40 ವರ್ಷ ಸೇವೆ ಸಲ್ಲಿಸಿದ ಶಿಕ್ಷಕಿಯನ್ನು ವಿಭಿನ್ನ ರೀತಿಯಲ್ಲಿ ಬೀಳ್ಕೊಟ್ಟ ಗ್ರಾಮಸ್ಥರು…
Team Udayavani, Jun 30, 2023, 6:18 PM IST
ಭರಮಸಾಗರ: (ಚಿತ್ರದುರ್ಗ) ಶಿಕ್ಷಕರು ನಿವೃತ್ತಿ ಆದರೆ ಅವರಿಗೆ ಒಂದು ಬೀಳ್ಕೊಡುಗೆ ಸಮಾರಂಭ ಮಾಡಿ ಉಡುಗೊರೆ ನೀಡಿ ಗೌರವಿಸುವದು ಸಾಮಾನ್ಯ.
ಆದರೆ ಚಿತ್ರದುರ್ಗ ತಾಲೂಕಿನ ಕೋಗುಂಡೆ ಗ್ರಾಮದಲ್ಲಿ ಇಂದು ವಯೋನಿವೃತ್ತಿ ಹೊಂದಿದ ಕೆ.ಬಿ.ನಾಗರತ್ನಮ್ಮ ಅವರ ಬೀಳ್ಕೊಡಿಗೆ ಸಮಾರಂಭ ಮಾತ್ರ ಹಲವು ಅಚ್ಚರಿಗಳಿಗೆ ಇಂದು ಸಾಕ್ಷಿಯಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಟ್ರಾಕ್ಟರ್ ನಲ್ಲಿ ಶಿಕ್ಷಕಿಯನ್ನು ಕೂರಿಸಿ ಪೂರ್ಣಕುಂಭ ಸ್ವಾಗತದೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು. ಪ್ರತಿ ಮನೆ ಮನೆಯ ಹೆಂಗಳೆಯರು ಶಿಕ್ಷಕಿ ಬಳಿಗೆ ಆಗಮಿಸಿ ಪ್ರೀತಿಯ ಹೂಹಾರ ಹಾಕಿ ನಮಸ್ಕರಿಸಿ ಆತ್ಮೀಯ ವಿದಾಯ ಹೇಳಿದರು.
ಪ್ರೀತಿಯ ಶಿಷ್ಯಂದಿರು ಮಾತ್ರ ತಮಟೆ ಸದ್ದಿಗೆ ಹೆಜ್ಜೆ ಹಾಕಿ ನೃತ್ಯ ಮಾಡುತ್ತಾ ನೆಚ್ಚಿನ ಶಿಕ್ಷಕಿ ಯ ಕೊನೆ ದಿನದ ಸೇವೆ ಯನ್ನು ಅವಿಸ್ಮರಣೀಯ ವಾಗಿಸಿದರು. ಹಳೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಶಾಲೆ ವತಿಯಿಂದ ಸಮಾರಂಭ ಏರ್ಪಡಿಸಿ ಶಿಕ್ಷಕಿಯ ಸೇವೆಯನ್ನು ಸ್ಮರಿಸಿದರು. ನೆರೆದ ಊರಿಗೆ , ಅತಿಥಿಗಳಿಗೆ ಊಟದ ವ್ಯವಸ್ಥೆ ಆಯೋಜಿಸಲಾಗಿತ್ತು.
ಶಿಕ್ಷಕಿಗೆ ಮನೆ ಮನೆಗಳಿಂದ ಸೀರೆ, ಇತರೆ ಉಡುಗೊರೆ ನೀಡಿ ತವರು ಮನೆಯ ಮಗಳಂತೆ ಹಾರೈಸಿ ಕಣ್ತುಂಬಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.
ದೂರದ ಊರುಗಳಿಂದ ನೆಚ್ಚಿನ ಶಿಷ್ಯರು ಸಾಲು ಸಾಲಾಗಿ ಬಂದು ಆಗಮಿಸಿ ಶಿಕ್ಷಕಿಗೆ ಸನ್ಮಾನಿಸಿ ಕೃತಜ್ಞತೆ ಅರ್ಪಿಸಿದರು. ಶಾಲಾ ಆವರಣದಲ್ಲಿ ಶಿಕ್ಷಕಿಯವರಿಂದ ಅರಳಿ ಗಿಡ ನೆಡಿಸಲಾಯಿತು.
ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಡಿ.ವಿ.ಶರಣಪ್ಪ, ಇಪ್ಕೋ ನಿರ್ದೇಶಕ ಎಚ್.ಎಂ.ಮಂಜುನಾಥ್, ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಕೃಷ್ಣಮೂರ್ತಿ ಸೇರಿದಂತೆ ಹಲವು ಗಣ್ಯರು ಮೆರವಣಿಗೆ ಸ್ಥಳಕ್ಕೆ ಆಗಮಿಸಿ ನಿವೃತ್ತ ಶಿಕ್ಷಕಿ ಗೆ ಸನ್ಮಾನಿಸಿ ಶುಭ ಹಾರೈಸಿದರು. ಹಾಲಿ ಶಾಲೆಯ ಮುಖ್ಯ ಶಿಕ್ಷಕಿ ಕೂಡ ನಾಗರತ್ನಮ್ಮ ಅವರ ಶಿಷ್ಯೆ ಆಗಿದ್ದು . ಇವರ ಬಳಿ ಕಲಿತವರು ಹಲವು ಉನ್ನತ ಹುದ್ದೆಗಳಲ್ಲಿ , ಇತರೆ ಸ್ವ ಉದ್ಯೋಗಗಳಲ್ಲಿ ಹೆಸರು ಮಾಡಿದ್ದಾರೆ.
ಜನ ಮೆಚ್ಚಿದ ಶಿಕ್ಷಕಿ, ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ನಾಗರತ್ನಮ್ಮ ರವರು ಇದೇ ಶಾಲೆಯಲ್ಲಿ ಉದ್ಯೋಗ ಆರಂಭಿಸಿ ಬರೋಬ್ಬರಿ 40 ವರ್ಷ 9 ತಿಂಗಳು ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮನೆ ಮಾತಾಗಿದ್ದ ಶಿಕ್ಷಕಿಯನ್ನು ಇಂದು ಇಡೀ ಕೋಗುಂಡೆ ಗ್ರಾಮ ಹಬ್ಬದಂತೆ ಸಂಭ್ರಮದಿಂದ ಶಿಕ್ಷಕಿಯನ್ನು ಬೀಳ್ಕೊಟ್ಟಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: Gujarat: ಮಳೆಗೆ 9 ಮಂದಿ ಮೃತ್ಯು… ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ ಸಾಧ್ಯತೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.