ಜೋಗಿಮಟ್ಟಿ ರಕ್ಷಿತಾರಣ್ಯದಲ್ಲಿ ಬೆಂಕಿ
ಕಿಡಿಗೇಡಿಗಳ ಕೃತ್ಯ ಶಂಕೆ •ಬೆಂಕಿ ನಂದಿಸಲು ಹರಸಾಹಸ
Team Udayavani, Jun 10, 2019, 1:28 PM IST
ಚಿತ್ರದುರ್ಗ: ಜೋಗಿಮಟ್ಟಿ ರಕ್ಷಿತಾರಣ್ಯಕ್ಕೆ ಬೆಂಕಿ ಬಿದ್ದಿರುವುದು.
ಚಿತ್ರದುರ್ಗ: ನಗರ ಹೊರವಲಯದ ಜೋಗಿಮಟ್ಟಿ ರಕ್ಷಿತಾರಣ್ಯಕ್ಕೆ ಬೆಂಕಿ ಬಿದ್ದ ಪರಿಣಾಮ ನೂರಾರು ಬೆಲೆ ಬಾಳುವ ಗಿಡ-ಮರಗಳು ಅಗ್ನಿಗೆ ಆಹುತಿಯಾಗಿವೆ.
ಯಾರೋ ಕಿಡಿಗೇಡಿಗಳು ರಕ್ಷಿತಾರಣ್ಯಕ್ಕೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, ಬೆಂಕಿಯ ಕೆನ್ನಾಲಿಗೆಗೆ ಅರಣ್ಯದಲ್ಲಿರುವ ಜೀವಜಂತುಗಳು ಸುಟ್ಟು ಕರಕಲಾಗಿವೆ. ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರೂ ಅನೇಕ ಗಿಡ-ಮರಗಳು, ವನ್ಯಜೀವಿಗಳು ಭಸ್ಮವಾಗಿದ್ದವು.
ಕಿಡಿಗೇಡಿಗಳು ಪದೇ ಪದೇ ಅರಣ್ಯ ಪ್ರದೇಶಕ್ಕೆ ಬೆಂಕಿ ಹಾಕುತ್ತಿದ್ದಾರೆ. ಇದರಿಂದ ಅರಣ್ಯದಲ್ಲಿರುವ ಜಾತಿಯ ಬೆಲೆ ಬಾಳುವ ಮರಗಳು ಸುಟ್ಟು ಕರಕಲಾಗಿವೆ. ಅಲ್ಲದೆ ಜೋಗಿಮಟ್ಟಿ ವನ್ಯಧಾಮದಲ್ಲಿದ್ದ ಕಾಡು ಪ್ರಾಣಿಗಳು, ಪಕ್ಷಿಗಳು ಹಾಗೂ ಕೀಟಗಳಿಗೂ ಅಪಾರ ಹಾನಿಯಾಗಿದೆ. ‘ಬಯಲುಸೀಮೆಯ ಊಟಿ’ ಎಂದೇ ಖ್ಯಾತಿಯಾಗಿರುವ ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆ ಮತ್ತಷ್ಟು ಭದ್ರತೆ ಒದಗಿಸಿ ಸಂರಕ್ಷಣೆ ಮಾಡಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.