕಿ ಮುಂದೆ ಸಾಗಿದೆ. ಇದರಿಂದ ಹಲವು ಕಡೆ ಮನೆಗಳು ನಾಶವಾಗಿದ್ದರೆ, ಅನೇಕ ತೋಟಗಳು ಮಣ್ಣಿನಡಿ ಸೇರಿವೆ ಎಂಬುದು ಭೂವಿಜ್ಞಾನಿಗಳ ಅಭಿಪ್ರಾಯ ಎನ್ನಲಾಗಿದೆ.
ಈ ರೀತಿ ಭೂಕುಸಿತಕ್ಕೆ ಒಳಗಾಗಿರುವ ಕಾರಗದ್ದೆ, ಬಾಳೂರು ಹೊರಟ್ಟಿ, ಶಿರವಾಸೆ ಸಮೀಪದ ಹಡ್ಲುಗದ್ದೆ, ಮಲೆಮನೆ, ದುರ್ಗದಹಳ್ಳಿ, ಹಲಗಡಕ ಮುಂತಾದ ಕಡೆಗಳಲ್ಲಿ ಕೆಲವು ಕಡೆ ಮತ್ತೆ ಜನ ವಾಸ ಮಾಡಲು ಸಾಧ್ಯವಾಗುವುದಿಲ್ಲ. ಈ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವುದು ಅನಿವಾರ್ಯವಾಗಿದೆ ಎಂದು ಹೇಳಲಾಗುತ್ತಿದೆ.
ಬೆಟ್ಟದ ಇಳಿಜಾರು ಪ್ರದೇಶ ಹಾಗೂ ಬುಡದಲ್ಲಿ ಕೃಷಿ ಮಾಡಲು ಅಥವಾ ಕಟ್ಟಡ ನಿರ್ಮಿಸಲು ಹಾಗೂ ರಸ್ತೆಗಳನ್ನು ಮಾಡಿದಾಗ ಆ ಭಾಗಗಳು ದುರ್ಬಲವಾಗುತ್ತವೆ. ಈ ರೀತಿ ಇದ್ದಕ್ಕಿದ್ದ ಹಾಗೆ ಸತತವಾಗಿ ಮಳೆ ಬಂದಾಗ ಭಾರೀ ಪ್ರಮಾಣದ ಕುಸಿತ ಸಂಭವಿಸುತ್ತದೆ.
ನೀರು ತನ್ನ ಹರಿಯುವ ಮೂಲ ಮಾರ್ಗವನ್ನು ಹುಡುಕುತ್ತಾ ಹೋಗುವುದಲ್ಲದೆ, ಕೆಲವೊಮ್ಮೆ ಅಂತರ್ಗತವಾಗಿ ಇರುವ ನೀರಿನ ಹರಿವು ಒಮ್ಮೆಲೆ ಮೇಲೆ ಬರುವುದರಿಂದ ಅನಾಹುತಗಳಾಗುವುದು ಹೆಚ್ಚು ಎಂಬುದು ಭೂವಿಜ್ಞಾನಿಗಳ ವಿವರಣೆ.
ಬೆಟrದ ಬುಡ ದುರ್ಬಲವಾಗಿದ್ದರೂ ಅವಘಡ: ಪಶಿ್ಚಮ ಘಟ್ಟದಲ್ಲಿ ಅದರಲ್ಲೂ ಘಟ್ಟ ಪ್ರದೇಶದಲ್ಲೆ ಯಾವುದೇ ನಿರ್ಮಾಣ ಅಥವಾ ಪ್ರಾಕೃತಿಕ ಬದಲಾವಣೆಗಳನ್ನು ಮಾಡುವ ಮುನ್ನ ಆ ಪ್ರದೇಶದ ಶಿಲಾಶಾಸ್ತ್ರ ಹಾಗೂ ಅದರ ರಚನೆಯನ್ನು ಅರ್ಥ ಮಾಡಿಕೊಳ್ಳಬೇಕು. ಬೆಟ್ಟದ ಬುಡ ದುರ್ಬಲವಾಗಿ ಮೇಲ್ಭಾಗ ಗಟ್ಟಿಯಾಗಿದ್ದಾಗಲೂ ವಿಪರೀತ ಮಳೆಗೆ ಈ ರೀತಿ ಅಪಾಯಗಳಾಗುತ್ತವೆ. ಕೆಲವು ಕಡೆ ಗುಡ್ಡದ ಸುತ್ತ ತೋಟದಲ್ಲಿ ಸುತ್ತಾಡಲು ದಾರಿ ಮಾಡಿರುವುದು, ಹಾಗೆ ಮಾಡುವಾಗ ಬೆಟ್ಟದ ಅಂಚನ್ನು 45 ಡಿಗ್ರಿಯಷ್ಟಾದರೂ ಇಳಿಜಾರು ಮಾಡದೆ ಗೋಡೆಯಂತೆ ಲಂಬವಾಗಿ ತೆಗೆದಿರುವುದು ಕುಸಿತಕ್ಕೆ ಪೂರಕ ಅಂಶಗಳು ಎನ್ನಲಾಗಿದೆ.
ಮುಂದಿನ ದಿನಗಳಲ್ಲಾದರೂ ಎತ್ತರದ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯ ಕೈಗೊಳ್ಳುವಾಗ, ರಸ್ತೆಗಳನ್ನು ನಿರ್ಮಿಸುವಾಗ ಆ ಸ್ಥಳದ ಶಿಲಾಧ್ಯಯನ ಮಾಡಬೇಕಾಗುತ್ತದೆ. ಕಾಫಿ ತೋಟಗಳಲ್ಲಿ ಮಣ್ಣನ್ನು ಹಿಡಿದಿಡುವ ಆಳವಾಗಿ ಬೇರೂರಿ ನಿಲ್ಲುವ ಮರಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಆಗ ಮಳೆ ಬಿರುಸಾದರೂ ಮಣ್ಣು ಜರುಗದಂತೆ ನಿಸರ್ಗವೇ ನೋಡಿಕೊಳ್ಳುತ್ತದೆ ಎನ್ನುವ ಅಭಿಪ್ರಾಯವೂ ಹೊರಬಂದಿದೆ.
ಬಲ್ಲಾಳರಾಯನ ದುರ್ಗದಲ್ಲಿ ಬಿರುಕು ಬಿಟ್ಟಿರುವುದನ್ನು ಭೂ ವಿಜ್ಞಾನಿಗಳ ತಂಡ ಪರಿಶೀಲಿಸಿದ್ದು, ಇಲ್ಲಿ ಗುಡ್ಡ ದುರ್ಬಲವಾಗಿರುವ ಕಡೆ ಸಣ್ಣ ಸಂದುಗಳಲ್ಲಿ ನೀರಿಳಿದು ಈ ರೀತಿಯಾಗಿದೆ. ಅದನ್ನು ಮಣ್ಣು ಹಾಕಿ ಮುಚ್ಚಿ ಸರಿಪಡಿಸಬಹುದು. ಅದಕ್ಕೆ ಸಮೀಪದಲ್ಲಿ ಯಾವುದೇ ರೀತಿಯ ಕಂದಕ ಅಥವಾ ಭೂಮಿ ಅಗೆಯುವುದನ್ನು ಮಾಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಳ್ಳಯ್ಯನಗಿರಿ ಮಾರ್ಗದಲ್ಲೂ ರಸ್ತೆ ನಿರ್ಮಿಸುವಾಗ ಜೆಸಿಬಿ ಬಳಸಿ ಬೆಟ್ಟದ ಅಂಚನ್ನು ಕೆತ್ತಿರುವುದು ಕುಸಿತಕ್ಕೆ ಕಾರಣವಾಗಿದೆ. ಜೇಡಿ ಮಣ್ಣಿನಿಂದ ಹಾಗೂ ಶಿಲಾಪದರಗಳಿಂದ ಕೂಡಿರುವ ಕಡೆಗಳಲ್ಲಿ ರಸ್ತೆ ಅಗಲದ ನಂತರ ಅದರ ಅಂಚನ್ನು ಕುಸಿಯದ ರೀತಿಯಲ್ಲಿ ಇಳಿಜಾರಿನ ರೂಪ ನೀಡದಿದ್ದಾಗ ಶಿಲಾಪದರಗಳು ಕಳಚಿಕೊಳ್ಳುತ್ತವೆ ಎನ್ನುತ್ತಾರೆ ತಜ್ಞರು.
ಭೂ ವಿಜ್ಞಾನಿಗಳ ತಂಡ ಒಂದು ವಾರಗಳ ಕಾಲ ಅಧ್ಯಯನ ನಡೆಸಿದಾಗ ಆ ತಂಡದೊಂದಿಗೆ ಜಿಲ್ಲಾ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಡಾ|ಎಂ.ಜೆ.ಮಹೇಶ್ ಮತ್ತು ಭೂ ವಿಜ್ಞಾನಿ ಎ.ಎಸ್.ದಯಾನಂದ ಅವರು ಇದ್ದು, ಪೂರಕ ಮಾಹಿತಿಗಳನ್ನು ಒದಗಿಸಿದ್ದಾರೆ.
ವಿಶೇಷ ಅಧ್ಯಯನ
ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಒಟ್ಟು 42 ಕಡೆ ಭೂಕುಸಿತ ಉಂಟಾಗಿದೆ. ಮಳೆ ನಿಂತ ನಂತರ ಇಲ್ಲಿನ ಶಿಲಾಪದರದ ಅಧ್ಯಯನವನ್ನು ವಿಶೇಷವಾಗಿ ಮಾಡಲು ಭೂವಿಜ್ಞಾನಿಗಳ ತಂಡ ನಿರ್ಧರಿಸಿದೆ. ಇಲ್ಲಿನ ಕುಸಿತಕ್ಕೆ ಕಾರಣವನ್ನು ಕೂಲಂಕಷವಾಗಿ ಪರಿಶೀಲಿಸಿ ಕಂಡುಕೊಳ್ಳಬೇಕಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.