“ಕೈ’ ತಪ್ಪಿದ ಕ್ಷೇತ್ರ ವಶಕ್ಕೆ ಹರಸಾಹಸ
Team Udayavani, Apr 2, 2018, 5:30 PM IST
ಚಿತ್ರದುರ್ಗ: ಏಳುಸುತ್ತಿನ ಕೋಟೆ, ಪ್ರವಾಸಿ ತಾಣಗಳು, ಪ್ರಮುಖ ಮಠಮಾನ್ಯಗಳನ್ನು ತನ್ನ ಒಡಲಿನಲ್ಲಿ ಇರಿಸಿಕೊಂಡಿರುವ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತರು, ದಲಿತರು, ನಾಯಕ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಜ್ಜನ ರಾಜಕಾರಣಿಗಳಾದ ಜಿ. ದುಗ್ಗಪ್ಪ, ಎಚ್.ಸಿ. ಬೋರಯ್ಯ, ವಿ. ಮಸಿಯಪ್ಪ, ಬಿ.ಎಲ್. ಗೌಡ, ಎಚ್. ಏಕಾಂತಯ್ಯ ಅವರನ್ನು ಜಾತಿ ರಹಿತವಾಗಿ ಆಯ್ಕೆ ಮಾಡಿ ಕಳುಹಿಸಿರುವ ಹೆಗ್ಗಳಿಕೆ ಈ ಕ್ಷೇತ್ರದ್ದು. ರಾಷ್ಟ್ರ ನಾಯಕ ಎಸ್. ನಿಜಲಿಂಗಪ್ಪ ಇದೇ ವಿಧಾನಸಭಾ ಕ್ಷೇತ್ರದವರಾಗಿದ್ದರು. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಇವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದಲೂ ಆಯ್ಕೆಯಾಗಿದ್ದರು. ಜಿಲ್ಲಾ ಕೇಂದ್ರ ಚಿತ್ರದುರ್ಗ ಅತ್ಯಂತ ಹಿಂದುಳಿದಿದೆ.
ಸಜ್ಜನ ರಾಜಕಾರಣಿಗಳು ಪ್ರತಿನಿಧಿಸಿದ ಕ್ಷೇತ್ರ ಎನ್ನುವುದನ್ನು ಹೊರತುಪಡಿಸಿದರೆ ಇಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ
ಆಗಿಲ್ಲ. ಕ್ಷೇತ್ರದಲ್ಲಿ ಲಿಂಗಾಯತರು, ದಲಿತರು (ಮಾದಿಗರು), ವಾಲ್ಮೀಕಿ, ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗೊಲ್ಲ, ಭೋವಿ, ಲಂಬಾಣಿ, ರೆಡ್ಡಿ, ಕುಂಚಿಟಿಗ ಜಾತಿಗಳ ಮತಗಳು ನಿರ್ಣಾಯಕವಾಗಿವೆ.
ಒಟ್ಟು 14 ಚುನಾವಣೆಗಳನ್ನು ಕಂಡಿರುವ ಈ ಕ್ಷೇತ್ರ, 1957ರಲ್ಲಿ ದ್ವಿಸದಸ್ಯ ಕ್ಷೇತ್ರವಾಗಿತ್ತು. ಕ್ಷೇತ್ರ ಪುನರ್ ವಿಂಗಡಣೆ ನಂತರ ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಚಿತ್ರದುರ್ಗ ಕ್ಷೇತ್ರವಾಗಿಯೇ ಉಳಿದಿದೆ. ಈ ತನಕ ಇದು ಮೀಸಲು ಕ್ಷೇತ್ರವಾಗಿಲ್ಲ. ಅತಿ ಹೆಚ್ಚು ಅಂದರೆ ಆರು ಸಲ ಕಾಂಗ್ರೆಸ್, ಒಂದು ಸಲ ಎಸ್‌ಒಪಿ, ಎರಡು ಸಲ ಜೆಎನ್‌ಪಿ, ಒಂದು ಸಲ ಜನತಾದಳ, 2 ಸಲ ಪಕ್ಷೇತರರು, ಒಮ್ಮೆ ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ಒಂದು ಸಲ ಆಯ್ಕೆಯಾಗಿದ್ದಾರೆ. 1978ರ ವಿಧಾನಸಭಾ ಚುನಾವಣೆಯಲ್ಲಿ ವಿ. ಮಸಿಯಪ್ಪ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರ ಜಿ.ಎಚ್. ತಿಪ್ಪಾರೆಡ್ಡಿ 2004ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಜಯಗಳಿಸಿದ್ದರು. ಅಲ್ಲಿಂದ ಕಾಂಗ್ರೆಸ್ ಇಲ್ಲಿ ಲುವೆಂಬುದು ಮರೀಚಿಕೆಯಾಗಿದೆ.ಚಿತ್ರದುರ್ಗದ ರಸ್ತೆಗಳು ತಗ್ಗು, ಗುಂಡಿಗಳಿಂದ ಕೂಡಿವೆ. ಜಿಲ್ಲಾ ಕೇಂದ್ರ ಎಂದು ಹೇಳಿಕೊಳ್ಳಲು ನಾಚಿಕೆ ಆಗುವಷ್ಟರ ಮಟ್ಟಿಗೆ ಹದಗೆಟ್ಟು ಹೋಗಿದೆ.
ಕ್ಷೇತ್ರದ ಬೆಸ್ಟ್ ಏನು?
ಕೋಟೆ ಆಳಿದ ವಾಲ್ಮೀಕಿ ವಂಶಸ್ಥರು ರೂಪಿಸಿರುವ ಮಳೆ ನೀರು ಕೊಯ್ಲು ಅತ್ಯಂತ ವೈಜ್ಞಾನಿಕವಾಗಿದೆ. ಹನಿ ನೀರು ಎಲ್ಲಿಯೂ ಪೋಲಾಗದೆ ಹೊಂಡ, ಪುಷ್ಕರಣಿ, ಬಾವಿ ಭರ್ತಿಯಾದ ತಕ್ಷಣ ಕೆರೆಗಳಿಗೆ ಸೇರುತ್ತದೆ. ನಗರದ ಎಲ್ಲ 35 ವಾರ್ಡ್‌ಗಳಿಗೆ ವಾಣಿವಿಲಾಸ ಸಾಗರ, ಶಾಂತಿಸಾಗರದಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಅಲ್ಲಲ್ಲಿ ಕೊಳವೆ ಬಾವಿಗಳನ್ನು ಕೊರೆಸಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಅಷ್ಟೊಂದಿಲ್ಲ.ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಸ್ಟೆಲ್‌ಗಳಿದ್ದು ಬಡಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಿದೆ.
ಕ್ಷೇತ್ರದ ದೊಡ್ಡ ಸಮಸ್ಯೆ ಏನು?
ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಸಮಸ್ಯೆ ಇಲ್ಲ. ಆದರೆ ಜಿಲ್ಲಾ ಕೇಂದ್ರವಾಗಿರುವ ಚಿತ್ರದುರ್ಗದ ರಸ್ತೆಗಳೇ ಅತ್ಯಂತ ಕಿರಿದಾಗಿವೆ. ರಸ್ತೆ ಅಗಲೀಕರಣ ಮಾಡುತ್ತಿಲ್ಲ. ನಗರದ ರಸ್ತೆಗಳಲ್ಲಿ ಆಳುದ್ದ ಗುಂಡಿಗಳು ಬಿದ್ದಿವೆ. ರಾಜಕಾಲುವೆಗಳನ್ನು ಒತ್ತುವರಿ ಮಾಡಿ ವಾಣಿಜ್ಯ ಮಳಿಗೆಗಳು, ಮನೆಗಳು, ಹೋಟೆಲ್, ಪೆಟ್ರೋಲ್ ಬಂಕ್, ಮನೆ ನಿರ್ಮಾಣ ಮಾಡಿಕೊಂಡಿದ್ದರೂ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸರ್ಕಾರಿ ಜಾಗಗಳ ಒತ್ತುವರಿಯಂತೂ ನಿತ್ಯ ನಿರಂತರವಾಗಿದೆ.
ಶಾಸಕರು ಏನಂತಾರೆ?
24 ವರ್ಷಗಳ ನನ್ನ ಶಾಸಕತ್ವದ ಅವಧಿಯಲ್ಲಿ ಎಂದೂ ಕೋಮುಗಲಭೆ ಆಗಿಲ್ಲ. ನಗರದಲ್ಲಿ 8 ಸಾವಿರ, ಹಳ್ಳಿಗಳಲ್ಲಿ 30 ಸಾವಿರ ಮನೆಗಳನ್ನು ನಿರ್ಮಾಣ ಮಾಡಿದ್ದೇನೆ. ಕ್ಷೇತ್ರದಲ್ಲಿ ಎಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಒಳಚರಂಡಿ ಕಾಮಗಾರಿಯಿಂದಾಗಿ ರಸ್ತೆಗಳು ಹಾಳಾಗಿದ್ದು, ಕಾಮಗಾರಿ ಸಂದರ್ಭದಲ್ಲಿ ರಸ್ತೆ ಅಭಿವೃದ್ಧಿಗೆ ಕ್ರಿಯಾ ಯೋಜನೆ ಮಾಡಬೇಕಿತ್ತು.
ಜಿ.ಎಚ್. ತಿಪ್ಪಾರೆಡ್ಡಿ, ಶಾಸಕರು
ಕ್ಷೇತ್ರ ಮಹಿಮೆ
ಚಿತ್ರದುರ್ಗ ಕ್ಷೇತ್ರ, ಏಳು ಸುತ್ತಿನ ಕೋಟೆ, ಚಂದ್ರವಳ್ಳಿ ತೋಟ, ಮುರುಘಾ ಮಠ, ಸಿರಿಗೆರೆ ಮಠ, ಮಾದಾರ ಚನ್ನಯ್ಯ ಗುರುಪೀಠ, ಯಾದವ, ಭೋವಿ, ಸೇವಾಲಾಲ್, ಮಡಿವಾಳ, ಕುಂಬಾರ, ಕುಂಚಿಟಿಗ, ಕುರುಬ ಸಮುದಾಯಗಳ ಮಠಗಳನ್ನು ಹೊಂದಿದೆ. ಜೋಗಿಮಟ್ಟಿ, ಆಡುಮಲ್ಲೇಶ್ವರ ಸೇರಿದಂತೆ ಹಲವಾರು ಪ್ರವಾಸಿ ತಾಣಗಳು ಇಲ್ಲಿವೆ. ಬೆಳಗೆರೆ ಕೃಷ್ಣಶಾಸ್ತ್ರಿ, ಟಿ.ಎಸ್. ವೆಂಕಣ್ಣಯ್ಯ, ತರಾಸು ಅವರಂತಹ ಮಹಾನ್ ಸಾಹಿತಿಗಳನ್ನು ನಾಡಿಗೆ ಕೊಡುಗೆಯಾಗಿ ನೀಡಿದ ಹಿರಿಮೆ ಹೊಂದಿದೆ.
ರಸ್ತೆ, ಚರಂಡಿ ಇಲ್ಲ. ಬಡವರು ಬುದುಕುವುದೇ ದುಸ್ತರವಾಗಿದೆ. ಚನ್ನಕ್ಕಿ ಹೊಂಡ ಬಡಾವಣೆಯಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ. ಶಾಸಕರು, ವಾರ್ಡ್ ಸದಸ್ಯರು, ಸರ್ಕಾರ ಬಡವರ ಸಮಸ್ಯೆ ಕೇಳುತ್ತಿಲ್ಲ.
ಶಾರದಮ್ಮ, ಚನ್ನಕ್ಕಿ ಹೊಂಡ ನಿವಾಸಿ.
ಎಲ್ಲಾ ಪಕ್ಷಗಳ ಶಾಸಕರು ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಶುದ್ಧ ಕುಡಿಯುವ ನೀರಂತೂ ಕನಸಿನ ಮಾತು. ಬೀದಿದೀಪ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆ.ಎಚ್. ಶಂಕರ್, ಜೆ.ಸಿ.ಆರ್. ಬಡಾವಣೆ, ಚಿತ್ರದುರ್ಗ.
ಮನೆ ಇಲ್ಲದವರಿಗೆ, ವಿಧವೆಯರಿಗೆ ಮನೆಗಳನ್ನು ನೀಡುತ್ತಿಲ್ಲ. ಒಂದೊಂದು ಗುಡಿಸಲಿನಲ್ಲಿ ಐದಾರು ಜನ ವಾಸ ಮಾಡಬೇಕಾಗಿದೆ. ಬಡವರದು ನರಕಯಾತನೆಯ ಜೀವನ.
ರಾಜಮ್ಮ, ಸ್ಲಂ ನಿವಾಸಿ, ಚಿತ್ರದುರ್ಗ
ಯಾವ ಜನಪ್ರತಿನಿಧಿಗಳಿಗೂ ಚಿತ್ರದುರ್ಗದ ಅಭಿವೃದ್ಧಿ ಬೇಕಿಲ್ಲ. ಅವರಿಗೆ ಬೇಕಾಗಿರುವುದು ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಮತಗಳು ಅಷ್ಟೇ.
ಎಸ್. ಯಶವಂತ್, ಧರ್ಮಶಾಲಾ ರಸ್ತೆ, ಚಿತ್ರದುರ್ಗ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.