ಸತ್ಯದ ನೆಲೆಗಟ್ಟಿನ ಮೇಲೆ ನೈಜ ವಿಚಾರ ದಾಖಲಾಗಲಿ
Team Udayavani, Dec 23, 2019, 5:49 PM IST
ಚಿತ್ರದುರ್ಗ: ಮಠ, ಪೀಠಗಳು ಹಿಂದೆ ಸಾಹಿತಿ, ಕಲಾವಿದರನ್ನು ಗೌರವಿಸುತ್ತಿದ್ದವು. ಆದರೆ ಈಗ ಹೆಚ್ಚು ಅನುದಾನ ನೀಡಿದವರನ್ನು ಗೌರವಿಸುತ್ತಿವೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ ವಿಷಾದಿಸಿದರು.
ನಗರದ ಶಾರದಮ್ಮ ರುದ್ರಪ್ಪ ಕಲ್ಯಾಣಮಂಟಪದಲ್ಲಿ ಭಾನುವಾರ ಚಿತ್ರದುರ್ಗ ಜಿಲ್ಲಾ ವೀರಶೈವ ಲಿಂಗಾಯತ ಸಮಾಜ, ವೀರಶೈವ ಲಿಂಗಾಯತ ಪಂಚಮಸಾಲಿ ಮಹಿಳಾ ಘಟಕ ಹಾಗೂ ಪಂಚಮಸಾಲಿ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇತಿಹಾಸ ಸಂಶೋಧಕ ಡಾ| ಬಿ. ರಾಜಶೇಖರಪ್ಪ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಗೂ ಒಂದು ಚರಿತ್ರೆ ಇರುತ್ತದೆ. ಆದರೆ ಕೆಲವರಿಗೆ ಮಾತ್ರ ಚಾರಿತ್ರ್ಯ ಇರುತ್ತದೆ. ಚರಿತ್ರೆಯನ್ನು ಬರೆಸಬಹುದು, ಆದರೆ ಚಾರಿತ್ರ್ಯವನ್ನು ಬರೆಸಲು ಸಾಧ್ಯವಿಲ್ಲ. ಚರಿತ್ರೆ ಮತ್ತು ಚಾರಿತ್ರ್ಯ ಎರಡೂ ಇರುವ ವ್ಯಕ್ತಿ ರಾಜಶೇಖರಪ್ಪ. ಚಿತ್ರದುರ್ಗದ ಇತಿಹಾಸ, ಸಾಹಿತ್ಯ ಅಂದಾಕ್ಷಣ ತರಾಸು, ಬಿ.ಎಲ್. ವೇಣು ನೆನಪಾಗುತ್ತಾರೆ ಅದೇ ಸಾಲಿನಲ್ಲಿ ನಮ್ಮ ಸಮಾಜದ ಬಿ. ರಾಜಶೇಖರಪ್ಪ ಇರುವುದು ಗೌರವದ ವಿಚಾರ ಎಂದು ಬಣ್ಣಿಸಿದರು.
ಇತಿಹಾಸ ಸಂಶೋಧನೆ ಸುಲಭದ ಕೆಲಸವಲ್ಲ. ಸತ್ಯದ ನೆಲಗಟ್ಟಿನ ಮೇಲೆ ನೈಜ ವಿಚಾರಗಳನ್ನು ದಾಖಲಿಸಬೇಕು. ಇದಕ್ಕಾಗಿ ಇತಿಹಾಸ ಸಂಶೋಧಕರು ಅನೇಕ ಸಲ ಕೋರ್ಟು, ಕಚೇರಿ ಸುತ್ತಾಡಿ ಗೆಲುವು ಪಡೆದಿದ್ದಾರೆ ಎಂದರು. 1994ರಲ್ಲಿ ನಡೆದ ಜನಗಣತಿಯಲ್ಲಿ ಪಂಚಮಸಾಲಿ ಜನಸಂಖ್ಯೆ 80 ಲಕ್ಷ ಇತ್ತು. ಈಗ 1 ಕೋಟಿ ದಾಟಿರಬಹುದು. ಪಂಚಮಸಾಲಿ ಸಮಾಜದವರು ಶ್ರಮಜೀವಿಗಳು. ಎಲ್ಲರೂ ಒಗ್ಗಟಾಗಿ ಸಮಾಜ ಕಟ್ಟಬೇಕಾಗಿದೆ. ಜನವರಿ 14 ಮತ್ತು
15ರಂದು ಹರಿಹರದ ಪೀಠದಲ್ಲಿ ಹರ ಜಾತ್ರಾ ಮಹೋತ್ಸವ ನಡೆಯಲಿದ್ದು, ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ ಗುರೂಜಿ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವರು ಭಾಗವಹಿಸಲಿದ್ದು, ಇಷ್ಟಲಿಂಗ ಪೂಜೆ, ಮಹಿಳಾ ಸಮಾವೇಶ, ರೈತ ಸಮಾವೇಶ ನಡೆಯಲಿದೆ ಎಲ್ಲರೂ ಭಾಗವಹಿಸಬೇಕು ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿದ ಸಂಶೋಧಕ ಡಾ| ಬಿ. ರಾಜಶೇಖರಪ್ಪ ಮಾತನಾಡಿ, ಪಂಚಮಸಾಲಿ ಸಮಾಜ ಮಾಡಿರುವ ಸನ್ಮಾನ ನಮ್ಮ ಮನೆಯವರೇ ಸನ್ಮಾನ ಮಾಡಿದಷ್ಟು ಸಂತೋಷ ಕೊಟ್ಟಿದೆ. ನಾನು ಪ್ರಶಸ್ತಿಗಳನ್ನು ಅರಸಿಕೊಂಡು ಹೋಗಿಲ್ಲ. ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಸಂಶೋಧನೆಯಲ್ಲಿ ನನಗೆ ಸಹಕಾರ ನೀಡಿದ ಎಲ್ಲರಿಗೂ ಈ ಸನ್ಮಾನ ಸಲ್ಲುತ್ತದೆ ಎಂದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಆರ್.ಜಿ. ಗಂಗಾಧರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಜೆ.ಬಿ. ಜ್ಯೋತಿ ದೇವೇಂದ್ರಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಎನ್. ತಿಪ್ಪೇಸ್ವಾಮಿ, ಮುಖಂಡ ತಿಪ್ಪೇಸ್ವಾಮಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.