ಶುದ್ಧ ನೀರು ಪೂರೈಕೆಗೆ ಆದ್ಯತೆ ಕೊಡಿ
Team Udayavani, May 13, 2020, 6:37 AM IST
ಚಿತ್ರದುರ್ಗ: ಗ್ರಾಮೀಣ ಪ್ರದೇಶದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಮೊದಲ ಆದ್ಯತೆ ನೀಡಬೇಕು ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಗ್ರಾಪಂ ಪಿಡಿಒ, ಕಾರ್ಯದರ್ಶಿ ಹಾಗೂ ಗ್ರಾಮಲೆಕ್ಕಾ ಧಿಕಾರಿಗಳಿಗೆ ಸೂಚಿಸಿದರು.
ತುರುವನೂರು ಹೋಬಳಿಗೆ ಸಂಬಂಧಿಸಿದಂತೆ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕುಡಿಯುವ ನೀರು, ಸ್ವತ್ಛತೆ, ಪಡಿತರ ವಿತರಣೆ, ಸಾಮಾಜಿಕ ಭದ್ರತೆಯಡಿ ನೀಡುವ ಪಿಂಚಣಿ, ತೋಟಗಾರಿಕೆ, ಕೃಷಿ, ಬೆಸ್ಕಾಂ ಇಲಾಖೆಗಳಿಗೆ ಸಂಬಂಧಪಟ್ಟ ಕುಂದುಕೊರತೆ ಆಲಿಸಿ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದರು.
ಸುಸ್ಥಿತಿಯಲ್ಲಿಲ್ಲದ ನೀರು ಶುದ್ಧೀಕರಣ ಘಟಕಗಳನ್ನು ತ್ವರಿತವಾಗಿ ರಿಪೇರಿ ಮಾಡಿಸಿ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಹೊಣೆಗಾರಿಕೆ ಗ್ರಾಮ ಪಂಚಾಯತ್‌ಗಳ ಮೇಲಿದೆ. ಹಾಗಾಗಿ ಜವಾಬ್ದಾರಿ ಅರಿತು ಕೆಲಸ ಮಾಡಿ. ಮೈಗಳ್ಳತನ ಮಾಡಿದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಸದ್ಯಕ್ಕೆ ಎರಡು ರೂ. ಗಳನ್ನಷ್ಟೆ ಪಡೆಯಬೇಕು. ಕೋವಿಡ್ ಲಾಕ್‌ಡೌನ್ ಇರುವುದರಿಂದ ಐದು ರೂ. ಕೇಳುವುದು ಸರಿಯಲ್ಲ ಎಂದರು. ಕೋವಿಡ್ ವೈರಸ್ ಹಾವಳಿಯಿಂದ ಹಳ್ಳಿಗಳಲ್ಲಿ ಜನ ಭಯಭೀತರಾಗಿದ್ದಾರೆ. ಹೊರ ರಾಜ್ಯಗಳಿಂದ ಬರುವವರನ್ನು ಸಾಧ್ಯವಾದಷ್ಟು ಗ್ರಾಮೀಣ ಪ್ರದೇಶಗಳಿಂದ ದೂರ ಕ್ವಾರಂಟೈನ್‌ನಲ್ಲಿಡಲು ಅ ಧಿಕಾರಿಗಳು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಬೇರೆ ರಾಜ್ಯದಿಂದ ಬರುವವರನ್ನು ಕ್ವಾರಂಟೈನ್ ಗಳಲ್ಲಿ ಇಡಬೇಕಾದ ಪರಿಸ್ಥಿತಿ ಬಂದಾಗ ಮೊದಲು ಕೇಂದ್ರಗಳನ್ನು ಗುರುತಿಸಿ ಜನ ಎಲ್ಲಿಯೂ ಗಲಾಟೆ ಮಾಡದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ನ್ಯಾಯಬೆಲೆ ಅಂಗಡಿಗಳಲ್ಲಿ ಸಮರ್ಪಕವಾಗಿ ಪಡಿತರ ಧಾನ್ಯಗಳನ್ನು ಪೂರೈಸಿ. ಸಾಮಾಜಿಕ ಅಂತರ ಕಾಪಾಡಿಕೊಂಡು ವೈಯಕ್ತಿಕ ಸ್ವಚ್ಛತೆ ಕಾಪಾಡುವಂತೆ ಹಳ್ಳಿಗಾಡಿನ ಜನತೆಯಲ್ಲಿ ಅರಿವು ಮೂಡಿಸಿ ಎಂದು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ತಾಕೀತುಮಾಡಿದರು.
ಕೆಲವು ಗ್ರಾಮಗಳಲ್ಲಿ ಟ್ರಾನ್ಸ್‌ಫಾರ್ಮರ್ ಗಳ ಸುತ್ತ ಬೆಳೆದಿರುವ ಬಳ್ಳಾರಿ ಜಾಲಿ ಗಿಡಗಳನ್ನು ತೆರವುಗೊಳಿಸಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬಡವರಿಗೆ ಕೆಲಸ ನೀಡಿ. ಯಾರೂ ಹೊರ ಊರುಗಳಿಗೆ ಕೆಲಸ ಹುಡುಕಿಕೊಂಡು ಗುಳೆ ಹೋಗದಂತೆ ಎಚ್ಚರ ವಹಿಸಬೇಕಾಗಿದೆ. ಹಗಲು ವೇಳೆ ಕೆಲವು ಗ್ರಾಮಗಳಲ್ಲಿ ಬೀದಿದೀಪಗಳು ಉರಿಯುತ್ತಿರುವುದು ನಿಲ್ಲಬೇಕು. ಅದರ ಕಡೆಗೂ ಗಮನ ಕೊಡಿ ಎಂದು ತುರುವನೂರು ಹೋಬಳಿಯ ಆರು ಪಂಚಾಯಿತಿಗಳ ಪಿಡಿಒಗಳು, ಕಾರ್ಯದರ್ಶಿಗಳು, ಗ್ರಾಮಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಿದರು. ಚಿತ್ರದುರ್ಗ ತಾಪಂ ಅಧ್ಯಕ್ಷ ಡಿ.ಎಂ. ಲಿಂಗರಾಜು, ತಾಪಂ ಇಒ ಕೃಷ್ಣ ನಾಯ್ಕ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.