ಕೋವಿಡ್ ಸಮರಕ್ಕೂ ಸಿದ್ಧ- ಅಭಿವೃದ್ಧಿಗೂ ಬದ್ಧ; ಚಳ್ಳಕೆರೆ ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ
ಸ್ವತಃ ಕಾರು ಚಾಲನೆ ಮಾಡುತ್ತಾ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ಜನನಾಯಕ ಟಿ. ರಘುಮೂರ್ತಿ
Team Udayavani, May 9, 2020, 2:31 AM IST
ಚಳ್ಳಕೆರೆ: ಶಾಸಕರ ಭವನದ ಬಳಿ ಡಾ| ಶಿವಮೂರ್ತಿ ಮುರುಘಾ ಶರಣರೊಂದಿಗೆ ದಿನಸಿ ಕಿಟ್ ವಿತರಿಸಿದ ಶಾಸಕ ಟಿ. ರಘುಮೂರ್ತಿ.
ಚಿತ್ರದುರ್ಗ: ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್ ಮಹಾಮಾರಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ಕಾಲಿಡದಂತೆ ತಡೆಯಲು ಶಾಸಕ ಟಿ. ರಘುಮೂರ್ತಿ ಆರಂಭದಿಂದಲೇ ಪಣ ತೊಟ್ಟರು. ಕ್ಷೇತ್ರದಲ್ಲಿ ಏಕಾಂಗಿಯಾಗಿ ಸುತ್ತಾಡಿ ಜನರಲ್ಲಿ ಜಾಗೃತಿ ಮೂಡಿಸಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡರು.
ತತ್ಪರಿಣಾಮವಾಗಿ ರಾಜ್ಯದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕೋವಿಡ್ ಸೋಂಕು ಚಳ್ಳಕೆರೆ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ. ಇದಕ್ಕೆ ಶಾಸಕರ ಇಚ್ಛಾಶಕ್ತಿ ಹಾಗೂ ಬದ್ಧತೆಯೇ ಕಾರಣವೆಂದರೂ ತಪ್ಪಾಗಲಾರದು.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ಪಡಿತರ ಸಿಗುತ್ತಿದೆಯಾ, ಔಷಧ ಸಮಸ್ಯೆ ಇದೆಯಾ, ನೀರಿನ ಸಮಸ್ಯೆ ಸೃಷ್ಟಿಯಾಗಿದೆಯಾ ಎಂದು ತಾಲೂಕಿನ ಹಳ್ಳಿಗಳನ್ನು ಸುತ್ತು ಹಾಕುವ ಮೂಲಕ ನಿಜವಾದ ಜನನಾಯಕ ಎನ್ನಿಸಿಕೊಂಡಿದ್ದಾರೆ.
ಮಾರಕ ಕಾಯಿಲೆ ಹಾಗೂ ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುತ್ತದೆ ಎಂಬ ಅರಿವಿದ್ದರೂ ಜನ ಸಂಕಷ್ಟದಲ್ಲಿರುವಾಗ ಮನೆಯಲ್ಲಿ ಕೂರಲು ಮನಸಾಗದೇ ಕ್ಷೇತ್ರಾದ್ಯಂತ ಸುತ್ತಿ ಜನರ ನೆರವಿಗೆ ಮುಂದಾಗಿದ್ದಾರೆ. ತಮ್ಮ ವಾಹನ ಚಾಲಕರು, ಆಪ್ತ ಸಹಾಯಕರಿಗೆ ರಜೆ ನೀಡಿ, ತಮ್ಮ ಇನ್ನೋವಾ ಕಾರನ್ನು ತಾವೇ ಚಾಲನೆ ಮಾಡಿಕೊಂಡು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಕೇಂದ್ರಗಳಿಗೆ ಒಂದೇ ತಿಂಗಳಲ್ಲಿ ಎರಡು ಬಾರಿ ಭೇಟಿ ನೀಡಿದ ಅಪರೂಪದ ಶಾಸಕರಾಗಿದ್ದಾರೆ.
ಚಳ್ಳಕೆರೆ: ವಿವಿ ಸಾಗರ ನೀರು ವೇದಾವತಿ ನದಿಗೆ ಹರಿಸಲು ಚಾಲನೆ ನೀಡಿದ ಸಂದರ್ಭ. ಸಚಿವ ರಮೇಶ್ ಜಾರಕಿಹೊಳಿ, ಸಂಸದ ನಾರಾಯಣಸ್ವಾಮಿ ಇದ್ದರು.
ವರ್ಷವಿಡೀ ಜನರ ನಡುವೆ ಇದ್ದು ಸಾಕಾಗಿದೆ, ಹಾಗಾಗಿ ಮನೆಯಲ್ಲಿರಲು ಇದು ಸಕಾಲ ಎಂದು ಶಾಸಕ ರಘುಮೂರ್ತಿ ಭಾವಿಸಲೇ ಇಲ್ಲ. ಕೋವಿಡ್ ಆತಂಕ ಬದಿಗಿಟ್ಟು ನಿಜವಾಗಿ ಕೆಲಸ ಮಾಡಬೇಕಾದ ಸಂದರ್ಭವಿದು ಎಂದು ಬೀದಿಗಿಳಿದವರು ನಮ್ಮ ಶಾಸಕರು ಎಂದು ಚಳ್ಳಕೆರೆ ಕ್ಷೇತ್ರದ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮೊದಲ ಹಂತದಲ್ಲಿ ಚಳ್ಳಕೆರೆ ನಗರದಲ್ಲಿ ವಾರ್ಡ್‌ವಾರು ಅಧಿಕಾರಿಗಳು, ನಗರಸಭೆ ಸದಸ್ಯರು ಹಾಗೂ ಪಕ್ಷದ ಪ್ರಮುಖ ಕಾರ್ಯಕರ್ತರ ಸಭೆ ನಡೆಸಿದರು. ಅಗತ್ಯ ಸಾಮಗ್ರಿಗಳ ಕೊರತೆಯಾಗದಂತೆ ನೋಡಿಕೊಳ್ಳುವುದು ಹಾಗೂ ಜನ ಅನಗತ್ಯವಾಗಿ ಮನೆಯಿಂದ ಹೊರ ಬಾರದಂತೆ ಖುದ್ದು ಮನೆಬಾಗಿಲಿಗೆ ದಿನಸಿ ತಲುಪಿಸುವ ವ್ಯವಸ್ಥೆ, ನೀರಿನ ವ್ಯವಸ್ಥೆ ಮಾಡಿದರು. ನಂತರ ಗ್ರಾಮೀಣ ಪ್ರದೇಶಗಳ ಕಡೆ ಗಮನಹರಿಸಿದರು.
ಹಳ್ಳಿಗಳತ್ತ ಮುಖ ಮಾಡಿದ ಶಾಸಕ ಟಿ. ರಘುಮೂರ್ತಿ, ನಸುಕಿನಲ್ಲಿ ಮನೆಯಿಂದ ಹೊರಟು, ಗ್ರಾಪಂ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಪಿಡಿಒ ಹಾಗೂ ಗ್ರಾಪಂ ಸದಸ್ಯರ ಸಭೆ ನಡೆಸಿ ಹಳ್ಳಿಗಳಲ್ಲಿ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸಲಹೆ ನೀಡುತ್ತಿದ್ದರು. ಸಂಕಷ್ಟದಲ್ಲಿರುವವರಿಗೆ ದಿನಸಿ ಮತ್ತಿತರೆ ವ್ಯವಸ್ಥೆ ಮಾಡತೊಡಗಿದರು. ಇದೇ ವೇಳೆ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಿ ಭಯ ನಿವಾರಣೆ ಮಾಡುವ ಕೆಲಸದಲ್ಲೂ ತೊಡಗಿಸಿಕೊಂಡಿದ್ದು ಗಮನಾರ್ಹ.
ಸತತ 7 ವರ್ಷಗಳಿಂದ ದಾಸೋಹ ಸೇವೆ
ಕೋವಿಡ್ ವೈರಾಣು ಹರಡುವುದನ್ನು ತಡೆಯಲು ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡುತ್ತಿದ್ದಂತೆ ಹೋಟೆಲ್, ಖಾನಾವಳಿ ಎಲ್ಲಾ ಬಂದ್ ಆಗಿಬಿಟ್ಟವು. ಇದರಿಂದ ಅನೇಕ ನಿರಾಶ್ರಿತರು, ಕಾರ್ಮಿಕರು, ಪರ ಊರುಗಳಿಂದ ಬಂದು ಚಳ್ಳಕೆರೆ ಕ್ಷೇತ್ರದಲ್ಲಿ ಉಳಿದಿದ್ದವರು ಕಂಗಾಲಾಗಿ ಹೋಗಿದ್ದರು.
ಈ ವೇಳೆ ಅಂಥವರ ಹಸಿವು ನೀಗಿಸುವ ಕೆಲಸ ಮಾಡಿದ್ದು ಚಳ್ಳಕೆರೆ ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ಅವರ ಶಾಸಕರ ಭವನ. ಕಳೆದ ಏಳು ವರ್ಷಗಳಿಂದ ಇಲ್ಲಿ ಪ್ರತಿ ದಿನವೂ ಮಧ್ಯಾಹ್ನ ಊಟದ ವ್ಯವಸ್ಥೆ ಇದೆ ಎನ್ನುವುದು ಈ ಕ್ಷೇತ್ರದ ಪ್ರತಿಯೊಬ್ಬರಿಗೂ ಗೊತ್ತು. ಮಧ್ಯಾಹ್ನ ಮಾತ್ರ ಇದ್ದ ಊಟದ ವ್ಯವಸ್ಥೆ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಎರಡು ಹೊತ್ತಿಗೆ ವಿಸ್ತರಣೆಯಾಯಿತು.
ಪೊಲೀಸರು, ಆಶಾ ಕಾರ್ಯಕರ್ತೆಯರು, ಅ ಧಿಕಾರಿಗಳು, ವೃದ್ಧರು, ಅನಾಥರು, ನಿರಾಶ್ರಿತರು ಸೇರಿದಂತೆ ಪ್ರತಿ ದಿನ ಕನಿಷ್ಠ 500 ಜನ ಇಲ್ಲಿ ಊಟ ಮಾಡುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಜತೆಗೆ, ಅತ್ಯಂತ ಸ್ವಚ್ಛವಾಗಿ ಶಾಸಕರ ಭವನದ ಸಿಬ್ಬಂದಿ ಬಿಸಿ ಬಿಸಿ ಅಡುಗೆ ತಯಾರಿಸಿ ಹಸಿದವರಿಗೆ ಬಡಿಸಿದ್ದಾರೆ.
ಗುಣಮಟ್ಟದ ಅಕ್ಕಿ, ಬೇಳೆ, ಶುದ್ಧ ಶೇಂಗಾ ಎಣ್ಣೆ, ತಾಜಾ ಸೊಪ್ಪು, ತರಕಾರಿಗಳನ್ನು ಬಳಸಿ ಅನ್ನ, ತರಕಾರಿ ಸಾಂಬಾರ್, ಉಪ್ಪಿನಕಾಯಿ ಮತ್ತು ಮಜ್ಜಿಗೆ ನೀಡುವ ಕೆಲಸ ಇಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ಬೆಳಿಗ್ಗೆ 9 ರಿಂದ ಅಡುಗೆ ತಯಾರಿ ಕೆಲಸ ಆರಂಭವಾದರೆ ಸಂಜೆ 8 ಗಂಟೆವರೆಗೆ ಇಲ್ಲಿ ಚಟುವಟಿಕೆ ಇರುತ್ತದೆ. ಮಧ್ಯಾಹ್ನ ಮತ್ತು ರಾತ್ರಿ ಎರಡು ಹೊತ್ತು ಊಟದ ವ್ಯವಸ್ಥೆ ಮಾಡಲಾಗಿದೆ.
ಚಳ್ಳಕೆರೆ: ಮಠಾಧೀಶರೊಡಗೂಡಿ ಕ್ಷೇತ್ರದ ಕೋವಿಡ್ ವಾರಿಯರ್ಸ್ ಗೆ ದಿನಸಿ ವಿತರಣೆ ಮಾಡುತ್ತಿರುವ ಸಂದರ್ಭ.
ಶಿಕ್ಷಣ ಕ್ಷೇತ್ರಕ್ಕೂ ಆದ್ಯತೆ
ಸ್ವತಃ ಇಂಜಿನಿಯರ್ ಆಗಿರುವ ಶಾಸಕ ಟಿ. ರಘುಮೂರ್ತಿ ಅವರು ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಅವರ ದೂರದೃಷ್ಟಿಯ ಫಲವಾಗಿ ಗಗನ ಕುಸುಮವಾಗಿದ್ದ ಇಂಜಿನಿಯರಿಂಗ್ ಕಾಲೇಜು ರಾಜ್ಯದ ಗಡಿ ತಾಲೂಕು ಚಳ್ಳಕೆರೆಯಲ್ಲಿ ಭವ್ಯವಾಗಿ ತಲೆ ಎತ್ತಿದೆ. 61 ಕೋಟಿ ರೂ. ವೆಚ್ಚದಲ್ಲಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣ ಮಾಡಿದ್ದು, ಇದರಿಂದ ಈ ಭಾಗದ ಯುವಕ, ಯುವತಿಯರಿಗೆ ವಲಸೆ ಹೋಗುವುದನ್ನು ತಪ್ಪಿಸಿದ್ದಾರೆ.
ಜತೆಗೆ 48 ಕೋಟಿ ರೂ. ವೆಚ್ಚದಲ್ಲಿ ವೃತ್ತಿಪರ ಕೌಶಲ್ಯ ತರಬೇತಿ ಕೇಂದ್ರವನ್ನೂ ತೆರೆದಿದ್ದಾರೆ. ಅಲ್ಲದೆ ಈಗಾಗಲೇ ಇರುವ ಸರ್ಕಾರಿ ಕಾಲೇಜು, ಶಾಲೆ, ಮೊರಾರ್ಜಿ ಶಾಲೆಗಳಿಗೆ ಕೋಟ್ಯಂತರ ರೂ. ಅನುದಾನ ತಂದು ಹೊಸ ರೂಪ ಕೊಡುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಶಾಸಕ ರಘುಮೂರ್ತಿ ತಾಲೂಕಿನ 26 ಗ್ರಾಮ ಪಂಚಾಯತ್‌ಗಳಿಗೆ ತೆರಳಿ ತಿಪ್ಪೆಗಳ ತೆರವು, ಚರಂಡಿ ಸ್ವಚ್ಛತೆ, ಕೋವಿಡ್ ಜಾಗೃತಿ, ಆರ್‌ಒ ಪ್ಲಾಂಟ್ ರಿಪೇರಿ ಸೇರಿದಂತೆ ಹತ್ತು ಹಲವು ಕೆಲಸಗಳನ್ನು ಮಾಡಿ ಗಮನ ಸೆಳೆದಿದ್ದಾರೆ.
ರೈತರಿಗೂ ಸಹಾಯಹಸ್ತ
ಕೋವಿಡ್ ಲಾಕ್‌ಡೌನ್‌ಗೆ ಸಿಲುಕಿದ ರೈತರು ಸಂಕಷ್ಟದಲ್ಲಿದ್ದಾರೆ. ಅವರು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಸಿಗುತ್ತಿಲ್ಲ. ಬೆಳೆದ ಬೆಳೆ ಜಮೀನಿನಲ್ಲೇ ಕೊಳೆಯುತ್ತಿದೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಶಾಸಕ ರಘುಮೂರ್ತಿ ಅಧಿಕಾರಿಗಳ ತಂಡದೊಂದಿಗೆ ಜಮೀನುಗಳಿಗೆ ಭೇಟಿ ನೀಡಿ ಬೆಳೆ ವಿವರ ದಾಖಲಿಸಿ ಜಿಪಿಎಸ್ ಮಾಡಿಸತೊಡಗಿದ್ದರು.
ಶಾಶ್ವತ ಕಾಮಗಾರಿಗಳಿಗೆ ಒತ್ತು
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತುಂಗಭದ್ರಾ ಹಿನ್ನೀರಿನಿಂದ ಚಳ್ಳಕೆರೆ, ಪಾವಗಡ, ಕೂಡ್ಲಿಗಿ ಹಾಗೂ ಮೊಳಕಾಲ್ಮೂರು ತಾಲೂಕುಗಳಿಗೆ ಕುಡಿಯುವ ನೀರು ತರುವಲ್ಲಿ ರಘುಮೂರ್ತಿ ಅವರದ್ದು ಪ್ರಮುಖ ಪಾತ್ರ. ಈ ನಾಲ್ಕು ತಾಲೂಕುಗಳ ಪೈಕಿ ಇವರು ಏಕೈಕ ಕಾಂಗ್ರೆಸ್ ಶಾಸಕರಾಗಿದ್ದರು. ಪರಶುರಾಮಪುರ, ಚೌಳೂರು ಹಾಗೂ ಬೊಂಬೇರ ಹಳ್ಳಿ ಗ್ರಾಮಗಳಲ್ಲಿ ಮೂರು ಬೃಹತ್ ಗಾತ್ರದ ಬ್ಯಾರೇಜ್ ನಿರ್ಮಿಸಿ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ.
ಬರದ ನಾಡಿಗೆ ನೀರು ತಂದ ಭಗೀರಥ
ಒಂದು ಕಾಲದಲ್ಲಿ ಚಳ್ಳಕೆರೆ ‘ಮಿನಿ ಬಾಂಬೆ’ ಎಂದೇ ಹೆಸರಾಗಿತ್ತು. ಇಲ್ಲಿರುವ ಆಯಿಲ್ ಮಿಲ್‌ಗಳು, ಶೇಂಗಾ ಬೆಳೆ, ವ್ಯಾಪಾರ ವಹಿವಾಟು ಎಲ್ಲವೂ ಭರ್ಜರಿಯಾಗಿತ್ತು. ಕ್ರಮೇಣ ಮಳೆ, ಬೆಳೆ ಕಡಿಮೆಯಾದಂತೆ ಎಲ್ಲವೂ ಗೌಣವಾಗುತ್ತಾ ಸಾಗಿದವು. ಮಳೆಯಾಶ್ರಿತ ಬೆಳೆ ವ್ಯವಸ್ಥೆ ಇರುವುದರಿಂದ ರೈತರು ಕೂಡ ಅಸಹಾಯಕರಾಗಿದ್ದರು.
ಚಳ್ಳಕೆರೆ ತಾಲೂಕಿನಲ್ಲಿ ವೇದಾವತಿ ನದಿ ಹಾದು ಹೋಗಿದ್ದರೂ ಇದು ಮೈದುಂಬಿ ಹರಿದಿದ್ದಾಗಲೀ, ಅದರಿಂದ ರೈತರು ಪ್ರಯೋಜನ ಪಡೆದುಕೊಂಡಿದ್ದಾಗಲೀ ಕಂಡವರಿಲ್ಲ. ಚಳ್ಳಕೆರೆ ಕ್ಷೇತ್ರಕ್ಕೆ ಎರಡನೇ ಅವಧಿಗೆ ಶಾಸಕರಾಗಿ ಆಯ್ಕೆಯಾದ ನಂತರ ಟಿ. ರಘುಮೂರ್ತಿ ಅವರು ವೇದಾವತಿ ನದಿಯಲ್ಲಿ ಕುಡಿಯುವ ಉದ್ದೇಶಕ್ಕೆ ನೀರು ಹರಿಸುವಲ್ಲಿ ಸಫಲರಾಗಿದ್ದಾರೆ. ಈ ಮೂಲಕ ಕ್ಷೇತ್ರದ ಜನರ ಪಾಲಿಗೆ ಬರದ ನಾಡಿನ ಆಧುನಿಕ ಭಗೀರಥನಾಗಿದ್ದಾರೆ.
ಕ್ಷೇತ್ರದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೇರೆ ಯಾವ ಯೋಜನೆ ತರಲಿ, ಮತ್ತೇನು ಮಾಡಲಿ ಎಂದು ಸದಾ ತುಡಿಯುವ ಶಾಸಕರು ಈಗ ವಿರೋಧ ಪಕ್ಷದಲ್ಲಿದ್ದರೂ ಕೂಡಾ ಆಡಳಿತ ಪಕ್ಷದ ಶಾಸಕರು, ಸಚಿವರು ಹಾಗೂ ಸರ್ಕಾರದ ವಿಶ್ವಾಸ ಗಳಿಸಿದ್ದಾರೆ. ತಮ್ಮ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯುವ ಉದ್ದೇಶಕ್ಕೆ 0.25 ಟಿಎಂಸಿ ನೀರು ಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೀರು ಹರಿದ ಕ್ರೆಡಿಟ್ ನನ್ನೊಬ್ಬನಿಗೆ ಸೇರುವುದು ಬೇಡ. ಇದರಲ್ಲಿ ಸಂಸದರ ಜವಾಬ್ದಾರಿಯೂ ಇದೆ. ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರವೂ ಇದೆ. ಜಲಸಂಪನ್ಮೂಲ ಸಚಿವರು ಹಾಗೂ ಮುಖ್ಯಮಂತ್ರಿಗಳು ಕೂಡಾ ಅತ್ಯಂತ ಪಾರದರ್ಶಕವಾಗಿ ನಡೆದುಕೊಂಡಿದ್ದಾರೆ ಎಂದು ಹೇಳುವ ಮೂಲಕ ದೊಡ್ಡತನ ಮೆರೆದಿದ್ದಾರೆ.
ಇಡೀ ದೇಶ ಕೋವಿಡ್ ಮಹಾಮಾರಿಯ ಆತಂಕದಲ್ಲಿದ್ದರೆ ಚಳ್ಳಕೆರೆ ತಾಲೂಕಿನ ಜನ ಮಾತ್ರ ನೀರು ಹರಿಯುತ್ತಿದ್ದಂತೆ ಕೋವಿಡ್ ಆತಂಕ ಬದಿಗಿಟ್ಟು ಸಂಭ್ರಮಿಸಿದ್ದಾರೆ. ನಮ್ಮೂರಿನ ವೇದಾವತಿ ನದಿಯಲ್ಲಿ ನೀರು ಕಾಣಿಸಿತಲ್ಲ ಎಂದು ದಿನವೂ ನದಿಗಿಳಿದು ಸಂಭ್ರಮಿಸುತ್ತಿರುವ ಪರಿ ಬಣ್ಣಿಸಲಸಾಧ್ಯ. ಇದರ ಹಿಂದಿನ ಶಕ್ತಿ ಶಾಸಕ ಟಿ. ರಘುಮೂರ್ತಿ ಅವರಾಗಿದ್ದಾರೆ.
ಚಳ್ಳಕೆರೆ: ಬೊಂಬೇರಹಳ್ಳಿ ಬ್ಯಾರೇಜ್‌ಗೆ ಪೂಜೆ ಸಲ್ಲಿಸಿದ ಶಾಸಕ ಟಿ. ರಘುಮೂರ್ತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.