ಬಹುರೂಪಿ ಗಣಪಗೆ ಅಂತಿಮ ಸ್ಪರ್ಶ
Team Udayavani, Aug 28, 2019, 12:06 PM IST
ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ: ಭಾದ್ರಪದ ಶುಕ್ಲದ ಚೌತಿಗೆ ಊರು, ಕೇರಿ, ಮನೆ, ಮನಗಳಿಗೆ ಬರಲು ಗಣಪ ಭರ್ಜರಿಯಾಗಿ ಸಿದ್ಧಗೊಳ್ಳುತ್ತಿದ್ದಾನೆ.
ಹೊಸ ಹೊಸ ವೇಷ, ಆಕಾರ, ರೂಪಗಳೊಂದಿಗೆ ತರಹೇವಾರಿ ಬಟ್ಟೆಗಳನ್ನು ಧರಿಸುತ್ತಿರುವ ಗಣಪತಿ ದೇವಸ್ಥಾನಕ್ಕೆ, ಮಾರುಕಟ್ಟೆಗೆ ಬರಲು ಇನ್ನು ಐದಾರು ದಿನ ಮಾತ್ರ ಬಾಕಿ ಉಳಿದಿವೆ. ಗಣಪತಿ ತಯಾರಕರು ಈ ವರ್ಷದ ಗಣಪನನ್ನು ಪರಿಚಯಿಸಲು ಕಳೆದ ಮೂರು ತಿಂಗಳಿನಿಂದ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ನಗರದ ದೊಡ್ಡಪೇಟೆಯಲ್ಲಿ ಹೆಚ್ಚು ಗಣಪತಿ ತಯಾರಕರಿದ್ದಾರೆ. ಕೆಲವರು ಹೊರಗಿನಿಂದ ಬಂದು ಮೂರು ತಿಂಗಳ ಕಾಲ ಮನೆ, ಮಳಿಗೆ ಬಾಡಿಗೆ ಪಡೆದು ಗಣೇಶನ ವಿಗ್ರಹ ತಯಾರಿಸಿ ಮಾರಾಟ ಮಾಡಿದ ನಂತರ ಮನೆಗೆ ಹೋಗುವ ಪರಿಪಾಠವನ್ನು ಕಳೆದ ಮೂರ್‍ನಾಲ್ಕು ದಶಕಗಳಿಂದ ಇಟ್ಟುಕೊಂಡಿದ್ದಾರೆ.
ಪಿಒಪಿ ಗಣಪನಿಗೆ ಕಡಿವಾಣ: ಕಳೆದ ನಾಲ್ಕಾರು ವರ್ಷಗಳಿಂದ ಸರ್ಕಾರ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿರುವುದರಿಂದ ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ತಯಾರಿಸಿದ ಗಣಪತಿ ವಿಗ್ರಹಗಳಿಗೆ ಕಡಿವಾಣ ಹಾಕಲಾಗಿದೆ. ಆದರೂ ನಗರದ ಹೊರವಲಯದಲ್ಲಿ, ಅಕ್ಕ, ಪಕ್ಕದ ಊರುಗಳಲ್ಲಿ ಕದ್ದು ಮುಚ್ಚಿ ಪಿಒಪಿ ಗಣಪನ ವಿಗ್ರಹಗಳು ಮಾರಾಟವಾಗುತ್ತಿವೆ. ಇವುಗಳಿಂದ ಪರಿಸರಕ್ಕೆ ಎಷ್ಟರಮಟ್ಟಿಗೆ ಹಾನಿಯಾಗುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಗಣಪತಿ ತಯಾರು ಮಾಡುತ್ತಿದ್ದ ಕುಂಬಾರರ ಕುಟುಂಬಗಳಿಗೂ ಸಂಕಷ್ಟ ಎದುರಾಗಿದೆ. ದಿನೇ ದಿನೇ ಗಣಪತಿ ತಯಾರಕರು ಕಡಿಮೆ ಆಗುತ್ತಿದ್ದಾರೆ. ಈ ಹಿಂದೆ ದೊಡ್ಡಪೇಟೆಯುದ್ದಕ್ಕೂ ಗಣಪತಿ ತಯಾರಕರು ಕಾಣಿಸುತ್ತಿದ್ದರು. ಈಗ ಅವರನ್ನು ಹುಡುಕಿಕೊಂಡು ಹೋಗಿ ನೋಡುವ ಸ್ಥಿತಿ ಬಂದೊದಗಿದೆ.
ಚಿತ್ರದುರ್ಗ ನಗರದಲ್ಲಿ ಬಹುತೇಕ ಹೊರಕೆರೆದೇವರಪುರದ ಮಣ್ಣಿನಿಂದ ತಯಾರಾದ ಗಣಪನ ವಿಗ್ರಹಗಳೇ ಹೆಚ್ಚು ಕಾಣಸಿಗುತ್ತವೆ. ಮುರುಘಾ ಮಠದ ಮುಂದಿನ ಕೆರೆ, ಹೊಳಲ್ಕೆರೆ ತಾಲೂಕಿನ ತೇಕಲವಟ್ಟಿ, ಕೊಳಾಳು, ಚಳ್ಳಕೆರೆ ತಾಲೂಕಿನ ಗೌರಸಮುದ್ರ ಸೇರಿದಂತೆ ಸುತ್ತಮುತ್ತಲಿನ ಜೇಡಿಮಣ್ಣು ಸಿಗುವ ಕೆರೆಗಳಿಂದ ಮಣ್ಣು ತಂದು ಗಣಪತಿ ಮಾಡಲಾಗುತ್ತದೆ.
ಎಚ್.ಡಿ. ಪುರದಿಂದ ಮೂರ್‍ನಾಲ್ಕು ಕುಟುಂಬಗಳು ಗಣಪತಿ ಹಬ್ಬದ ವೇಳೆಗೆ ಲೋಡುಗಟ್ಟಲೇ ಮಣ್ಣು ಹದ ಮಾಡಿಕೊಂಡು ಚಿತ್ರದುರ್ಗಕ್ಕೆ ತಂದು ತಯಾರಿ ಶುರು ಮಾಡುತ್ತಾರೆ. ಒಂದೊಂದು ಕುಟುಂಬ ಕನಿಷ್ಠ 200 ರಿಂದ 250 ಗಣಪನ ವಿಗ್ರಹಗಳನ್ನು ತಯಾರಿಸುತ್ತಾರೆ. ಇದರ ಜತೆಗೆ ಗೋಣಿ, ತೆಂಗಿನ ನಾರು, ಮರದ ಹಲಗೆಗಳು ಹಾಗೂ ಅಲಂಕಾರಿಕ ಬಟ್ಟೆ, ವಾಟರ್ ಪೇಂಟ್ಸ್ ಅನ್ನು ಗಣಪನ ಮೂರ್ತಿಗೆ ಬಳಸಲಾಗುತ್ತದೆ.
ಎಚ್.ಡಿ. ಪುರದ ನಾಗರಾಜಪ್ಪ ಅವರ ಕುಟುಂಬ ಚಿತ್ರದುರ್ಗ ನಗರದ ಅಯ್ಯಣ್ಣನಪೇಟೆಯ ವಾಸವಿ ಶಾಲೆ ಮುಂಭಾಗದ ದೇವಸ್ಥಾನದಲ್ಲಿ ಮೂರು ತಿಂಗಳಿಂದ ಗಣಪತಿ ತಯಾರಿಸುವ ಕೆಲಸ ಮಾಡುತ್ತಿದೆ. ಇಡೀ ಕುಟುಂಬ ಈ ಕೆಲಸದಲ್ಲಿ ಭಾಗಿಯಾಗಿದ್ದು, ಈ ವರ್ಷ ಸಣ್ಣದು, ದೊಡ್ಡದು ಎಲ್ಲವೂ ಸೇರಿ 250 ಗಣಪನ ವಿಗ್ರಹಗಳನ್ನು ತಯಾರಿಸಿದ್ದಾರೆ. ಸಂಕಷ್ಟಹರ, ಶಿವನ ರೂಪ, ನಂದಿ ವಾಹನಾರೂಢ, ಪೇಟಾ ಧರಿಸಿದ ಗಣಪತಿ ಸೇರಿದಂತೆ ನಾನಾ ರೂಪ, ಬಣ್ಣದ ಗಣಪತಿಯ ವಿಗ್ರಹಗಳು ಕಣ್ಮನ ಸೆಳೆಯುತ್ತಿವೆ. ಮದಕರಿಪುರ, ಎಚ್.ಡಿ. ಪುರ ಸೇರಿದಂತೆ ವಿವಿಧೆಡೆಯಿಂದ ಬಂದು ಇಲ್ಲಿ ಗಣಪತಿ ಮೂರ್ತಿ ತಯಾರಿಸಿ ಕೊಡುವ ಪದ್ಧತಿ ಇದೆ.
ವಿದೇಶಕ್ಕೂ ಹೋಗ್ತಾನೆದುರ್ಗದ ಗಣಪ
ಚಿತ್ರದುರ್ಗ ನಗರದಲ್ಲಿ ತಯಾರಾಗುವ ಮಣ್ಣಿನ ಗಣಪನ ಮೂರ್ತಿಗಳು ಅಮೆರಿಕಕ್ಕೆ ರಫ್ತಾಗುತ್ತಿವೆ. ದೊಡ್ಡಪೇಟೆಯಲ್ಲಿರುವ ನಾಗರಾಜ್ ಎಂಬುವವರು ಕಳೆದ 15 ವರ್ಷದಿಂದ ಸಣ್ಣ ಗಾತ್ರದ ಗಣಪತಿ ವಿಗ್ರಹಗಳನ್ನು ತಯಾರಿಸಿ ಅಮೆರಿಕ ಹಾಗೂ ಬೆಂಗಳೂರಿಗೆ ಕಳುಹಿಸುತ್ತಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಚಿತ್ರದುರ್ಗ ಮೂಲದ ಕೆಲವು ಕುಟುಂಬಗಳು ಮೂರು ತಿಂಗಳ ಮೊದಲೇ ಗಣಪನ ಮೂರ್ತಿಗಾಗಿ ಇವರಿಗೆ ಬೇಡಿಕೆ ಇಡುತ್ತಾರೆ. ನಂತರ ತಯಾರಾದ ಗಣಪನನ್ನು ಆ ಕುಟುಂಬದ ಸಂಬಂಧಿಕರು ಖರೀದಿಸಿ ಕಳಿಸಿಕೊಡುತ್ತಿದ್ದಾರೆ. ಕಳೆದ 60 ವರ್ಷದಿಂದ ಗಣಪನ ವಿಗ್ರಹ ತಯಾರಿ ಮಾಡುತ್ತಿರುವ ಇಳಿವಯಸ್ಸಿನ ನಾಗರಾಜ್ ಅವರು ಮೊದಲಿನಷ್ಟು ದೊಡ್ಡ ಮಟ್ಟದಲ್ಲಿ ಗಣಪತಿ ತಯಾರಿಸುತ್ತಿಲ್ಲ. ಆದರೆ ಪರಂಪರೆ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎನ್ನುತ್ತಾರೆ ನಾಗರಾಜ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.