ಗಣಿಬಾಧಿತ ಪ್ರದೇಶಗಳ ಏಳ್ಗೆಗೆ ಬದ್ಧ
Team Udayavani, Jul 6, 2019, 12:03 PM IST
ಚಿತ್ರದುರ್ಗ: ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಸಮಿತಿ ಸಭೆ ನಡೆಯಿತು.
ಚಿತ್ರದುರ್ಗ: ಗಣಿಗಾರಿಕೆ ಪ್ರದೇಶದ ಸುತ್ತಲಿನ 10 ಕಿಮೀ ವ್ಯಾಪ್ತಿಯನ್ನು ಪರೋಕ್ಷ ಗಣಿ ಬಾಧಿತ ಪ್ರದೇಶ ವ್ಯಾಪ್ತಿಯೆಂದು ನಿಗದಿಪಡಿಸಿ ಪರಿಸರ ಸಂರಕ್ಷಣೆ, ಮೂಲ ಸೌಕರ್ಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಅಭಿವೃದ್ಧಿ ಕಾರ್ಯಗಳಿಗೆ ಯೋಜನೆ ರೂಪಿಸಲಾಗುವುದು ಎಂದು ರಾಜ್ಯ ಕಾರ್ಮಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾದ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿ ಅತೀ ಹೆಚ್ಚು ಗಣಿಗಾರಿಕೆ ಪ್ರದೇಶವಿದೆ. ಹೀಗಾಗಿ ಡಿಎಂಎಫ್ ಅನುದಾನ ಹೊಳಲ್ಕೆರೆ ತಾಲೂಕಿನಿಂದಲೇ ಶೇ.95 ರಷ್ಟು ಸಂಗ್ರಹವಾಗುತ್ತಿದೆ. ಜಿಲ್ಲೆಯಲ್ಲಿ ಪ್ರತ್ಯಕ್ಷ ಗಣಿಬಾಧಿತ ಹಾಗೂ ಪರೋಕ್ಷ ಗಣಿಬಾಧಿತ ಪ್ರದೇಶಗಳ ವ್ಯಾಪ್ತಿ ನಿಗದಿಪಡಿಸಲಾಗುತ್ತಿದ್ದು, ಗಣಿಗಾರಿಕೆ ಪ್ರದೇಶದ ಸುತ್ತಲಿನ 10 ಕಿಮೀ ವ್ಯಾಪ್ತಿಯಲ್ಲಿ ಅನುದಾನ ಬಳಕೆ ಮಾಡಲಾಗುತ್ತದೆ ಎಂದು ಹೇಳಿದರು.
2016-17ರಿಂದ ಈವರೆಗೆ ಒಟ್ಟು 104. 36 ಕೋಟಿ ರೂ. ಡಿಎಂಎಫ್ ನಿಧಿ ಸಂಗ್ರಹವಾಗಿದೆ. ಈ ಪೈಕಿ 101 ಕೋಟಿ ರೂ. ಹೊಳಲ್ಕೆರೆ ತಾಲೂಕು ಒಂದರಿಂದಲೇ ಸಂಗ್ರಹವಾಗಿದೆ. ಉಳಿದಂತೆ ಚಳ್ಳಕೆರೆ ತಾಲೂಕು- 67.88 ಲಕ್ಷ, ಚಿತ್ರದುರ್ಗ-1.47 ಕೋಟಿ, ಹಿರಿಯೂರು-8.97 ಲಕ್ಷ, ಹೊಸದುರ್ಗ- 39.40 ಲಕ್ಷ, ಮೊಳಕಾಲ್ಮೂರು ತಾಲೂಕಿನಿಂದ 20.39 ಲಕ್ಷ ರೂ. ನಿಧಿ ಸಂಗ್ರಹವಾಗಿದೆ. ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ವಿವಿಧ ಯೋಜನೆ ರೂಪಿಸಿ ಜಾರಿಗೊಳಿಸಲಾಗುತ್ತಿದ್ದು, ಈಗಾಗಲೇ ಮೊದಲ ಹಂತದಲ್ಲಿ 21 ಕೋಟಿ ರೂ., ಹಾಗೂ ಎರಡನೇ ಹಂತದಲ್ಲಿ 48.25 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದ್ದು, 3 ಕೋಟಿ ರೂ. ವೆಚ್ಚವಾಗಿದೆ. ಡಿಎಂಎಫ್ ಅನುದಾನ ಸಂಗ್ರಹ ಪ್ರಕ್ರಿಯೆ ನಿರಂತರವಾಗಿದೆ. ಖನಿಜ ಪ್ರತಿಷ್ಠಾನದ ಮಾರ್ಗಸೂಚಿಯಂತೆ ಸಂಗ್ರಹವಾಗಿರುವ ಮೊತ್ತಕ್ಕೆ ಮೂರು ಪಟ್ಟು ಅನುಪಾತದ ಮೊತ್ತಕ್ಕೆ ಅನುಗುಣವಾಗಿ ಅಂದರೆ ಸುಮಾರು 312 ಕೋಟಿ ರೂ. ಮೊತ್ತಕ್ಕೆ ಗಣಿಬಾಧಿತ ಪ್ರದೇಶಗಳಲ್ಲಿ ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ಪರಿಸರ ರಕ್ಷಣೆ, ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಯೋಜನೆ ರೂಪಿಸಬೇಕಿದ್ದು, ಅದರಂತೆ ಕೂಡಲೇ ಕ್ರಿಯಾ ಯೋಜನೆ ರೂಪಿಸಬೇಕು ಎಂದರು.
ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾತನಾಡಿ, ಗಣಿಗಾರಿಕೆಯಿಂದ ಪ್ರತ್ಯಕ್ಷ, ಪರೋಕ್ಷ ಬಾಧಿತ ಪ್ರದೇಶಗಳನ್ನು ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಸಮಿತಿಯಿಂದಲೇ ವೈಜ್ಞಾನಿಕವಾಗಿ ಗುರುತಿಸುವುದಲ್ಲದೆ, ಗಣಿಗಾರಿಕೆ, ಧೂಳು, ದಾಸ್ತಾನು ಪ್ರದೇಶ, ಸಾರಿಗೆ ಕಾರಿಡಾರ್‌ಗಳಲ್ಲೂ ಬಾಧಿತ ಪ್ರದೇಶ ನಿಗದಿಪಡಿಸಬೇಕು. ಅಲ್ಲದೆ ಭೌತಿಕ ಮತ್ತು ಸಾಮಾಜಿಕ ಪರಿಣಾಮದ ಪ್ರದೇಶ ಗುರುತಿಸುವುದೂ ಅಗತ್ಯವಾಗಿದೆ. ವ್ಯಾಪ್ತಿ ನಿಗದಿಯಾಗದಿದ್ದಲ್ಲಿ, ಕ್ರಿಯಾ ಯೋಜನೆ ರೂಪಿಸುವುದು ಕಷ್ಟವಾಗಲಿದೆ ಎಂದರು.
ಶಾಸಕರಾದ ಟಿ.ರಘುಮೂರ್ತಿ, ಗೂಳಿಹಟ್ಟಿ ಶೇಖರ್, ಎಂ.ಚಂದ್ರಪ್ಪ, ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ಜಿಪಂ ಸದಸ್ಯ ನರಸಿಂಹರಾಜು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಸತ್ಯಭಾಮ ಸೇರಿದಂತೆ ಸಮಿತಿಯ ನಾಮನಿರ್ದೇಶಿತ ಸದಸ್ಯರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಮಹಾಂತೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.