ಕಾಫಿನಾಡಲ್ಲಿ ಶುರುವಾಯ್ತು ಜಂಟಿ ಸರ್ವೇ
ಅರಣ್ಯ-ಕಂದಾಯ ಇಲಾಖೆ ಜಂಟಿ ಸಮೀಕ್ಷೆ •ಹಲವು ದಶಕಗಳ ಬೇಡಿಕೆಗೆ ಸಿಕ್ತು ಸ್ಪಂದನೆ
Team Udayavani, Apr 25, 2019, 3:26 PM IST
ಚಿಕ್ಕಮಗಳೂರು: ಜಿಲ್ಲೆಯ ಬಹುದೊಡ್ಡ ಸಮಸ್ಯೆಯೊಂದನ್ನು ಪರಿಹರಿಸಲು ಜಿಲ್ಲಾಡಳಿತ ದಿಟ್ಟ ಹೆಜ್ಜೆ ಇಟ್ಟಿದ್ದು, ಈ ಕಾರ್ಯ ಯಶಸ್ವಿಯಾದಲ್ಲಿ ಜಿಲ್ಲೆಯ ಜನತೆ ಸಾಕಷ್ಟು ಅನುಕೂಲ ಪಡೆದುಕೊಳ್ಳಲಿದ್ದಾರೆ.
ಜಿಲ್ಲೆಯ ಜನರ ಬಹುವರ್ಷಗಳ ಬೇಡಿಕೆಯಾಗಿದ್ದ ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೇ ಕಾರ್ಯ ಜಿಲ್ಲೆಯಲ್ಲಿ ಆರಂಭವಾಗಿದೆ. ಈ ಸರ್ವೇ ಕಾರ್ಯ ಪೂರ್ಣಗೊಂಡು ಅರಣ್ಯ ಹಾಗೂ ಕಂದಾಯ ಭೂಮಿಗಳ ವರ್ಗೀಕರಣವಾದಲ್ಲಿ ಜಿಲ್ಲೆಯ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ.
ಜಂಟಿ ಸರ್ವೇ ಕಾರ್ಯ ನಡೆಯದಿದ್ದರಿಂದ ಕಂದಾಯ ಭೂಮಿ ಯಾವುದು, ಅರಣ್ಯ ಭೂಮಿ ಯಾವುದು ಎಂಬುದು ತಿಳಿಯದೆ ಜನ ತೀವ್ರ ಸಂಕಷ್ಟ ಎದುರಿಸುವಂತಾಗಿತ್ತು. ಒತ್ತುವರಿ, ಅಕ್ರಮ-ಸಕ್ರಮ, ನಿವೇಶನರಹಿತರಿಗೆ ನಿವೇಶನ ಕೊಡುವುದು ಸೇರಿದಂತೆ ಸಾಕಷ್ಟು ಸಮಸ್ಯೆಗಳು ಉಂಟಾಗಿದ್ದವು. ಯಾವುದೇ ಪ್ರದೇಶ ನೋಡಿದರೂ ಅರಣ್ಯ ಇಲಾಖೆಯವರು ಇದು ನಮ್ಮ ಭೂಮಿ ಎಂದು ಹೇಳುತ್ತಾರೆ. ಹಲವು ದಶಕಗಳಿಂದ ಈ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿದ್ದೇವೆ. ಈಗ ಅರಣ್ಯ ಇಲಾಖೆಯವರು ಅಡ್ಡಿಪಡಿಸುತ್ತಿದ್ದಾರೆ ಎಂಬ ದೂರುಗಳು ಪದೇ ಪದೆ ಸಾರ್ವಜನಿಕರಿಂದ ಕೇಳಿ ಬರುತ್ತಿತ್ತು.
ಹಲವು ಬಾರಿ ಪ್ರತಿಭಟನೆ: ಎಲ್ಲ ಜಾಗವನ್ನು ಅರಣ್ಯ ಇಲಾಖೆಯವರು ನಮಗೆ ಸೇರಿದ್ದು ಎಂದು ಹೇಳುತ್ತಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಈಗ ಗೋಮಾಳವೇ ಇಲ್ಲದಂತಾಗಿದೆ. ಕೂಡಲೆ ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೇ ನಡೆಸಿ ಭೂಮಿಯನ್ನು ಗುರುತಿಸಿ ಎಂಬುದು ಜಿಲ್ಲೆಯ ಜನರ ಹಲವು ವರ್ಷಗಳ ಕೂಗಾಗಿತ್ತು. ಇದಕ್ಕಾಗಿ ಹಲವು ಪ್ರತಿಭಟನೆಗಳೂ ನಡೆದಿದ್ದವು.
42 ತಂಡಗಳು: ಇದೀಗ ಜಿಲ್ಲಾಡಳಿತವು ಕಂದಾಯ ಹಾಗೂ ಅರಣ್ಯ ಇಲಾಖೆಯ ಜಂಟಿ ಸರ್ವೇ ಕಾರ್ಯ ನಡೆಸಲು ಆರಂಭಿಸಿದೆ. ಸರ್ವೇ ಕಾರ್ಯವನ್ನು ನಡೆಸಲು ಅರಣ್ಯ, ಕಂದಾಯ ಹಾಗೂ ಸರ್ವೇ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳನ್ನೊಳಗೊಂಡ 42 ತಂಡಗಳನ್ನು ರಚಿಸಲಾಗಿದೆ.
ಜಿಲ್ಲೆಯ ಚಿಕ್ಕಮಗಳೂರು ತಾಲೂಕಿನ 21,032 ಹೆಕ್ಟೇರ್, ಮೂಡಿಗೆರೆ ತಾಲೂಕಿನ 34,805 ಹೆಕ್ಟೇರ್, ಕಡೂರು ತಾಲೂಕಿನ 4,472 ಹೆಕ್ಟೇರ್, ತರೀಕೆರೆ ತಾಲೂಕಿನ 4,011 ಹೆಕ್ಟೇರ್, ಅಜ್ಜಂಪುರ ತಾಲೂಕಿನ 2,253, ಕೊಪ್ಪ ತಾಲೂಕಿನ 12,142, ಶೃಂಗೇರಿಯ 20,132 ಹಾಗೂ ನರಸಿಂಹರಾಜಪುರ ತಾಲೂಕಿನ 9,036 ಹೆಕ್ಟೇರ್ ಪ್ರದೇಶ ಸೇರಿದಂತೆ ಒಟ್ಟಾರೆ 1,07,946 ಹೆಕ್ಟೇರ್ ಪ್ರದೇಶವನ್ನು ಸರ್ವೇ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದೆ.
ಜಂಟಿ ಸರ್ವೇ ಕಾರ್ಯ ಆರಂಭ: ಇತ್ತೀಚೆಗಷ್ಟೆ ಜಿಲ್ಲೆಗೆ ಆಗಮಿಸಿದ್ದ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಜಂಟಿ ಸರ್ವೇ ನಡೆಸುವಂತೆ ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಸಚಿವರು, ರಾಜ್ಯಾದ್ಯಂತ ಜಂಟಿ ಸರ್ವೇ ನಡೆಸಬೇಕಿದೆ. ಪ್ರಾಯೋಗಿಕವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ಮೊದಲು ಜಂಟಿ ಸರ್ವೇ ನಡೆಸಲಾಗುವುದು ಎಂದು ತಿಳಿಸಿದ್ದರು. ಅದರಂತೆಯೇ ಈಗ ಜಿಲ್ಲೆಯಲ್ಲಿ ಜಂಟಿ ಸರ್ವೇ ಕಾರ್ಯ ಆರಂಭವಾಗಿದೆ.
ಜಿಲ್ಲೆಯಲ್ಲಿ ಬಹುತೇಕ ಪ್ರದೇಶಗಳನ್ನು ಡೀಮ್ಡ್ ಫಾರೆಸ್ಟ್ ಎಂದು ನಮೂದಿಸಿದ್ದರಿಂದಾಗಿ ಸರ್ಕಾರಿ ಜಾಗವೇ ಇಲ್ಲದಂತಾಗಿದೆ. ನಿವೇಶನರಹಿತರಿಗೆ ಕಳೆದ ಹಲವು ವರ್ಷಗಳಿಂದ ನಿವೇಶನ ಕೊಡಲು ಸಾಧ್ಯವಾಗಿಲ್ಲ. ಅಕ್ರಮ-ಸಕ್ರಮ ಯೋಜನೆಯ ಬಹುತೇಕ ಅರ್ಜಿಗಳು ಅರಣ್ಯ ಮತ್ತು ಕಂದಾಯ ಭೂಮಿ ನಡುವಿನ ಗೊಂದಲದಿಂದಾಗಿ ಬಾಕಿ ಉಳಿದುಕೊಂಡಿವೆ ಎಂಬ ದೂರುಗಳು ಜನಪ್ರತಿನಿಧಿಗಳಿಂದ ಕೇಳಿ ಬಂದಿದ್ದವು.
ಇದೀಗ ಜಂಟಿ ಸರ್ವೇ ಕಾರ್ಯ ಆರಂಭವಾಗಿದ್ದು, ಸರ್ವೇ ಕಾರ್ಯ ಪೂರ್ಣಗೊಂಡು ಅರಣ್ಯ ಮತ್ತು ಕಂದಾಯ ಭೂಮಿಗಳನ್ನು ಪ್ರತ್ಯೇಕಿಸಿದಲ್ಲಿ ಜಿಲ್ಲೆಯಲ್ಲಿರುವ ಸಾಕಷ್ಟು ಸಮಸ್ಯೆಗಳು ಪರಿಹಾರವಾಗಲಿದೆ. ಅಕ್ರಮ-ಸಕ್ರಮ ಯೋಜನೆಯ ಅರ್ಜಿಗಳನ್ನು ವಿಲೇ ಮಾಡಲು ಸುಲಭವಾಗುವುದಲ್ಲದೆ, ಕಂದಾಯ ಭೂಮಿ ದೊರೆತಲ್ಲಿ ನಿವೇಶನರಹಿತರಿಗೆ ನಿವೇಶನ ಕೊಡಲು ಸಾಧ್ಯವಾಗುತ್ತದೆ. ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ದೊರಕಿದಂತಾಗುತ್ತದೆ. ಇಷ್ಟು ಮಾತ್ರವಲ್ಲದೆ, ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆ ನಡುವೆ ಇರುವ ವೈಮನಸ್ಸು ದೂರವಾಗಲು ಕಾರಣವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ತಾವು ಇಲ್ಲಿನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಡೀಮ್ಡ್ ಫಾರೆಸ್ಟ್ ವಿಚಾರವಾಗಿ ಹಲವು ದೂರುಗಳು ಬಂದಿದ್ದವು. ಆಗಲೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದೆ. ಕಂದಾಯ ಹಾಗೂ ಅರಣ್ಯ ಇಲಾಖೆ ನಡುವೆ ಸಮನ್ವಯದ ಕೊರತೆ ಇದೆ ಎಂದು ಸಹ ತಿಳಿಸಿದ್ದೆ. ಈಗ ಎರಡೂ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲಾಗಿದೆ. ಜಂಟಿ ಸರ್ವೇ ಕಾರ್ಯಕ್ಕೆ 42 ತಂಡಗಳನ್ನು ರಚಿಸಲಾಗಿದೆ. ಸರ್ವೇ ಕಾರ್ಯವನ್ನು 50 ದಿನಗಳ ಒಳಗಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಒಂದು ಬಾರಿ ಸರ್ವೇ ಕಾರ್ಯ ಪೂರ್ಣಗೊಂಡು ಕಂದಾಯ ಹಾಗೂ ಅರಣ್ಯ ಇಲಾಖೆ ಪ್ರದೇಶಗಳನ್ನು ಗುರುತಿಸಿದಲ್ಲಿ ಜಿಲ್ಲೆಯ ಹಲವು ಸಮಸ್ಯೆಗಳು ಪರಿಹಾರವಾದಂತಾಗುತ್ತದೆ.
•ಡಾ| ಬಗಾದಿ ಗೌತಮ್,
ಜಿಲ್ಲಾಧಿಕಾರಿ.
ಎಸ್.ಕೆ.ಲಕ್ಷ್ಮೀ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.