ಗ್ರಹಣ ಹಿಡಿದಿದ್ದ “ಕೋರಂ ಕೊರತೆ’ಗೆ ಮೋಕ್ಷ
Team Udayavani, Jul 14, 2018, 3:31 PM IST
ಚಿತ್ರದುರ್ಗ: ಸತತ ನಾಲ್ಕು ಬಾರಿ ಕೋರಂ ಕೊರತೆಯಿಂದ ಮುಂದೂಡಲ್ಪಡುತ್ತಿದ್ದ ಜಿಪಂ ಸಾಮಾನ್ಯ ಸಭೆಯ ಶುಕ್ರವಾರ ಸದಸ್ಯರ ಫುಲ್ ಕೋರಂನೊಂದಿಗೆ ಗ್ರಹಣಕ್ಕೆ ಮೋಕ್ಷ ಸಿಕ್ಕಿತು. ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಪಕ್ಷದ ಒಡಂಬಡಿಕೆಯಂತೆ ರಾಜೀನಾಮೆ ಸಲ್ಲಿಸಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಅವರ ರಾಜೀನಾಮೆಗೆ ಒತ್ತಾಯಿಸಿ ಬಹುತೇಕ ಕಾಂಗ್ರೆಸ್ ಸದಸ್ಯರು ಸಾಮಾನ್ಯ ಸಭೆಗಳಿಗೆ ಗೈರು ಹಾಜರಾಗುತ್ತಿದ್ದರು.
ಇದರಿಂದ ಕೋರಂ ಕೊರತೆಯಿಂದ ಸಾಮಾನ್ಯ ಸಭೆ ಮುಂದೂಡಲಾಗುತ್ತಿತ್ತು. ಜಿಪಂ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಎಲ್ಲ ಸದಸ್ಯರು ಪಾಲ್ಗೊಳ್ಳುವ ಮೂಲಕ ತಮ್ಮ ಕ್ಷೇತ್ರಗಳ ಸಮಸ್ಯೆಗಳ ಕುರಿತು ಪ್ರಶ್ನೆಗಳ ಸುರಿಮಳೆಗೈದರು. ಅಲ್ಲದೇ, ಅಧ್ಯಕ್ಷರು ತೆಗೆದುಕೊಳ್ಳುವ ತೀರ್ಮಾನಗಳಿಗೆ ಮೇಜು ಕುಟ್ಟಿ ಬೆಂಬಲ ವ್ಯಕ್ತಪಡಿಸಿದರು.
ಸಭೆ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯ ಅಜಪ್ಪ ಮಾತನಾಡಿ, ಕೈಗಾರಿಕೆಗಳಿಗೆ ಗ್ರಾಪಂಗಳು ವಿಧಿಸುವ ತೆರಿಗೆಯನ್ನು ಕೈಗಾರಿಕೆಗಳ ಮಾಲೀಕರು ಪಾವತಿ ಮಾಡುತ್ತಿಲ್ಲ. ಇದಕ್ಕೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಪ್ರಸ್ತಾಪ ಮಾಡಿದರು. ಆಡಳಿತರೂಢ ಕಾಂಗ್ರೆಸ್ ಸದಸ್ಯರು ಬೆಂಬಲ ನೀಡಿ ಇದಕ್ಕೆ ಇತಿಶ್ರೀ ಹಾಡಬೇಕು ಎಂದು ಒತ್ತಾಯಿಸಿದರು. ಸುದೀರ್ಘ ಚರ್ಚೆ ನಡೆದು ಅಂತಿಮವಾಗಿ ಅಧ್ಯಕ್ಷರು ಸ್ಪಷ್ಟ ನಿರ್ಣಯ ಕೈಗೊಂಡರು.
ಜಿಲ್ಲೆಯಾದ್ಯಂತ ಸೋಲಾರ್, ವಿಂಡ್ ಮಿಲ್, ಡಾಬಾ, ಸಿಮೇಂಟ್, ಇಟ್ಟಿಗೆ, ಜಲ್ಲಿ ಕಲ್ಲು, ಮೊಬೈಲ್ ಟವರ್, ಕೋಳಿ ಫಾರಂ, ಜಿಯೋ ಕೇಬಲ್ ಅಳವಡಿಕೆ ಸೇರಿದಂತೆ ಇತರೆ ಸಣ್ಣ, ದೊಡ್ಡ ಕೈಗಾರಿಕೆಗಳಿಂದ ಗ್ರಾಪಂಗಳಿಗೆ ತೆರಿಗೆ ಬಂದಲ್ಲಿ ಸರ್ಕಾರದ ಅನುದಾನವಿಲ್ಲದೆ ಆಡಳಿತ ನಡೆಸಬಹುದು. ಆದರೆ ತೆರಿಗೆ ಕಟ್ಟುತ್ತಿಲ್ಲ ಎಂದು ಅಧ್ಯಕ್ಷೆ ಸೌಭಾಗ್ಯ ತಿಳಿಸಿದರು.
ಸಭೆಯ ನಿರ್ಣಯದಂತೆ ಗ್ರಾಪಂಗಳು ವಿಧಿಸುವ ತೆರಿಗೆ ಕಾಲ ಕಾಲಕ್ಕೆ ಪಾವತಿ ಮಾಡದ ಕೈಗಾರಿಕೆಗಳ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಬೇಕು. ಮೊದಲಿಗೆ ತೆರಿಗೆ ಪಾವತಿ ಮಾಡದಿರುವ ಬಗ್ಗೆ ನೋಟಿಸ್ ನೀಡಬೇಕು. ನೋಟಿಸ್‌ಗೆ ಅವರು ಮನ್ನಣೆ ನೀಡದಿದ್ದರೆ ಗ್ರಾಪಂ ಪಿಡಿಒ ಅವರು ನೀಡಿರುವ ನಿರಾಕ್ಷೇಪಣಾ(ಎನ್ ಒಸಿ) ರದ್ದು ಮಾಡಬೇಕು. ಎನ್‌ಒಸಿ ರದ್ದಾದ ವಿಚಾರವನ್ನು ಸಂಬಂಧಿ ಸಿದ ಇಲಾಖೆಗಳಿಗೂ ಪಿಡಿಒ ಪತ್ರ ಬರೆದು ನೀವು ನೀಡಿರುವ ಸೌಲಭ್ಯ ರದ್ದು ಮಾಡಬೇಕು ಎಂದು ಕೋರಬೇಕು.
ಇದನ್ನು ಮೀರಿ ಬೆಸ್ಕಾಂನವರು ವಿದ್ಯುತ್ ಪೂರೈಕೆ ಮಾಡಿದರೆ, ನಿರಾಕ್ಷೇಪಣಾ ಪತ್ರ ವಾಪಸ್ ಪಡೆಯದ ಇತರೆ ಇಲಾಖೆಗಳ ಮುಖ್ಯಸ್ಥರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು. ಅಂತಿಮವಾಗಿ ಲಾಕ್ ಔಟ್ ಮಾಡುವ ತೀರ್ಮಾನ ಅಂತಿಮವಾಗಿರುತ್ತದೆ ಎಂದು ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಸಭೆಗೆ ತಿಳಿಸುತ್ತಿದ್ದಂತೆ ಎಲ್ಲರೂ ಪಕ್ಷಬೇಧ ಮರೆತು ಬೆಂಬಲ ವ್ಯಕ್ತಪಡಿಸಿದರು.
ಸರ್ಕಾರದ ಇತ್ತೀಚಿನ ಸುತ್ತೋಲೆಯಲ್ಲಿ ಕೈಗಾರಿಕೆಗಳಿಗೆ ಅತ್ಯಂತ ಕಡಿಮೆ ತೆರಿಗೆ ವಿಧಿಸಲಾಗಿದೆ. ಇದರಿಂದ ಗ್ರಾಪಂಗಳ ಆದಾಯಕ್ಕೆ ಕತ್ತರಿ ಬೀಳುತ್ತಿದೆ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ರವೀಂದ್ರ, ಸಭೆಯಲ್ಲಿ ನಿರ್ಣಯ ಮಾಡಿ, ಕೈಗಾರಿಕೆಗಳಿಗೆ ಗ್ರಾಪಂಗಳು ಹೆಚ್ಚಿನ ತೆರಿಗೆ ವಿಧಿಸಲು ಅವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಬೇಕು ಎಂದು ಸೂಚಿಸಿದರು.
ಸೋಲಾರ್, ವಿಂಡ್ ಮಿಲ್ ಜಿಲ್ಲಾಧಿಕಾರಿಗಳ ವ್ಯಾಪ್ತಿಗೆ ಬರಲಿದ್ದು, ಈ ಸಭೆಗೆ ಅವರನ್ನು ಕರೆಸಬೇಕು. ಅರ್ಧ ಎಕರೆ ಜಾಗದಲ್ಲಿ ವಿಂಡ್ ಮಿಲ್ ಹಾಕಲು ಸಾಕಾಗಲಿದೆ. ಆದರೆ 50 ಎಕರೆಗಿಂತ ಹೆಚ್ಚಿನ ಪ್ರದೇಶವನ್ನು ರಸ್ತೆ ಮಾಡಿಕೊಳ್ಳಲು ಬಳಸಿಕೊಂಡು ಗಿಡ, ಮರ ಇತರೆ ಅರಣ್ಯ ಸಂಪತ್ತು ನಾಶ
ಮಾಡುತ್ತಿದ್ದಾರೆ ಎಂದು ಸದಸ್ಯರು ದೂರಿದರು.
ಹಿರಿಯೂರು ತಾಲೂಕಿನ ಕೆ.ಆರ್.ಹಳ್ಳಿ ಸಮೀಪದಲ್ಲಿ ಬೈನರಿ ಕಂಪನಿಯು ಗಾರ್ಮೆಂಟ್ ಕಾರ್ಖಾನೆ ನಡೆಸುತ್ತಿದ್ದು, ಎಲ್ಲ ರೀತಿಯ ಕಾನೂನು ಉಲ್ಲಂಘನೆ ಮಾಡಿದೆ. ಭೂಮಿ, ನೀರು, ವಿದ್ಯುತ್ ನಮ್ಮದು. ಹೊರಗಿನವರಿಗೆ ಉದ್ಯೋಗ ನೀಡಿ, ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. 9 ಕೋಟಿ ರೂ. ಸಹಾಯಧನ ಪಡೆದು ಸ್ಥಳೀಯರನ್ನು ವಂಚಿಸಲಾಗುತ್ತಿದೆ ಎಂದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಬೈನರಿ ಕಾರ್ಖಾನೆ ಲಾಕ್ ಔಟ್ ಮಾಡಿಸಬೇಕು ಎಂದು ಬಹುತೇಕ ಸದಸ್ಯರು ಒತ್ತಾಯಿಸಿದರು.
ಜಿಪಂ ಉಪಾಧ್ಯಕ್ಷೆ ಎಸ್.ಪಿ.ಸುಶೀಲಮ್ಮ, ಸದಸ್ಯರಾದ ನರಸಿಂಹರಾಜು, ಮಂಡ್ರಿಗಿ ನಾಗರಾಜ್, ಕೃಷ್ಣಮೂರ್ತಿ, ಗೀತಾ, ಚೇತನಾ ಪ್ರಸಾದ್, ಅನಂತ್, ಕೆ.ಟಿ.ಗುರುಮೂರ್ತಿ, ಪರಮೇಶ್ವರಪ್ಪ, ಪ್ರಕಾಶ್ ಮೂರ್ತಿ, ಪಾಪಣ್ಣ ಸೇರಿದಂತೆ ಸದಸ್ಯರು, ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಿಮೆಂಟ್ ಕಾರ್ಖಾನೆಯ ಬಾಕಿ ತೆರಿಗೆ ವಸೂಲಿಗೆ ಸೂಚನೆ
ಚಿತ್ರದುರ್ಗ: ಹೊಸದುರ್ಗ ತಾಲೂಕಿನ ಮತ್ತೋಡು ಗ್ರಾಮದಲ್ಲಿನ ಸಿಮೆಂಟ್ ಪ್ಯಾಕ್ಟರಿಯಿಂದ ಸುಮಾರು 1.25 ಕೋಟಿ ರೂ. ತೆರಿಗೆ ಬರಬೇಕಿದ್ದು ಕೇವಲ 2.5 ಲಕ್ಷ ರೂ. ಮಾತ್ರ ವಸೂಲು ಮಾಡಿದ್ದು, ಉಳಿದ ತೆರಿಗೆ ವಸೂಲು ಮಾಡುವಂತೆ ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹೊಸದುರ್ಗ ಕಾರ್ಯನಿರ್ವಾಹಕ ಅಧಿಕಾರಿಗಳು, ಕೋರ್ಟ್‌ನಲ್ಲಿ ಪ್ರಕರಣ ಇರುವುದರಿಂದ ವಸೂಲಿಗೆ ಕ್ರಮ ಕೈಗೊಂಡಿಲ್ಲ. ಇತ್ಯರ್ಥ ನಂತರ ಕ್ರಮ ವಹಿಸಲಾಗುವುದು ಎಂದರು. ಹಿರಿಯೂರು ಪಕ್ಕದಲ್ಲಿ ಗಾರ್ಮೆಂಟ್ಸ್ ಕಾರ್ಖಾನೆ ಇದ್ದು ಇಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು.
ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ಅನುಷ್ಠಾನ ಸಮಿತಿ ಇದ್ದು, ಈ ಸಮಿತಿಗೆ ಆಯಾ ಗಣಿ ಬಾಧಿತ ಪ್ರದೇಶಗಳ ಜಿಪಂ ಸದಸ್ಯರನ್ನು ನಾಮನಿರ್ದೇಶನ ಮಾಡಬೇಕೆಂದು ಸದಸ್ಯರು ಒತ್ತಾಯಿಸಿದರು. ಈ ಸಮಿತಿಗೆ ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷರಾಗಿದ್ದು, ಸಮಿತಿ ರಚನೆ ವೇಳೆ ಪರಿಗಣಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದರು.
ಜಿಪಂನಿಂದ ಪ್ರಕೃತಿ ವಿಕೋಪ ಹಾಗೂ ಆಕಸ್ಮಿಕ ಬೆಂಕಿಗಾವುತಿಯಾದ ಮನೆಗಳಿಗೆ ಸಕಾಲದಲ್ಲಿ ಪರಿಹಾರ ನೀಡುತ್ತಿಲ್ಲ. ಆದರೆ ಸಂಕಷ್ಟದಲ್ಲಿನ ಜನರಿಗೆ ತಕ್ಷಣವೇ ಪರಿಹಾರ ಒದಗಿಸಬೇಕು. ಆದರೆ ಕಳೆದ ಜನವರಿಯಲ್ಲಿ ಘಟನೆ ನಡೆದರೂ ಪರಿಹಾರ ಮಾತ್ರ ದೊರೆಕಿಲ್ಲ. ಮನೆಗೆ ಬೆಂಕಿ ಬಿದ್ದು ಸುಟ್ಟು ಹೋದಲ್ಲಿ ಗರಿಷ್ಠ ಪರಿಹಾರ ನೀಡಬೇಕು.
ಅಧ್ಯಕ್ಷರ ಪರಿಹಾರ ನಿಧಿಯಿಂದ ನಷ್ಟದ ಪ್ರಮಾಣವನ್ನಾಧರಿಸಿ ಕನಿಷ್ಠ ರೂ.10 ಸಾವಿರದವರೆಗೆ ಕೊಡಲು ಅವಕಾಶ ಇದ್ದು, ಪರಿಹಾರ ನೀಡಿ ಘಟನೋತ್ತರ ಮಂಜೂರಾತಿ ಪಡೆಯಬಹುದಾಗಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಇನ್ನು ಮುಂದೆ ಸಭೆಯ ಮಂಜೂರಾತಿಗೆ ಕಾಯದೆ ಪರಿಹಾರ ನೀಡಿ ಎಂದು ಅಧ್ಯಕ್ಷರು ಸೂಚಿಸಿದರು.
ಜಿಪಂ ಸಿಇಒ ಪಿ.ಎನ್.ರವೀಂದ್ರ ಮಾತನಾಡಿ, ಜಿಪಂ ಸದಸ್ಯೆ ಸವಿತಾ ರಘು ಅವರು ಸತತವಾಗಿ ನಾಲ್ಕು ಸಭೆಗಳಿಗೆ ಗೈರು ಹಾಜರಾಗಿದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮದಡಿ ಕ್ರಮ ಕೈಗೊಳ್ಳಬೇಕೆಂದು ದೂರು ಬಂದಿದೆ. ಆದರೆ ಜಿಪಂ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಿ ವರದಿ ಕಳುಹಿಸಬೇಕಾಗಿದೆ ಎಂದು ತಿಳಿಸಿದರು.
ಗೈರು ಹಾಜರಾಗಿರುವುದಕ್ಕೆ ವೈದ್ಯಕೀಯ ಕಾರಣ ನೀಡಿರುವುದರಿಂದ ಅವರ ಗೈರು ಹಾಜರಿಯನ್ನು ಮಾನ್ಯ ಮಾಡಬಹುದಾಗಿದೆ ಎಂದು ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್
ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.