Team Udayavani, Mar 26, 2019, 5:14 PM IST
ಚಿತ್ರದುರ್ಗ: ಪ್ರಜಾತಾಂತ್ರಿಕ ವ್ಯವಸ್ಥೆಗೆ ಮಾರಕವಾಗಿರುವ ಕೋಮುವಾದಿ ಬಿಜೆಪಿಯನ್ನು ರಾಜ್ಯದಿಂದ ಕಿತ್ತೂಗೆಯುವುದೇ ಗುರಿಯಾಗಬೇಕು ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ
ನೀಡಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಬಿ.ಎನ್. ಚಂದ್ರಪ್ಪ ಸೋಮವಾರ ನಾಮಪತ್ರ ಸಲ್ಲಿಸಿದ ನಂತರ ಇಲ್ಲಿನ ಒನಕೆ ಓಬವ್ವ ವೃತ್ತದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಪಕ್ಷದವರು ಢೋಂಗಿಗಳಾಗಿದ್ದಾರೆ. ಆದ್ದರಿಂದ ಅವರನ್ನು ರಾಜ್ಯದಿಂದ ಹಿಮ್ಮೆಟ್ಟಿಸಿ ಕಿತ್ತೂಗೆಯಬೇಕಾದರೆ ಎಲ್ಲರೂ ಹೊಣೆಗಾರಿಕೆಯಿಂದ ಕೆಲಸ ಮಾಡಬೇಕು ಎಂದರು.
ರಾಜ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲೇ ಮಾಜಿ ಪ್ರಧಾನಿ ದೇವೇಗೌಡರು ಮತ್ತು ತಾವು ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಚರ್ಚಿಸಿದ್ದೇವೆ. ರಾಜ್ಯದಲ್ಲಿ ಕೋಮುವಾದಿ ಬಿಜೆಪಿಯನ್ನು ಕಿತ್ತೂಗೆಯುವ ಒಪ್ಪಂದ ಮಾಡಿಕೊಂಡಿದ್ದೇವೆ. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೇರು ಸಹಿತ ಕಿತ್ತೂಗೆಯಬೇಕು ಎಂದರು.
ನಾವು ಅಧಿಕಾರದಲ್ಲಿದ್ದಾಗ ಪ್ರತಿ ವ್ಯಕ್ತಿಗೆ ಉಚಿತವಾಗಿ 7 ಕೆಜಿ ಅಕ್ಕಿ ಕೊಟ್ಟಿದ್ದೇವೆ, ಹಾಲಿಗೆ ಸಬ್ಸಿಡಿ ಕೊಟ್ಟಿದ್ದೇವೆ, ಮಕ್ಕಳಿಗೆ ಕುಡಿಯಲು ಹಾಲು ನೀಡಿದ್ದೇವೆ. ಹಾಗಾಗಿ ಜನರು ಇನ್ನೂ ಸ್ಮರಿಸುತ್ತಾರೆ ಎಂದ ಸಿದ್ದರಾಮಯ್ಯ, ಇದ್ಯಾವುದನ್ನು ಬಿಜೆಪಿ ನೀಡಲಿಲ್ಲ ಎಂದು ಟೀಕಿಸಿದರು.
ಮೋದಿ ಅಧಿಕಾರಕ್ಕೆ ಬಂದ ಮೇಲೆ ಬೆಲೆ ನಿಯಂತ್ರಣ ಮಾಡುತ್ತೇನೆಂದು ಹೇಳಿದ್ದರು. ಯುಪಿಎ ಸರ್ಕಾರದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 360 ರೂ. ದಾಟಿರಲಿಲ್ಲ. ಆದರೆ ಮೋದಿ ಸರ್ಕಾರದ ಅವಧಿಯಲ್ಲಿ 900 ರೂ. ತನಕ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಆದ್ದರಿಂದ ಮಹಿಳೆಯರು ಒಮ್ಮೆ ಯೋಚಿಸಿ ಮತ ನೀಡಬೇಕು. ಬಿಜೆಪಿ ಎಂದೂ ಬಡವರು, ಮಹಿಳೆಯರ ಪರವಾಗಿ ಕೆಲಸ ಮಾಡುವುದಿಲ್ಲ. ಕೈ ಮುಗಿದು ಹೇಳುತ್ತೇನೆ, ದಯಮಾಡಿ ಇಂತಹ ಢೋಂಗಿಗಳಿಗೆ ಮತ ಹಾಕಬೇಡಿ ಎಂದು ಮನವಿ ಮಾಡಿದರು.
ಮೋದಿ ಶ್ರೀಮಂತರ ಚೌಕಿದಾರ
ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಬಡವರ ಮತ್ತು ದೇಶದ ಸಂಪತ್ತು ಕಾಯುವ ಚೌಕಿದಾರನಾಗಲಿಲ್ಲ. ಬದಲಾಗಿ ದೇಶದ ಶ್ರೀಮಂತರ ಚೌಕಿದಾರನಾಗಿ ಐದು ವರ್ಷ ಕೆಲಸ ಮಾಡಿದ್ದಾರೆ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಸೋಮವಾರ ನಾಮಪತ್ರ ಸಲ್ಲಿಸಿದ ನಂತರ ಇಲ್ಲಿನ ಒನಕೆ ಓಬವ್ವ ವೃತ್ತದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ತಮ್ಮ ಭಾಷಣದುದ್ದಕ್ಕೂ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಪರಿಶಿಷ್ಟ ಜಾತಿ, ಪಂಗಡ, ದಲಿತರು, ಶೋಷಿತರು, ಇತರೆ ಹಿಂದುಳಿದ ವರ್ಗಗಳ ಮಹಾಗ್ರಂಥವಾದ ಸಂವಿಧಾನವನ್ನು ಬದಲಾವಣೆ ಮಾಡಲು ಬಿಜೆಪಿಯವರು ಹೊರಟಿದ್ದಾರೆ. ಪ್ರಜಾಪ್ರಭುತ್ವ ಬಿಟ್ಟು ಸರ್ವಾಧಿಕಾರಿಗಳಾಗಲು ಮುಂದಾಗಿದ್ದಾರೆ. “ಅಚ್ಚೇ ದಿನ್ ಆಯೆಗಾ’ ಎಂದು ಮೋದಿ ಹೇಳಿದ್ದರು. ಆದರೆ ಅಂಬಾನಿ, ಅದಾನಿ, ಮಲ್ಯ, ನೀರವ್ ಮೋದಿ ಅಂಥವರಿಗೆ “ಅಚ್ಚೇ ದಿನ್’ ಬಂದಿದೆ. ಜನಸಾಮಾನ್ಯರಿಗೆ “ಅಚ್ಛೇ ದಿನ್ ನಹೀ ಆಯೇಗಾ’ ಎನ್ನುವಂತಾಗಿದೆ ಎಂದರು.
ಸ್ವಾತಂತ್ರ್ಯಾ ನಂತರ ಆಡಳಿತ ನಡೆಸಿದ ಎಲ್ಲ ಪ್ರಧಾನಮಂತ್ರಿಗಳಿಗಿಂತ ನರೇಂದ್ರ ಮೋದಿ ಅತಿ ಹೆಚ್ಚು ಸುಳ್ಳು ಹೇಳಿದ್ದಾರೆ. ದೇಶದ ಜನರಲ್ಲಿ ಬಹು ದೊಡ್ಡ ಭ್ರಮೆ ಹುಟ್ಟಿಸಿ ಕನಸುಗಳನ್ನು ಬಿತ್ತಿದ ಮೋದಿ, ಬಡವರ, ರೈತರ, ಕೂಲಿ ಕಾರ್ಮಿಕರ, ಅಲ್ಪಸಂಖ್ಯಾತರ, ದಲಿತರ ಪರವಾದ ಒಂದೇ ಒಂದು ಕಾರ್ಯಕ್ರಮವನ್ನೂ ಜಾರಿಗೆ ತರಲಿಲ್ಲ. ಐದು ವರ್ಷಗಳ ಕಾಲ ಶ್ರೀಮಂತರ ಪರವಾಗಿಯೇ ಆಡಳಿತ ಮಾಡಿದ್ದಾರೆ. ಮೋದಿ ಅವರಷ್ಟು ಸುಳ್ಳು ಹೇಳಿರುವ ಪ್ರಧಾನಿಯನ್ನು ನೋಡಿಲ್ಲ ಎಂದು ಕುಟುಕಿದರು.
ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಯನ್ನು ಜೆಡಿಎಸ್-ಕಾಂಗ್ರೆಸ್ ಒಗ್ಗೂಡಿ ಎದುರಿಸುತ್ತಿದ್ದೇವೆ. ಹಾಗಾಗಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದ್ದೇವೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಡಂಬಡಿಕೆ ಮಾಡಿಕೊಂಡಂತೆ 28 ಸ್ಥಾನಗಳಲ್ಲಿ 20 ಕಾಂಗ್ರೆಸ್, 8 ಸ್ಥಾನಗಳನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಲಾಗಿತ್ತು. ಅದರಲ್ಲಿ ಮತ್ತೂಂದು ಸ್ಥಾನವನ್ನು ಜೆಡಿಎಸ್, ನಮ್ಮ ಪಕ್ಷಕ್ಕೆ ಬಿಟ್ಟು ಕೊಡುವ ಸಾಧ್ಯತೆ ಇದೆ.
ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ.