ಚಂದ್ರಯಾನ-3ಕ್ಕೆ ದೊಡ್ಡಉಳ್ಳಾರ್ತಿಯಲ್ಲಿ ಬುನಾದಿ
Team Udayavani, Aug 24, 2023, 12:22 AM IST
ನಾಯಕನಹಟ್ಟಿ: ದೇಶ ಮತ್ತು ಇಡೀ ವಿಶ್ವದ ಜನರ ಕುತೂಹಲಕ್ಕೆ ಕಾರಣವಾಗಿರುವ ಚಂದ್ರಯಾನ-3ಕ್ಕೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡಉಳ್ಳಾರ್ತಿಯಲ್ಲಿ ಕೃತಕ ಚಂದ್ರನ ಮೇಲ್ಮೈಯನ್ನು ಸೃಷ್ಟಿಸಿ ಪ್ರಯೋಗಗಳನ್ನು ಕೈಗೊಳ್ಳಲಾಗಿತ್ತು.
ದೊಡ್ಡಉಳ್ಳಾರ್ತಿ ಸಮೀಪ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) 473 ಎಕರೆ ಪ್ರದೇಶವನ್ನು ಹೊಂದಿದ್ದು, 150 ಎಕರೆ ಪ್ರದೇಶದಲ್ಲಿ ನಾಯಕನಹಟ್ಟಿ ಬಳಿ ಇಸ್ರೋ ಸಿಬಂದಿಗೆ ನಿವಾಸಗಳನ್ನು ನಿರ್ಮಿಸಲಾಗುತ್ತಿದೆ.
ದೊಡ್ಡಉಳ್ಳಾರ್ತಿ ಇಸ್ರೋ ನೆಲೆಯಲ್ಲಿ ಚಂದ್ರನ ಮೇಲ್ಮೈಯಲ್ಲಿರುವ ರೀತಿಯಲ್ಲಿ ಕುಳಿ(ತಗ್ಗು)ಗಳನ್ನು ಕೃತಕವಾಗಿ ನಿರ್ಮಿಸಲಾಗಿದೆ.
ಈಗಾಗಲೇ ಈ ಕುಳಿಗಳನ್ನು ನೌಕೆಗಳನ್ನು ಬಳಸಿ ಪರಿಶೀಲಿಸಲಾಗಿದೆ. ವಿಕ್ರಂ ಲ್ಯಾಂಡರ್ ಕುಳಿಗಳನ್ನು ಗುರುತಿಸುವುದು ಮತ್ತು ಯಾವ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ಸಾಧ್ಯ ಎನ್ನುವುದು ಇಲ್ಲಿ ಕೈಗೊಂಡ ಪ್ರಯೋಗಗಳ ಆಧಾರದ ಮೇಲೆ ಅಂದಾಜಿಸಲಾಗಿದೆ.
ಲ್ಯಾಂಡರ್ ನೌಕೆಯಿಂದ ಇಳಿದು ಚಂದ್ರನ ಮೇಲೆ ಓಡಾಡುವ ರೋವರ್ ಎಂಬ ಪುಟಾಣಿ ನೌಕೆಯ ಚಲನೆಯನ್ನು ಅಭ್ಯಾಸ ಮಾಡುವುದಕ್ಕೆ ಇಲ್ಲಿನ ಕೃತಕ ಚಂದ್ರನ ಅಂಗಳವನ್ನು ನಿರ್ಮಿಸಲಾಗಿದೆ.
ಚಂದ್ರನಲ್ಲಿರುವ ಮೂಲವಸ್ತುಗಳು, ಚಿತ್ರಗಳು ಹಾಗೂ ಅಲ್ಲಿನ ವಾತಾವರಣವನ್ನು ತಿಳಿಯಲು ಈ ಕಾರ್ಯ ಯೋಜನೆ ಉಪಯುಕ್ತವಾಗಲಿದೆ. ಇಸ್ರೋ ಆವರಣದ ಸುಮಾರು ಎರಡು ಕಿಮೀ ಸುತ್ತಳತೆಯಲ್ಲಿ ಇಸ್ರೋ ವಿಜ್ಞಾನಿಗಳು ನೀಡಿರುವ ಸೂಚನೆಗಳಂತೆ ನಾನಾ ಗಾತ್ರದ ಒಟ್ಟು ಒಂಭತ್ತು ಕುಳಿಗಳನ್ನು ನಿರ್ಮಿಸಲಾಗಿದೆ. ಇಳಿಜಾರು, ಆಳ, ವ್ಯಾಸ, ಸುತ್ತಳತೆಯಲ್ಲಿ ಕುಳಿಗಳು ವೈವಿಧ್ಯತೆ ಹೊಂದಿವೆ. ಇಸ್ರೋ ವಿಜ್ಞಾನಿಗಳು ನೀಡಿರುವ ಡ್ರಾಯಿಂಗ್‌ಗಳ ಮಾದರಿಯಲ್ಲಿ ಸ್ಥಳೀಯ ನಿರ್ಮಿತಿ ಕೇಂದ್ರದ ಎಂಜಿನಿಯರ್‌ಗಳು ಕುಳಿಗಳನ್ನು ಸಿದ್ಧಪಡಿಸಿದ್ದರು. 2017ರಿಂದಲೇ ಇಲ್ಲಿನ ಪ್ರದೇಶದಲ್ಲಿ ಚಂದ್ರಯಾನಕ್ಕಾಗಿ ಫೀಲ್ಡ್ ಸಿದ್ಧಗೊಂಡಿತ್ತು. ಮೊದಲ ಕುಳಿ ಹತ್ತು ಮೀಟರ್ ವ್ಯಾಸ (ಸುತ್ತಳತೆ) ಹಾಗೂ ಮೂರು ಅಡಿ ಆಳ, ಎರಡನೇ ಕುಳಿ ಒಂಭತ್ತು ಮೀಟರ್ ವ್ಯಾಸ ಮತ್ತು 3.7 ಅಡಿ ಆಳ, ಮೂರನೇ ಕುಳಿ ಒಂಭತ್ತು ಅಡಿ ವ್ಯಾಸ, 2.70 ಅಡಿ ಆಳವನ್ನು ಹೊಂದಿದೆ. ಹೀಗೆ ನಾನಾ ಅಳತೆಗಳನ್ನು ಹೊಂದಿರುವ ಒಂಭತ್ತು ಕುಳಿಗಳನ್ನು ಸಿದ್ಧಪಡಿಸಲಾಗಿತ್ತು.
ಚಂದ್ರನ ಮೇಲ್ಮೈ ಹೋಲುವ ಮಣ್ಣು!
ತಮಿಳುನಾಡಿನ ಸೇಲಂನಲ್ಲಿರುವ ಮಣ್ಣು ಚಂದ್ರನ ಮೇಲ್ಮೈಯನ್ನು ಹೋಲುತ್ತಿದೆ. ಹೀಗಾಗಿ ಅಲ್ಲಿನ ಮಣ್ಣನ್ನು ತಂದು ಇಲ್ಲಿನ ಕುಳಿಗಳ ಮೇಲೆ ಎರಚಿ ಕೃತಕ ಚಂದ್ರ ಪ್ರದೇಶವನ್ನು ಸಿದ್ಧಪಡಿಸಲಾಗಿದೆ.
ಚಂದ್ರನಲ್ಲಿರುವ ಕುಳಿಗಳನ್ನು ಆಧರಿಸಿ ಈ ಅಳತೆಗಳನ್ನು ನಿಗದಿಗೊಳಿಸಲಾಗಿದೆ. ವಿಕ್ರಂ ಲ್ಯಾಂಡರ್ ಇಳಿಯುವ ಮೊದಲು ತಾಲೀಮು ನಡೆಸುವ ಉದ್ದೇಶದಿಂದ ಇಲ್ಲಿನ ಪ್ರದೇಶದಲ್ಲಿ ಕೃತಕ ಕುಳಿಗಳನ್ನು ನಿರ್ಮಿಸಿ ಅಭ್ಯಾಸ ಮಾಡಲಾಗಿದೆ. 2017ರಿಂದ ಇಸ್ರೋ ವಿಜ್ಞಾನಿಗಳು ಇಲ್ಲಿನ ಪ್ರದೇಶದಲ್ಲಿ ನಿರಂತರ ಪ್ರಯೋಗಗಳನ್ನು ಕೈಗೊಳ್ಳುತ್ತಿದ್ದಾರೆ.
ಚಂದ್ರನ ಮೇಲೆ ಕ್ಷುದ್ರಗ್ರಹಗಳ ಅಪ್ಪಳಿಸುವಿಕೆಯಿಂದ ನಾನಾ ಗಾತ್ರದ ಕುಳಿಗಳು ಉಂಟಾಗಿವೆ. ಇವುಗಳು ಕೆಲವೇ ಅಡಿಗಳ ಅಳತೆಯಿಂದ ಗರಿಷ್ಠ 290 ಕಿಮೀ ಅಳತೆಯನ್ನು ಹೊಂದಿವೆ. ನಾನಾ ಗಾತ್ರದ ಕ್ಷುದ್ರಗ್ರಹಗಳ ಅಪ್ಪಳಿಸುವಿಕೆಯಿಂದ ಬೇರೆ ಬೇರೆ ಗಾತ್ರದ ಕುಳಿಗಳು ಉಂಟಾಗಿವೆ. ನಾನಾ ರೀತಿಯ ಆಕಾರ ಮತ್ತು ಅಳತೆಯನ್ನು ಈ ಕುಳಿಗಳು ಹೊಂದಿವೆ. ಇಂತಹ ಲಕ್ಷಾಂತರ ಕುಳಿಗಳು ಚಂದ್ರನಲ್ಲಿವೆ. ಉಪಗ್ರಹದ ಮೂಲಕ ಕಳಿಸಲಾಗಿರುವ ಲ್ಯಾಂಡರ್‌ನಲ್ಲಿರುವ ರೋವರ್ ಉಪಕರಣವು ಚಂದ್ರನ ಮೇಲೆ ಇಳಿದು ಅಧ್ಯಯನ ನಡೆಸಲಿದೆ. ಚಂದ್ರಯಾನ-3ಕ್ಕೆ ಅಗತ್ಯವಾದ ಸಿದ್ಧತೆಗಳಿಗೆ ದೊಡ್ಡಉಳ್ಳಾರ್ತಿ ಪ್ರಯೋಗಶಾಲೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.