ಬಾಲ್ಯವಿವಾಹ ದುಷ್ಪರಿಣಾಮದ ಅರಿವು ಮೂಡಿಸಿ
ಕಿರುಹೊತ್ತಿಗೆ ಸಿದ್ಧಪಡಿಸಿ ಶಾಲಾ ಮಕ್ಕಳಿಗೆ ವಿತರಿಸಿ: ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸೂಚನೆ
Team Udayavani, Jun 26, 2019, 12:07 PM IST
ಚಿತ್ರದುರ್ಗ: ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಸಭೆ ನಡೆಯಿತು.
ಚಿತ್ರದುರ್ಗ: ಬಾಲ್ಯವಿವಾಹದ ದುಷ್ಪರಿಣಾಮಗಳು ಹಾಗೂ ಮಕ್ಕಳ ಹಕ್ಕುಗಳ ಕುರಿತು ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಲ್ಯವಿವಾಹ ತಡೆಗಟ್ಟುವ ಕುರಿತು ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತ ಕಿರು ಹೊತ್ತಿಗೆಯನ್ನು ಸಿದ್ಧಪಡಿಸಿ ಎಲ್ಲ ಶಾಲಾ ಮಕ್ಕಳಿಗೂ ವಿತರಿಸಬೇಕು. ಶಿಕ್ಷಕರು ಬಾಲ್ಯ ವಿವಾಹದ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು, ಮಕ್ಕಳ ಹಕ್ಕುಗಳ ಬಗ್ಗೆ ಪುಸ್ತಕದಲ್ಲಿರುವ ಅಂಶಗಳನ್ನು ಮಕ್ಕಳಿಗೆ ಬೋಧಿಸಿದರೆ ಮಕ್ಕಳಲ್ಲಿ ಅರಿವು ಮೂಡುತ್ತದೆ. ಎಲ್ಲ ಶಾಲೆಗಳ ಕಾಂಪೌಂಡ್‌ಗಳ ಮೇಲೆ ಬಾಲ್ಯವಿವಾಹ ನಿಷೇಧ ಕಾಯ್ದೆ, ಶಿಕ್ಷೆ, ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ, ಮಕ್ಕಳ ಸಹಾಯವಾಣಿ ಸೇರಿದಂತೆ ಎಲ್ಲ ವಿವರಗಳನ್ನು ಗೋಡೆ ಬರಹದ ಮೇಲೆ ಬರೆಸಬೇಕು. ಶಾಲಾ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ ಎಂಬ ಫಲಕ ಹಾಕಬೇಕು. ಅಲ್ಲದೆ ಶಾಲಾ ಕೊಠಡಿಯೊಳಗೂ ಮಾಹಿತಿ ಫಲಕ ಇರಬೇಕು. ಶಾಲೆಯ ಪ್ರಾರ್ಥನೆ ಸಂದರ್ಭದಲ್ಲಿ ಮಕ್ಕಳಿಂದ ಬಾಲ್ಯವಿವಾಹವಾಗುವುದಿಲ್ಲ ಎಂಬ ಪ್ರತಿಜ್ಞಾ ವಿಧಿ ಸ್ವೀಕಾರದಂತಹ ಕಾರ್ಯಕ್ರಮ ತಪ್ಪದೇ ನಡೆಯಬೇಕು ಎಂದು ಡಿಡಿಪಿಐ ಆಂಥೋನಿ ಅವರಿಗೆ ಸೂಚಿಸಿದರು.
ಎಲ್ಲ ಗ್ರಾಮಗಳಲ್ಲಿ ಮಕ್ಕಳ ಹಕ್ಕುಗಳ ಸಭೆಗಳು, ತಾಲೂಕು ಮಟ್ಟದ ಸಮಿತಿ ಸಭೆಗಳು, ಜಾಗೃತಿ ಕಾರ್ಯಕ್ರಮಗಳನ್ನು ಆಯಾ ಸಿಡಿಪಿಒಗಳು ಕಡ್ಡಾಯವಾಗಿ ಆಯೋಜಿಸಬೇಕು. ಹಳ್ಳಿಗಳಲ್ಲಿ ಪೋಷಕರು ಬಡತನ ಹಾಗೂ ಆರ್ಥಿಕ ಪರಿಸ್ಥಿತಿಯ ನೆಪವೊಡ್ಡಿ ಜಾತ್ರೆಗಳು ನಡೆಯುವ ಸಂದರ್ಭದಲ್ಲಿ ಬಾಲ್ಯವಿವಾಹಗಳನ್ನು ಮಾಡುತ್ತಾರೆ. ಅಧಿಕಾರಿಗಳು ಜಾತ್ರೆಗಳು ನಡೆಯುವಂತಹ ಸಂದರ್ಭಗಳಲ್ಲಿ ಅಂತಹ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಅಂಗನವಾಡಿ ಕಾರ್ಯಕರ್ತೆಯರಿಂದ ಮಾಹಿತಿ ಪಡೆದುಕೊಳ್ಳುತ್ತಿರಬೇಕು. ಬಾಲ್ಯವಿವಾಹದ ಬಗ್ಗೆ ಜಾಗೃತಿ ಫಲಕಗಳನ್ನು ದೇವಸ್ಥಾನ, ಮಸೀದಿ, ಮಠ, ಕಲ್ಯಾಣಮಂಟಪಗಳಲ್ಲಿ ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಎಂದು ಜಾಗ್ರತಿ ಬರಹಗಳು, ಚಿತ್ರಗಳ ಸಹಿತ ಅಳವಡಿಸಬೇಕು ಎಂದು ಸಿಡಿಪಿಒಗಳಿಗೆ ತಿಳಿಸಿದರು.
ಜಿಪಂ ಸಿಇಒ ಸಿ. ಸತ್ಯಭಾಮ ಮಾತನಾಡಿ, ಶಿಕ್ಷಣದ ಬಗ್ಗೆ ಜ್ಞಾನವಿಲ್ಲದ ಹಳ್ಳಿಗಳಲ್ಲಿ ಬಾಲ್ಯ ವಿವಾಹಗಳು ಹೆಚ್ಚುತ್ತಿವೆ. ಸಂಪ್ರದಾಯ, ಬಡತನ ಅಥವಾ ಅನಕ್ಷರತೆ ಕಾರಣದಿಂದ ಬಾಲ್ಯ ವಿವಾಹ ಹೆಚ್ಚಿವೆ. ಜಿಲ್ಲೆಯ ಗೊಲ್ಲರಹಟ್ಟಿ, ಲಂಬಾಣಿಹಟ್ಟಿ, ಭೋವಿ ಹಟ್ಟಿಗಳಲ್ಲಿ ಹೆಚ್ಚಿನದಾಗಿ ಬಾಲ್ಯವಿವಾಹಗಳು ನಡೆಯುತ್ತಿವೆ. ಹೊಸದುರ್ಗ ತಾಲೂಕಿನಲ್ಲಿಯೇ ಅತಿ ಹೆಚ್ಚು ಬಾಲ್ಯವಿವಾಹ ಪ್ರಕರಣಗಳು ವರದಿಯಾಗಿವೆ. ಮಾಡದಕೆರೆ, ಮಾದಿಹಳ್ಳಿ, ದುಗ್ಗಾವರ, ಅತ್ತಿಘಟ್ಟ, ಮೆಟ್ಟಿನಹೊಳೆ ಮತ್ತಿತರ ಕಡೆಗಳಲ್ಲಿ ಬಾಲ್ಯವಿವಾಹಗಳು ನಡೆಯುತ್ತಿದ್ದು, ತಡೆಗಟ್ಟಲು ಏನು ಜಾಗೃತಿ ಮೂಡಿಸಿದ್ದೀರಾ ಎಂದು ಹೊಸದುರ್ಗ ಸಿಡಿಪಿಒ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರ ನೀಡಲು ಸಿಡಿಪಿಒ ಸಮರ್ಪಕ ಉತ್ತರ ನೀಡಲಿಲ್ಲ. ಆದ್ದರಿಂದ ಸಿಡಿಪಿಒ ಕಾರ್ಯವೈಖರಿಗೆ ಸಿಇಒ ಅಸಮಾಧಾನ ವ್ಯಕ್ತಪಡಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಾ ನಾಯಕ್ ಮಾತನಾಡಿ, ಜಿಲ್ಲೆಯಲ್ಲಿ 24 ಸಾವಿರ ಗರ್ಭಿಣಿಯರು ಇದ್ದಾರೆ. ವಿವಿಧ ಯೋಜನೆಗಳಡಿ ಸೌಲಭ್ಯ ದೊರಕಿಸಲು ಇಲಾಖೆ ಕ್ರಮ ಕೈಗೊಂಡಿದೆ ಎಂದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ನಂದಗಾವಿ, ಡಿಡಿಪಿಐ ಎ.ಜೆ. ಆಂಥೋನಿ, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್, ಸಿಡಿಪಿಒಗಳು ಹಾಗೂ ವಿವಿಧ ಇಲಾಖೆಗಳು ಅಧಿಕಾರಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.