ಕುಗ್ರಾಮದಲ್ಲಿ ಜನಿಸಿ ಜಗದ್ಗುರುವಾದರು
Team Udayavani, Mar 15, 2019, 5:35 AM IST
ಚಿತ್ರದುರ್ಗ: ಸಾರಿಗೆ, ಮೂಲ ಸೌಲಭ್ಯ ವಂಚಿತ ಕುಗ್ರಾಮದಲ್ಲಿ ಜನಿಸಿ ಆಗಸದೆತ್ತರಕ್ಕೆ ಬೆಳೆದು, ವಿಶ್ವದ ಪ್ರಥಮ ಮಹಿಳಾ ಜಗದ್ಗುರುಗಳೆಂದೇ ಖ್ಯಾತಿ ಹೊಂದಿದ್ದ ಮಾತೆ ಮಹಾದೇವಿ ಅವರು ಇನ್ನು ನೆನಪು ಮಾತ್ರ. ಜಿಲ್ಲಾ ಕೇಂದ್ರ ಚಿತ್ರದುರ್ಗದಿಂದ 10 ಕಿಮೀ ದೂರದಲ್ಲಿರುವ ಚಿತ್ರದುರ್ಗ ತಾಲೂಕಿನ ಕುಗ್ರಾಮ ಸಾಸಲಹಟ್ಟಿ ಮಾತೆ ಮಹಾದೇವಿಯವರ ಹುಟ್ಟೂರು.
ಚಿತ್ರದುರ್ಗದಿಂದ ಬೆಳಗಟ್ಟ ಮಾರ್ಗವಾಗಿ ತುರುವನೂರಿಗೆ ತೆರಳುವ ಮಾರ್ಗದಲ್ಲಿ ಅಂದರೆ ಬಚ್ಚಬೋರನಹಟ್ಟಿ ಹಾಗೂ ಬೆಳಗಟ್ಟಕ್ಕಿಂತ ಮುಂಚೆಯೇ ಸಾಸಲಹಟ್ಟಿ ಸಿಗುತ್ತದೆ. ಇಂದಿಗೂ ಆ ಊರಿಗೆ ಒಂದು ಬಸ್ ಕೂಡ ಹೋಗಲ್ಲ. ರಸ್ತೆಯಿಂದ ಅರ್ಧ ಕಿಮೀ ನಡೆದುಕೊಂಡೇ ಹೋಗಬೇಕು. ಇಂತಹ ಕುಗ್ರಾಮದಲ್ಲಿ 1946ರ ಮಾ.13 ರಂದು ಡಾ|ಎಸ್.ಆರ್.ಬಸಪ್ಪ ಹಾಗೂ ಗಂಗಮ್ಮನವರ ಪುತ್ರಿಯಾಗಿ ಜನಿಸಿದ ಮಾತೆ ಮಹಾದೇವಿಯವರ ಪೂರ್ವಾಶ್ರಮದ ಹೆಸರು ರತ್ನ ಎಂದಾಗಿತ್ತು.
ಕುಟುಂಬದಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ನೂರಾರು ಎಕರೆ ಜಮೀನು, ಹತ್ತಾರು ಆಳು ಕಾಳುಗಳು, ಮನೆ ತುಂಬಾ ಎಮ್ಮೆ, ಹಸುಗಳಿದ್ದವು. ಸಾಲದ್ದಕ್ಕೆ ತಂದೆಗೆ ವೈದ್ಯ ವೃತ್ತಿ. ಈ ಕುಟುಂಬಕ್ಕೆ ಆರತಿಗೊಬ್ಬಳು ಕೀರ್ತಿಗೊಬ್ಬ ಎನ್ನುವಂತೆ ಇಬ್ಬರೇ ಮಕ್ಕಳು. ಮೊದಲ ಪುತ್ರಿಯಾಗಿ ರತ್ನ ಜನಿಸಿದರೆ, ಎರಡನೆಯವರಾಗಿ ಸಹೋದರ ಬಿ. ಪ್ರಕಾಶ್ ಹುಟ್ಟಿದರು. ಸಹೋದರ ಕೃಷಿಯತ್ತ ಮುಖ ಮಾಡಿದರೆ, ರತ್ನ ಆಧ್ಯಾತ್ಮದತ್ತ ಒಲವು ಹೊಂದಿದರು.
ತಂದೆ ಬಸಪ್ಪ ಹೊಸದುರ್ಗ ಮತ್ತಿತರ ಹಳ್ಳಿಗಳಲ್ಲಿ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾಗ ಅಕಾಲಿಕ ಮರಣಕ್ಕೆ ತುತ್ತಾದರು. ಆಗ ಮಾತೆಯವರಿಗೆ 8-10 ವರ್ಷಗಳಿರಬೇಕು. ಆಗ ಇವರ ಆಸರೆಗೆ ಬಂದಿದ್ದು ತಾಯಿ ಗಂಗಮ್ಮನವರ ತಂದೆ ಅಂದರೆ ತಾತ, ಖ್ಯಾತ ವಕೀಲ ಬಿ.ಟಿ. ಶಿವನ್ ಮತ್ತು ತಂದೆಯ ಸಹೋದರಿ ಈರಮ್ಮ. ಇವರ ನೆರಳಿನಲ್ಲಿ ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ ಮತ್ತು ಬಿಎಸ್ಸಿ ವ್ಯಾಸಂಗ ಮಾಡಿದರು.
ಪಿಯುಸಿ ಪೂರ್ಣಗೊಂಡ ನಂತರ ತಂದೆಯಂತೆ ವೈದ್ಯರಾಗಬೇಕೆಂಬ ಉದ್ದೇಶದಿಂದ ಎರಡು ವರ್ಷ ವೈದ್ಯಕೀಯ ಕೋರ್ಸ್ ಅಧ್ಯಯನ ಮಾಡಿದರೂ ಏಕೋ ಏನೋ ಅದು ಕೈಹಿಡಿಯಲಿಲ್ಲ. ಕೊನೆಗೆ ಬಿಎಸ್ಸಿಗೆ ಬಂದು ಸೇರಿದರು. ಚಿತ್ರದುರ್ಗದಲ್ಲಿ ಓದುತ್ತಿರುವ ವೇಳೇ ಅಲ್ಲಿಯೇ ಇದ್ದ ತಂದೆಯ ಸೋದರ ಎಸ್.ಆರ್. ಚನ್ನವೀರಯ್ಯನವರ ಮನೆಗೂಬಂದು ಹೋಗುತ್ತಿದ್ದರು. ಬಿಎಸ್ಸಿ ಪದವಿ
ಮುಗಿಯುತ್ತಿದ್ದಂತೆ ಸಾಮಾಜಿಕ ಕಾದಂಬರಿ “ಹೆಪ್ಪಿಟ್ಟ ಹಾಲು’ ಕೃತಿ ರಚಿಸಿದರು. ಬಿಎಸ್ಸಿ ಮುಗಿಸಿ ಎಂಎ ಓದಲು ವಿಶ್ವವಿದ್ಯಾಲಯಕ್ಕೆ ತೆರಳಿದಾಗ ಇವರು ಬರೆದ ಕಾದಂಬರಿ “ಹೆಪ್ಪಿಟ್ಟ ಹಾಲು’ ಎಂಎ ವಿದ್ಯಾರ್ಥಿಗಳಿಗೆ ಪಠ್ಯವಾಗಿರುತ್ತದೆ. ತಾವೇ ಬರೆದ ಕೃತಿಯನ್ನು ಪಠ್ಯವನ್ನಾಗಿ ಓದುವ ಅದೃಷ್ಟ ಬಹುಶಃ ಲಿಂಗೈಕ್ಯ ಮಾತೆ ಮಹಾದೇವಿ ಅವರೊಬ್ಬರಿಗೆ ಇರಬಹುದೇನೋ.
ಆಧ್ಯಾತ್ಮದ ಸೆಳೆತ: ಮಾತೆ ಅವರಿಗೆ ಬಾಲ್ಯದಿಂದಲೂ ಆಧ್ಯಾತ್ಮದತ್ತ ಸೆಳೆತ. ಚಿಕ್ಕ ವಯಸ್ಸಿನಲ್ಲೇ ಅಂದರೆ 1966ರ ಏ.5ರಂದು 20 ವರ್ಷ ತುಂಬಿದಾಗ ಜಂಗಮ ದೀಕ್ಷೆ ಪಡೆದರು. ಇದರಿಂದ ಕುಟುಂಬದಲ್ಲಿ ತೀವ್ರ ಅಸಮಾಧಾನ ಉಂಟಾಯಿತು. ತಾತ ಶಿವನ್ ಅವರು ಹೋಗಿ ಕಣ್ಣೀರಿಟ್ಟು ವಾಪಸ್ ಬರುವಂತೆ ಕರೆದರೂ ಮಾತೆ ಮನಸ್ಸು ಕರಗಲಿಲ್ಲ. ಕೊನೆಗೆ ದೇವರ ಇಚ್ಛೆ ಏನಿದೆಯೋ ಅದರಂತೆ ಆಗಲೆಂದು ಕುಟುಂಬದವರು ಸುಮ್ಮನಾದರು. ಮಾತೆಯವರ ಸಹೋದರ ಪ್ರಕಾಶ್ ಮೂರು ಎಕರೆ ಜಮೀನು ದಾನ ಮಾಡಿದ್ದರಿಂದ ಸಾಸಲಹಟ್ಟಿಯಲ್ಲೊಂದು ಅಕ್ಕಮಹಾದೇವಿ ಮಠ ನಿರ್ಮಿಸಿದರು.
ಉತ್ತಮ ವಾಗ್ಮಿ: ಚಿತ್ರದುರ್ಗದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಖ್ಯಾತ ಪ್ರವಚನಕಾರ ಗುರು ಲಿಂಗಾನಂದರು
ಪ್ರವಚನ ಆರಂಭಿಸಿದರೆ ಕನಿಷ್ಟ ನಾಲ್ಕೈದು ತಿಂಗಳ ಕಾಲ ನಿರಂತರವಾಗಿ ನಡೆಯುತ್ತಿತ್ತು. ಪ್ರತಿ ದಿನ ಐದಾರು ಸಾವಿರ ಭಕ್ತರು ಪ್ರವಚನ ಕೇಳಲು ಸೇರುತ್ತಿದ್ದರು. ಗುರು ಲಿಂಗಾನಂದರ ಪ್ರವಚನ ಕೇಳಲು ಬರುತ್ತಿದ್ದ ಮಾತೆಯವರು, ಲಿಂಗಾನಂದರ ವಚನದಿಂದ ಪ್ರಭಾವಿತರಾದರು. ಅಲ್ಲದೆ ಕಿರಿಯ ವಯಸ್ಸಿನಲ್ಲೇ ಸನ್ಯಾಸ ದೀಕ್ಷೆ ಸ್ವೀಕರಿಸಿ ಪ್ರಥಮ ಮಹಿಳಾ ಜಗದ್ಗುರುಗಳಾದರು.
ಲಿಂಗಾನಂದರಿಂದ ಇಷ್ಟಲಿಂಗ ದೀಕ್ಷೆ: ಸಾಹಿತ್ಯದಲ್ಲಿ ಸಾಕಷ್ಟು ಆಸಕ್ತಿ ಇದ್ದುದರಿಂದ ಬಾಲ್ಯದಲ್ಲಿ 500ಕ್ಕೂ ಹೆಚ್ಚಿನ ಪುಸ್ತಕಗಳನ್ನು ಓದಿದ್ದರು. ಲಿಂಗಾನಂದ ಸ್ವಾಮಿಗಳ ಪ್ರವಚನದಿಂದ ಪ್ರಭಾವಿತರಾದ ಅವರು ಬಸವ ಧರ್ಮವನ್ನು ಅಪ್ಪಿಕೊಂಡಿದ್ದರು. 1965ರ ಆಗಸ್ಟ್ 19 ರಿಂದ ಬಸವ ಧರ್ಮ ಪ್ರಚಾರ ಆರಂಭಿಸಿದ ಎರಡೇ ದಿನದಲ್ಲಿ ಲಿಂಗಾನಂದ ಸ್ವಾಮಿಗಳಿಂದ ಇಷ್ಟಲಿಂಗ ದೀಕ್ಷೆ ಪಡೆದರು. ಬಸವಾದಿ ಶರಣರ ತತ್ವಗಳ ದಾಸಿಯಾಗಿ ಆ ತತ್ವಗಳನ್ನು ಜಗತ್ತಿಗೆ ಬಿತ್ತಿ ಬೆಳೆಸುವ ಮಹತ್ವ ಕಾರ್ಯಕ್ಕೆ ಮುನ್ನುಡಿ ಬರೆದರು. ನಂತರ ಜಂಗಮ ದೀಕ್ಷೆ ಪಡೆದರು.
ಅಲ್ಲಿಂದ ನೇರವಾಗಿ ಋಷಿಕೇಶಕ್ಕೆ ಬಂದ ಅವರು “ಗಂಗಾ ತರಂಗ’ ಪುಸ್ತಕ ರಚಿಸಿದರು. ಅಲ್ಲದೆ 1967ರಲ್ಲಿ ಬಸವ ತತ್ವ ದರ್ಶನ ಬೃಹತ್ ಗ್ರಂಥವನ್ನು ಕೇವಲ ಮೂರೇ ತಿಂಗಳಲ್ಲಿ ರಚಿಸಿ ಭಕ್ತರಿಗೆ ಅರ್ಪಿಸಿದರು. ಧರ್ಮ ಪ್ರಚಾರ ಅನುಕೂಲಕ್ಕಾಗಿ 1968 ಏಪ್ರಿಲ್ 13ರಂದು ವೀರ ವೈರಾಗ್ಯ ನಿಧಿ ಅಕ್ಕಮಹಾದೇವಿ ಜಯಂತಿ ದಿನ ಧಾರವಾಡದಲ್ಲಿ ಅಕ್ಕಮಹಾದೇವಿ ಆಶ್ರಮವನ್ನು ಸ್ಥಾಪಿಸುವುದರ ಜತೆಗೆ “ಕಲ್ಯಾಣ ಕಿರಣ’ ಮಾಸಪತ್ರಿಕೆಯ ಮೊದಲ ಸಂಚಿಕೆಯನ್ನೂ ಬಿಡುಗಡೆ ಮಾಡಿದ್ದರು.
ದುರ್ಗದೊಂದಿಗೆ ಒಡನಾಟ
ಸನ್ಯಾಸ ದೀಕ್ಷೆ ಪಡೆದ ನಂತರ ಚಿತ್ರದುರ್ಗದೊಂದಿಗೆ ಅಷ್ಟೊಂದು ಸಂಪರ್ಕ ಇಟ್ಟುಕೊಳ್ಳಲಿಲ್ಲವಾದರೂ ಪ್ರವಚನಗಳು ನಡೆಯುತ್ತಿದ್ದ ವೇಳೆ ತಪ್ಪದೇ ಆಗಮಿಸಿ ಪ್ರವಚನ ಮಾಡುತ್ತಿದ್ದರು. ಮುರುಘಾಮಠದ ಹಿರಿಯ ಗುರುಗಳೊಂದಿಗೆ ಆತ್ಮೀಯವಾಗಿದ್ದ ಮಾತೆಯವರು,
ಈಗಿನ ಮಠಾಧೀಶ ಡಾ| ಶಿವಮೂರ್ತಿ ಮುರುಘಾ ಶರಣರೊಂದಿಗೂ ಒಡನಾಟ ಇಟ್ಟುಕೊಂಡಿದ್ದರು. ಆದರೆ ವಚನಗಳ ಕೊನೆಯ ಸಾಲಿನಲ್ಲಿ ಕೂಡಲಸಂಗಮ ಬದಲಾಗಿ ಲಿಂಗಾನಂದ ಎಂದು ಸೇರಿಸಿದ್ದರಿಂದ ಶರಣರು ಬೇಸರಗೊಂಡಿದ್ದರು. ಆನಂತರ ಇವರಿಬ್ಬರು ಒಂದೇ ವೇದಿಕೆಗೆ ಬಂದಿದ್ದು ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕಾಗಿ. ಮಾತೆಯವರಿಗೆ ದುರ್ಗದೊಂದಿಗೆ ಇದ್ದ
ಒಡನಾಟದಿಂದ ಇಲ್ಲಿ ಬಸವ ಮಂಟವ ಕೇಂದ್ರ ತೆರೆದರು. ಕೂಡಲಸಂಗಮ ಹಾಗೂ ಬಸವ ಕಲ್ಯಾಣದಲ್ಲಿ ಶರಣ ಧರ್ಮ ಪ್ರಚಾರಕ್ಕಾಗಿ ಪ್ರತಿ ವರ್ಷ ಶರಣ ಸಮ್ಮೇಳನ ನಡೆಸುತ್ತ ಬಂದರು. ಆಧ್ಯಾತ್ಮ ಸಾಗರದ ಅನಘ ರತ್ನವಾಗಿದ್ದ ಅವರು “ಸಚ್ಚಿದಾನಂದ’ ಎನ್ನುವ ಅಂಕಿತ ನಾಮದಿಂದ ಕರೆದುಕೊಳ್ಳುತ್ತಿದ್ದರು.
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಅವಿರತ ಹೋರಾಟ
ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕಿಳಿದು ರಾಜಕೀಯವಾಗಿಯೂ ಸಂಚಲನ ಮೂಡಿಸಿದ್ದರಿಂದ ರಾಜ್ಯ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿತು. ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ದೆಹಲಿಯಲ್ಲಿ ಬೃಹತ್ ಮೆರವಣಿಗೆ ನಡೆಸಿದ್ದ ಅವರು, ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವುದಾಗಿಯೂ ಎಚ್ಚರಿಸಿದ್ದರು. ರಾಷ್ಟ್ರೀಯ ಬಸವ ದಳ ಮತ್ತು ವೀರಶೈವ ಮಹಾಸಭಾ ನಡುವೆ ಸಾಮರಸ್ಯ ಬರುತ್ತದೆ ಎಂದು ನಿರೀಕ್ಷೆ ಮಾಡಲ್ಲ. ವೀರಶೈವ ಮಹಾಸಭಾ ಇಡೀ ಲಿಂಗಾಯತ ಸಮಾಜದ ಪ್ರತಿನಿ ಧಿಯೇ ಅಲ್ಲ ಎಂದು ಪ್ರತಿಪಾದಿಸಿದ್ದರು. ಅಲ್ಲದೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಿಂದ ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆಯಾಗಿಲ್ಲ ಎಂದೂ ಹೇಳಿದ್ದರು. ಮಾತೆ ಮಹಾದೇವಿಯವರ ಯುಗಾಂತ್ಯವಾಗಿದೆ. ಆದರೆ ಬಸವ ಧರ್ಮ ಪ್ರಸಾರಕ್ಕೆ ಹಾಗೂ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಮಾತಾಜಿ ನಡೆಸಿದ ಹೋರಾಟ ಮಾತ್ರ ಮರೆಯುವಂಥದ್ದಲ್ಲ
ಹರಿಯಬ್ಬೆ ಹೆಂಜಾರಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್
ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.